spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ನೀಲಾoಬಿಕೆ

ಬಸವಣ್ಣನವರ ‘ವಿಚಾರ ಪತ್ನಿ’ ಯೆಂದೇ ತನ್ನನ್ನು ಹೇಳಿಕೊಂಡ ನೀಲಾಂಬಿಕೆಯು ‘ಅರಿವಿನ ಚೇತನ’ ದಾಸೋಹದ ಮಹಾತಾಯಿ ‘ನಿಜಸುಖಿ ನೀಲಾಂಬಿಕೆ’, ‘ನಿಜ ಭಕ್ತೆ ನೀಲಾಂಬಿಕೆ’, ‘ಮಹಾಮನೆಯ ಮಹಾತಾಯಿ’, ‘ಲಿಂಗಾನುಭವಿ ನೀಲಾಂಬಿಕೆ’ ಮುಂತಾಗಿ ಹೆಸರಾಗಿದ್ದಾರೆ.

ಕೆಲವು ಕಾವ್ಯ ಪುರಾಣಗಳಲ್ಲಿ ಇವರ ಬಗ್ಗೆ ಸಾಂದರ್ಭಿಕವಾಗಿ ಬರುವ ಉಲ್ಲೇಖಗಳನ್ನು ಆಧರಿಸಿ ನೀಲಾಂಬಿಕೆಯ ಚರಿತ್ರೆ ಕಟ್ಟಬಹುದು. ಜನಪದರು ತಮ್ಮ ತ್ರಿಪದಿಗಳಲ್ಲಿ ಈಕೆಯನ್ನು ಸ್ತುತಿಸಿದ್ದಾರೆ. ಬಸವರಾಜ ದೇವರ ರಗಳೆ, ಶಿವತತ್ವ ಚಿಂತಾಮಣಿ, ಗುರುರಾಜ ಚರಿತ್ರ ಹಾಗು ಸಿಂಗಿರಾಜ ಪುರಾಣ ಕೃತಿಗಳನ್ನು ಆಧರಿಸಿ ನೀಲಾಂಬಿಕೆಯ ಚಾರಿತ್ರಿಕ ವಿವರ ಸಂಗ್ರಹಿಸಬಹುದು. ಗುರುರಾಜ ಚರಿತ್ರವು ಇವಳು ಸಿದ್ಧರಸ ಹಾಗು ಪದ್ಮಗಂಧಿಯರ ಮಗಳೆಂದೂ, ಸಿದ್ಧರಸನು ಪೆರ್ಮಾಡಿಯ ಮಂತ್ರಿ ಹಾಗು ದಣ್ಣಾಯಕನಾಗಿದ್ದನೆಂದು ತಿಳಿಸುವದು. ತಂದೆ ತಾಯಿ ಇಟ್ಟ ಹೆಸರು ಮಾಯಾದೇವಿಯಾಗಿತ್ತು.ಗಣ್ಯಭಾಷೆ ರತ್ನಮಾಲೆಯಿಂದ ಇವಳ ಹೆಸರು ನೀಲಲೋಚನೆ ಎಂದೂ ಬರೆಯಲಾಗಿದೆ. ಬಿಜ್ಜಳನ ತಂದೆ ಪೆರ್ಮಾಡಿ ತೀರಿಕೊಂಡ ನಂತರ ಬಿಜ್ಜಳನ ತಾಯಿಯೂ ಸಹಗಮನ ಮಾಡುತ್ತಾಳೆ. ಆಗ ಪದ್ಮಗಂಧಿಯೇ ಬಿಜ್ಜಳ ಹಾಗು ಆತನ ಹಸಗೂಸು ತಮ್ಮ ‘ಕರ್ಣದೇವನನ್ನು’ ಸಾಕಿ ಸಲಹುತ್ತಾಳೆ. ಹೀಗಾಗಿ ನೀಲಾಂಬಿಕೆ ಹಾಗು ಕರ್ಣದೇವ ಒಡನಾಡಿಗಳಾಗಿ ಬೆಳೆಯುತ್ತಾರೆ. ಮುಂದೆ ನೀಲಾಂಬಿಕೆಯ ತಂದೆ ತಾಯಿಗಳು ತೀರಿಕೊಂಡ ನಂತರ ಬಿಜ್ಜಳನೇ ಈಕೆಯನ್ನು ತನ್ನ ಅರಮನೆಯ ವಾತಾವರಣದಲ್ಲಿ ಬೆಳೆಸುತ್ತಾನೆ. ಹೀಗಾಗಿ ನೀಲಾಂಬಿಕೆಯನ್ನು ಬಿಜ್ಜಳನ ‘ಸಾಕು ತಂಗಿ’ ಎನ್ನುವರು. ರಾಜ ವೈಭೋಗದ ಮಧ್ಯದಲ್ಲಿ ಇವಳು ಸಾಹಿತ್ಯ, ಸಂಗೀತ, ಸಂಸ್ಕೃತ ಕಲಿತಳು. ಕತ್ತಿವರಸೆ ಮುಂತಾದ ಯುದ್ಧಕಲೆಗಳಲ್ಲಿಯೂ ಪರಿಣತಿ ಪಡೆದಳು.

- Advertisement -

ಬಸವಣ್ಣನವರು ಬಿಜ್ಜಳನಲ್ಲಿ ಕರಣಿಕರಾಗಿ ಸೇವೆ ಗೈಯ್ಯತ್ತಿರುವಾಗ ಯಾವ ಪಂಡಿತರಿಂದಲೂ ಓದಲಾಗದ ಲಿಪಿಯನ್ನು ಓದಿ ಬಿಜ್ಜಳನಿಗೆ ಅಪಾರ ನಿಧಿ ದೊರಕಿಸಿಕೊಟ್ಟರು. ಬಸವಣ್ಣನವರ ಜ್ಞಾನ ಶಕ್ತಿ ಕ್ರಿಯಾಶಕ್ತಿ ಕಂಡು ಇವರಿಂದಲೇ ರಾಜ್ಯದ ಅಭಿವೃದ್ಧಿ ಸಾಧ್ಯವೆಂದು ಬಿಜ್ಜಳ ಮನಗಾಣುತ್ತಾನೆ. ಈ ವಿಚಾರವನ್ನು ಗಟ್ಟಿಗೊಳಿಸಲು ತಂಗಿ ನೀಲಾಂಬಿಕೆಯನ್ನು ಬಸವಣ್ಣನವರಿಗೆ ಕೊಟ್ಟು ಮದುವೆ ಮಾಡುತ್ತಾನೆ. ‘ಎನ್ನ ಸತಿ ನೀಲಲೋಚನೆ ಪೃಥ್ವಿ ಗಗ್ಗಳ ಚೆಲುವೆಯೆಂದು’ ಬಸವಣ್ಣನವರು ತಮ್ಮ ವಚನದಲ್ಲಿ ಅವಳ ಬಾಹ್ಯ ಹಾಗು ಆಂತರಿಕ ಚೆಲುವನ್ನು ಕಂಡು ಹೊಗಳಿದ್ದಾರೆ. ಅವಳು ರಾಜ ವೈಭವದ ವಾತಾವರಣದಲ್ಲಿ ಬೆಳೆದಿದ್ದರೂ, ಬಸವಣ್ಣನವರ ಪ್ರಭಾವಲಯದಲ್ಲಿ ಶರಣ ಧರ್ಮ ದ ಪಾಲನೆಯಲ್ಲಿ ಮೇರು ಸದೃಶವಾಗಿ ಬೆಳೆಯುತ್ತಾಳೆ. ಮಹಾ ಮನೆಯ ಮಹಾತಾಯಿಯಾಗಿ ಮಹಾ ದಾಸೋಹದ ಪೂರ್ಣ ಜವಾಬ್ದಾರಿ ಹೊರುತ್ತಾಳೆ. ಅಕ್ಕನಾಗಮ್ಮ, ಗಂಗಾಬಿಕೆಯರಿಗೆ ಸಹಕಾರಿಯಾಗುತ್ತಾಳೆ. ಕಾಯಕ ದಾಸೋಹದ ಕರುಣಾ ಮೂರ್ತಿಯಾಗಿ, ಬಸವಣ್ಣನವರ ಆದರ್ಶಗಳಿಗೆ ಸಾಕ್ಷಿ ಯಾಗುತ್ತಾಳೆ. ‘ಎನಗೆ ಲಿಂಗವೂ ನೀನೇ ಬಸವಯ್ಯ, ಎನಗೆ ಸಂಗವೂ ನೀನೇ ಬಸವಯ್ಯ’ ಎನ್ನುತ್ತಾ ಸಾಗುತ್ತಾಳೆ.

ಶರಣಧರ್ಮ ತತ್ವಗಳಿಗೆ ಬದ್ಧಳಾಗುತ್ತ , ಪ್ರವರ್ಧಮಾನಳಾಗುತ್ತಾಳೆ’ ಅವಳ ಕಂದ ಬಾಲ ಸಂಗ ನಿನ್ನ ಕಂದ ಚೆನ್ನಲಿಂಗ’ ಎಂದು ಹೇಳಿದರಮ್ಮಾ ಎಮ್ಮ ಒಡೆಯರು. ‘ಫಲವಿಲ್ಲದ ಕಂದನವಳಿಗೆ ಎನಗೆ ಫಲವಿಲ್ಲ ಕಂದನಿಲ್ಲ’ ಎಂಬ ಗಂಗಾಂಬಿಕೆಯ ವಚನದಿಂದ ತಿಳಿದು ಬರುವದೇನೆಂದರೆ ನೀಲಾಂಬಿಕೆಗೆ ಬಾಲಸಂಗಯ್ಯನೆಂಬ ಮಗನಿದ್ದು ಆತ ಚಿಕ್ಕ ವಯಸ್ಸಿನಲ್ಲಿಯೇ ಶಿವಾಧೀನವಾದನೆಂದು ತಿಳಿದು ಬರುತ್ತದೆ. ಸ್ತ್ರೀ ಸಹಜ ನೋವಿನಿಂದ ನೊಂದರೂ,ಶಿವನ ಸೊಮ್ಮು ಶಿವನಿಗೆ ಸಂದಿದೆಯೆಂದು ನೀಲಾಂಬಿಕೆ ತನ್ನನ್ನು ತಾನೇ ಸಂತೈಸಿಕೊಳ್ಳುತ್ತಾಳೆ. ಕಷ್ಟಗಳು ಬರಹತ್ತಿದರೆ ಒಂದರ ಹಿಂದೊಂದು ಬರತ್ತದೆಯೆನ್ನುವರು. ಇದು ಪ್ರತಿಯೊಬ್ಬರ ಜೀವನದಲ್ಲೂ ಅನುಭವಿಸುವ ಮಾತು.

ಒಮ್ಮೆ ರಾತ್ರಿ ಕಳ್ಳನೊಬ್ಬ ಬಸವಣ್ಣನವರ ಮನೆಗೆ ಕನ್ನಹಾಕಿ ನೀಲಾಂಬಿಕೆಯ ಬೆಂಡೋಲೆಗೆ ಕೈ ಹಾಕುತ್ತಾನೆ. ಆಗ ಬಸವಣ್ಣನವರು ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದರೆ ಕೂಡಲಸಂಗಮನಲ್ಲದೆ ಬೇರಿಲ್ಲ ತೆಗೆದುಕೊಡು ಚೆಂಡಾಲಗಿತ್ತಿ ಎಂದು ಬಸವಣ್ಣ ಹೇಳಿದರು. ಈ ಪದ ಅಪಭ್ರಂಶಗೊಳಿಸಿದ್ದಾರೆ. ನುಡಿದರೆ ಮುತ್ತಿನ ಹಾರ ದಂತಿರಬೇಕೆಂದು ಹೇಳಿದ ಆ ಮಹಾತ್ಮಹೀಗೆ ನುಡಿಯಲು ಸಾಧ್ಯವಿಲ್ಲ ಅದೂ ಸುಸಂಸ್ಕೃತ ಶರಣೆಯಾದ ನೀಲಾಂಬಿಕೆಗೆ ಈ ರೀತಿಯಾಗಿ ಯಾವ ಬಾಯಿಂದ ನುಡಿಯಲು ಸಾಧ್ಯ? ಬೆಂಡೋಲೆ ಬಿಚ್ಚಿ ಎಂಬ ಪದವೇ ಈ ರೀತಿಯಾಗಿ ಅಪಭ್ರಂಶ ವಾಗಿರಬೇಕೆಂದು ಎಂದು ಪರಿಣಿತರು ಅಭಿಪ್ರಾಯ ಪಡುತ್ತಾರೆ.

- Advertisement -

ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನವರು ನೀಲಾಂಬಿಕೆಯನ್ನು ಕೂಡಲ ಸಂಗಮಕ್ಕೆ ಕರೆತರಲು ಅಪ್ಪಣ್ಣನವರಿಗೆ ತಿಳಿಸುತ್ತಾರೆ. ಆದರೆ ನೀಲಾಂಬಿಕೆ ಹೇಳ್ತಾಳೆ ‘ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೆ?’ ಇಂತಹ ನುಡಿಗಾಗಿಯೇ ಇವಳಿಗೆ ವಿಚಾರ ಪತ್ನಿಯೆನ್ನುವದು.
ಕೊನೆಗೆ ಬಸವಣ್ಣನವರನ್ನು ಕಾಣಲು ಹೊರಟು ತಂಗಡಗಿಗೆ ಬರುತ್ತಾಳೆ. ಅಲ್ಲಿಯೇ ಲಿಂಗೈಕ್ಯವಾಗುತ್ತಾಳೆ. ಅವಳ ಹಾಗು ಅಪ್ಪಣ್ಣನವರ ಐಕ್ಯ ಮಂಟಪಗಳು ಅಲ್ಲಿ ಇವೆ.
ನೀಲಾಂಬಿಕೆ ಒಬ್ಬ ಶ್ರೇಷ್ಠ ಅನುಭಾವಿ ವಚನಕಾರ್ತಿ. ಸಿದ್ಧರಾಮರು ಇವಳು ಲಕ್ಷದ ಮೇಲೆ ಸಾಸಿರ ವಚನ ಬರೆದಿದ್ದಾಳೆಯೆಂದು ಹೇಳಿದ್ದರೂ ಈಗ ದೊರೆತ ಇವಳ ವಚನಗಳು ೨೮೮ ಮಾತ್ರ. ‘ ಸಂಗಯ್ಯ’ ಎಂಬುದು ನೀಲಾಂಬಿಕೆಯ ವಚನಗಳ ಅಂಕಿತ ನಾಮವಾಗಿದೆ. ಇವಳ ವಚನಗಳಲ್ಲೆಲ್ಲ ಬಸವನ ಸ್ತುತಿ ಅವರ ಅಗಲುವಿಕೆಯ ದುಃಖ, ಸಂಗ ಸುಖ ವರ್ಣಿತವಾಗಿವೆ. ಸ್ವರಗೀತೆಗಳು ಕಾಲಜ್ಞಾನ ವಚನಗಳನ್ನು ಬರೆದಿದ್ದಾಳೆ.
ವಿಶ್ಲೇಷಣೆಗಾಗಿ ಈ ವಚನ ಗಮನಿಸಬಹುದು.

ಅರಿಯದ ಶಬ್ದವ ಕುರುಹಿಂಗೆ ತಂದ ಬಸವಯ್ಯನು
ಆ ಕುರುಹನೆರಡ ಮಾಡಿದ ಬಸವಯ್ಯನು ಆವೆರಡ ಒಂದರಲ್ಲಿ ಛೇದಿಸಿ ಸಂಗಯ್ಯನಲ್ಲಿ
ಸ್ವಯಂಲಿಂಗಿಯಾದನಯ್ಯ ಬಸವಯ್ಯನು’

ಬಸಬಣ್ಣನವರು ಸ್ವಯಂ ಜ್ಯೋತಿ ಸ್ವರೂಪರು. ಲಿಂಗಾಂಗಯೋಗ ಸಾಧಿಸಿ ಸ್ವಯಂ ಲಿಂಗವೇ ಆದವರೆಂಬ ಮಾತನ್ನು ಶರಣ ಸಿದ್ಧಾಂತದ ಸ್ವರೂಪದಲ್ಲಿ ವ್ಯಕ್ತಪಡಿಸಿದ್ದಾಳೆ. ಲಿಂಗಯ್ಯನು ನಾದ, ಬಿಂದು, ಕಳಾತೀತನು. ಸೃಷ್ಟಿ ರಚನೆಗೆ ಮನ ಮಾಡಿದಾಗ ಕಳಾ ರೂಪದಲ್ಲಿ ಪ್ರಕಟಗೊಂಡನು. ಆತನು ಪ್ರಣವ ಸ್ವರೂಪನು. ಬಸವಣ್ಣನವರು ಆ ಅಗಮ್ಯ ಅಗೋಚರ ಅಪ್ರಮಾಣ ನಿಷ್ಕಳಂಕ ಲಿಂಗಯ್ಯನನ್ನು ಲಿಂಗಯೋಗ ಸಾಧನೆ ಮಾಡಲು ಇಷ್ಟಲಿಂಗ ರೂಪದಲ್ಲಿ ಕುರುಹಾಗಿ ತಂದು ಕೊಟ್ಟರು. ಶರಣಸತಿ ಲಿಂಗಪತಿ ಭಾವದಲ್ಲಿ ಸಾಧನೆ ಮಾಡಲು ಆ ಲಿಂಗ ತತ್ವವನ್ನೇ ಅಂಗ ಲಿಂಗವೆಂದು ಎರಡು ಮಾಡಿದರು. ಮಾಲಿನ್ಯರಹಿತ ಶುದ್ಧಾತ್ಮನೇ ಶಿವನಂಶವೇ ಅಂವಾಗಿದೆ. ಈ ಭಾವವನ್ನು ಇಷ್ಟಲಿಂಗ ಯೋಗದ ಮೂಲಕ ಸಾಧಿಸಿ ತಾನೇ ಲಿಂಗ ಸ್ವರೂಪಿಯಾದನು ಬಸವಣ್ಣನು ಎನ್ನತ್ತಾಳೆ ನೀಲಾಂಬಿಕೆ.
ಇನ್ನೊಂದು ವಚನ ಹೀಗಿದೆ—–

ಊಟಕಿಕ್ಕದವರ ಕಂಡು ನನಗೆ ತೃಪ್ತಿಯಾಯಿತ್ತು.
ಕೂಟವಿಲ್ಲದ ಪುರುಷನ ಕಂಡು ಕಾಮ ಹಿಂಗಿತ್ತೆನಗೆ
ಏನೆಂದನ್ನದ ಮುನ್ನ ತಾನೆಯಾಯಿತ್ತು
ಸಂಗಯ್ಯನಲ್ಲಿ ಶಬ್ದ ಮುಗ್ಧವಾಯಿತು’

ಈ ವಚನದಲ್ಲಿ ನೀಲಾಂಬಿಕೆಯು ಬಸವಣ್ಣನ ಸಂಗ ಪ್ರಭಾವದಿಂದ ತಾನು ಹೇಗೆ ಲಿಂಗಪ್ರಾಣಿಯಾದೆ ಲಿಂಗಾಂಗ ಸುಖ ಪಡೆದೆನೆಂದು ಹೇಳುತ್ತ ಬಸವನ ಮಹಿಮೆ ತನ್ನ ಹಿರಿಮೆ ಎರಡನ್ನೂ ಅಭಿವ್ಯಕ್ತ ಪಡಿಸಿದ್ದಾಳೆ.

ಸಾಮಾನ್ಯವಾಗಿ, ಹಸಿವಾದಾಗ ಅನ್ನ ಊಟಮಾಡಿದರೆ ತೃಪ್ತಿ ಯಾಯಿತೆನ್ನುವೆವು. ಆದರೆ ಆ ತೃಪ್ತಿ ಕ್ಷಣಿಕ. ಆದರೆ ಬಸವಣ್ಣನವರ ಕೃಪಾದೃಷ್ಟಿ ಕರುಣಾಭಾವ ಭಕ್ತಿಯ ನೋಟ ಪ್ರೀತಿಯ ಮಾತು ಅವಳಿಗೆ ಆತ್ಮ ತೃಪ್ತಿಯ ಕೊಟ್ಟು, ಮತ್ತೇನೂ ಬೇಡವೆಂಬ ಭಾವ ಬಲಿತಿದೆ. ಊಟದ ಪರಿವೆ ಇಲ್ಲದಾಗಿದೆ. ಊಟದ ತೃಪ್ತಿಗಿಂತ ಮೀರಿದ ಆನಂದವಾಗಿದೆ.
ಅರಿಷಡ್ವರ್ಗಗಳನ್ನೆಲ್ಲ ಪರಿವರ್ತಿಸಿ ಲಿಂಗಕ್ಕೆ ಅರ್ಹಗೊಳಿಸಿದ ಸದ್ಭಾವಗಳನ್ನು ಮಾಡಿದ ಬಸವಣ್ಣನನ್ನು ಕಂಡು, ನನ್ನಲ್ಲಿ ಕಾಮವಿಕಾರ ಭಾವನೆಗಳೆಲ್ಲ ಅಳಿದವೆಂದು ಆ ತಾಯಿ ಹೇಳುತ್ತಾಳೆ. ‘ಮಡದಿ ಎನ್ನಲಾಗದು ಬಸವಂಗೆ ಎನ್ನನು, ಪುರುಷನೆನಲಾಗದು ಬಸವನ ಎನಗೆ’ ಎಂಬ ಮಾತು ದಾಂಪತ್ಯಕ್ಕೆ ಮೀರಿದ ಅವರ ಅನುಭಾವಿಕ ಸಂಬಂಧ ಎತ್ತಿ ತೋರಿಸುವದು.

ನಾ ನೀನೆನ್ನುವ, ನಾ ಹಾಗೆ ನೀ ಹೀಗೆ ಎಂಬ ವಿಚಾರಕ್ಕೆ ಬರುವ ಮುನ್ನವೇ, ಆ ವಸ್ತುವೇ ತಾನೇಯಾಗಿ ನಿಂತಿತು. ಭಿನ್ನ ಜ್ಞಾನವು ತಲೆದೋರದ ಮುನ್ನವೇ ನಿಜವು ನೆಲೆಗೊಂಡಿತ್ತು. ಹೀಗಾಗಿ ಸಂಗಯ್ಯನಲ್ಲಿ ಶಬ್ದ ಮುಗ್ಧಳಾದೆ. ನುಡಿಯುವ ವಿಚಾರಿಸುವ ವಸ್ತುವೇ ತಾನಾಗಿ ನಿಶ್ಯಬ್ದವೇ ನಾನಾದೆ. ಅನ್ಯ ಭೇದ ಭಿನ್ನಭಾವ ತೋರದ ಮುನ್ನ ತಾನೊಂದೇಯಾಗಿತ್ತು. ನೀಲಾಂಬಿಕೆಯ ಸಾಧನೆಯ ಅನುಭೂತಿಯನ್ನು ಇಲ್ಲಿ ಕಾಣಬಹುದು. ಸ್ತ್ರೀ ಸ್ವಾತಂತ್ರ್ಯದ ಅವಕಾಶವನ್ನು ಸಂಪೂರ್ಣವಾಗಿ ಸಮರ್ಥವಾಗಿ ಬಳಸಿದ ಶ್ರೇಷ್ಠ ಅನುಭಾವಿ ಶರಣೆ ನೀಲಾಂಬಿಕೆಯಾಗಿದ್ದಾಳೆ

ಪ್ರೇಮಕ್ಕ ಅಣ್ಣಿಗೇರಿ

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group