spot_img
spot_img

ಡಾ. ಗುರುಲಿಂಗ ಕಾಪಸೆ ಗುರುಗಳೊಂದಿಗಿನ ಮಧುರಸ್ಮೃತಿಗಳು

Must Read

- Advertisement -

ಡಾ. ಗುರುಲಿಂಗ ಕಾಪಸೆ ಅವರು ನಮ್ಮ ದಿನಮಾನದ ನಿಜವಾದ ಅನುಭಾವಿಗಳು. ಶಿವಶರಣರ ಶಿವಯೋಗ ಮತ್ತು ಅರವಿಂದರ ಪೂರ್ಣಯೋಗವನ್ನು ಅಕ್ಷರಶಃ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಯೋಗಜೀವನ ನಡೆಸಿದವರು. ಇಂತಹ ಮಹಾನ್ ಚೇತನ ಸ್ವರೂಪರಾದ ಕಾಪಸೆ ಗುರುಗಳನ್ನು ಸಮೀಪದಿಂದ ಕಂಡು, ಅವರನ್ನು ಮಾತನಾಡಿಸಿ ಧನ್ಯತೆಯನ್ನು ಅನುಭವಿಸಿದ ಸಾರ್ಥಕತೆ ನನ್ನದು. ಅವರು ವಿದ್ವತ್ತಿನ ಮಹಾಮೇರುವಾಗಿದ್ದರು, ಜ್ಞಾನದಲ್ಲಿ ಗೌರೀಶಂಕರವಾಗಿದ್ದರು. ಹೀಗಿದ್ದೂ ನನ್ನಂತಹ ಸಣ್ಣ ಹುಡುಗನ ಮೇಲೆ ತೋರಿಸುತ್ತಿದ್ದ ಪ್ರೀತಿ ಕಾಳಜಿ ಅನನ್ಯ. ಅದೊಂದು ಮರೆಯಲಾಗದ ಮಧುರಸ್ಮೃತಿ.

ಡಾ. ಕಾಪಸೆ ಗುರುಗಳನ್ನು ನಾನು ಸಮೀಪದಿಂದ ಕಾಣಲು ಅವಕಾಶವಾದದ್ದು ಅವರ ಸಹೋದರರಾದ  ಈಶ್ವರ ಕಾಪಸೆ ಅವರಿಂದ. ಈಶ್ವರ ಕಾಪಸೆ ಅವರು ನಿವೃತ್ತಿಯ ನಂತರ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯಕ್ಕೆ ಬಂದ ನಂತರ, ತಮ್ಮ ಅಣ್ಣ ಗುರುಲಿಂಗ ಕಾಪಸೆ ಅವರ ಘನ ವ್ಯಕ್ತಿತ್ವದ ಬಗ್ಗೆ ಹೃದಯ ತುಂಬಿ ಹೇಳುತ್ತಿದ್ದರು. ಅವರು ಜೀವನದುದ್ದಕ್ಕೂ ಪರಿಪಾಲಿಸಿಕೊಂಡ ಬಂದ ಅನೇಕ ಜೀವನ ಮೌಲ್ಯಗಳ ಕುರಿತು ಹೇಳುತ್ತಿದ್ದರು. ಅಂತಹ ಒಂದು ವಿಶೇಷವೆಂದರೆ ಗುರುಲಿಂಗ ಕಾಪಸೆ ಗುರುಗಳು ತಮ್ಮ ಜೀವನದುದ್ದಕ್ಕೂ ಎಂದೂ ಚಹಾ-ಕಾಫಿಯನ್ನು ಕುಡಿಯಲಿಲ್ಲ ಎಂಬ ಸಂಗತಿ ಕೇಳಿ ನಾನು ಆಶ್ಚರ್ಯಪಟ್ಟಿದ್ದೆ. ಅವರ ಮೂಲ ಊರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ. ಅಲ್ಲಿಯ ಕೆಲವು ಬಾಲ್ಯದ ಘಟನೆಗಳನ್ನು ಈಶ್ವರ ಕಾಪಸೆ ಅವರು ನನ್ನ ಮುಂದೆ ಅನೇಕ ಸಲ ಹೇಳುತ್ತಿದ್ದರು. 

ನಾಗನೂರು ರುದ್ರಾಕ್ಷಿಮಠದಲ್ಲಿ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ ಅಸ್ತಿತ್ವಕ್ಕೆ ಬಂದಾಗ, ಡಾ. ಎಸ್. ಆರ್. ಗುಂಜಾಳ ಅವರು ನಿರ್ದೇಶಕರಾಗಿ ಬಂದರು. ಅದೇ ಸಂದರ್ಭದಲ್ಲಿ ಡಾ. ಗುರುಲಿಂಗ ಕಾಪಸೆ ಗುರುಗಳು ಬೆಳಗಾವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿಯಾಗಿದ್ದರು. ಹೀಗಾಗಿ ಆಗಾಗ ಗ್ರಂಥಾಲಯಕ್ಕೆ ಬರುತ್ತಿದ್ದರು. ಡಾ. ಗುಂಜಾಳ ಗುರುಗಳು ಮತ್ತು ಕಾಪಸೆ ಗುರುಗಳು ಸಮವಯಸ್ಕರು.  ಹೀಗಾಗಿ ಗ್ರಂಥಾಲಯಕ್ಕೆ ಬಂದಾಗ ಬಹಳ ಹೊತ್ತು ಸಾಹಿತ್ಯಿಕ ಚರ್ಚೆ ಮಾಡುತ್ತಿದ್ದರು. ಆಗ ನಾನಿನ್ನು ಸಣ್ಣವನಾಗಿದ್ದ ಕಾರಣ ಅವರ ಚರ್ಚೆಯ ವಿಷಯಗಳು ನನಗಷ್ಟು ಹೆಚ್ಚು ತಿಳಿಯುತ್ತಿರಲಿಲ್ಲ.  ನಾಗನೂರು ಶ್ರೀಮಠದ ಅನೇಕ ಕಾರ್ಯಕ್ರಮಗಳಿಗೆ ಡಾ. ಕಾಪಸೆ ಗುರುಗಳು ಅತಿಥಿಗಳಾಗಿ ಆಗಮಿಸಿದ್ದಾರೆ. ಆಗೆಲ್ಲ ಅವರನ್ನು ಕಂಡು ಮಾತನಾಡಿದ ಸೌಭಾಗ್ಯ ನನ್ನದು. 

- Advertisement -

ನಾನು ಗದುಗಿನ ಲಿಂಗಾಯತ ಅಧ್ಯಯನ ಸಂಸ್ಥೆಯ ಪುಣ್ಯಪುರುಷ ಮಾಲೆಗೆ ಒಟ್ಟು ೧೨ ಗ್ರಂಥಗಳನ್ನು ಬರೆದೆ. ಆ ಕೃತಿಗಳನ್ನು ಗಮನಿಸಿ ಡಾ. ಕಾಪಸೆ ಗುರುಗಳು ತುಂಬ ಸಂತೋಷಪಟ್ಟರು. ಪ್ರತಿವರ್ಷ ಪ್ರಕಟವಾದ ಕೃತಿಗಳನ್ನು ಅವರಿಗೆ ಕಳಿಸುತ್ತಿದ್ದೆ. ಅವರು ಆಶೀರ್ವಾದದೋಲೆ ಬರೆಯುತ್ತಿದ್ದರು. ಇತ್ತೀಚೆಗೆ ಫೋನ್ ಮಾಡಿ ಶುಭ ಹರಸುತ್ತಿದ್ದರು. ನನ್ನ ಸಾಹಿತ್ಯಿಕ ಶ್ರೇಯೋಭಿವೃದ್ಧಿಗೆ ಅವರು ಸದಾಕಾಲ ಆಶೀರ್ವದಿಸುತ್ತಿದ್ದರು.

ವಿಜಯಪುರದಲ್ಲಿ ಅಸ್ತಿತ್ವಕ್ಕೆ ಬಂದ ಹಲಸಂಗಿ ಗೆಳೆಯರ ಪ್ರತಿಷ್ಠಾನವು ಪ್ರತಿವರ್ಷ ಡಾ. ಕಾಪಸೆ ಗುರುಗಳ ಮಾರ್ಗದರ್ಶನದಲ್ಲಿ ಹಿರಿಯ ವಿದ್ವಾಂಸರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತಿತ್ತು. ೨೦೧೭ರಲ್ಲಿ ಕಾಪಸೆ ಗುರುಗಳು ಕೇವಲ ವಯಸ್ಸಾದವರಿಗೆ ಪ್ರಶಸ್ತಿ ಕೊಟ್ಟರೆ ಏನು  ಪ್ರಯೋಜನ, ಯುವಕರಿಗೆ ಈ ಪ್ರಶಸ್ತಿಯನ್ನು ನೀಡಿದರೆ, ಅವರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂಬ ಸಲಹೆಯನ್ನು ನೀಡಿದರು. ಅವರ ಸಲಹೆ ಮೇರೆಗೆ ಹಿರಿಯ ವಿದ್ವಾಂಸರ ಜೊತೆಗೆ ಯುವಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಯಿತು. ೨೦೧೭ರಲ್ಲಿ ಹಲಸಂಗಿ ಗೆಳೆಯರ ಯುವಸಾಹಿತಿ ಪ್ರಶಸ್ತಿ ನನಗೆ ದೊರೆಯಿತು. ನಾನು ಯಾವುದೇ ಅರ್ಜಿ ಹಾಕಿರಲಿಲ್ಲ, ಯಾರಿಗೂ ಹೇಳಿರಲಿಲ್ಲ. ಹೀಗಿದ್ದೂ ನನಗೆ ಪ್ರಶಸ್ತಿ ಬಂದಾಗ ನನಗೆ ಸಖೇದಾಶ್ಚರ್ಯವಾಗಿತ್ತು. ನಂತರ ಎಸ್. ಕೆ. ಕೊಪ್ಪಾ ಅವರು ನನ್ನ ಮುಂದೆ – ‘ಪ್ರಕಾಶ ನಿನ್ನ ಹೆಸರನ್ನು ಸೂಚಿಸಿದವರು ಡಾ. ಕಾಪಸೆ ಗುರುಗಳು’ ಎಂದು ಹೇಳಿದಾಗ ನನಗೆ ಹೃದಯ ತುಂಬಿ ಬಂದಿತು. ಅಂತಹ ದೊಡ್ಡ ವಿದ್ವಾಂಸರು ನನ್ನಂತಹ ಸಣ್ಣವನನ್ನು ಗುರುತಿಸಿದ್ದು ನನ್ನ ಜೀವನದ ಸುವರ್ಣಮಯ ಕ್ಷಣವೆನಿಸಿತು. 

೨೫ ಜೂನ ೨೦೨೨ರಂದು ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ನನ್ನದೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಪುಸ್ತಕ ಬಿಡುಗಡೆ ಮಾಡಿದವರು ಡಾ. ಕಾಪಸೆ ಗುರುಗಳು. ಅಂದು ಮುಖ್ಯ ಅತಿಥಿಯಾಗಿ ಬರಬೇಕಾಗಿದ್ದವರು ಒಂದು ಗಂಟೆ ತಡವಾಗಿ ಬಂದ ಕಾರಣ, ಅಲ್ಲಿಯವರೆಗೆ ನಾನೇ ಭಾಷಣ ಮಾಡಬೇಕೆಂದು ಪ್ರೊ. ಧನವಂತ ಹಾಜವಗೋಳ ಅವರು ನನಗೆ ಹೇಳಿದರು. ಡಾ. ಕಾಪಸೆ ಗುರುಗಳ ಮುಂದೆ ನಾನು ಡಾ. ಗುಂಜಾಳ ಗುರುಗಳೊಂದಿಗೆ ಒಡನಾಟ ಹೊಂದಿದ ಅನೇಕ ಅಪೂರ್ವ ಕ್ಷಣಗಳ ಕುರಿತು ಒಂದು ಗಂಟೆಗಳ ಕಾಲ ಮಾತನಾಡಿದೆ. ಅಷ್ಟು ಇಳಿವಯಸ್ಸಿನಲ್ಲಿಯೂ ಅವರು ತಾಳ್ಮೆಯಿಂದ ನನ್ನ ಮಾತುಗಳನ್ನು ಕೇಳಿ, ಬಹಳ ಚೆನ್ನಾಗಿ ಮಾಡತನಾಡಿದೆ ಎಂದು ಬೆನ್ನು ತಟ್ಟಿದರು. 

- Advertisement -

೨೦೨೨ರಲ್ಲಿಯೇ ವಿಜಯಪುರ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು ನೂರರ ಅಂಗಳದಲ್ಲಿ ಹಿರಿಯರು ಎಂಬ ಕಾರ್ಯಕ್ರಮ ಏರ್ಪಡಿಸಿ, ಅದರಲ್ಲಿ ಧಾರವಾಡದ ಡಾ. ಎಸ್. ಆರ್. ಗುಂಜಾಳ ಮತ್ತು ಡಾ. ಕಾಪಸೆ ಗುರುಗಳನ್ನು ಆಹ್ವಾನಿಸಿ ಸನ್ಮಾನಿಸಿದರು. ಇಬ್ಬರು ವಿಜಯಪುರಕ್ಕೆ ಹೋದಾಗ, ಸಿದ್ಧೇಶ್ವರ ಸ್ವಾಮಿಗಳು ಮೇಲಿನ ಮಹಡಿಯಲ್ಲಿದ್ದರು. ೯೦ ವರುಷ ದಾಟಿದ ಈ ಉಭಯ ವಿದ್ವಾಂಸರು ದಡದಡನೆ ಮೆಟ್ಟಿಲೇರಿ ಸಿದ್ಧೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾದರು. ಆಗ ಶ್ರೀಗಳು ನೀವೇಕೆ ಶ್ರಮ ಪಟ್ಟು ಮೇಲೆ ಬಂದಿರಿ, ನಾನೇ ಕೆಳಗೆ ಬರುತ್ತಿದ್ದೆ ಎಂದರು. ಆಗ ಇಬ್ಬರು ನಿಮ್ಮನ್ನು ನೋಡುವ ತವಕದಿಂದ ಮೇಲೇರಿ ಬಂದೆವು. ನಮಗೇನು ಆಯಾಸವಾಗಿಲ್ಲವೆಂದು ಹೇಳಿದರು. ಆಗ ಸಿದ್ಧೇಶ್ವರ ಸ್ವಾಮೀಜಿ ಇವರಿಬ್ಬರ ಜೀವನೋತ್ಸಾಹ ಕಂಡು ಆಶ್ರ‍್ಯಪಟ್ಟರು. ತಮ್ಮ ಮಾತುಗಳಲ್ಲಿ ಅದನ್ನು ನೆನಪಿಸಿಕೊಂಡರು.

ದಿನಾಂಕ ೩೧-೧-೨೦೧೯ರಂದು ಸೊಂಡೂರು ಪ್ರಭುದೇವ ವಿರಕ್ತಮಠದಲ್ಲಿ ವಿಚಾರ ಸಂಕಿರಣ, ಬಸವ ಬೆಳಗು ಪ್ರಶಸ್ತಿ ಪ್ರದಾನ ಸಮಾರಂಭವಿತ್ತು. ಬಸವ ಬೆಳಗು ಪ್ರಶಸ್ತಿಯನ್ನು ಡಾ. ಕಾಪಸೆ ಗುರುಗಳಿಗೆ ಪ್ರದಾನ ಮಾಡಲಾಯಿತು. ಅಂದಿನ ವಿಚಾರ ಸಂಕಿರಣದಲ್ಲಿ ನಾನು ಒಂದು ಪ್ರಬಂಧ ಮಂಡಿಸಿದೆ. ಅದನ್ನು ತದೇಕಚಿತ್ತದಿಂದ ಕೇಳಿದ ಡಾ. ಕಾಪಸೆ ಗುರುಗಳು ಚೆನ್ನಾಗಿ ಮಾತನಾಡಿದೆ. ಆದರೆ ನಿನ್ನ ಭಾಷಣಕ್ಕಿಂತ, ನಿನ್ನ ಬರಹಕ್ಕೆ ಒಂದು ಸಾಮರ್ಥ್ಯವಿದೆ. ಹೀಗಾಗಿ ಮಾತಿಗಿಂತ ಬರಹಕ್ಕೆ ಹೆಚ್ಚು ಒತ್ತುಕೊಡು ಎಂದು ಹೇಳಿದರು. ಅವರ ಮಾತು ನಿಜವೆನಿಸಿತು. ನನಗೆ ಭಾಷಣಕಲೆಗಿಂತ, ಪುಸ್ತಕ ಬರೆಯುವುದು ತುಂಬ ಸರಳವೆನಿಸಿತು.

ಡಾ. ಕಾಪಸೆ ಗುರುಗಳು ಅನುವಾದಿಸಿದ ‘ಒಂದು ಪುಟದ ಕತೆ’ ಪುಸ್ತಕ ಓದಿ, ನನ್ನ ಅಭಿಪ್ರಾಯ ಹೇಳಿದಾಗ ಡಾ. ಕಾಪಸೆ ಗುರುಗಳು ತುಂಬ ಸಂತೋಷಪಟ್ಟಿದ್ದರು. ಇಡೀ ಪುಸ್ತಕ ಓದುವರು ಇಂದು ಬಹಳ ಕಡಿಮೆ. ನೀನು ಓದಿದ್ದು ಸಂತೋಷವೆಂದರು. ಆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಫೋನ್ ಮಾಡಿದ್ದೆ. ಖುಷಿಯಿಂದ ಮಾತನಾಡಿದ್ದರು.

ನಾನು ಬೆಳಗಾವಿ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣಗಳು ಕೃತಿಯನ್ನು ಸಂಪಾದಿಸಿದೆ. ಅದರಲ್ಲಿ ಮಧುರಚೆನ್ನರ ಮೊದಲ ಭಾಷಣವನ್ನು ಪ್ರಕಟಿಸಿದ್ದೆ. ಅದನ್ನು ಗಮನಿಸಿ ಡಾ. ಕಾಪಸೆ ಗುರುಗಳು ತುಂಬ ಸಂತೋಷಪಟ್ಟರು. ಆಶ್ರ‍್ಯವೆಂದರೆ ಡಾ. ಕಾಪಸೆ ಅವರಿಗೆ ಈ ಭಾಷಣದ ಪ್ರತಿಯನ್ನು ಕೊಟ್ಟವರು ಬ.ಗಂ.ತುರಮರಿ ಅವರು. ನನಗೂ ಅವರೇ ಕೊಟ್ಟಿದ್ದರು. ತುರಮರಿ ಅವರ ಚರಿತ್ರೆಯಲ್ಲಿ ಈ ಘಟನೆಯನ್ನು ನಾನು ಪ್ರಸ್ತಾಪಿಸಿದ್ದೆ. ಅದನ್ನು ಗಮನಿಸಿ ‘ನಿನ್ನಲ್ಲಿ ಒಂದು ಅಪೂರ್ವ ಗ್ರಹಣಶಕ್ತಿ ಇದೆ. ನಿನ್ನ ಬರವಣಿಗೆ ಹೀಗೆ ಮುಂದುವರಿಯಲಿ’ ಎಂದು ಆಶೀರ್ವದಿಸಿದ್ದರು.

ಡಾ. ಕಾಪಸೆ ಗುರುಗಳ ಬರಹ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ. ಅವರ ಬರಹದ ಶೈಲಿ ಅತ್ಯಂತ ಆಪ್ಯಾಯಮಾನವಾದುದು. ಅಂತೆಯೆ ಅವರ ಪಿಎಚ್.ಡಿ. ಮಹಾಪ್ರಬಂಧಕ್ಕೆ ವಿ.ಕೃ.ಗೋಕಾಕ ಅವರು ಮುನ್ನುಡಿ ಬರೆದಿದ್ದಾರೆ. ಮಧುರಚೆನ್ನರ ಒಡನಾಟದ ಕುರಿತು ವಿ.ಕೃ.ಗೋಕಾಕ ಅವರು ಆ ಮುನ್ನುಡಿಯಲ್ಲಿ ಒಂದು ಸುಂದರ ನುಡಿಯನ್ನು ಬರೆದಿದ್ದಾರೆ.

ನನ್ನ ನಿನ್ನ ದೃಷ್ಟಿಯೊಂದೆ

ಆದರೆಮ್ಮದೃಷ್ಟ ಬೇರೆ

ಮಧುರಚೆನ್ನರ-ಗೋಕಾಕರ ಜೀವನದೃಷ್ಟಿ ಒಂದೇ ಆಗಿದ್ದರೂ, ಇಬ್ಬರ ಅದೃಷ್ಟಗಳು ಬೇರೆ ಬೇರೆ ಆಗಿದ್ದವು ಎಂಬುದನ್ನು ಈ ನುಡಿಯಲ್ಲಿ ಗೋಕಾಕರು ಅಭಿವ್ಯಕ್ತಿಸಿದ್ದಾರೆ. 

ನಿರ್ಲಿಪ್ತ, ನಿರಪೇಕ್ಷ ಮನೋಭಾವದ ನಿಜಾನುಭಾವಿ, ಯೋಗಜೀವನ ನಡೆಸಿದ ಇಂತಹ ಮಹಾನ್ ಚೇತನ ಇಂದು ಲಿಂಗೈಕ್ಯರಾದುದು ತುಂಬ ದುಃಖದ ಸಂಗತಿ. ಅವರೊಂದಿಗಿನ ಮಾತುಕತೆಯಾಡಿದ ಸಂದರ್ಭಗಳು ನನ್ನ ಬದುಕಿನಲ್ಲಿ ಮಧುರಸ್ಮೃತಿಗಳಾಗಿ ಉಳಿದಿವೆ.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group