ಬೆಳಗಾವಿ :ದೇಹದಾನ ಅಥವಾ ಅಂಗಾಂಗದಾನ ವನ್ನು ದುಶ್ಚಟವಿಲ್ಲದ ಜನರು ಮಾಡುವುದರಿಂದ ಅವಶ್ಯಕತೆಯಿರುವ ರೋಗಿಗಳಿಗೆ ಲಾಭವಿದೆ. ಅಂತೆಯೇ ದೇಹವನ್ನು ಉರಿಸಿ ಅಥವಾ ಮಣ್ಣು ಮಾಡಿ ನಷ್ಟವಾಗಿಸುವುದಕ್ಕಿಂತ ವೈದ್ಯರಾಗುವ MBBS ಓದುವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಉಪಯೋಗಿಸುವುದು ಉತ್ತಮ ಎಂದು ಮಾಜಿ ಶಾಸಕ ಮಹಾಂತೇಶ ಕವಟಗಿಮಠ ಹೇಳಿದರು.
ಹಾಗೆಯೇ ಅಪಘಾತ ಅಥವಾ ಇತರ ಕಾರಣಗಳಿಂದ ಅಂಗಾಂಗ ಗಳನ್ನು ಕಳೆದುಕೊಂಡ ಮೂರ್ನಾಲ್ಕು ಮಂದಿಗೆ ಉಪಯೋಗವಾಗುತ್ತದೆ ಎಂಬುದನ್ನು ಮನಗಂಡು ವೇದಾಂತ ಫೌಂಡೇಶನ್ ಈ ಕುರಿತು ಊರೂರು ಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದು ಇದೊಂದು ಶ್ಲಾಘನೀಯ ಕಾರ್ಯವಾಗಿದೆ. ಈ ಕಾರ್ಯಕ್ರಮವು ಹೀಗೆಯೇ ಮುಂದುವರಿಯಲಿ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯರಾದ ಡಾ. ಡಿ. ಎನ್. ಮಿಸಾಳೆ, ರಾಧಾಸ್ವಾಮಿ ಸಂಸ್ಥೆಯ ವಿಭಾಗ ಪ್ರಮುಖರಾದ ಶಿವಾಜಿರಾವ್ ಕೇದಾನೂರಕರ್ ರವರು ಸಮಯೋಚಿತವಾಗಿ ಮಾತನಾಡಿದರು.
ಶಿವಾಜಿರಾವ್ ಕೇದನೂರಕರ್ ಅವರು ಮಾತನಾಡುತ್ತಾ, ಇಂತಹ ಕಾರ್ಯಕ್ರಮಗಳು ಪ್ರಸಾರ ಮಾಧ್ಯಮದಲ್ಲೂ ಜಾಗ್ರತಿಯನ್ನು ಮೂಡಿಸುವುದರಿಂದ ಈ ಕಾರ್ಯಗಳಿಗೆ ಎಂದೆಂದಿಗೂ ಯಶಸ್ಸು ಸಿಗಲೆಂದು ಹಾರೈಸಿದರು.
ವೇದಾಂತ ಫೌಂಡೇಶನ್ ಮೂಲಕ ಕಳೆದವರ್ಷ 70 ಶಿಕ್ಷಕರು ಒಂದೇ ಸಲ KLE ಆಸ್ಪತ್ರೆಯಲ್ಲಿ ದೇಹ ದಾನದ ಸಂಕಲ್ಪವನ್ನು ಕೈಗೊಂಡು ವಿಕ್ರಮವನ್ನು ಮೆರೆದಿದ್ದು, ಇದೇ ಕಾರ್ಯಕ್ರಮದ ಅಂಗವಾಗಿ ರವಿವಾರ ದಿ 23ರಂದು ವೇದಾಂತ ಫೌಂಡೇಶನ್ ಮತ್ತು ರಾಧಾಸ್ವಾಮಿ ಸತ್ಸಂಗ, ನಿರ್ಮಲ ನಗರ, ಬೆಳಗಾವಿ ಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಸುಮಾರು 75 ಮಂದಿ ದೇಹದಾನ ಮತ್ತು ಅಂಗಾಂಗ ದಾನ ಮಾಡುವ ಸಂಕಲ್ಪವನ್ನು ಮಾಡಿದರು.
ಗಣ್ಯರಿಂದ ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮವು ಆರಂಭವಾಯಿತು. ವೇದಾಂತ ಫೌಂಡೇಶನ್ ಅಧ್ಯಕ್ಷ ಸತೀಶ್ ಪಾಟೀಲ್ ಇವರು ಪ್ರಾಸ್ತಾವಿಕ ಭಾಷಣ ಮಾಡಿ ಅತಿಥಿಗಳನ್ನು ಪುಷ್ಪಗುಚ್ಚವನ್ನು ನೀಡಿ ಸ್ವಾಗತಿಸಿದರು. ನಂತರ ದೇಹದಾನ, ಅಂಗಾಂಗ ದಾನ ಮಾಡಿದ 75 ಮಂದಿಗೆ ಗಣ್ಯರ ಅಮೃತಹಸ್ತದಿಂದ ಸನ್ಮಾನ ಕಾರ್ಯ ನೆರವೇರಿತು.
ಇದೇ ಸಂದರ್ಭದಲ್ಲಿ KLE ಸಂಸ್ಥೆಯಿಂದ ಆಯೋಜಿಸಲ್ಪಟ್ಟ ಆರೋಗ್ಯ ತಪಾಸಣ ಕಾರ್ಯಕ್ರಮದಲ್ಲಿ ಸುಮಾರು 500 ಮಂದಿ ಭಾಗವಹಿಸಿದರು. ಹಾಗೂ ರೋಗಿಗಳಿಗೆ ಉಚಿತ ತಪಾಸಣೆ ಯೊಂದಿಗೆ ಉಚಿತ ಔಷಧಿಯನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಂಜುದೇವಿ ಕೇದಾನೂರಕರ್, ಸವಿತಾ ಚಂದ ಗಡಕರ್, ಸೋನಿಯಾ ಪಾಟೀಲ್, ಶೋಭಾ ಪಾಟೀಲ್, ಸುಜಾತಾ ಲೋಕಾಂಡೆ, ಅನುರಾಧ ತಾರೀಹಾಳ ಕರ್ ಶ್ರಮಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಫೌಂಡೇಶನ್ ನ ಈಶ್ವರ ಪಾಟೀಲ್ ಅವರು ಮಾಡಿದರು, ಫೌಂಡೇಶನ್ ನ ಉಪಾಧ್ಯಕ್ಷ ಎನ್. ಡಿ. ಮಾದರ್ ವಂದನಾರ್ಪಣೆ ಮಾಡಿದರು.
ರಾಧಾಸ್ವಾಮಿ ಸತ್ಸಂಗ ದ ಕಾರ್ಯದರ್ಶಿ ಸಂಜಯ್ ಪಾಟೀಲ್ ಹಾಗು ಜ್ಯೋತಿಬಾ ಪಾಟೀಲ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.