ಮೂಡಲಗಿ – ರಾಯಬಾಗದ ಮಲ್ಟಿಸ್ಟೇಟ್ ಕೃಷ್ಣಾ ಗೋದಾವರಿ ಸೊಸಾಯಿಟಿ ಲಿಮಿಟೆಡ್ ಹಾಗೂ ಘಟಪ್ರಭಾ ಫರ್ಟಿಲೈಜರ್ಸ, ರಾಯಬಾಗ ಇವರು ಅಪಾರ ಪ್ರಮಾಣದಲ್ಲಿ ಗೊಬ್ಬರ ಸ್ಟಾಕ್ ಮಾಡಿಕೊಂಡು ಅಭಾವ ಸೃಷ್ಟಿ ಮಾಡುತ್ತಿದ್ದಾರಲ್ಲದೆ ಗೊಬ್ಬರ ಬೇಡಿದವರಿಗೆ ತಾವೇ ತಯಾರಿಸಿದ ಕೆಲವು ಗೊಬ್ಬರಗಳನ್ನು ಲಿಂಕ್ ಮಾಡುತ್ತಿದ್ದಾರೆ ಎಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಲಕ್ಕಣ್ಣ ಸವಸುದ್ದಿ ಆರೋಪಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೈತರಿಗೆ ದಿನಬೆಳಗಾದರೆ ರಸಗೊಬ್ಬರ ಬೇಕು ಆದರೆ ಸಿಗುತ್ತಿಲ್ಲ. ರೈತರ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಇಂಥ ಸಂದರ್ಭದಲ್ಲಿ ಇವರು ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸ್ಟಾಕ್ ಮಾಡಿ ರೈತರಿಗೆ ಕೃತಕ ಅಭಾವ ಸೃಷ್ಟಿ ಮಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದರು.
ಈ ಮಲ್ಟಿಸ್ಟೇಟ್ ಗೋದಾವರಿ ಕಂಪನಿಯ ಮೇಲೆ ದಾಳಿ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಕೃಷಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇನೆ. ಈ ಮೂಲಕ ಸರ್ಕಾರದ ಆದಾಯಕ್ಕೂ ಕೊರತೆ ತರುತ್ತಿರುವ ಈ ಕಂಪನಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಈ ಕಂಪನಿಗಳ ಮೇಲೆ ದಾಳಿ ಮಾಡಿ ಇದನ್ನು ತಡೆಯದಿದ್ದರೆ ಲೋಕಾಯುಕ್ತರಿಗೂ ಮನವಿ ಸಲ್ಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಲಕ್ಕಣ್ಣ ಸವಸುದ್ದಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಭಾಸ ಲೋಕನ್ನವರ, ಹನುಮಂತ ಮುಗಳಖೋಡ ಇದ್ದರು.