ಶರಣ ಗಾಣದ ಕಣ್ಣಪ್ಪ
ಬಸವಣ್ಣನವರ ಸಮಕಾಲೀನರು ಎನ್ನಲಾದ ಒಬ್ಬ ಶರಣರಿವರು. ಗಾಳ ಹಾಕಿ ಮೀನು ಹಿಡಿಯುವ ಕಾಯಕ ಮಾಡುತ್ತಿರುವುದರಿಂದ ಅವರನ್ನು ಗಾಳದ ಕಣ್ಣಪ್ಪ ಅನ್ನುತ್ತಿದ್ದರು. ಪಾಠಾಂತರದ ಸಮಯದಲ್ಲಿ ಗಾಳದ ಕಣ್ಣಪ್ಪ ಬದಲು ಗಾಣದ ಕಣ್ಣಪ್ಪ ಆಗಿರಬಹುದು ಎಂದು ಕೆಲವು ಸಂಶೋಧಕರ ಅಭಿಪ್ರಾಯ .
ಗುರುರಾಜ ಚಾರಿತ್ರ ಹಾಗೂ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ ಎಂಬ ಗ್ರಂಥದಲ್ಲಿ ಈ ಶರಣರ ಉಲ್ಲೇಖವಿದೆ. ಕಲ್ಯಾಣದ ತ್ರಿಪುರಾಂತಕ ಕೆರೆಯಲ್ಲಿ ಮೀನು ಹಿಡಿಯುವ ಕಾಯಕ ಮಾಡುತ್ತಿರುವ ಕಣ್ಣಪ್ಪನವರ
ಪತ್ನಿ, ರೇಚವ್ವೆ ಇವರಿಬ್ಬರೂ ಶಿವ ಭಕ್ತರಾಗಿದ್ದು ಅನುಭವಮಂಟಪದ ಶಿವಾನುಭವ ಗೋಷ್ಠಿಯಲ್ಲಿ ನಿತ್ಯ
ಭಾಗವಹಿಸುತ್ತಾ ಗುಪ್ತ ಲಿಂಗಪೂಜಾ ನಿಷ್ಠೆ ಉಳ್ಳವರಾಗಿದ್ದರು ಎನ್ನಲಾಗುತ್ತದೆ.
ಕಣ್ಣಪ್ಪನವರು ಅಂದು ಹಿಡಿದ ಮೀನನ್ನು ಅಂದಂದೆ ಮಾರಿ, ಬಂದ ಹಣದಿಂದ ಜಂಗಮ ಸೇವೆ ಮಾಡುತ್ತಿದ್ದರು. ಒಂದು ದಿನ ಕಣ್ಣಪ್ಪನವರಿಗೆ ಗಣಾರಾಧನೆ ಮಾಡಬೇಕೆಂಬ ಇಚ್ಛೆಯಾಗಿ ಪೂಜೆಗೆ ಕುಳಿತಾಗ ಅಗೋಚರ ಧ್ವನಿ ಒಂದು ನಿನಗೇನು ಬೇಕು ಕೇಳು ಎಂದಂತಾಗಿ ಧ್ಯಾನ ಮಗ್ನರಾಗಿದ್ದ ಕಣ್ಣಪ್ಪನವರು ಸ್ವರ್ಣ ಮತ್ಸ್ಯ ಬೇಕು ಎಂದು
ಉತ್ತರ ನೀಡಿದರು. ಮರು ದಿವಸ ಗಾಳಿ ಹಾಕಿ
ಮೀನು ಹಿಡಿಯಲು ಹೋದಾಗ ಗಾಳಕ್ಕೆ ಸ್ವರ್ಣ ಮೀನು ಸಿಕ್ಕಿಕೊಂಡಿತ್ತು. ಸಂತೋಷಗೊಂಡ ಕಣ್ಣಪ್ಪನವರು ಅದನ್ನು ಮಾರಿ ಬಂದ ಹಣದಿಂದ ಜಂಗಮ ಮೂರ್ತಿಗಳಿಗೆ ದಾಸೋಹ ವ್ಯವಸ್ಥೆ ಮಾಡಿ ತಮ್ಮ ಮನೆಗೆ ಪ್ರಸಾದ ಸೇವನೆಗೆ ಬರಬೇಕೆಂದು ಕೇಳಿಕೊಂಡಾಗ ಎಲ್ಲ ಜಂಗಮರು ಮನೆಗೆ ಬಂದಾಗ ಸತ್ತ ಮೀನಿನ ವಾಸನೆ ಬಂದಿತೆಂದು ಅಸಹ್ಯ ಪಟ್ಟುಕೊಂಡು ಕಣ್ಣಪ್ಪನವರಿಗೆ ಚೀಮಾರಿ ಹಾಕಿ ಹೋಗುತ್ತಾರೆ. ಇತ್ತ ಬಸವ ಸದನದಲ್ಲಿ ಪ್ರಸಾದ ಸೇವನೆಗೂ ಮುನ್ನ ಲಿಂಗ ಪೂಜೆ ಮಾಡಲು ಲಿಂಗ ಕರಡಿಗೆಗಳನ್ನು ಬಿಚ್ಚಲಾಗಿ ಲಿಂಗಗಳು ಇರಲಿಲ್ಲವೆಂದು ಹೇಳ ಲಾಗುತ್ತಿದೆ. ಕಣ್ಣಪ್ಪನವರ ಆರಾಧ್ಯ ದೈವ ಗುರು ಅಲ್ಲಮಪ್ರಭು. ಇವರು ಸುಮಾರು 10 ವಚನಗಳನ್ನ ರಚಿಸಿದ್ದಾರೆ. ವಚನಗಳ ತುಂಬೆಲ್ಲ ಅಲ್ಲಮರನ್ನು ಹೊಗಳಿದ್ದಾರೆ. ಗಾಣದ ಕಣ್ಣಪ್ಪನವರ ಸಾಂಗತ್ಯ ಕೃತಿಯ ಹಸ್ತ ಪ್ರತಿಯನ್ನು ಹುಬ್ಬಳ್ಳಿಯ
ಮೂರು ಸಾವಿರ ಮಠದಲ್ಲಿ ಈಗಲೂ ಕಾಣಬಹುದು. ಇಂತಹ ದಲಿತ ವರ್ಗದ ವಚನಕಾರರು ಕಲ್ಯಾಣದ ಆಂದೋಲನದಲ್ಲಿ
ಪಾಲ್ಗೊಂಡಿದ್ದರು ಎಂಬುದು ಹೆಮ್ಮೆಯ ವಿಷಯ.
ಶರಣ ಗಾಳದ ಕಣ್ಣಪ್ಪನವರ ಒಂದು
ವಚನವನ್ನ ನೋಡೋಣ.
ಒಂದೇ ಕೋಲಿನಲ್ಲಿ ಮೂರು ಲೋಕ ಮಡಿಯಿತು
ಬಿಲ್ಲಿನ ಕೊಪ್ಪು ಹರಿ ನರಿ
ಸಿಡಿದು ನಾರಾಯಣನಂತಾಗಿತ್ತು
ನಾರಾಯಣನ ಹಲ್ಲು ಮುರಿದು
ಬ್ರಹ್ಮನ ಹಣೆಯೊಡೆಯಿತು
ಹಣೆ ಮುರಿದು ರುದ್ರನ ಹಣೆ
ಗಿಚ್ಚಿನಲಿ ಬಿದ್ದಿತ್ತು ನಷ್ಟವಾಯಿತು ಗೊಹೇಶ್ವರನ
ಶರಣ ಅಲ್ಲಮ ಬದುಕು ನಾಮನಷ್ಟವಾಯಿತು.
ಮೀನುಗಾರರಾದ ಕಣ್ಣಪ್ಪನವರು ತನ್ನ ಒಂದು ಕೋಲಿ ನಲ್ಲಿ ಮೂರು ಲೋಕವು ಮಡಿಯಿತು ಸತ್ಯ ಶ್ರದ್ದೆಯಿಂದ ಮಾಡಿದ ಕೆಲಸವು ಮೂರು ಲೋಕಕ್ಕಿಂತ ಮಿಗಿಲಾದದ್ದು. ಎಂದಿದ್ದಾರೆ.
ಕೋಲು ಕಾಯಕದ ಸಂಕೇತವಾಗುತ್ತದೆ. ಭ್ರಮೆ ಭ್ರಾಂತಿಯ ಮೂರು ಲೋಕದ ಕಲ್ಪನೆ ಸುಳ್ಳಾಯಿತು. ನಾರಾಯಣನಿಗೆ ದೇಹಕ್ಕೆ ಬಿಲ್ಲಿನ ಕೊಂಡಿ ಸಿಡಿದು ತಾಗಿತು.
ತಾಗಿದ್ದ ಬಿಲ್ಲಿನ ಸಿಡಿದ ಸಿಬಿಕೆ
ಆತನ ಹಲ್ಲು ಮುರಿದು
ಬ್ರಹ್ಮನ ಹಣೆಗೆ ತಾಗಿ
ನೋವು ಮಾಡಿತ್ತು.
ಒಡಲಿಗಾಗಿ ದುಡಿಯುವ ಕಾಯಕದಿಂದ ಬದುಕು
ಸಮಸ್ಥಿತಿಗೆ ಬರುವುದು. ದುಡಿದು ಉಣ್ಣುವ ಕಾಯಕವೇ ಅತ್ಯಂತ ಪ್ರೀಯ ಶುದ್ಧ ಕಾಯಕ ಶ್ರದ್ದೆಯಿಂದ ಮಾಡಬೇಕು ಎಂಬ ಸಂದೇಶವನ್ನ ಇವರ ವಚನಗಳಲ್ಲಿ ಕಾಣುತ್ತೇವೆ.
ಗೌರಮ್ಮ ನಾಶಿ
ವಚನ ಅಧ್ಯಯನ ವೇದಿಕೆ
ಅಕ್ಕನ ಅರಿವು ಬಸವಾದಿ
ಶರಣರ ಚಿಂತನ ಕೂಟ.