ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಡಿಯಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ‘ಛಲದೋಳ್ ದುರ್ಯೋಧನ’ ಪೌರಾಣಿಕ ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ನಾಟಕಕಾರ ಗೊರೂರು ಅನಂತರಾಜು ಮಾತನಾಡಿ, ಕಾವ್ಯೇಷು ನಾಟಕಂ ರಮ್ಯಂ ಎಂಬ ಕವಿವಾಣಿಯಂತೆ ಪೌರಾಣಿಕ ನಾಟಕಗಳು ಇಂದಿಗೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡು ಜನರಿಗೆ ಮನರಂಜನೆ ನೀಡುತ್ತಾ ಬಂದಿವೆ. ಹಳೇ ಮೈಸೂರು ಭಾಗದಲ್ಲಿ ಕುರುಕ್ಷೇತ್ರ ನಾಟಕ ಎಷ್ಟು ಬಾರಿ ಪ್ರದರ್ಶಿತವಾದರೂ ಕಲಾಪ್ರೇಮಿಗಳು ನೋಡಿ ಪ್ರೋತ್ಸಾಹಿಸುತ್ತಿದ್ದಾರೆ. ಇದೇ ಹುರುಪಿನಲ್ಲಿ ಕಲಾತಂಡಗಳು ನಾಟಕ ಪ್ರದರ್ಶನಕ್ಕೆ ಆಗಿಂದಾಗ್ಗೆ ಸಿದ್ಧಗೊಳ್ಳುತ್ತಾ ಬಂದಿವೆ. ನಾಟಕದ ಜನಪ್ರಿಯತೆಗೆ ಹಾಡುಗಾರಿಕೆಯೇ ಪ್ರಧಾನ ಅಂಶವಾಗಿ ನುರಿತ ಹಾರ್ಮೋನಿಯಂ ಮಾಸ್ಟರ್‍ಗಳು ಹೊಸ ಹೊಸ ಕಲಾವಿದರಿಗೆ ಹಾಡು ಸಂಭಾಷಣೆ ಕಲಿಸಿ ರಂಗದ ಮೇಲೆ ಸಮರ್ಥವಾಗಿ ತರಲು ಶ್ರಮಿಸುತ್ತಾರೆ. ನಾಟಕದ ಪ್ರಮುಖ ಪಾತ್ರಗಳಾಗಿ ಕೃಷ್ಣ, ಅರ್ಜುನ, ದುರ್ಯೋಧನ, ಕರ್ಣ, ಅಭಿಮನ್ಯು, ವಿಧುರ ಇವೆಲ್ಲವನ್ನು ಒಬ್ಬನೇ ಕಲಾವಿದ ಕಲಿಯಲು ಪ್ರಯತ್ನ ನಡೆಸಿ ಅಭಿನಯ ಜೊತೆಗೆ ಗಾಯಕನಾಗಿಯೂ ಗುರುತಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ದೇನೆ ಎಂದರು.
ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷರು ರವಿ ಬಿದರೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾವಿದರಾದ ಪಿರುಮನಹಳ್ಳಿ ಮಲ್ಲೇಶಗೌಡರು, ಪೊಲೀಸ್ ಇಲಾಖೆಯ ರಂಗಸ್ವಾಮಿ, ಪ್ರಭಾಕರ್, ನಾಟಕ ನಿರ್ದೇಶಕರು ಪಾಲಾಕ್ಷಾಚಾರ್ ಇದ್ದರು.
ಶ್ರೀ ಕೃಷ್ಣನ ಪಾತ್ರವನ್ನು ಇಬ್ಬರು ಕಲಾವಿದರು ಎಂ.ಟಿ.ತಿಮ್ಮೇಗೌಡ, ವಕೀಲರು ಮತ್ತು ಕಲ್ಲಯ್ಯ ಎಂಸಿಇ ನಿರ್ವಹಿಸಿದರು. ಕಬ್ಬತಿಯ ಶಿಕ್ಷಕರು ಸತೀಶ್ ದುರ್ಯೋಧನ ಪಾತ್ರದಲ್ಲಿ, ಆನಂದಮೂರ್ತಿ ಕರ್ಣ, ಐ.ಎ.ಮಹೇಂದ್ರ ವಕೀಲರು ಭೀಮ, ರವಿ ಕೆ.ಎಸ್. ವಕೀಲರು ಕಿತ್ತನಕೆರೆ ದುಶ್ಯಾಸನ, ನಿಂಗರಾಜು ಅರ್ಜುನ, ವೈಭವ್ ವೆಂಕಟೇಶ್ ವಿಧುರ, ಸೋಮಶೇಖರ್ ಭೀಷ್ಮ, ಎಂ.ರಂಗಸ್ವಾಮಿ ಧೃತರಾಷ್ಟ್ರ, ವೆಂಕಟೇಶ್ ಕರವೇ ಸೈಂಧವ, ಇಂಜಿನಿಯರ್ ಈರಯ್ಯ ಶಕುನಿ, ಕುಮಾರ್ ಅಭಿಮನ್ಯು, ಮಧುಸೂಧನ್ ದ್ರೋಣ ಪಾತ್ರಗಳಲ್ಲಿ ನಟಿಸಿ ನಾಟಕ ಪ್ರೇಕ್ಷಕರ ಮನ ಸೆಳೆಯಿತು.