ಸಿಂದಗಿ: ತಾಲೂಕಿನ ಹಂದಿಗನೂರ ಗ್ರಾಮದ ಅಧಿಕೃತ ನ್ಯಾಯಬೆಲೆ ಅಂಗಡಿಯವರಿಗೆ ಸುಖಾ ಸುಮ್ಮನೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಾಲೂಕ ದಂಡಾಧಿಕಾರಿಗಳ ಕಾರ್ಯಾಲಯದ ಶಿರಸ್ತೆದಾರ ಸಿ.ಬಿ.ಬಾಬಾನಗರ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ರಾಕೇಶ ಕಾಂಬಳೆ ಮಾತನಾಡಿ, ತಾಲೂಕಿನ ಹಂದಿಗನೂರ ಗ್ರಾಮದ ನಿವಾಸಿಯಾದ ಸಾಹೇಬಗೌಡ ತಂ, ಗುರುಲಿಂಗಪ್ಪ, ಬಿರಾದಾರ ಇವರು ಕಳೆದ ಒಂದು ತಿಂಗಳಿನಿಂದ ಶ್ರೀ ಗಜಾನನ ಮಹಿಳಾ ಸ್ವ-ಸಹಾಯ ಸಂಘದ ಅಡಿಯಲ್ಲಿ ಪಡಿತರ ಹಂಚಲು ಸರಕಾರದಿಂದ ಅಧಿಕೃತವಾಗಿ ಪರವಾನಗಿ ಪಡೆದು ಗ್ರಾಮದ ಎಲ್ಲರಿಗೂ ಸರಿಯಾದ ರೀತಿಯಲ್ಲಿ ಯಾವುದೇ ತಂಟೆ ತಕರಾರು ಇಲ್ಲದೇ ಪಡಿತರ ಹಂಚುತ್ತಿದ್ದು, ಇವರ ಮೇಲೆ ಸುಖಾ ಸುಮ್ಮನೆ ಆರೋಪಗಳನ್ನು ಮಾಡಿ ಗ್ರಾಮದ ಜನರಲ್ಲಿ ಗೊಂದಲ ಸೃಷ್ಟಿಸಿ ಪಡಿತರ ಹಂಚಲು ತಕರಾರು ಮಾಡುತ್ತಿರುವ ಇದೇ ಗ್ರಾಮದ ಕೃಷ್ಣಪ್ಪಗೌಡ .ಹ. ಪಾಟೀಲ ರು ದುರುದ್ದೇಶದಿಂದ ಮತ್ತು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರಿಗೆ ಸರಿಯಾದ ಸಮಯದಲ್ಲಿ ಪಡಿತರ ದೊರೆಯದಂತೆ ಮಾಡುತ್ತಿದ್ದಾರೆ ಮತ್ತು ಗ್ರಾಮದ ಜನರಲ್ಲಿ ತಪ್ಪು ಮಾಹಿತಿ ನೀಡಿ ಪ್ರಚೋದನೆ ನೀಡುತ್ತಿದ್ದಾರೆ. ಇಂತವರ ವಿರುದ್ಧ ಕ್ರಮ ಜರುಗಿಸುವ ಅವಶ್ಯಕತೆ ಇದ್ದು ತಾವು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಅನ್ಯಾಯಕ್ಕೊಳಗಾದ ಅಧಿಕೃತ ಪಡಿತರ ಮಾರಾಟದಾರರಾದ ಸಾಹೇಬಗೌಡ ತಂ. ಗುರುಲಿಂಗಪ್ಪ, ಬಿರಾದಾರ ಇವರಿಗೆ ಪಡಿತರ ಹಂಚಲು ಅವಕಾಶ ಕೊಡಿಸಿ ಇವರಿಗೆ ನ್ಯಾಯ ಒದಗಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಂದಿಗನೂರ ಗ್ರಾಮಸ್ಥರು ಮತ್ತು ನಮ್ಮ ಸಂಘಟನೆಯ ಕಾರ್ಯಕರ್ತರ ಜೊತೆಗೂಡಿ ತಮ್ಮ ಕಛೇರಿ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೇವರ ಹಿಪ್ಪರಗಿ ತಾಲೂಕ ಸಮಿತಿ ಅಧ್ಯಕ್ಷ ರಮೇಶ ಚಲವಾದಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.