ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಈ ಶತಮಾನದ ಪವಾಡ ಪುರುಷರು. ಡಾ. ರಾಜ್ ಅವರ ಸರಳತೆ, ಪ್ರಾಮಾಣಿಕತೆ, ಡಾ. ಪುನೀತ್ ಅವರ ಸೇವಾ ಮನೋಭಾವನೆ ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ನುಡಿದರು.
ಕೆ ಅರ್. ನಗರದ ಆರ್ಕೆಶ್ವರ ನಗರ ಬಡಾವಣೆಯ ಪುನೀತ್ ರಾಜಕುಮಾರ್ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಪುನೀತ್ ರಾಜಕುಮಾರ್ ಅವರ ಎರಡನೇ ಪುಣ್ಯ ತಿಥಿ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಅವರು ಮಾತನಾಡುತ್ತಿದ್ದರು. ಡಾ. ರಾಜಕುಮಾರ್ ಅವರು ಸುಮಾರು ಇನ್ನೂರಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಮಿಗಳ ಹೃದಯ ಗೆದ್ದರು. ಅತ್ಯಂತ ಕಡಿಮೆ ಶಾಲಾ ಶಿಕ್ಷಣ ಪಡೆದರೂ ಕನ್ನಡ ನಾಡು -ನುಡಿಗೆ ಅತ್ಯಮೂಲ್ಯ ಕೊಡುಗೆ ನೀಡಿದರು. ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟ್ರೇರೇಟ್ ಗೌರವಕ್ಕೆ ಒಳಗಾದರು. ಅದೇ ರೀತಿ ಅವರ ಪುತ್ರ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಎರಡು ರಾಜ್ಯ ಪ್ರಶಸ್ತಿ, ಒಂದು ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು. 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಗಾಯಕರಾಗಿ ಅದರಿಂದ ಬಂದ ಹಣವನ್ನು ಸಮಾಜಕ್ಕೆ ದಾನ ಮಾಡಿದರು. ಮೈಸೂರಿನ ಶಕ್ತಿ ಧಾಮದ 1800 ಕ್ಕೂ ಹೆಚ್ಚು ಅನಾಥ ಬಾಲಕಿಯರಿಗೆ ಶಿಕ್ಷಣ ಕೊಡಿಸಿದರು. 26 ಅನಾಥ ಆಶ್ರಮಗಳು,16 ವೃದ್ದಾಶ್ರಮಗಳ ವೃದ್ಧರಿಗೆ ಸೇವೆ ಸಲ್ಲಿಸಿದರು. ಹಲವು ಬಡ ಕಲಾವಿದರಿಗೆ, ಅನಾರೋಗ್ಯಕ್ಕೆ ಒಳಗಾದ ಕಲಾವಿದರಿಗೆ ಸಾಕಷ್ಟು ಆರ್ಥಿಕ ಸಹಕಾರ ನೀಡಿದರು. ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಕರಾಗಿ ಮನೆ ಮನೆ ಮುಟ್ಟಿದರು. ಕೋಟ್ಯಂತರ ರೂ. ದಾನ ಮಾಡಿದರೂ ಯಾರಿಗೂ ತಿಳಿಯದಂತೆ ನೋಡಿಕೊಂಡರು. ಅವರ ಮರಣಾನಂತರ ಅವರ ಸಮಾಜಸೇವೆ ಬೆಳಕಿಗೆ ಬಂತು. ಈ ಶತಮಾನದ ಮಹಾನ್ ವ್ಯಕ್ತಿ ಎನಿಸಿದರು ಎಂದು ತಿಳಿಸಿದರು.
ಇಂದಿನ ಯುವ ಪೀಳಿಗೆ ಪುನೀತ್ ಅವರ ಸೇವಾ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು ಎಂದು ರಾಮಕುಮಾರ್ ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳದ ಡಿ. ಜಿ. ಗುರುಶಾಂತಪ್ಪ ಅವರು ಮಾತನಾಡಿ ಪ್ರಪಂಚದಲ್ಲಿ ಕೋಟ್ಯಂತರ ಜನರು ಜೀವಿಸಿ ಸಾವನ್ನು ಅಪ್ಪಿದ್ದಾರೆ. ಸಮಾಜ ಮುಖಿ ಆಗಿ ಬದುಕಿದವರು ಮಾತ್ರ ಜನರ ಮನಸ್ಸಲ್ಲಿದ್ದಾರೆ. ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂ, ಮಹಾತ್ಮಾ ಗಾಂಧೀಜಿ, ಕುವೆಂಪು, ಡಾ. ರಾಜ್ ಅವರಂತಹ ಸಮಾಜಮುಖಿ ಸಾಧಕರು ಎಂದೆಂದಿಗೂ ಅಮರರಾಗಿದ್ದಾರೆ. ಇದೀಗ ಡಾ. ಪುನೀತ್ ಅವರೂ ಸಹ ತಮ್ಮ ಸೇವಾ ಕಾರ್ಯಗಳಿಂದಾಗಿ ಜನಮನದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದು ಬಣ್ಣಿಸಿದರು. ನಂತರ ಡಾ. ರಾಜ್ ಹಾಗೂ ಡಾ. ಪುನೀತ್ ರಾಜ್ ಅವರು ಹಾಡಿರುವ ಗೀತೆಗಳನ್ನು ಹಾಡಿ ರಂಜಿಸಿದರು.
ಪತ್ರಕರ್ತ ರಾ. ಸುರೇಶ್ ಮಾತನಾಡಿ ಡಾ. ರಾಜ್ ನಿಧನದ ನಂತರ ಕನ್ನಡ ನೆಲ, ಜಲ ಕುರಿತ ಹೋರಾಟಕ್ಕೆ ಸಮರ್ಥ ನಾಯಕತ್ವದ ಕೊರತೆ ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟರು.
ಡಾ. ಪುನೀತ್ ರಾಜಕುಮಾರ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ರಾಜು ಸಂಸ್ಥೆಯ ಧೇಯೋದ್ದೇಶಗಳನ್ನು ವಿವರಿಸಿದರು. ಶ್ರೀಮತಿ ರೇಣುಕಾ ಸ್ವಾಗತಿಸಿದರು. ಶ್ರೀಮತಿ ದಿವ್ಯ ವಂದಿಸಿದರು. ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡಲಾಯ್ತು. ಪುನೀತ್ ಅಭಿಮಾನಿಗಳು ಹಾಗೂ ಟ್ರಸ್ಟ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.