spot_img
spot_img

ನಾಟಕ ವಿಮರ್ಶೆ : ವೈಚಾರಿಕ ದೃಷ್ಟಿಕೋನ ಕೋಳೂರು ಕೊಡಗೂಸು ನಾಟಕ

Must Read

spot_img
- Advertisement -

ರಂಗಕರ್ಮಿ ಸಿಜಿಕೆಯವರ ಕಲ್ಪನೆಯ ಕೂಸು ಸಾಣೆನಹಳ್ಳಿ ಶಿವಕುಮಾರ ಕಲಾಸಂಘ. ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದು ವರ್ಷಕ್ಕೆ ೩ ನಾಟಕಗಳಂತೆ ಶಿವಸಂಚಾರದಲ್ಲಿ ಇದುವರೆಗೆ ವಿಭಿನ್ನ ವಸ್ತುವಿನ ೮೧ ನಾಟಕಗಳನ್ನು ಕಲಿತು ಕರ್ನಾಟಕದ ಒಳ ಹೊರಗೆ ೩೬೨೦ಕ್ಕೂ ಹೆಚ್ಚು ಪ್ರದರ್ಶನಗಳಿಂದ ರಂಗಾಸಕ್ತರ ಗಮನ ಸೆಳೆದಿದೆ.

ಈ ವರ್ಷದ ಸಂಚಾರದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿತ ಕೋಳೂರು ಕೊಡಗೂಸು ನಾಟಕ ನೀನಾಸಂ ಪದವೀಧರ ಮಹಾದೇವ ಹಡಪದ ನಿರ್ದೇಶನದಲ್ಲಿ ಹಾಸನದ ಬಸವೇಶ್ವರ ಕಲ್ಯಾಣ ಮಂಟಪ ಹೊರಾಂಗಣ ರಂಗವೇದಿಕೆಯಲ್ಲಿ ಪ್ರದರ್ಶಿತವಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾ. ಘಟಕ ಮತ್ತು ರೋಟರಿ ಕ್ಲಬ್ ಹಾಸನ ಸನ್ ರೈಸ್ ಸಂಸ್ಥೆಗಳು ಪ್ರದರ್ಶನಕ್ಕೆ ನರವಾಗಿದ್ದವು. ಇದೊಂದು ಪ್ರಸಿದ್ಧ ಕತೆ. ಪೌರಾಣಿಕವೋ ಐತಿಹಾಸಿಕವೊ ಎನ್ನುವ ಅನುಮಾನ ಇದ್ದೇ ಇದೇ ಎಂದು ಹೇಳಿ ಕತೆಗೆ ಹೊಸ ರೂಪ ನೀಡಿ ನಾಟಕಕ್ಕೆ ಬಸವಾದಿ ಶರಣರ ವಚನಗಳನ್ನು ಬಳಸಿಕೊಂಡು ರಂಗದ ಮೇಲೆ ತರಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದಲ್ಲಿ ಪ್ರಥಮ ರ‍್ಯಾಂಕ್ ಪಡೆದು ೧೯೭೭ರಲ್ಲಿ ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಆಸಕ್ತಿ ಫಲದಾಯಕ ರಂಗಚಟುವಟಿಕೆಯಿಂದಾಗಿ ಸಣ್ಣ ಹಳ್ಳಿ ಸಾಣೇಹಳ್ಳಿ ಇಂದು ದೇಶ ವಿದೇಶಗಳ ಗಮನ ಸೆಳೆದಿದೆ. ಸ್ವತಃ ಸಾಹಿತಿ ನಾಟಕಕಾರರು ಆಗಿ ಶ್ರೀಗಳು ೧೨೮ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದು ಇವುಗಳಲ್ಲಿ ೬ ನಾಟಕಗಳು ಸೇರಿವೆ.

- Advertisement -

ಮೂಲ ಕತೆಯಲ್ಲಿ ಬಾಲಕಿ ಕೊಡಗೂಸು ಕಲ್ಲಿನಾಥನಿಗೆ ಹಾಲು ಕುಡಿಸಿದೆ ಎಂದು ಹೇಳಿದ್ದನ್ನು ನಂಬದ ತಂದೆ ತಾಯಿ ನಮ್ಮೆದರು ಕಲ್ಲಿನಾಥನಿಗೆ ಹಾಲು ಕುಡಿಸೆಂದು ಹೇಳಿ ಕೊಡಗೂಸು ಕಲ್ಲಿನಾಥನ ಪೂಜೆ ಮಾಡಿ ಕೆನೆ ಹಾಲು ಕುಡಿ ನನ್ನಪ್ಪ ಎಂದು ಹಾಲಿನ ಬಟ್ಟಲು ಇಟ್ಟು ಬೇಡಿದರೂ ಕಲ್ಲಿನಾಥ ಹಾಲು ಕುಡಿಯದೆ ತಂದೆ ತಾಯಿ ನನ್ನ ಮಾತು ನಂಬದಂತಾಯ್ತಲ್ಲ ಎಂದು ನೊಂದ ಮುಗ್ಧ ಬಾಲಕಿ ಬಲಿದಾನಕ್ಕೆ ಮುಂದಾದಾಗ ಶಿವ ಪ್ರತ್ಯಕ್ಷನಾಗಿ ಮಗುವನ್ನು ತನ್ನೊಳಗೆ ಐಕ್ಯ ಮಾಡಿಕೊಂಡನೆಂದು ಹೇಳಿದೆ. ಆದರೆ ಇಲ್ಲಿ ನಾಟಕಕಾರರು ಈ ಕತೆಗೆ ವ್ಶೆಜ್ಞಾನಿಕ ಮತ್ತು ಶರಣ ತತ್ವದ ಸ್ಪರ್ಶ ನೀಡಿ ಅಪ್ಯಾಯಮಾನವಾಗಿ ಪ್ರೇಕ್ಷಕರ ಮನ ಮುಟ್ಟುವುದು ವಿಶೇಷವಾಗಿದೆ.

ಭಕ್ತಿಪ್ರಧಾನ ಹಳೆಯ ಸಿನಿಮಾಗಳಲ್ಲಿ ಬರುವಂತೆ ಇಲ್ಲಿ ಬರುವ ಸಾಹುಕಾರ ಸಿದ್ಧಪ್ಪ (ಚಿನ್ಮಯರಾಮ ಎಸ್.ವೈ) ಊರ ಜನರಿಗೆ ಬಡ್ಡಿಗೆ ಹಣ ಕೊಟ್ಟು ವಸೂಲಿಗೆ ಒಬ್ಬ ಆಳು (ಪವನಕುಮಾರ್ ವೈ) ಮತ್ತು ಚೆಲುವಿಯನ್ನು (ಭಾಸ್ಕರ್ ಹಿತ್ತಲಮನಿ) ಬಿಟ್ಟು ತಾನೂ ಹಿಂಬಾಲಿಸಿ ದ್ವಂದರ್ಥದ ಮಾತು ಹಾಸ್ಯ ಅಭಿನಯದಲ್ಲಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವಲ್ಲಿ ಬಾಲಕೃಷ್ಣ ನರಸಿಂಹರಾಜು ನೆನಪಾಗುತ್ತಾರೆ ಶಿವದೇವಯ್ಯ (ಆಕಾಶ್ ಜಿ) ಸೋಮಲೆಯ (ರೇಷ್ಮಾ ಎಸ್.) ಮಗಳು ಕೊಡಗೂಸು (ದಿವ್ಯಾಂಜಲಿ) ಬಾಲ್ಯದಿಂದಲೇ ದೇವರ ಮೇಲೆ ಭಕ್ತಿ ಭಾವ ಹೊಂದಿ ಬೆಳೆದ ಓದಿನಲ್ಲಿ ಬುದ್ಧಿವಂತ ಬಾಲೆ. ತಾಯಿ ಸೋಮಲೆ ದಿನಾ ಬೆಳಿಗ್ಗೆ ಗುಡಿಗೆ ಹೋಗಿ ನೈವೇದ್ಯ ಮಾಡಿ ಮನೆಯಿಂದ ಕೊಂಡೊಯ್ಯುತ್ತಿದ್ದ ಹಾಲನ್ನು ಅಲ್ಲಿಯೇ ಹಂಚಿ ಬರುತ್ತಿದ್ದ ವಿಷಯವನ್ನರಿಯದೆ ಕಲ್ಲಿಗನಾಥನಿಗೆ ತಾನು ಕೆನೆಹಾಲು ಕುಡಿಸಬೇಕೆಂದು ಬಯಸಿದ್ದಾಳೆ. ಒಮ್ಮೆ ಸೋಮಲೆಯ ತಮ್ಮನ ಮದುವೆಗೆ ದಂಪತಿಗಳು ಹೊರಟು ಅವರು ಹಿಂದಿರುಗಿ ಬರುವಷ್ಟರಲ್ಲಿ ಕಲ್ಲಿಗನಾಥನಿಗೆ ಕೆನೆಹಾಲು ಕುಡಿಸಿ ಬರಲು ಸಿದ್ಧಳಾಗುತ್ತಾಳೆ ಹಾಗೂ ಕುಡಿಸಿ ಬಂದು ಇದನ್ನು ಆಶ್ರಮದ ವಿದ್ಯಾರ್ಥಿ ಗೆಳೆಯರಿಗೆ ತಿಳಿಸಿ ಅವರಿಂದ ಊರು ಆಶ್ರಮದಲ್ಲಿ ಪ್ರಚಾರವಾಗುತ್ತದೆ. ಊರಿಗೆ ಮರಳಿ ವಿಷಯ ತಿಳಿದ ತಂದೆತಾಯಿ ಸ್ವತಃ ಪರೀಕ್ಷಿಸಲು ಹೊರಟು ಊರ ಜನರು ಕುತೂಹಲದಿಂದ ದೇಗುಲದತ್ತ ಧಾವಿಸುತ್ತಾರೆ. ಇಲ್ಲೊಂದು ಪವಾಡ ನಡೆಯಬಹುದೆಂಬ ಪ್ರೇಕ್ಷಕನ ನಿರೀಕ್ಷೆ ಹುಸಿಯಾಗುವಲ್ಲಿ ಹಿಂದಿನ ದಿನ ಕಾಣಿಸಿಕೊಂಡ ಆಶ್ರಮದ ಗುರು (ದಿನೇಶ್‌ನಾಯ್ಕ ಜಿ) ಮಿತ್ರ ಸತ್ಯಪ್ರಕಾಶ್ ಶಿವ ಮತ್ತು ಬಾಲ ಶಿವರಾಗಿ ಬಂದು ಮುಗ್ಧೆಯಿಂದ ಗುರು ಹಾಲು ಕುಡಿದಿರುತ್ತಾರೆ. ಆದರೆ ಕೊಡಗೂಸು ಶಿವನೇ ಹಾಲು ಕುಡಿದನೆಂದು ನಂಬಿ ಆ ದೃಶ್ಯ ಮುಖವಾಡ ಪಾತ್ರಗಳಲ್ಲಿ ಪ್ಯಾಂಟಸಿಯಾಗಿ ಕನಸಂತೆ ಕಾಲ್ಪನಿಕ ಗೋಚರಿಸುತ್ತದೆ. ಕಡೆಯಲ್ಲಿ ಗುರು ಮತ್ತು ಮಿತ್ರರು ಜನರೆದುರು ಬಯಲಿಗೆ ಬಂದು ಎಲ್ಲರೂ ಸ್ಥಾವರ ದೇವರ ಬದಲು ಇಷ್ಟಲಿಂಗ ಧೀಕ್ಷೆ ಪಡೆಯುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ಆಶ್ರಮದ ಶಿಷ್ಯರು ( ಬಸವರಾಜ ಹೆಚ್, ಪವನ್‌ಕುಮಾರ್ ವೈ ಸಂತೋಷ್ ಕಲಾಲ್) ಗುರು ಶಿಷ್ಯರು ಸಿನಿಮಾದ ಪಾತ್ರಗಳಂತೆ ಮುಗ್ಧ ಮಾತು ಅಭಿನಯದಲ್ಲಿ ರಂಜಿಸುತ್ತಾರೆ. ಆಶ್ರಮದ ಫೀಜಿಗೆ ಎರಡು ದುಗ್ಗಣಿ ತನ್ನಿ ಎಂದರೆ ಈ ಮೂವರು ಮನೆಯಲ್ಲಿ ಸುಳ್ಳು ಹೇಳಿ ಐದು, ಎಂಟು, ಹತ್ತು ದುಗ್ಗಣಿ ಪಡೆದು ಹೊರಗೆ ದೋಸೆ ತಿಂದು ಮಜಾ ಉಡಾಯಿಸುವಲ್ಲಿ ಕಾಲ ಅಂದು ಇಂದು ಒಂದೆಯೇ ಆಗಿದೆ. ನಾವು ಬಾಲ್ಯದಲ್ಲಿ ಮಸಾಲೆ ದೋಸೆ ಆಸೆಗೆ ಹೀಗೆ ಮಾಡಿದ್ದಂಟು. ಇಂದಿನ ಹುಡುಗರು ಕುರ್‌ಕುರೆಗೆ ಹೀಗೆ ಮಾಡುವಾಗ ಪೋಷಕರು ತಾನೇ ಕ್ಯಾಕರೆ.! ಸುಳ್ಳು ಹೇಳಿ ಅಪ್ಪನಿಂದ ೫ ದುಗ್ಗಾಣಿ ಪಡೆದ ಮಗ ಇದಕ್ಕಾಗಿ ಅಪ್ಪ ಸಾಹುಕಾರ್ ಸಿದ್ಧಪ್ಪನಿಂದ ಸಾಲ ಮಾಡಿ ಅವನ ತೋಟಕ್ಕೆ ಕೆಲಸಕ್ಕೆ ಹೋಗಿ ತೆಂಗಿನ ಮರದಿಂದ ಬಿದ್ದು ಕಾಲು ಮುರಿದುಕೊಂಡು ನರಳುವುದು, ಕೊಡಗೂಸುನಿಂದ ಸತ್ಯ ತಿಳಿದು ಮಗ ಪಶ್ಚಾತ್ತಾಪದಿಂದ ಮುಂದೆ ಈ ರೀತಿ ಸುಳ್ಳು ಹೇಳದೆ ಸತ್ಯದಿಂದ ನಡೆದುಕೊಳ್ಳುವುದಾಗಿ ಪಶ್ಚಾತ್ತಾಪ ಪಡುವ ಮನ ಪರಿವರ್ತನೆಯ ದೃಶ್ಯ ಮನೋಜ್ಞವಾಗಿದೆ. ನಾಟಕದಲ್ಲಿ ಬರುವ ಇತರೆ ಪಾತ್ರಗಳು ರತ್ನಕ್ಕ-ನಾಗರತ್ನ ಸಿ ಹಿರೇಮಠ, ಅಜ್ಜಿ-ಭಾಗ್ಯಮ್ಮ ಮತ್ತು ಶ್ಯಾಮ ಶಾಸ್ತ್ರಿ – ಸಾಗರ ದನದಮನಿ, ನಾಟಕದಲ್ಲಿ ಬರುವ ಪೋಷಕ ಪಾತ್ರಗಳನ್ನು ಕ್ವಿಕ್ ಆಗಿ ಧಿರಿಸು ಧರಿಸಿ ಬೇರೆ ಬೇರೆ ಪಾತ್ರ ಬದಲಾವಣೆಯಲ್ಲಿ ಈ ಕೆಲವೇ ಕಲಾವಿದರು ಸಮರ್ಥವಾಗಿ ನಿಭಾಯಿಸಿ ನಾಟಕ ಬೋರಾಗದಂತೆ ಚುರುಕಾಗಿ ಮುನ್ನೆಡೆಸುತ್ತಾರೆ. ನಾಟಕದ ಪರದೆಯಲ್ಲಿ ಬರೆಸಿದ ಆ ಕಾಲದ ಊರು ದೇಗುಲ ಮನೆ ಚಿತ್ರಣ ನಮ್ಮ ಹಳೆಯ ಹಳ್ಳಿ ಮನೆಗಳ ಪ್ರತಿಬಿಂಬವಾಗಿವೆ. ಕಾಲ ದೇಶಗಳನ್ನು ಮೀರಿ ಭಕ್ತಿಯ ಅಭಿವ್ಯಕ್ತಿಯ ರೂಪಕವಾಗಿ ನಾಟಕ ನಿರೂಪಿತವಾಗಿದೆ.

- Advertisement -

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೃತಿ ವಿಮರ್ಶೆ : ಕನ್ನಡದಲ್ಲಿ ಯಕ್ಷಗಾನ ಸಾಹಿತ್ಯ ಶಾಸ್ತ್ರೀಯ ಅಧ್ಯಯನ

ನಾನು ಅತ್ಯಂತ ಚಿಕ್ಕಂದಿನಲ್ಲೇ ಅನೇಕ ಗೊಂಬೆಯಾಟ ಮತ್ತು ಯಕ್ಷಗಾನವನ್ನೂ ನೋಡಿದ್ದೇ. ಆಗಲೇ ಅವುಗಳ ಬಗ್ಗೆ ಆಸಕ್ತಳಾಗಿದ್ದೆ ಪರಿಣಾಮ ನಾನು ಕನ್ನಡ ಎಂ.ಎ.ವಿದ್ಯಾರ್ಥಿಯಾದಾಗ ಜಾನಪದವನ್ನೇ ವಿಶೇಷ ವಿಷಯವನ್ನಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group