spot_img
spot_img

ಹೂವಂತ ಮಕ್ಕಳ ಬದುಕು ಮದುವೆಯೆಂಬ ಮುಳ್ಳು ತಾಗಿ ಅರಳುವ ಮೊದಲೇ ಬಾಡದಿರಲಿ…

Must Read

- Advertisement -

ಏ ಶಾಮಲಾ ನಿನ್ನ ಗಂಡ ಬಂದಾನ ಬಾರ ಏ…ಅಂತ  ಕಸ್ತೂರಿ ಜೋರು ಜೋರಾಗಿ ಕೂಗುತ್ತಿದ್ದರೆ ಶಾಲೆಯ ಹುಡುಗರೆಲ್ಲ ಗೊಳ್ಳ ಎಂದು ನಗುತ್ತಿದ್ದರು.

 ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಆಗಷ್ಟೇ ಎಂಟನೆ ತರಗತಿ ಓದುತ್ತಿದ್ದ ಶಾಮಲಾ ನಾಚಿಕೆಯಿಂದ ಓಡಿ ಹೋಗಿ ಶೌಚಾಲಯದ ಬಾಗಿಲು ಹಾಕಿಕೊಂಡವಳು ಯಾರು ಎಷ್ಟೇ ಕರೆದರೂ ಹೊರಗೆ ಬರಲು ಸುತಾರಾಂ ತಯಾರು ಇರಲಿಲ್ಲ…

ಇನ್ನೊಂದು ಕಡೆ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್,  ಏ ತಮ್ಮ ನಿಮ್ ಮನ್ಯಾಗ ಹಿರಿಯರ ಅಂತ ಯಾರದಾರ ಅವರನ್ನ ಕರಸು ಅವರ ಜೋಡಿ ಸ್ವಲ್ಪ ಮಾತಾಡಬೇಕು ಅನ್ನುತ್ತಿದ್ದಂತೆಯೇ ರಾಜಪ್ಪ ಅದ ಯಾನ ಹೇಳೂದ ಐತಿ ನನಗ ಹೇಳ್ರಿ ಸರ್ ನಾ ಅಕಿ ಗಂಡ ಅದೀನಿ ಅನ್ನುತ್ತಿದ್ದಂತೆಯೇ ಡಾಕ್ಟರ್ ಗರಬಡಿದವರಂತೆ ನಿಂತು ಬಿಟ್ಟರು.

- Advertisement -

ಅಲ್ಲೆ ಇದ್ದ ವಯಸ್ಸಾದ ದಾದಿಯೊಬ್ಬರು ಇನ್ನೂ ಈಗಷ್ಟೇ ಕುಡಿ ಮೀಸೆ ಚಿಗುರುತ್ತಿರುವ ರಾಜಪ್ಪನ ಹತ್ತಿರ ಬಂದವರೇ,  ಅಲ್ಲೋ ಯಪ್ಪಾ ಆ ಹುಡುಗಿ ಇನ್ನಾ ಗುಬ್ಬಿ ಮರಿ ಇದ್ದಂಗ ಐತಿ ಅಕಿ ಮೈಯ್ಯಾಗ ಒಂದ ಹನಿ ರಗತ ಇಲ್ಲ ಹೊಟ್ಟಿಲೆ ಆಗ್ಯಾಳು ಆದ್ರ ಹೊಟ್ಟ್ಯಾನ್ ಕೂಸ ಜೀವಂತ ಉಳಿಯುದಿಲ್ಲ ತಗಿಬೇಕ್ ಆಕ್ಕೈತಿ ಅನ್ನುತ್ತಿದ್ದಂತೆಯೇ ಆಸ್ಪತ್ರೆಯ ಪಲ್ಲಂಗದ ಮೇಲೆ ಅಂಗಾತ ಮಲಗಿದ್ದ ಮಹಾನಂದ ಎದ್ದು ಕುಂತವಳೇ ಜೋರು ಜೋರಾಗಿ ಅಳತೊಡಗಿದ್ದಳು.

ಅಲ್ಲೋ ಭೀಮಣ್ಣ ಇನ್ನೊಂದು ಎರಡ್ ವರ್ಷ ಸಾಲಿ ಕಲಸಿದ್ದಿ ಅಂದ್ರ ನಿಮ್ ಹುಡುಗಿ ಮ್ಯಾಟ್ರಿಕ್ ಮುಗೀತಿತ್ತು ಇಷ್ಟ್ಯಾಕ ಗಡಬಡಿಲೆ ಮದುವಿ ಮಾಡಿದ್ಯೋ ಪಾ ನಮಗ್ ಒಂದ್ ಮಾತೂ ಹೇಳಿಲ್ಲ…?? ಅನ್ನುವ ಪ್ರಶ್ನೆಗೆ ಮಳೆ ಇಲ್ಲದೆ ಬಿರುಕು ಬಿಟ್ಟ ತುಂಡುಭೂಮಿಯ ಬೇವಿನ ಗಿಡದ ಕೆಳಗೆ ನಿಂತಿದ್ದ ಭೀಮಣ್ಣ ಅತ್ತಕಡೆ ಹೊರಳಿ ಕಣ್ಣು ತುಂಬಿಕೊಂಡು ಆಕಾಶ ದಿಟ್ಟಿಸತೊಡಗಿದ್ದ.

ಇಂದಿಗೂ ನಮ್ಮ ಬೆಳಗಾವಿ, ವಿಜಯಪುರ, ಗುಲ್ಬರ್ಗ, ಅಲಮೇಲ್ , ಸಿಂದಗಿ, ಅಪಜಲ್ ಪೂರ ಅಷ್ಟೇ ಅಲ್ಲ ಬಳ್ಳಾರಿ, ರಾಯಚೂರಿನಂತಹ ರಾಯಲ ಸೀಮೆ, ಬಯಲು ಸೀಮೆಯಿಂದ ಹಿಡಿದು ಮಲೆನಾಡ ಹಳ್ಳಿಗಳ ತನಕ ಕೇಳ ಸಿಗುವದು ಕೇವಲ ಇಂತಹ ಬಾಲ್ಯ ವಿವಾಹದ ಕರುಣಾಜನಕ ಕಥೆಗಳೇ…

- Advertisement -

ತಂಗೀ ನಿನ್ನ ಮಗಳನ್ನ ನನ್ನ ದೊಡ್ಡ ಮಗಗ್ ತಗೋಬೇಕ ಅಂದೀವ್ ನೋಡವಾ ಇದಕ್ ನೀ ಯಾನ ಅಂತಿ ಅಂತ ಗುರುಪಾದಪ್ಪ ನಿಂಗವ್ವನಿಗೆ ಕೇಳುತ್ತಿದ್ದರೆ ಏ ಯಣ್ಣಾ ನಾನರೇ ಯಾಕ್ ಬ್ಯಾಡ ಅನ್ಲಿ ಕಳ್ಳ-ಬಳ್ಳಿ ಅನ್ನೂದು ನನಗೂ ಬೇಕು ಯಾನಪಾ… ಮುಂದ…

ಅವ್ರ ಹಣಿ ಬರದಾಗ ಇದ್ದಂಗ ಆಕ್ಕೇತಿ ಎಲ್ಲಾರೂ ಹೂಂ ಅಂದ್ರ ನಾಳೆ ಇಬ್ಬರನೂ  ತೊಟ್ಟಲಾಗ ಹಾಕಿ ಅಕ್ಕಿಕಾಳ ವಗಿಯೋಣು ಅಂದಳು ನಿಂಗವ್ವ…

ಇಂತಹದ್ದೊಂದು ಪ್ರತ್ಯುತ್ತರ ಸಿಗುತ್ತಿದ್ದಂತೆಯೇ ಮನೆಯ ಪಡಸಾಲೆಯಲ್ಲಿ ಕುಳಿತಿದ್ದ ಹಿರಿಯರು ಹಂಗಾದ್ರ ಇವತ್ತ…. ಅಡಕಿ ಒಡಿಯೋನು ಏನ್ರಿ?? ಅಂತ ಅವರಿಬ್ಬರ ಮುಖ ನೋಡುತ್ತಿದ್ದರೇ ಗುರುಪಾದಪ್ಪ ಜಗತ್ತು ಗೆದ್ದವನಂತೆ ತನ್ನ ತುಟಿಗಳನ್ನ ಅಗಲಿಸಿ ನಕ್ಕಿದ್ದ….

ಆ ನಂತರದ ದಿನಗಳಲ್ಲಿ ನಿಂಗವ್ವನ ಮಗಳು ಬೆಳೆದು ದೊಡ್ಡವಳಾಗಿ ಅದು ಎಂದೋ ತನಗರಿವಿಲ್ಲದ ಕಾಲದಲ್ಲಿ ಹಿರಿಯರು ಮಾಡಿದ್ದ ತಪ್ಪಿಗೆ ಗುರುಪಾದಪ್ಪನ ಮಗನೊಂದಿಗೆ ಹೊಂದಿಕೊಳ್ಳಲಾಗದೇ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು…. ಆನಂತರ ಅದೇ ಹಿರಿಯರ ರಾಜಿ ಪಂಚಾಯತಿಯಿಂದ ಒತ್ತಾಯದ ಸಂಸಾರ ಮಾಡಿದರೂ ಕೂಡ ರಕ್ತ ಸಂಬಂಧದಲ್ಲೇ ಮದುವೆ ಆಗಿದ್ದರಿಂದ ಬುದ್ದಿಮಾಂದ್ಯ ಮತ್ತು ವಿಕಲಚೇತನ ಮಗುವೊಂದು ಅವರಿಗೆ ಹುಟ್ಟಿದ್ದು ನಿಂಗವ್ವನ ಮಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಹೀಗೆಯೇ ಎಷ್ಟೋ ಜನರ ಬದುಕಿನಲ್ಲಿ ಬಾಲ್ಯ ವಿವಾಹ ಅನ್ನುವದು ಆಗಾಗ ಕಂಡೂ ಕೇಳರಿಯದಂತ ಬಿರುಗಾಳಿಯೊಂದನ್ನ ಎಬ್ಬಿಸುತ್ತಲೇ ಇರುತ್ತದೆ.

ಹುಡುಗ ಹುಡುಗಿಯ ದೇಹದ ಅಂಗಗಳು ಬೆಳೆದು ಅವರು ಪರಿ ಪಕ್ವವಾಗುವ ಮೊದಲೇ….ಈ ಜಗದ ವ್ಯವಹಾರಗಳು ಅವರಿಗೆ ಅರ್ಥವಾಗುವ ಮೊದಲೇ ಇನ್ನೂ ಆಡಿ, ಹಾಡಿ, ಶಾಲೆ ಕಲಿಯುತ್ತ ನಲಿ-ಕಲಿ ಅಂತ ಬೆಳೆಯಬೇಕಿದ್ದ ಮಕ್ಕಳಿಗೆ ಸಂಸಾರದ ನೊಗ ಹೊರೆಸಿ ಅವರ ಬಾಲ್ಯದ ಕನಸುಗಳನ್ನೇ ಕಮರಿಸಿದ ಹೇಯ ಘಟನೆಗಳು ಇಂದಿಗೂ ಆಗಾಗ ತೆರೆಯ ಮರೆಯಲ್ಲಿ ನಡೆಯುತ್ತಲೇ ಇರುತ್ತವೆ.

ಇಂತಹದ್ದೇ ಒಂದು ಘಟನೆ ಗುಲ್ಬರ್ಗ ಹತ್ತಿರದ ಹಳ್ಳಿಯೊಂದರಲ್ಲಿ ನಡೆದಿದ್ದು ಕಾಲಾಂತರದಲ್ಲಿ ಬಾಲ್ಯ ವಿವಾಹವನ್ನ ಹಿರಿಯರೇ ಮುಂದೆ ನಿಂತು ರದ್ದುಗೊಳಿಸಿ ಹುಡುಗಿಗೆ ತನ್ನ ಬದುಕಿನ ಆಯ್ಕೆಯ ದಾರಿ ಬಿಟ್ಟು ಕೊಟ್ಟದ್ದು ಕೂಡ ಈಗ ಇತಿಹಾಸವೇ ಸರಿ.

ಆಗಷ್ಟೇ ಏಳೆಂಟು ವರ್ಷದ ಹುಡುಗಿ ಶಾಮಲಾಳನ್ನ ಹದಿಮೂರು ವರ್ಷದ ಇನ್ನೂ ಈಗಷ್ಟೇ ಚಿಗುರು ಮೀಸೆ ಕುಡಿ ಒಡೆಯುತ್ತಿದ್ದ  ಮಂಜಪ್ಪನಿಗೆ ಕೊಟ್ಟು, ಸಂಪ್ರದಾಯದಂತೆಯೇ ಧಾರೆ ಎರೆದು ಸಂಬಂಧಿಕರಿಗೆಲ್ಲ ಊಟ ಹಾಕಿಸಿ ಯಾದಿಯೊಂದನ್ನ ಬರೆದು ಯಾದಿ ಮ್ಯಾಲ್ ಶಾದಿ ಅಂತ ಮದುವೆ ಮಗಿಸಿ ಆಗಿತ್ತು…

ಅದಾದ ಬಳಿಕ ದೂರದ ಗೋವಾಕ್ಕೆ ದುಡಿಯುವದಕ್ಕೆಂದು ಗುಳೆ ಹೋಗಿದ್ದ ಮಂಜಪ್ಪ ಇದ್ದಕ್ಕಿದ್ದಂತೆ ಲಿಂಗಪರಿವರ್ತನೆ ಮಾಡಿಕೊಂಡು ಮಂಜವ್ವನಾಗಿ ಎದುರಿಗೆ ಬಂದು ನಿಂತಾಗ ಶಾಮಲಾ ಮುಗಿಲು ಕತ್ತರಿಸಿ ಮೇಲೆ ಬಿದ್ದವರಂತೆ ಬೋರಾಡಿ ಅಳುತ್ತಿದ್ದರೆ ಇನ್ನೇನ್ ಮಾಡೂದ್ ಐತಿ ಇಕಿಗೂ ಅವರವ್ವನ ಗತೆ ಮುತ್ತ ಕಟ್ಟಿ ಬಿಡ್ರಿ ಅಂದ ಗೌಡರ ಮುಂದೆ ಶಾಮಲಾ ಕಣ್ಣು ತುಂಬಿಕೊಂಡು ಮಾನವಾಗಿ ಬಿಕ್ಕತೊಡಗಿದ್ದರೆ ಆ ಹುಡುಗಿಯ ವಿಧವೆ ತಾಯಿಯ ಕಣ್ಣುಗಳು ನಿರಂತರ ಅಶೃಧಾರೆಯನ್ನ ಹರಿಸತೊಡಗಿದ್ದವು.

ಹೀಗೆ ಹೇಳುತ್ತ ಹೋದರೆ ಅದೇನು ಒಂದಾ?? ಎರಡಾ?? ಈ ಜಗತ್ತಿನ ಪರಿವೆಯೇ ಇಲ್ಲದ ಕಾಲದಲ್ಲಿ ಇನ್ನೂ ಆಟ ಆಡುವ ಮಕ್ಕಳಾಗಿದ್ದಾಗಲೇ ಮದುವೆಯ ಬಾಸಿಂಗವನ್ನ ಹಣೆಗೆ ಕಟ್ಟಿ ಕುತ್ತಿಗೆಗೆ ಎರಡೆಳೆಯ ತಾಳಿಯನ್ನ ತರಾತುರಿಯಲ್ಲೇ ಕಟ್ಟಿಸಿ ಬಿಡುವ ಬಹುತೇಕ ಹುಡುಗ ಹುಡುಗಿಯರ ತಂದೆ ತಾಯಿ ಬಡವರು ಮತ್ತು ನಿರಕ್ಷರಿಗಳಾಗಿದ್ದರೆ ಇನ್ನೊಂದು ಕಡೆ ಜಾಗೃತಿ ಮೂಡಿಸುವವರ ಕೊರತೆಯೂ ಇದಕ್ಕೆ ಅತಿದೊಡ್ಡ ಕಾರಣವಾಗಿ ಎದ್ದು ಕಾಣುತ್ತದೆ.

ಎಷ್ಟೋ ಸಲ ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ತಿಳಿದು ಅಧಿಕಾರಿಗಳು ಬಾಲ್ಯ ವಿವಾಹ ತಡೆಯಲು ತೋಟದ ಮನೆ, ಊರ ಹೊರಗಿನ ದೇವಸ್ಥಾನ, ಅಥವಾ ಕಲ್ಯಾಣ ಮಂಟಪಗಳಿಗೆ ಹೋಗುವಷ್ಟರಲ್ಲೇ ಮದುವೆ ಕಾರ್ಯಕ್ರಮದ ರೂಪವೇ ಬದಲಾಗಿ ಮತ್ಯಾರೋ ಹೆಣ್ಣುಮಗಳ ಕುಬುಸದ ಕಾರ್ಯಕ್ರಮ ಇದೆ ಅಂತ ಸುಳ್ಳು ಪೋಣಿಸಿ ಅಧಿಕಾರಿಗಳ ಕಣ್ಣಿಗೆ ಮಂಕು ಬೂದಿ ಎರಚಲಾಗುತ್ತದೆ.

ಇನ್ನು ಕೆಲವು ಕಡೆಯಂತೂ ಅದು ಎಷ್ಟೇ ತಿಳಿಸಿ ಹೇಳಿದರೂ ಕೂಡ ಮದುವೆಯಲ್ಲಿ ನೆರೆದ ಜನರು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ,ಸಮಾಜ ಕಲ್ಯಾಣ ಇಲಾಖೆ ಮತ್ತು ಪೋಲಿಸ್ ಇಲಾಖೆ,ಹಾಗೂ ಪಂಚಾಯತ್ ರಾಜ್ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮಾತನ್ನೂ ಕೇಳದೆ ಆಯ್ತ ರೀ ಸರ್ ಅವರು ಮೇಜರ್ ಆಗುತನಕ ಅವರನೇನ ಕೂಡಾಕ ಬಿಡುದಿಲ್ಲರೀ ಬೇಕಾದ್ರ ಬಾಂಡ್ ಬರದ್ ಕೊಡ್ತೀವ್ರಿ ಈಗ ನೀವು ಬರುಕಿತ ಮೊದ್ಲ ಅಕ್ಕಿಕಾಳ ಬಿದ್ದಾವು ಹೆಂಗೂ ಬಂದೀರಿ ಊಟ ಮಾಡಿ ಹೋಗ್ರಿ ಅಂತ ಸಮಜಾಯಿಸಿ ಕೊಡುವ ಪ್ರಯತ್ನ ಮಾಡುತ್ತಿರುವ ದೃಶ್ಯ ಗಳು ಕೂಡ ಆಗಾಗ ಕಣ್ಣಿಗೆ ಬೀಳುತ್ತವೆ.

ಅಸಲಿಗೆ ಬಾಲ್ಯ ವಿವಾಹಕ್ಕೆ ಕಾರಣರಾಗುವ ಪೋಷಕರು,ಸಂಭಂಧಿಕರು ಮತ್ತು ಮದುವೆಯಲ್ಲಿ ಉಪಸ್ಥಿತರಾಗಿ ಇರುವವರು ಹಾಗೂ ಬಾಲ್ಯ ವಿವಾಹದ ಮಧ್ಯಸ್ಥಿಕೆ ವಹಿಸಿದವರು ಹೀಗೆ ಎಲ್ಲರ ಮೇಲೂ ಕಾನೂನಿನ ಕ್ರಮಕ್ಕೆ ಅವಕಾಶವಿದ್ದು 2006 ರಲ್ಲಿ ವರನಿಗೆ ಇಪ್ಪತ್ತೊಂದು ವರ್ಷ ಮತ್ತು ವಧುವಿಗೆ ಹದಿನೆಂಟು ವರ್ಷಗಳ ಕನಿಷ್ಠ ವಯೋಮಿತಿ ನಿಗದಿ ಪಡಿಸಲಾಗಿದ್ದು ಅದಕ್ಕಿಂತ ಕಡಿಮೆ ಇದ್ದಾಗ ನಡೆಸುವ ಬಾಲ್ಯವಿಹಾಹಕ್ಕೆ ಎರಡು ವರ್ಷಗಳವರೆಗಿನ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ದಂಡ ಇಲ್ಲವೇ ಎರಡೂ ಶಿಕ್ಷೆಗಳು ಕಾಯಿದೆಯಲ್ಲಿ ಇದ್ದಾಗ್ಯೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾತ್ರ ನಿರಂತರವಾಗಿ ಸಾಗಬೇಕಾಗಿದೆ.

ಗಟ್ಟಿ ಮನಸ್ಸು ಮಾಡಿ ಒಂದು ಬಾಲ್ಯ ವಿವಾಹವನ್ನ ತಡೆಯುವದರಿಂದ ಪ್ರಸವಪೂರ್ವ ಸಾವು ನೋವುಗಳು,ಹೆರಿಗೆಯ ವೇಳೆ ಬಾಣಂತಿ ಅಥವಾ ಮಗುವಿನ ಸಾವು,ಸರಿಯಾಗಿ ಬೆಳೆಯದ ಶಿಶುಗಳ ಗರ್ಭಪಾತ ಇಂತಹ ಘಟನೆಗಳನ್ನು ತಡೆಯುವದರ ಜೊತೆಗೆ ಭವಿಷ್ಯದಲ್ಲಿ ಆಗಬಹುದಾದ ವಿವಾಹ ವಿಚ್ಛೇದನ ಅಥವಾ ಹೊಂದಾಣಿಕೆ ಕೊರತೆ,ಬಾಲ್ಯಾವಸ್ಥೆಯಲ್ಲೇ ಪತಿಯ ಸಾವಿನಿಂದ ಎದುರಾಗ ಬಹುದಾದ ವಿಧವೆತನ ಇಂತಹ ಘಟನೆಗಳನ್ನ ತಡೆಯಬಹುದಾಗಿದೆ.

ಮಕ್ಕಳ ಸಹಾಯವಾಣಿ 1098,ಪೋಲಿಸ್ ಇಲಾಖೆಯ 112,ಅಪರಾಧ ತಡೆಗಾಗಿ 1090 ಮಹಿಳಾ ಸಹಾಯವಾಣಿ 1091ಗಳಿಗೆ ಕರೆ ಮಾಡುವ ಮೂಲಕವೂ ಬಾಲ್ಯ ವಿವಾಹಗಳನ್ನು ತಡೆಯಲು ನಾವು ನೀವೆಲ್ಲ ಸಹಕರಿಸುವ ಮೂಲಕ ಒಬ್ಬರ ಬದುಕಿನಲ್ಲಿ ಆಗಬಹುದಾದ ಅವಘಡಗಳನ್ನ ತಪ್ಪಿಸೋಣ ಅಲ್ಲವೇ ಏನಂತೀರಿ??


ದೀಪಕ ಶಿಂಧೇ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group