ಮೂಡಲಗಿ : ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ. ನಮ್ಮ ಜೀವನದಲ್ಲಿ ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ ಎಂದು ಪರಿಸರ ಪ್ರೇಮಿ ಹಾಗೂ ಹಳೆಯ ವಿದ್ಯಾರ್ಥಿ ಈರಪ್ಪ ಢವಳೇಶ್ವರ ಹೇಳಿದರು.
ರವಿವಾರದಂದು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣಮಂಟಪದಲ್ಲಿ ಜರುಗಿದ, ಶ್ರೀ ಶಿವಬೋಧರಂಗ ಪ್ರೌಢ ಶಾಲೆಯ 2003-04ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಏರ್ಪಡಿಸಲಾದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಶಿಕ್ಷಣ ಮತ್ತು ಈ ಸಮಾಜದಿಂದ ಗಳಿಸಿದ್ದೇ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಶಿಕ್ಷಕರಾದ ಸಿ.ಎಂ.ಹಂಜಿ ಹಾಗೂ ಆರ್.ಟಿ. ಲೆಂಕೆಪ್ಪನ್ನವರ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನ ಇವತ್ತಿಗೂ ಇದೆ. ವಿದ್ಯೆ ಕಲಿಸಿದ ಗುರುವನ್ನು ಭಗವಂತನಿಗೂ ಮಿಗಿಲಾದ ಸ್ಥಾನದಲ್ಲಿಟ್ಟು ಪೂಜಿಸಲಾಗುವುದು. ಹೀಗಾಗಿಯೇ ಹರ ಮುನಿದರೂ ಗುರು ಕಾಯುವನು ಎಂಬ ವೇದೋಕ್ತಿ ಇದೆ. ಹಳೆಯ ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಅವರ ಸಂದ್ಯಾಕಾಲದಲ್ಲಿ ಕರೆಸಿ ಗೌರವಿಸಿ ಅವರಿಗೆ ನಮನಗಳನ್ನು ಸಲ್ಲಿಸುವುದು ಗುರುಗಳ ಪಾಲಿಗೆ ಅತ್ಯಂತ ಸಾರ್ಥಕತೆಯ ಕ್ಷಣಗಳು ಎಂದರು.
ಈ ವೇಳೆ 2003-04ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕ-ಶಿಕ್ಷಕಿಯರಿಗೆ ಸತ್ಕರಿಸಿ ಗೌರವಿಸಲಾಯಿತು. ಗುರುವಂದನಾ ಕಾರ್ಯಕ್ರಮದ ಸವಿನೆನಪಿಗಾಗಿ ಕಲ್ಯಾಣಮಂಟಪದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ವ್ಹಿ ಎಸ್ ಹಂಚಿನಾಳ, ಸಿ ಎಸ್ ಕಾಂಬಳೆ, ಎ ಆರ್ ಶೇಗುಣಶಿ, ಕೆ ಎಸ್ ಹೊಸಟ್ಟಿ, ಬಿ ಬಿ ಲಗಳಿ, ಆರ್ ಎಮ್ ಕಾಂಬಳೆ, ಬಿ ಕೆ ಕಾಡಪ್ಪಗೋಳ, ಆರ್ ಬಿ ಗಂಗರಡ್ಡಿ, ಯು ಬಿ ದಳವಾಯಿ, ಎಸ್ ಎಸ್ ಕುರಣೆ, ಪಿ ಅಯ್ಯನಗೌಡರ, ಬಿ ವಾಯ್ ಶಿವಾಪೂರ, ವ್ಹಿ ಪಿ ಸೌದಾಗರ, ಎಮ್ ಐ ಶೆಟ್ಟರ, ಶಿಕ್ಷಕಿ ಎಸ್ ಡಿ ವಾಯಕ್, ಮಹಾನಂದ ಕೊಣ್ಣೂರ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.