ಮೂಡಲಗಿ: ಸುಳ್ಳಿನ ಸರಮಾಲೆಯಿಂದ ಅರಮನೆಯನ್ನು ನಿರ್ಮಿಸುತ್ತೇನೆಂಬ ಕ್ರೇಜಿವಾಲ್ ಅವರ ಭರವಸೆಗಳನ್ನು ಜನ ಅರ್ಥ ಮಾಡಿಕೊಂಡಿದ್ದು, ಭರವಸೆಗಳ ಭ್ರಮೆಯಿಂದ ಹೊರಬಂದು ಅಭಿವೃದ್ಧಿ ಪರವಾದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡುವ ಸಂಕಲ್ಪವನ್ನು ದೆಹಲಿ ಜನ ಹೊಂದಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತಿಮಾರ್‌ಪುರ್ ಮತಕ್ಷೇತ್ರದ ಮಲ್ಕಾ ಗಂಜ್ ಮಂಡಲದಲ್ಲಿ ರಾಜಸ್ಥಾನದ ಮುಖ್ಯಮಂತ್ರಿಗಳಾದ ಭಜನ್ ಲಾಲ್ ಶರ್ಮಾ ಅವರ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿ ಸೂರ್ಯ ಪ್ರಕಾಶ ಖತ್ರಿ ಅವರ ಪ್ರಚಾರರ್ಥವಾಗಿ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಬದಲಾವಣೆಗಾಗಿ ಬಿಜೆಪಿಗೆ ಮತ ಚಲಾಯಿಸಲು ಜನ ಕಾತುರರಾಗಿದ್ದಾರೆ ಎಂದು ಹೇಳಿದ ಅವರು ಕಳೆದ ಹಲವು ದಿನಗಳಿಂದ ದೆಹಲಿ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ದೆಹಲಿಯಲ್ಲಿ ವಾಸವಾಗಿರುವ ಕರ್ನಾಟಕದ ನಿವಾಸಿಗಳನ್ನು ಭೇಟಿಯಾಗಿ ಬಿಜೆಪಿಗೆ ಮತಹಾಕುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲ ಕಡೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದ್ದು ಸುಳ್ಳಿನ ಸರದಾರ ಕ್ರೇಜಿವಾಲ್ ಅವರ ಸರ್ಕಾರವನ್ನು ಕಿತ್ತೊಗೆದು ಅಭಿವೃದ್ದಿ ಪರವಾದ ಡಬ್ಬಲ್ ಇಂಜಿನ್ ಸರ್ಕಾರವನ್ನು ಆಯ್ಕೆ ಮಾಡಲು ಜನ ಕಾತುರರಾಗಿದ್ದಾರೆ ಎಂದರು.
ಮಲ್ಕಾ ಗಂಜ್ ಮಂಡಲ ಅಧ್ಯಕ್ಷ ಉಮೇಶ್ ಮಾತೂರ್, ನಗರ ಸೇವಕಿ ರೇಖಾ, ಚುನಾವಣೆ ಪ್ರಭಾರಿ ಮುಖೇಶ ವರ್ಮಾ, ನಿತೀನ ಜೈನ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.