Homeಸುದ್ದಿಗಳುವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು

ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು

ಸಿಂದಗಿ – ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದು ತಹಶೀಲ್ದಾರ ಕರೆಪ್ಪ ಬೆಳ್ಳಿ ಹೇಳಿದರು.

ಅವರು ಪಟ್ಟಣದ ಎಚ್‌ಜಿ ಕಾಲೇಜ್ ಸಭಾಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಮ್ಮಿಕೊಂಡಿರುವ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ವೇಳೆ ಆರೋಗ್ಯ ಇಲಾಖೆಯ ಅಧಿಕಾರಿ ಎಸ್. ಡಿ.ಕುಲಕರ್ಣಿ ಮಾತನಾಡಿ, ಅಪ್ರಾಪ್ತ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ತುತ್ತಾದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಿ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಮಕ್ಕಳ ಬೆಳೆವಣಿಗೆ ಕುಂಠಿತಗೊಳ್ಳುವುದಲ್ಲದೇ ಕುಟುಂಬದ ಸ್ವಾಸ್ಥ್ಯ ಹಾಳಾಗುತ್ತದೆ. ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿಹೊಂದಲು ಸಾಧ್ಯವಾಗುವುದಿಲ್ಲ. ವಿದ್ಯಾವಂತರಾಗಿರುವ ನಾವೆಲ್ಲರೂ ನಮ್ಮ ಉತ್ತಮ ಬದುಕಿನಡೆಗೆ ಕನಸು ಕಾಣಬೇಕೆ ಹೊರತು ಕೆಟ್ಟ ಚಟಗಳಿಂದ ದೂರವಿರಬೇಕು. ಇಂದಿನ ವೈಜ್ಞಾನಿಕ ಜಗತ್ತು ಜ್ಞಾನಕ್ಕೆ ಹೆಚ್ಚು ಮಹತ್ವ ನೀಡುತ್ತಲ್ಲಿದೆ ಆ ನಿಟ್ಟಿನಲ್ಲಿ ಜ್ಞಾನದ ಜೊತೆಗೆ ಸಂಸ್ಕಾರ ಪ್ರಾಮಾಣಿಕತೆ ನೀತಿತನ ಇವೆಲ್ಲವುಗಳನ್ನು ಬದುಕಿನಲ್ಲಿ ರೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ ಅವರು ಮಾತನಾಡಿ, ರಾಷ್ಟ್ರದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದ ಅವರು ವ್ಯಸನಗಳಿಗೆ ಬಲಿಯಾದವರು ಶಾರೀರಿಕ, ಮಾನಸಿಕ ನಿಯಂತ್ರಣ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ವಿದ್ಯಾರ್ಥಿಗಳು, ಯುವ ಪೀಳಿಗೆ ಮಾದಕ ಪದಾರ್ಥಗಳ ಗೀಳು ಅಂಟಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಮಾದಕ ವ್ಯಸನದ ಸುಳಿಗೆ ಸಿಲುಕಿದರೆ, ಸುಲಭದಲ್ಲಿ ಹೊರಬರಲು ಸಾಧ್ಯವಿಲ್ಲ. ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜ ಕೂಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಈ ವೇಳೆ ನೂತನ ತಹಶೀಲ್ದಾರ್ ಕರೆಪ್ಪ ಬೆಳ್ಳಿಯವರಿಗೆ ಎಚ್. ಜಿ. ಕಾಲೇಜಿನ ಪರವಾಗಿ ಸಿಬ್ಬಂದಿಗಳು ಗೌರವಿಸಿದರು.

ವೇದಿಕೆ ಮೇಲೆ ಪೊಲೀಸ್ ಸಿಬ್ಬಂದಿ ವಾಯ್. ಸಿ. ಬನಸೋಡೆ, ಶಿಕ್ಷಣ ಇಲಾಖೆಯ ಎ.ಎಸ್. ಪಾಟೀಲ ಇದ್ದರು.ಉಪನ್ಯಾಸಕ ಎಸ್. ಪಿ. ಬಿರಾದಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ಸಿದ್ಧಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುಂಚೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವ್ಯಸನ ಮುಕ್ತ ಆಂದೋಲನದ ಜಾಥಾ ಜರುಗಿತು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group