spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ತೆಲುಗೇಶ ಮಸಣಯ್ಯ

ಅಪ್ಪ ಬಸವಣ್ಣನವರ ಸಮಾಜೋಧಾರ್ಮಿಕ ಚಳವಳಿಯ ಕೇಳಿ ಪ್ರಭಾವಿತರಾಗಿ, ಅನೇಕ ಶರಣ ಅನುಭಾವಿಗಳು ಕಲ್ಯಾಣದತ್ತ ಸಾಗಿ ಬಂದರು. ಅವರಲ್ಲಿ ಆಂಧ್ರ ಮೂಲದ ‘ಲಿಂಗಪಲ್ಲಿ’ ಯಿಂದ ಬಂದವರು ತೆಲುಗೇಶ ಮಸಣಯ್ಯನವರು. ಇವರ ಕಾಲ ೧೨ನೇ ಶತಮಾನ. ತೆಲುಗೇಶ ಅಥವಾ ಶಂಭು ತೆಲುಗೇಶ ಅಂಕಿತ ನಾಮದಲ್ಲಿ ಇವರು ಬರೆದ ೭ ವಚನಗಳು ಮಾತ್ರ ಲಭ್ಯವಾಗಿವೆ. ಇವರು ‘ಪಶುಪಾಲನ’ ಕಾಯಕ ಮಾಡುತ್ತಿದ್ದರು. ಶರಣರ ದನಗಳನ್ನು ಮೇಯಿಸುವ, ಕಾಯುವ ಕೆಲಸ ಮಾಡುತ್ತಿದ್ದರು. ಇವರ ಒಂದು ವಚನದಲ್ಲಿ ಗೋವಳನ ವೇಷಭೂಷಣದ ಸುಂದರ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಇದರಿಂದ ಆ ಕಾಲದ ಗೋವಳರ ಚಿತ್ರಣ ಕಲ್ಪಿಸಬಹುದು.

ಈತನ ವಚನಗಳಿಂದ, ತೆಲುಗೇಶ ಮಣಯ್ಯನು ಒಬ್ಬ ಗುರುನಿಷ್ಠ, ಲಿಂಗನಿಷ್ಠ ಅನುಭಾವಿಯಾಗಿದ್ದ ಶರಣನಾಗಿದ್ದನೆಂಬುದು ತಿಳಿಯುವದು. ತನ್ನ ವಚನಗಳಲ್ಲಿ ಇಷ್ಟಲಿಂಗ ಹಾಗು ಕಾಯಕದ ಮಹತ್ವದ ಬಗ್ಗೆ ಒತ್ತಿ ಹೇಳಿದ್ದಾನೆ. ‘ಎಸೆವ ಸರ್ವಾಂಗದೊಳ್ ಮಿಸುಪ ಲಿಂಗಗಳ ವಶ ಮಾಡಿದನು ತೆಲುಗೇಶ ಮಸಣಯ್ಯ’ ಎಂದು ನಂಜುಂಡ ಕವಿಯ ಭೈರವೇಶ್ವರ ಕಾವ್ಯದಲ್ಲಿ ವರ್ಣಿಸಲಾಗಿದೆ. ಸಹಸ್ರ ಗಣನಾಮದಲ್ಲಿ ಫಾಲ್ಕುರಿಕೆ ಸೋಮನಾಥನು ಈತನ ಹೆಸರನ್ನು ಸೇರಿಸಿದ್ದಾನೆ. ಶರಣನಾಗುವ ಪೂರ್ವದಲ್ಲಿ ಈ ಶರಣರು ಬೇಟೆಯಾಡುವ ವೃತ್ತಿ ಕೈಗೊಂಡಿದ್ದರಂತೆ. ಬೇಟೆಯಾಡಿ ಬಂದ ಮೊದಲ ಪ್ರಾಣಿಯನ್ನು ಶಿವನಿಗರ್ಪಿಸುವ ನೇಮ ಪಾಲಿಸುತ್ತಿದ್ದರಂತೆ. ಒಮ್ಮೆ ಬೇಟೆ ಆಡುವಾಗ, ಬರೀ ಚಿನ್ನದ ಮೃಗವೇ ಸಿಕ್ಕಿತಂತೆ. ನಂತರ ಗುರು ಕಾರುಣ್ಯದಿಂದ ಬೇಟೆ ಯಾಡುವದ ಬಿಟ್ಟು, ಗೋವಳನ ಕಾಯಕ ಪಾಲಿಸಿದರಂತೆ. ಕವಿ ಚರಿತೆಕಾರರು, ತೆಲುಗೇಶ ಮಸಣಯ್ಯ ಹಾಗು ತೆಲುಗೇಶ ಬೊಮ್ಮಯ್ಯ ಇಬ್ಬರು ಶರಣರ ವಚನಾಂಕಿತ ‘ತೆಲುಗೇಶನೆಂದು’ ಒಂದೇ ಇದ್ದರೂ, ಇಬ್ಬರೂ ಬೇರೆ ಬೇರೆ ಎಂದು ಹೇಳಿದ್ದಾರೆ.
ಈ ಶರಣರ ಒಂದು ವಚನ ಗಮನಿಸೋಣ ;

- Advertisement -

ಹಳದಿಯ ಸೀರೆಯನುಟ್ಟು,
ಬಳಹದೋಲೆಯ ಕಿವಿಯಲಿಕ್ಕಿ,
ಮೊಳಡಂಗೆಯ ಪಿಡಿದು,ಗುಲಗಂಜಿ
ದಂಡೆಯ ಕಟ್ಟಿ
ತುತ್ತುರುತುರು ಎಂಬ ಕೊಳಲ ಬಾರಿಸುತ,
ಅಪಳ ಚಪಳನೆಂಬ ಉಲಿವ ಗಂಟೆಯ ಕಟ್ಟಿ
ತುತ್ತುರು ಜಂಗುಳಿ ದೈವಗಳನೆಲ್ಲವ
ಹಿಂಡುಮಾಡಿ,
ಕಾವ ನಮ್ಮಶಂಭು ತೆಲುಗೇಶ್ವರನು
ಮನೆಯ ಗೋವಳನೀತ.’

ಈ ವಚನದಲ್ಲಿ ಗೋವಳನ ವಸ್ತ್ರ, ಭೂಷಣಾದಿಗಳ ಚಿತ್ರಣ ಕಟ್ಟಿಕೊಟ್ಟಿದ್ದಾನೆ. ಹಳದಿ ವಸ್ತ್ರವನ್ನು ಉಟ್ಟುಕೊಂಡ ಗೋವಳನು ಬಳಪದ ಕಿವಿಯೋಲೆ ಹಾಕಿಕೊಂಡಿದ್ದಾನೆ. ಮೊಳ ಡಂಗೆಯ ಪಿಡಿದು, ಗುಲಗಂಜಿಯ ದಂಡೆಕಟ್ಟಿಕೊಂಡು, ತುತ್ತುರುತುರುವೆಂಬ ಕೊಳಲೂ ಬಾರಿಸುತ್ತಿದ್ದಾನೆ. ಉಲಿವ ಗಂಟೆಯನ್ನೂ ಕಟ್ಟಿದ್ದಾನೆ. ಅಲ್ಲದೆ ಅನೇಕ ವಿಭಿನ್ನ ಜಂಗುಳಿ ದೈವಗಳನ್ನೆಲ್ಲ ಹಿಂಡು ಮಾಡಿ ಕಾಯುವವನು ನಮ್ಮ ತೆಲುಗೇಶನೆಂದು ಹೇಳುತ್ತಾನೆ. ಇಂತಹ ತೆಲುಗೇಶ್ವರನು ಭಕ್ತರಮನೆಯ ಗೋವಳನಾಗಿದ್ದಾನೆ.

ಈ ವಚನ ಗಮನಿಸಿದಾಗ, ಇನ್ನೊಂದು ಗೂಢಾರ್ಥ ವ್ಯಕ್ತವಾಗುವದು. ಚಿತ್ಪ್ರಕಾಶವಾದ ಜ್ಞಾನಾಂಬರವನು, ಶರಣನು ತನ್ನ ಸರ್ವಾಂಗದಲ್ಲೂ ಧರಿಸಿದ್ದಾನೆ ತತ್ವ ಸಂಪತ್ತೆಂಬ ಆಚಾರವ ತನ್ನ ಅನಾಹತ ಕರ್ಣದ್ವಾರದಲ್ಲಿ ಧರಿಸಿರುವದೇ ಕಿವಿಯೋಲೆ ಧರಿಸಿದಂತೆ. ನಿಷ್ಠೆ ಎಂಬುದೇ ಮೊಳೆ. ಶಿವಭಾವವೆಂಬುದೇ ಢಂಗೆ. ಈ ಉಭಯವನು ದೃಢ ನಿಶ್ಚಯ ಹಸ್ತದಲ್ಲಿ ದೃಢವಾಗಿ ಶರಣ ಹಿಡಿದಿದ್ದಾರೆ. ಇಂತಹ ನೈಷ್ಠ್ಯ ಭಾವ ಸಂಬಂಧವಾದ ಶರಣ ಷಡ್ವಿಧ ಅಂಗದಲ್ಲಿ ಷಡ್ವಿಧ ಲಿಂಗವನು ಸ್ವಾನುಭಾವದ ಸೂತ್ರದಿಂದ ಬಂಧಿಸಿರುವದು ಗುಲಗಂಜಿ ದಂಡೆ ಕಟ್ಟಿದುದರ ಸಂಕೇತವಾಗಿದೆ. ಇಂತಪ್ಪ ಷಟಸ್ಥಲ ಜ್ಞಾನ ಕ್ರಿಯೆ
ವಿಡಿದು ಆಚರಿಸುತ್ತಿದ್ದ ಶರಣನು ಶಿವೋಹಂ ಎಂಬ ಶಿವ ಮಂತ್ರ ಸ್ಮರಣೆಯ ಮಾಡುತ್ತಿದ್ದನು. ಇದೇ ತುತ್ತುರು ಎಂಬ ಕೊಳಲ ಬಾರಿಸುವದರ ಸಂಕೇತವಾಗಿದೆ. ಚಿದ್ರೂಪನಾದ ಶರಣನು ಚಿದ್ಘನ ಲಿಂಗಕ್ಕೆ ಮಾಡುವ ಅಷ್ಟವಿಧಾರ್ಚನೆ, ಷೋಡಶೋಪಚಾರ ಮಾಡುವ ಕ್ರಿಯೆಯ ಸೂಚಕವೇ ಅಪಳ. ಚಿತ್ಸರೂಪನಾದ ಶರಣನ ನಿಜಾಂತರಂಗದ ಸುಜ್ಞಾನ ಪ್ರಕಾಶವೆಂಬುದೀಗ ಚಪಳದ ಸೂಚ್ಯರ್ಥ. ಸುಜ್ಞಾನ ವಿಡಿದು ಆಚರಿಸುತ್ತಿದ್ದ ಶರಣನು ಶಿವೋಹಂ ಶಿವೋಹಂ ಎಂದು ಪ್ರಣವನುಚ್ಛರಿಸುತ್ತಿದ್ದುದೆ ಉಲಿವ ಗಂಟೆಯ ಸಂಕೇತವಾಗಿದೆ.

- Advertisement -

ಹೀಗೆ, ಶಿವೋಹಂ ಭಾವದಲ್ಲಿ ಸನ್ನಿಹಿತನಾದ ಶರಣನು ಬ್ರಹ್ಮ, ವಿಷ್ಣು ಆದಿ ದೇವತೆಗಳೆಲ್ಲರನು ಹಿಂಡು ಮಾಡಿ ಭೋಗ ಭುಕ್ತಿಗಳ ಕೊಟ್ಟು ರಕ್ಷಿಸುತ್ತಿಹನೆಂಬುದು ‘ತುತ್ತುರು ಜಂಗುಳಿ ದೈವಗಳನೆಲ್ಲವ ಕಾವ ನಮ್ಮ ಶಂಭು ತೆಲುಗೇಶ್ವರನು’ ಎಂಬಲ್ಲಿ ಅಭಿವ್ಯಕ್ತಗೊಳಿಸಿದ್ದಾನೆ. ತೆಲುಗೇಶ್ವರನ ಅನುಭಾವ ಪಡೆದ ಶರಣನು ಹೇಗಿರಬೇಕೆಂದು ಕೂಡ ಸೂಚ್ಯವಾಗಿ ತಿಳಿಸಿದ್ದಾರೆ.

ಇನ್ನೊಂದು ವಚನ-

ಕಾಮಸನ್ನಿಭನಾಗಿ ಚೆಲುವನಾದಡೆ
ಕಾಮಿನಿ ಜನವೆಲ್ಲಾ ಮೆಚ್ಚಬೇಕು.
ದಾನಗುಣದವನಾಗಿ ಕರೆದೀವನಾದಡೆ
ಯಾಚಕ ಜನವೆಲ್ಲಾ ಮೆಚ್ಚಬೇಕು.
ವೀರನಾದಡೆ ವೈರಿಗಳು ಮೆಚ್ಚಬೇಕು.
ಖೂಳನಾದಡೆ ತನ್ನ ತಾ ಮೆಚ್ಚಿಕೊಂಬ.
ಎನ್ನ ದೇವ ತೆಲುಗೇಶ್ವರನಲ್ಲಿ ತಾನು ಭಕ್ತನಾದಡೆ,
ದೇವರು ಮೆಚ್ಚಿ ಜಗವು ತಾ ಮೆಚ್ಚುವದು.

ಕಾಯಕ ಮಾಡುವವರಿಗೆ ಆ ಕೆಲಸ ಈ ಕೆಲಸವೆಂಬ ತಾರತಮ್ಯವಿಲ್ಲ. ತಮಗಿಷ್ಟವಾದ ಕಾಯಕದ ಮೂಲಕ ದೇವರನ್ನು ಮೆಚ್ಚಿಸಬಹುದು. ಕಾಯಕದಲ್ಲಿ ಮೇಲು ಕೀಳೆಂಬುದೇ ಇಲ್ಲ. ಯಾವುದೇ ಕಾಯಕವನ್ನು ಪ್ರೀತಿಯಿಂದ ಮಾಡಬೇಕು. ಸತ್ಯ ಶುದ್ದವಾದ ಕಾಯಕವಿರಬೇಕು. ಇಂತಹ ಕಾಯಕದಿಂದ ಮಾತ್ರ ಶಿವನನ್ನು ಒಲಿಸಲು ಸಾಧ್ಯ ಹಾಗು ಜಗತ್ ಕಲ್ಯಾಣವೂ ಸಾಧ್ಯ. ತೆಲುಗೇಶ ಮಸಣಯ್ಯ ಶರಣರು ಈ ವಚನದಲ್ಲಿ ಕಾಯಕದ ಮಹತ್ವ ಹಾಗು ನಿಜಭಕ್ತನ ಸ್ವರೂಪ ತಿಳಿಸಿದ್ದಾರೆ.

ಕಾಮನಷ್ಟು ಸುಂದರನಾಗಿದ್ದರೆ, ಆತನನ್ನು ನೋಡಿ ಎಲ್ಲ ಕಾಮಿನಿಯರು (ಸುಂದರಾಂಗಿಯರು,ಸ್ತ್ರೀ ಯರು) ಮೆಚ್ಚಬೇಕು. ಬಾಹ್ಯ ಸೌಂದರ್ಯದ ಜೊತೆಗೆ ಅಂತಹ ಸಾತ್ವಿಕ ಅಂತರಂಗದ ಸುಂದರತೆ ಆತನಿಗಿರಬೇಕು. ತಾನು ದಾನಶೂರ ಕರ್ಣನೆಂಬ ಹೆಗ್ಗಳಿಕೆ ಇದ್ದರೆ ಸಾಲದು. ಆತನಿಂದ ದಾನ ಪಡೆದವರೆಲ್ಲ ಕೃತಾರ್ಥರಾಗಿ ಆತನಿಗೆ ಸೈ ಎನ್ನಬೇಕು. ಆತ ಮಾಡುವ ಪರೋಪಕಾರವೆಲ್ಲ ದಾಸೋಹ ಭಾವದಿಂದ ಕೂಡಿರಬೇಕು. ವೀರ ನಾಗಿದ್ದರೆ ವೈರಿಗಳು ಕೂಡ ಅವನನ್ನು ಮೆಚ್ಚುವಂತಿರಬೇಕು. ಶೌರ್ಯ, ಸಾಹಸಗಳು ಪ್ರಾಮಾಣಿಕವಾಗಿರಬೇಕು. ಮೋಸ, ಹಗೆತನ ದ್ವೇಷ ಅದರಲ್ಲಿರಬಾರದು. ಖೂಳನಾದವನು ತನ್ನನು ತಾನೇ ಮೆಚ್ಚಿಕೊಂಡು ತನ್ನ ಬೆನ್ನನು ತಾನೇ ಚಪ್ಪರಿಸಿಕೊಳ್ಳುತ್ತಾನೆ. ದುಷ್ಟರಾದವರಿಗೆ, ಮೂರ್ಖರಿಗೆ ಅನ್ಯರು ತಮ್ಮನ್ನು ಗುರುತಿಸಬೇಕೆಂಬ ಪ್ರಜ್ಞೆಯೇ ಇರುವದಿಲ್ಲ.

ನಿಜವಾದ ಸದ್ಭಕ್ತರ ಆಚರಣೆ ನಮ್ಮದಾಗಿದ್ದರೆ, ದೇವರು ನಮ್ಮನ್ನು ಮೆಚ್ಚಿಯೇ ಮೆಚ್ಚುತ್ತಾನೆ. ಅಥವಾ ದೇವರು ಮೆಚ್ಚುವ ನಡೆ ನಮ್ಮದಾದರೆ ಶಿವ ನಾವೇ ಆಗುತ್ತೇವೆ. ಆಗ ನಮ್ಮನ್ನು ಜಗತ್ತು ತಾನೇ ಒಪ್ಪಿಕೊಂಡು ಮೆಚ್ಚುತ್ತದೆ.

ಹೀಗೆ ಈ ಶರಣರ ವಚನಗಳು ಸುಂದರವಾಗಿಯೂ, ಸರಳವಾಗಿಯೂ ಮನ ಮುಟ್ಟುವಂತಿವೆ.                        ಚಿತ್ರ ಕೃಪೆ : ಫೇಸ್ ಬುಕ್

 

ಪ್ರೇಮಕ್ಕಾ ಅಣ್ಣಿಗೇರಿ,                                              ಅಕ್ಕನ ಅರಿವು ವಚನ ಅಧ್ಯಯನ ವೇದಿಕೆ
ಬಸವಾದಿ ಶರಣರ ಚಿಂತನಕೂಟ.

- Advertisement -
- Advertisement -

Latest News

ಕವನಗಳು : ಶಶಿಕಾಂತ ಪಟ್ಟಣ

ನೀನು ನಾನು _________________ ನೀನು ನಾನು ನಾನು ನೀನು ದೈವ ಬೆಸೆದ ಜಾಲವು ಹೃದಯ ಭಾಷೆ ಅರಿವ ಮನಕೆ ಪ್ರೀತಿ ಬೆರಸಿದ ಭಾವವು ನೋವು ಮರೆತು ನಗುವ ಕಲೆಗೆ ಕಣ್ಣು ಬೆರೆತ ನೋಟವು ದೂರ ಗುರಿಯ ಹೆಜ್ಜೆ ಪಯಣದಿ ಕೂಡಿ ಹಾಡುವ ರಾಗವು ಕಷ್ಟ ಸುಖಕೆ ದಾರಿ ಹುಡುಕುವ ನಮ್ಮ ಬಾಳ ಬಟ್ಟೆಯು ಯಾರಿರದ ಹಾದಿಯಲಿ _____________________ ನಿನ್ನ ಮುಗುಳು...
- Advertisement -

More Articles Like This

- Advertisement -
close
error: Content is protected !!
Join WhatsApp Group