spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಬಸವಣ್ಣ
——————-
ಹನ್ನೆರಡನೆಯ ಶತಮಾನದ ಕ್ರಾಂತಿಕಾರಿ ಸಮಾಜವಾದಿ ಚಿಂತಕ ಬಸವಣ್ಣ . ಇವರು  ಬಸವನ ಬಾಗೇವಾಡಿಯ ಬ್ರಾಹ್ಮಣರ ಅಗ್ರಹಾರದ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ 1131 ರಲ್ಲಿ ಜನ್ಮ ತಾಳಿದರು. ತನ್ನ ಎಂಟನೆಯ ವಯಸ್ಸಿನಲ್ಲಿ ತನಗೆ ನೀಡಬಹುದಾದ ಉಪನಯನವನ್ನು ತಿರಸ್ಕರಿಸಿ ಮನೆ ಬಿಟ್ಟು ಕೂಡಲ ಸಂಗಮಕ್ಕೆ ಬಂದು ಅಧ್ಯಯನ ಮಾಡಿ ಮುಂದೆ ಸಹೋದರ ಮಾವ ಬಲದೇವನ ಸಹಾಯದಿಂದ ಬಿಜ್ಜಳನ ಮಂಗಳವೇಢೆಗೆ ಬಂದು ಕಾರಣಿಕ ವೃತ್ತಿ ಕೈಕೊಂಡು ಮುಂದೆ ಕಲ್ಯಾಣಕ್ಕೆ ಬಂದು ಅರ್ಥ ಸಚಿವ ಹುದ್ದೆ ಅಲಂಕರಿಸಿ ಮಾವನ ಮಗಳಾದ ಗಂಗಾಂಬಿಕೆಯನ್ನು ಮದುವೆ ಆದರು.

ಅಕ್ಕ ನಾಗಮ್ಮ ಅಳಿಯ ಚೆನ್ನಬಸವಣ್ಣನವರ ಮತ್ತು ಎಲ್ಲ ಟಾಲಾ ಸಮುದಾಯದ ಶರಣರನ್ನು ಒಗ್ಗೂಡಿಸಿ ಅನುಭವ ಮಂಟಪವನ್ನು ಕಟ್ಟಿದರು . ಬಿಜ್ಜಳನ ಸಾಕು ತಂಗಿ ನೀಲಲೋಚನೆಯನ್ನು ಬಿಜ್ಜಳನ ಆಗ್ರಹಕ್ಕೆ ಮಣಿದು ಮದುವೆಯಾದರು.

ಸಾರ್ವಕಾಲಿಕ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣ ಜಗವು ಕಂಡ ಶ್ರೇಷ್ಠ ಸಮಾಜವಾದಿ. ಸಂಸತ್ತಿನ ಪಿತಾಮಹ ಎಂದು ಪಾಶ್ಚಿಮಾತ್ಯರು ಬಸವಣ್ಣನವರ ಕಾರ್ಯ ಸಾಧನೆ ವರ್ಣಿಸುತ್ತಾರೆ.

- Advertisement -

ಇವರ ವಚನಾಂಕಿತ ಕೂಡಲ ಸಂಗಮದೇವ
ಒಟ್ಟು ಬರೆದ ವಚನ 1414 ಇವುಗಳಲ್ಲದೆ ಅನೇಕ ಸ್ವರ ವಚನಗಳು ಲಭ್ಯ ಎಂದು ಹೇಳಲಾಗಿದೆ. ಇವರ ಅನೇಕ ಹೆಚ್ಚಿನ ವಚನಗಳು ಪರಿಷ್ಕರಣೆಗೆ ಒಳಪಡುವುದು ಅತ್ಯಗತ್ಯವಾಗಿದೆ. ಷಟ್ಸ್ಥಲ ವಚನಗಳು ಹೆಚ್ಚು ಮೌಲಿಕ
ಒಂದು ವಚನದ ವಿಶ್ಲೇಷಣೆ ಇಲ್ಲಿ ಮಾಡಲು ಇಚ್ಛಿಸಿದ್ದೇನೆ

ಭಕ್ತಿ ಎಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜ

ಅಷ್ಟಾವರಣದಲ್ಲಿ ಗುರು ಒಂದು ಪ್ರಮುಖ ಘಟ್ಟ .ಸನಾತನ ಸಂಸ್ಥೆಯ ಗುರುಕುಲದ ವ್ಯವಸ್ಥೆಯ ಗುರು ಪದ್ದತಿಗೆ ವ್ಯತಿರಿಕ್ತವಾಗಿ ಶರಣರು ಗುರು ಪದವನ್ನು ಕಂಡುಕೊಂಡರು. ಗುರು ಅದು ಸ್ಥಾಯಿ ಭಾವವಲ್ಲ ಅದು ಸಂಚಾರಿ ಚೇತನ  ಅರಿವಿನ ಪ್ರಜ್ಞೆ.

- Advertisement -

ಭಕ್ತಿ ಎಂಬ ಪೃಥ್ವಿಯ ಮೇಲೆ ,ಗುರುವೆಂಬ ಬೀಜ ಅಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಗಿತ್ತು ,ನಿಷ್ಪತ್ತಿಯೆಂಬ ಹಣ್ಣಾಯಿತ್ತು .
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ ತನಗೆಬೇಕೆಂದು ಎತ್ತಿಕೊಂಡ

ಈ ವಚನವನ್ನು ನಾವು ಮತ್ತೆ ಮತ್ತೆ ಅವಲೋಕಿಸುವುದು ಅಗತ್ಯವಾಗಿದೆ. ಗುರುವೆಂಬ ಬೀಜ ಎಂದರೆ ಏನು ?. ಬಸವ ಪೂರ್ವ ಯುಗದ ಗುರು ಪದ್ದತಿಯನ್ನು ಭೌತಿಕ ಗುರುವಿನಿಂದ ಭೌದ್ಧಿಕ ಗುರುವಿಗೆ ಮಾರ್ಪಾಟುಗೊಳಿಸಿ ಪ್ರತಿಯೊಬ್ಬ ವ್ಯಕ್ತಿಯ ಅರಿವಿನ ಆಳವನ್ನು ಜಾಗೃತಗೊಳಿಸಿದರು. ಅಂತಹ ಅರಿವನ್ನು ಗುರುವಾಗಿಸಿಕೊಂಡರು ನಮ್ಮ ಶರಣರು. ಪೃಥ್ವಿ ಇದು ಧೃಢತೆ ಹಾಗು ಸಂಚಲನದ ಗಟ್ಟಿಮುಟ್ಟಾದ ಸಂಕೇತವಾಗಿದೆ. ಇಂತಹ ಮನವುಳ್ಳ ಭಕ್ತನ ಮನದಲ್ಲಿ ಅರಿವೆಂಬ ಗುರುವು ಬೀಜವಾಗಿ ಅಂಕುರಿಸಿ ಪಂಚ ಮಹಾಭೂತಗಳ ಶಕ್ತಿಯಿಂದಾಗಿ ಪಂಚೇಂದ್ರಿಯ ಮೂಲಕ ಸಮಷ್ಟಿಯನ್ನು ಗ್ರಹಿಸುವ ಅರಿವಿನ ಅನುಸಂಧಾನಕ್ಕೆ ಲಿಂಗವೆಂಬುದು ಸಾಧನವಾಗಿದೆ. ಅರಿವಿನ ಬೀಜ ಬಿದ್ದಲ್ಲಿ ಲಿಂಗವೆಂಬ ಎಲೆಯು ವಿಕಸಿತಗೊಂಡಿತು .ಸಸ್ಯದ ಸಮಗ್ರ ಬೆಳವಣಿಗೆಯಲ್ಲಿ ಎಲೆ ಮತ್ತು ಬೇರು ಪ್ರಮುಖ ಪಾತ್ರ ವಹಿಸುತ್ತವೆ.ಎಲೆಯು ಸೂರ್ಯ ಕಿರಣಗಳಿಂದ ದ್ಯುತಿ ಸಂಶ್ಲೇಷಣೆಗೆ ಕಾರಣವಾಗಿ (PHOTO SYNTHESIS ) ಸಸ್ಯಕ್ಕೆ ಬೇಕಾದ ಆಹಾರವನ್ನು ತಯಾರಿಸುವ ಘಟಕವಾಗಿದೆ,

ಎಲೆಯು ಮೂಡಿದ ಮೇಲೆ ಆಲೋಚನೆಗಳು ಸದ್ವಿಚಾರಗಳು ಹುಟ್ಟಿಕೊಳ್ಳುತ್ತವೆ. ಈ ವಿಚಾರಗಳ ಅರಳುವಿಕೆಯನು ಬಸವಣ್ಣ ಹೂವಾಗಿ ಕಂಡಿದ್ದಾರೆ.ವಿಚಾರ ಮತ್ತು ಆಚಾರಗಳ ಸಮನ್ವಯತೆಯೇ ಶರಣ ಸಂಸ್ಕೃತಿಯ ಜೀವಾಳ. ಹೀಗಾಗಿ ವಿಚಾರವೆಂಬ ಹೂವು ಆಚಾರವೆಂಬ ಕಾಯಾಗಿ ಪರಿವರ್ತನೆಗೊಳ್ಳುತ್ತದೆ. ನಂತರ ಪರಿಪೂರ್ಣತೆ ಎಂಬ ನಿಷ್ಪತ್ತಿ ಹಣ್ಣಾಗಿ ರೂಪಗೊಳ್ಳುತ್ತದೆ. ಆ ಹಣ್ಣು ಕೂಡಲ ಸಂಗಮದೇವವೆಂಬ ಜಂಗಮ ಸಮಾಜವು ತನಗೆ ಬೇಕೆಂದು ಆಯ್ಕೆ ಮಾಡಿಕೊಳುತ್ತದೆ. ಸೃಷ್ಟಿಯೊಳಗಿನ ಸಸಿಯ ಬೆಳವಣಿಗೆಯನ್ನು ಭಕ್ತನ ಅಂತರಂಗದ ವಿಕಾಸಕ್ಕೆ ಹೋಲಿಸಿ ಸುಂದರವಾಗಿ ವಿವರಣೆ ನೀಡುವ ಬಸವಣ್ಣನವರು ಸಾರ್ವಕಾಲಿಕ ಗುರು .

ಅರಿವುಳ್ಳವರಿಗೆ ಗುರುವಿನ ಹಂಗೇಕೇ ?
ಅರಿವುಳ್ಳವರಿಗೆ ಲಿಂಗದ ಹಂಗೇಕೇ ?
ಅರಿವುಳ್ಳವರಿಗೆ ಪಾದೋದಕ ಪ್ರಸಾದದ ಹಂಗೇಕೇ ?
ಅರಿವುಳ್ಳವರಿಗೆ ಅಮುಗೇಶ್ವರವನರಿದವನೆಂಬ ಸಂದೇಹವೇಕೆ ?

ಕೆಳಸ್ತರದ ಶರಣೆ ಅಮುಗೆ ರಾಯಮ್ಮ ಅರಿವುಳ್ಳವರಿಗೆ ಗುರುವಿನ ಹಂಗೇಕೇ ? ಎಂದು ಕೇಳುವದರ ಮೂಲಕ ಸ್ಥಾಯಿಭಾವದ ಬಾಹ್ಯ ಗುರುವನ್ನು ಸಂಪೂರ್ಣ ಅಲ್ಲಗಳೆದಿದ್ದಾಳೆ. ಗುರು ಮನೋವಿಕಾಸದ ಮಾರ್ಗ. ದಾಸ್ಯತ್ವದ ಶ್ರೇಣಿಕೃತ ವ್ಯವಸ್ಥೆ ಅಲ್ಲ. ಗುರು ಪಾದ ಅಂದರೆ ಜ್ಞಾನದ ಸಂಚಲನ.

15 ನೆ ಶತಮಾನದ ಅಂತ್ಯದಲ್ಲಿ ಬರುವ ಶೂನ್ಯಸಂಪಾದನಾ ಸಂಕಲನಕಾರರು ಮತ್ತು ಕೆಲ ಕಾಳಾಮುಖಿ ಶೈವರು ತಮ್ಮ ಅನುಕೂಲಕ್ಕೆ ಮತ್ತೆ ಈ ಗುರು ಪದವನ್ನು ಅಲ್ಲಲ್ಲಿ ತುರುಕಿ ಧರ್ಮದಲ್ಲಿ ಯಜಮಾನಿಕೆಯ ಪದ್ಧತಿಯನ್ನು ಮುಂದುವರೆಸಲು ಮಾಡಿಕೊಂಡ ಒಂದು ವ್ಯವಸ್ಥೆ.

ವಚನಗಳು ಹಲವು ಅರ್ಥವನ್ನು ಕೊಡುವ ಅಮೂಲ್ಯ ರತ್ನಗಳು ಅರಿದಷ್ಟು ಜ್ಞಾನ ವಿಸ್ತಾರಗೊಳ್ಳುತ್ತದೆ. ಅಂದಿನ ಸನಾತನಕ್ಕೆ ಸಮಗ್ರವಾಗಿ ಪರ್ಯಾಯವಾಗಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಶರಣರು ಅದರಲ್ಲೂ ಬಸವಣ್ಣನವರು ಹೆಣಗಾಡಿದರು. ನಾನು ಹೇಳಿದ್ದೆ ಸತ್ಯ ಅಂತಾ ಮೊಳೆ ಹೊಡೆಯುವ ಜಾಯಮಾನ ನನ್ನದಲ್ಲ.
ಅರಿವಿನ ನೈಜ ಮೂರುತಿಯಾದ ಬಸವಣ್ಣ ಸತ್ಯದ ಪ್ರತಿಪಾದಕ, ಬಸವಣ್ಣ ಸರ್ವಕಾಲಿಕ ಅರಿವಿನ ಸತ್ಯದ ಸಂಕೇತವಾಗಿ ನಿಲ್ಲುತ್ತಾನೆ .
ಅಂತೆಯೇ ಅಲ್ಲಮರು

ಮಹಾ ಮಣಿಹ ಸಂಗನ ಬಸವ ಎನಗೆಯು ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಗುಹೇಶ್ವರ ಎಂದಿದ್ದಾರೆ

ಅಕ್ಕ ಬಸವನ ಅರಿವನರಿಯದೆ ಕೆಟ್ಟೆನಲ್ಲ ಎಂದಿದ್ದಾಳೆ. ಮಡಿವಾಳರು ಗುರುವು ಬಸವಣ್ಣನಿಂದಾ ಎಂದರೆ,, ಚೆನ್ನ ಬಸವಣ್ಣ ಗುರುವು ಬಸವಣ್ಣನ ಪಾದದಿಂದ ಎಂದಿದ್ದಾರೆ. ಅನೇಕ ಶರಣರು ಬಸವಣ್ಣ ಕಂಡುಕೊಂಡ ಸತ್ಯವನ್ನು ಸಾರ್ವತ್ರಿಕಗೊಳಿಸಿದ್ದಾರೆ. ಹೀಗಿದ್ದಾಗ ಹೊರಗಿನ ಗುರು ಎಷ್ಟು ಸಮಂಜಸ ?

ಇದು ನನ್ನ ವ್ಯಕ್ತಿಗತವಾದ ಅಭಿಮತ ಚರ್ಚೆಗೆ ಕೊನೆ ಇರುವದಿಲ್ಲ. ಆದರೆ ನಾನು ಅಂತರಂಗದ ಅರಿವೇ ಅಷ್ಟಾವರಣದಲ್ಲಿನ ಗುರು ಎಂದು ಬಲವಾಗಿ ನಂಬಿದ್ದೇನೆ ಮತ್ತು ಅದಕ್ಕೆ ಬದ್ಧವಾಗಿದ್ದೇನೆ. ಇನ್ನು ಅವರವರ ಅಭಿಮತ ಅಭಿಪ್ರಾಯಕ್ಕೆ ಉತ್ತರಿಸುವ ಜಾಣತನ ಬುದ್ಧಿಮತ್ತೆ ಅಥವಾ ಪಾಂಡಿತ್ಯ ನನ್ನ ಬಳಿ ಇಲ್ಲ .ಸರಳ ವಚನಾಧಾರಿತ ಸತ್ಯವನ್ನು ಒಪ್ಪಿಕೊಂಡಿರುವೇನು. ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ
-ಶರಣಾರ್ಥಿ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group