ಮುನವಳ್ಳಿ– ಸ್ಥಳೀಯ ಸ್ನೇಹಜೀವಿ ಬಳಗದ ರೂವಾರಿ ಹಾಗೂ ಸವದತ್ತಿ ತಾಲೂಕಿನ ಚಿಕ್ಕುಂಬಿಯ ಸರಕಾರಿ ಪ್ರೌಢಶಾಲಾ ಇಂಗ್ಲೀಷ ಶಿಕ್ಷಕ ಸುಧೀರ ವಾಘೇರಿಯವರಿಗೆ ಸೆಪ್ಟಂಬರ್ 5 ರಂದು ಬೆಳಗಾವಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸಿಯನ್ನು ಉಪನಿರ್ದೇಶಕರಾದ ಡಾ.ಎ.ಬಿ.ಪುಂಡಲೀಕ,ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ. ಶಿಕ್ಷಣಾಧಿಕಾರಿಗಳಾದ ಎನ್.ಆರ್.ಪಾಟೀಲ. ಪ್ಯಾಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ ಮತ್ತಿತರ ಅಧಿಕಾರಿಗಳ ಸಮ್ಮುಖದಲ್ಲಿ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವತಿಯಿಂದ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸುಧೀರ ವಾಘೇರಿ ಮೂಲತಃ ಮುನವಳ್ಳಿಯವರು ಕಡು ಬಡತನದಲ್ಲಿ ಮುನವಳ್ಳಿಯ ಶಿಕ್ಷಕರಾದ ಸುಭಾಸ.ಎಸ್..ಕಾಮನ್ನವರ ಹಾಗೂ ದಿವಂಗತ ಎಚ್.ಜಿ.ಕುಲಕರ್ಣಿಯವರಂತಹ ಮಾರ್ಗದರ್ಶನದಲ್ಲಿ ಬೆಳೆದವರು.ಜನವರಿ 5, 2007 ರಲ್ಲಿ ಚಿಕ್ಕೋಡಿ ತಾಲೂಕಿನ ಚಿಕ್ಕಲವಾಡ ಗ್ರಾಮೀಣ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು.ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರ್ಟಗಲ್‍ದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿ ಉನ್ನತ ವ್ಯಾಸಂಗ ಮುಗಿಸಿ ನವಲಗುಂದ ತಾಲೂಕಿ ಅಮರಗೋಳ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದರು.ಅಲ್ಲಿಂದ ವರ್ಗಾವಣೆ ಮೂಲಕ ಸರಕಾರಿ ಶಾಲೆ ಚಿಕ್ಕುಂಬಿಗೆ ಬಂದು ಸೇವೆ ಸಲ್ಲಿಸುತ್ತಿರುವರು.
ಸದರಿ ಶಿಕ್ಷಕರು ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಆಂಗ್ಲಭಾಷಾ ಸಂಪನ್ಮೂಲ ವ್ಯಕ್ತಿಗಳಾಗಿ ಹಲವಾರು ತರಬೇತಿಗಳನ್ನು ನೀಡಿದ್ದು ಪರಿಸರ ಪ್ರೇಮಿಗಳಾದ ಇವರು ಪ್ರತಿವರ್ಷ ತಾವು ಸೇವೆ ಸಲ್ಲಿಸುತ್ತಿರುವ ಶಾಲೆಗಳಲ್ಲಿ ವನಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತ ಬಂದಿರುವರು.ಮುನವಳ್ಳಿಯಲ್ಲಿಯೂ ಕೂಡ ತಮ್ಮ ಸ್ನೇಹಜೀವಿ ಬಳಗದ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಹಸಿರು ಕರ್ನಾಟಕ-ಉಸಿರು ಮುನವಳ್ಳಿ ಕಾರ್ಯಕ್ರಮವನ್ನು ಸಂಘಟಿಸುತ್ತ ಬಂದಿರುವರು.ಅಷ್ಟೇ ಅಲ್ಲದೆ ಸ್ನೇಹಜೀವಿ ಬಳಗದ ಮೂಲಕ “ಗುರುವಂದನಾ” ಕಾರ್ಯಕ್ರಮವನ್ನೂ ಪ್ರತಿ ವರ್ಷ ಸಂಘಟಿಸುತ್ತಿರುವರು.ಇವರ ಸ್ನೇಹ ಜೀವಿ ಬಳಗವೇ ವಿಶಿಷ್ಟವಾಗಿದೆ.ಇದರಲ್ಲಿ ಶಿಕ್ಷಕರು,ಕಂದಾಯ ಇಲಾಖೆಯವರು,ಕಾನೂನು ಇಲಾಖೆ ಹೀಗೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹ ಬಳಗವೇ ಇದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳುವ ಜೊತೆಗೆ ತಮ್ಮ ಶಾಲೆಗೆ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡುವ ಮೂಲಕ ಅವರ ಮುಂದಿನ ವ್ಯಾಸಂಗಕ್ಕೂ ಪ್ರೇರಕರಾಗಿರುವರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ನಂತರ ಮುಂದೇನು.? ಎಂಬ ವಿಶೇಷ ತರಗತಿಯನ್ನು ಕೂಡ ಸಂಘಟಿಸುತ್ತಿರುವರು.ಹವ್ಯಾಸಿ ಬರಹಗಾರಾಗಿರುವ ಇವರು ದಿವಂಗತ ವ್ಹಿ.ಪಿ.ಜೇವೂರ ಗುರುಗಳು ಮತ್ತು ಜಂಬಗಿಯವರ ಸ್ಮರಣಾರ್ಥ ಪ್ರಕಟಿಸಿದ ಗುರುಶಿಷ್ಯ ಸಂಬಂಧ ಕೃತಿಯಲ್ಲಿ ತಮ್ಮ ಲೇಖನ ಬರೆದಿರುವರು.ಹಾಗೆಯೇ ಗಜಾನನ ವಿದ್ಯಾವರ್ಧಕ ಸಂಘ ಮುನವಳ್ಳಿಯ ಶ್ರೀ ಕುಮಾರೇಶ್ವರ ಪ್ರಾಥಮಿಕ ಶಾಲೆಯವರು ಪ್ರಕಟಿಸಿದ ನಮ್ಮ ಊರು ನಮ್ಮ ಶಾಲೆ ಕೃತಿಯಲ್ಲಿ ತಮ್ಮ ಲೇಖನ ಬರೆದಿರುವರಲ್ಲದೇ ಅನೇಕ ಕವಿಗೋಷ್ಟಿಗಳಲ್ಲಿ ಕವನ ವಾಚನ ಕೂಡ ಮಾಡಿರುವರು.ಜೊತೆಗೆ ಇವರೊಬ್ಬ ಕ್ರೀಡಾಪಟು ಕೂಡ. ಖೋಖೋ ಪಂದ್ಯಾವಳಿಗೆ ಮಕ್ಕಳಿಗೆ ವಿಶಿಷ್ಟ ತರಬೇತಿಯನ್ನು ಕೂಡ ನೀಡುತ್ತ ತಂಡವನ್ನು ವಿವಿಧ ಪಂದ್ಯಾಟಗಳಿಗೆ ಕೊಂಡೊಯ್ಯುವ ಮೂಲಕ ಮಕ್ಕಳಲ್ಲಿ ಕ್ರೀಡಾಸ್ಪೂರ್ತಿಯನ್ನು ಮೆರೆದಿರುವರು.
ಸದ್ಯ ಸವದತ್ತಿ ತಾಲೂಕಿನ ಆಂಗ್ಲಭಾಷಾ ಬೋಧಕರ ಸಂಘದ ಕಾರ್ಯದರ್ಶಿಗಳಾಗಿ ಎನ್.ಪಿ.ಎಸ್.ನೌಕರರ ಸಂಘದ ಉಪಾಧ್ಯಕ್ಷರಾಗಿ ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವರು. ಮುನವಳ್ಳಿಯ ಬನಶಂಕರಿ ದೇವಸ್ಥಾನದಲ್ಲಿ ಪ್ರತಿವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದ ದೇವಾಂಗ ಸಮಾಜದ ಮೂರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡಮಾಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುತ್ತಿರುವರು.ಇವರ ಸೇವೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಈ ವರ್ಷ ಶಿಕ್ಷಣ ಇಲಾಖೆ ನೀಡಿದ್ದು ಇವರನ್ನು ಸವದತ್ತಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಸುರೇಶ ಬೆಳವಡಿ.ಹಾಲಿ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ. ಪ್ರಧಾನ ಕಾರ್ಯದಶೀ ಎಫ್.ಜಿ.ನವಲಗುಂದ ನೌಕರರ ಸಂಘದ ಅಧ್ಯಕ್ಷ ಆನಂದ ಮೂಗಬಸವ ಅಭಿನಂದಿಸಿದ್ದಾರೆ.