ಮೂಡಲಗಿ: ವಿದ್ಯಾರ್ಥಿಗಳ ಜೀವನ ಶೈಲಿಯನ್ನು ಸುಧಾರಿಸಿ, ಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ನಿಪ್ಪಾಣಿಯ ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಹೇಳಿದರು.
ಪಟ್ಟಣದ ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪ.ಪೂ ಕಾಲೇಜಿನ ಆವರಣದಲ್ಲಿ ಜರುಗಿದ, ಪಿಯೂಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾವಂತರಿಗೆ ತಮ್ಮ ಜೀವನ, ಜೀವನ ಶೈಲಿ ಬದಲಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ಜೀವನವನ್ನು ಮುನ್ನಡೆಸಲು ಹಲವು ಸದವಕಾಶಗಳು ಒದಗಿ ಬರುತ್ತವೆ ಅದಕ್ಕಾಗಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು.
ವಿದ್ಯಾರ್ಥಿನಿಯ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕು. ಬಾಲ್ಯವಿವಾಹ, ಬಡತನ, ಹೀಗೆ ಮುಂತಾದ ಸಮಸ್ಯೆಗಳಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ವಿದ್ಯಾರ್ಥಿನಿಯರು ಹಿಂದುಳಿಯದೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸಮಾಜಕ್ಕೆ ಒಂದು ಮಾದರಿಯಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಬೆಟಗೇರಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆರ್ ಎಸ್ ಅಳಗುಂಡಿ, ನಿವೃತ್ತ ಉಪನ್ಯಾಸಕ ಎಸ್ ಎಮ್ ಕಮದಾಳ ಹಾಗೂ ಎನ್ ಜಿ ಯರಗಟ್ಟಿ ಮಾತನಾಡಿದರು. ಈ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ ಆರ್ ಸೋನವಾಲ್ಕರ, ಸಂಸ್ಥೆಯ ನಿರ್ದೇಶಕ ಡಿ ವಿ ಮಟ್ಟಿಕಲ್ಲಿ, ಪ್ರಾಚಾರ್ಯ ಪಿ ಎಮ್ ಕುಲಗೋಡ, ಉಪನ್ಯಾಸಕರಾದ ಪಿ ಎಮ್ ಮೇಟಿ, ಜಿ ಎನ್ ಶಿವಾಪೂರ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.