ಭಾರತದ ಮಿಲಿಟರಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿ ಸುಮಾರು ಹನ್ನೊಂದು ಜನ ರಕ್ಷಣಾ ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ ಹೊಂದಿದ್ದಾರೆ.
ಇದರಿಂದ ಒಬ್ಬ ಪರಮ ದೇಶಭಕ್ತ, ವೀರ ಯೋಧರೊಬ್ಬರನ್ನು ದೇಶ ಕಳೆದುಕೊಂಡಂತಾಗಿದೆ.
ತಮಿಳುನಾಡಿನ ಸೂಳೂರು ವಾಯುನೆಲೆಯಿಂದ ಹೊರಟ ಹೆಲಿಕಾಪ್ಟರ್ ವೆಲ್ಲಿಂಗ್ಡನ್ ತಲುಪಬೇಕಾಗಿತ್ತು. ಕೂನೂರಿನಲ್ಲಿ ನಡೆದ ಈ ಹೆಲಿಕಾಪ್ಟರ್ ದುರಂತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದಾರೆ. ಆದರೆ, ಶೇಕಡ 80 ರಷ್ಟು ಸುಟ್ಟ ಗಾಯಗಳಾಗಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಿಪಿನ್ ರಾವತ್ ಅವರ ಜೊತೆ ಅವರ ಪತ್ನಿ ಕೂಡ ನಿಧನರಾಗಿದ್ದಾರೆ.
ಇದೇ ರೀತಿ ಆರು ವರ್ಷಗಳ ಹಿಂದೆ ಕೂಡ ಬಿಪಿನ್ ರಾವತ್ ಅವರು ಶಿಲ್ಲಾಂಗ್ ಗೆ ಹೋಗುವಾಗ ಹೆಲಿಕಾಪ್ಟರ್ ದುರಂತ ಸಂಭವಿಸಿ ಅದೃಷ್ಟವಶಾತ್ ಬದುಕುಳಿದಿದ್ದರು.
ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್. ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರಾಜಿಂದರ್ ಸಿಂಗ್, ಗುರು ಸೇವಕ್ ಸಿಂಗ್, ಜಿತೇಂದ್ರ ಕುಮಾರ್, ವಿವೇಕ್ ಕುಮಾರ್, ಸಾಯಿತೇಜ, ಸತ್ಪಾಲ್, ಪೈಲೆಟ್ ಪೃಥ್ವಿ ಸಿಂಗ್ ಚೌಹಾಣ್ ಅವರು ಕೊನೆಯುಸಿರೆಳೆದಿದ್ದಾರೆ.
ಜನರಲ್ ಬಿಪಿನ್ ರಾವತ್ ಅವರು ಚೀನಾ, ಪಾಕಿಸ್ತಾನಗಳಿಗೆ ನೇರ ಎಚ್ಚರಿಕೆ ನೀಡುವ ಛಾತಿ ಹೊಂದಿದ್ದರು. ರಾವತ್ ಅವರ ನಾಯಕತ್ವದಲ್ಲಿ ಭಾರತದ ರಕ್ಷಣಾ ವಿಭಾಗಕ್ಕೊಂದು ವಿಶೇಷ ಶಕ್ತಿ ಬಂದಿತ್ತು.
ಘಟನೆ ನಡೆದ ಬಗ್ಗೆ ತಿಳಿದ ತಕ್ಷಣವೇ ಸರ್ಕಾರ ಹಾಗೂ ರಕ್ಷಣಾ ದಳ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಇದರ ಹಿಂದೆ ಇರಬಹುದಾದ ಷಡ್ಯಂತ್ರದ ಬಗ್ಗೆ ತನಿಖೆ ನಡೆಸುವ ಬಗ್ಗೆ ಚರ್ಚೆ ಆರಂಭವಾಗಿದೆ.
ಇದು ಷಡ್ಯಂತ್ರ ಎಂದು ಸಾಬೀತಾದಲ್ಲಿ ೧೯೯೫ ರಲ್ಲಿ ನಡೆದ ಪಶ್ಚಿಮ ಬಂಗಾಳದ ಪುರುಲಿಯಾ ಘಟನೆಯ ನಂತರ ಇದೇ ಎನ್ನಬಹುದು ಎನ್ನುತ್ತಾರೆ ವಾಯುಸೇನೆಯ ಗ್ರುಪ್ ಕ್ಯಾಪ್ಟನ್ ಜಾನಕಿರಾಮ್.
ಟಿವಿ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಹಿಂದೆ ಪಶ್ಚಿಮ ಬಂಗಾಳದ ಪುರುಲಿಯಾ ದಲ್ಲಿ ಯಾವುದೋ ಅನಾಮಧೇಯ, ಅಪರಿಚಿತ ವಿಮಾನವೊಂದು ಭಾರತಕ್ಕೆ ಬಂದು ಪುರುಲಿಯಾ ಎಂಬಲ್ಲಿ ಸಿಕ್ಕ ಸಿಕ್ಕಲ್ಲಿ ಶಸ್ತ್ರಾಸ್ತ್ರಗಳನ್ನು ಎಸೆದು ಹೋಗಿತ್ತು. ಅದೊಂದು ಭೀಕರ ಷಡ್ಯಂತ್ರವಾಗಿತ್ತು. ಆ ರಹಸ್ಯವನ್ನು ಇನ್ನೂ ಭೇದಿಸಲಾಗಿಲ್ಲ.
ಸದ್ಯ ನಡೆದ ಮಿಲಿಟರಿ ಹೆಲಿಕಾಪ್ಟರ್ ದುರಂತದ ಹಿಂದೆ ಷಡ್ಯಂತ್ರ ಇರುವ ಬಗ್ಗೆ ಪುರಾವೆಯೇನಾದರೂ ಸಿಕ್ಕರೆ ಪುರುಲಿಯಾ ನಂತರದ ಘಟನೆ ಇದೇ ಎನ್ನುತ್ತಾರೆ ಜಾನಕಿರಾಮ್.
ಜನರಲ್ ಬಿಪಿನ್ ರಾವತ್ ನಿಧನಕ್ಕೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಷಾ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.