ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ಚಿತ್ರಕಲೆ ಸಹಕಾರಿ – ಭಾರತಿ ಸನದಿ

0
185

ಮೂಡಲಗಿ: ‘ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವಲ್ಲಿ ಚಿತ್ರಕಲೆಯು ಸಹಕಾರಿಯಾಗಿದೆ’ ಎಂದು ಚಿಕ್ಕೋಡಿ ಡಯಟ್‍ನ ಚಿತ್ರಕಲಾ ಪರಿವೀಕ್ಷಕಿ ಭಾರತಿ ಸನದಿ ಹೇಳಿದರು.

ತಾಲ್ಲೂಕಿನ ನಾಗನೂರದ ಸರ್ಕಾರಿ ಪ್ರೌಢ ಶಾಲೆಯ ಆತಿಥ್ಯದಲ್ಲಿ ಮೂಡಲಗಿ ತಾಲ್ಲೂಕಾ ಚಿತ್ರಕಲಾ ಶಿಕ್ಷಕರ ಸಂಘದವರು ತಾಲ್ಲೂಕು ವ್ಯಾಪ್ತಿಯ ಪ್ರೌಢ ಶಾಲೆಗಳ ಚಿತ್ರಕಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಒಂದು ದಿನದ ಚಿತ್ರಕಲಾ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಪಠ್ಯದೊಂದಿಗೆ ಚಿತ್ರಕಲೆಯ ಕಲಿಕೆಯು ಪ್ರಮುಖವಾಗಿದೆ ಎಂದರು.

ಚಿತ್ರಕಲಾ ಶಿಕ್ಷಕರು ಆಯಾ ಶಾಲೆಗಳಲ್ಲಿ ಮಕ್ಕಳಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿಯನ್ನು ಕೆರಳಿಸಬೇಕು. ಪ್ರತಿ ವರ್ಷವು ನಡೆಯುವ ಇಲಾಖೆಯ ಚಿತ್ರಕಲೆ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದರು.

ಮೂಡಲಗಿ ತಾಲ್ಲೂಕು ಚಿತ್ರಕಲಾ ಶಿಕ್ಷಕರ ಸಂಘ ಮತ್ತು ಶಿಕ್ಷಕರು ಉತ್ತಮ ಕಾರ್ಯ ಮಾಡುತ್ತಿದ್ದು, ಶಿಕ್ಷಣ ಇಲಾಖೆಯು ಹೆಮ್ಮೆ ಪಟ್ಟುಕೊಳ್ಳುವಂತೆಯಾಗಿದೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ನಿರಾಕಾರವಾದ ಸಂಗತಿಗಳನ್ನು ಚಿತ್ರಿಸಿ ಮೂರ್ತಗೋಳಿಸುವ ಮತ್ತು ಜೀವ ತುಂಬುವ ಶಕ್ತಿ ಚಿತ್ರಕಲಾವಿದರಿಗೆ ಇದೆ. ಸಂಗೀತದಂತೆ ಚಿತ್ರಕಲೆಯು ಸಹ ಜನರನ್ನು ತಲುಪುವ ಪ್ರಮುಖ ಕಲೆಯಾಗಿದೆ ಎಂದರು.

ಚಿತ್ರಕಲಾ ಶಿಕ್ಷಕರು ಶಾಲೆಗಳಲ್ಲಿ ಚಿತ್ರಕಲೆಗೆ ಸೀಮಿತವಾಗಿರದೆ ವಿಜ್ಞಾನ, ಸಮಾಜಶಾಸ್ತ್ರ, ಗಣಿತ, ಕನ್ನಡ ಭಾಷೆ ಹೀಗೆ ಎಲ್ಲ ವಿಷಯಗಳಿಗೆ ಪ್ರೇರಕರಾಗಿರಾತ್ತಾರೆ. ವಿದ್ಯಾರ್ಥಿಗಳ ಕಲಿಕೆಗೆ ಚಿತ್ರಕಲೆಯು ಪ್ರೇರಣೆ ನೀಡುತ್ತಿದ್ದು, ಆಯಾ ಶಾಲಾ ವ್ಯವಸ್ಥೆಯು ಚಿತ್ರಕಲೆಯ ಮಹತ್ವ ಬಗ್ಗೆ ವಿದ್ಯಾರ್ಥಿಗಳ ಮತ್ತು ಪಾಲಕರಿಗೆ ಮನವರಿಕೆ ಮಾಡುವ ಕೆಲಸವಾಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅವರಗೋಳದ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಮತ್ತು ‘ಕಲಾ ಶಿಕ್ಷಕಶ್ರೀ’ ಪ್ರಶಸ್ತಿ ಪುರಸ್ಕೃತ ಎ.ಕೆ. ಬಡಿಗೇರ ಮಾತನಾಡಿ, ಹೊಸ ಶಿಕ್ಷಣ ನೀತಿಯಲ್ಲಿ ಚಿತ್ರಕಲೆಗೆ ಪ್ರಾಧಾನ್ಯತೆ ಇರುವುದರಿಂದ ಚಿತ್ರಕಲೆಯು ಹೆಚ್ಚು ಹೆಚ್ಚು ಬೆಳವಣಿಗೆಯಾಗಲಿದೆ ಮತ್ತು ಚಿತ್ರಕಲಾ ಶಿಕ್ಷರಿಗೆ ಬೇಡಿಕೆ ಅಧಿಕವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಗನೂರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸಿದ್ರಾಮ ಕೆ. ಚಿಪ್ಪಲಕಟ್ಟಿ ಅವರು ಮಾತನಾಡಿದರು. ಮೂಡಲಗಿ ತಾಲ್ಲೂಕಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಬಿ. ಕದಮ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಎಂ. ಭಜಂತ್ರಿ ಅವರನ್ನು ಸಂಘದಿಂದ ಸನ್ಮಾನಿಸಿದರು.

ಎ.ಆರ್. ಕುರಬರ, ಐ.ಎ. ಮುಲ್ಲಾ, ಕಡ್ಡಿ, ಕುಮಾರ ಕಾಂಬಳೆ, ಆರ್.ಎಸ್. ಮಗದುಮ್ ಸೇರಿದಂತೆ ತಾಲ್ಲೂಕಿನ 30 ಜನ ಚಿತ್ರಕಲಾ ಶಿಕ್ಷಕರು ಭಾಗವಹಿಸಿದ್ದರು.
ಸುಭಾಷ ಕುರಣೆ ಸ್ವಾಗತಿಸಿದರು, ಬಿ. ಎ. ಬಿರಾದಾರ ನಿರೂಪಿಸಿದರು, ಎ.ಎಸ್. ಪಾಟೀಲ ವಂದಿಸಿದರು.