- Advertisement -
ಹೂವ ಮನಸಿನ ದೀಪಾವಳಿ
ದೀಪ ಬೆಳಗುವ ಪಾಪ ತೊಳೆಯುವ
ಹಬ್ಬ ದೀಪಾವಳಿಯಿದು/ಪ
ಕೋಪ ಮರೆಸುವ ತಾಪ ಕಳೆಯುವ
ಹಬ್ಬ ದೀಪಾವಳಿಯಿದು//ಅ.ಪ
ಮಕ್ಕಳೆಲ್ಲರು ಸೇರಿ ಹಾಡುತ
ಕುಡಿಕೆ ಪಟಾಕಿ ಸಿಡಿಸುವ
ನಕ್ಕುನಲಿಯುತ ಲಲನೆಯರೆಲ್ಲರು
ತೈಲ ದೀಪವ ಬೆಳಗುವ/೧
ಹೆಂಗಳೆಯರಿದೊ ಮನೆಯ ಮುಂದೆ
ರಂಗವಲ್ಲಿಯ ಬಿಡಿಸುವ
ಮಂಗಳಾರುತಿ ಬೆಳಗಿ ಹಟ್ಟಿಯ
ಲಕ್ಕದವ್ವನ ಬೇಡುವ/೨
- Advertisement -
ಎತ್ತು ಹಸುಗಳ ಸಿಂಗರಿಸುತಲಿ
ಕರುವ ಹೆಜ್ಜೆಯ ಬಿಡಿಸುವ
ಮತ್ತೆ ಸಿಹಿಯನು ಸವಿಯುತೆಲ್ಲರು
ನೋವನೆಲ್ಲವ ಮರೆಯುವ/೩
ಬಂಧು ಬಾಂಧವರೆಲ್ಲಸೇರುತ
ಬೆಳಗಿ ನಂದಾ ದೀಪವ
ಕೊಂದುಕಲ್ಮಶ ಭಾವಶುದ್ಧದಿ
ಹೂವ ಮನಸಿನ ರೂಪವೇ/೪
- Advertisement -
ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ. ಜಿ.ಹಾವೇರಿ