spot_img
spot_img

ಹೊಸ ಪುಸ್ತಕ ಓದು

Must Read

- Advertisement -

ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವ ಅಂಕಣ ಬರಹಗಳು

ಪುಸ್ತಕದ ಹೆಸರು : ಹೊತ್ತಿನ ಹೆಜ್ಜೆ
ಲೇಖಕರು : ಡಾ. ಬಸವರಾಜ ಸಾದರ
ಪ್ರಕಾಶಕರು : ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರ್ಗಿ, ೨೦೨೩
ಪುಟ : ೧೮೮ ಬೆಲೆ : ರೂ. ೧೭೫
ಲೇಖಕರ ಸಂಪರ್ಕವಾಣಿ : ೯೮೮೬೯೮೫೮೪೭

ಡಾ. ಬಸವರಾಜ ಸಾದರ ಅವರು ನಮ್ಮ ನಾಡು ಕಂಡ ಪ್ರಜ್ಞಾವಂತ ಬರಹಗಾರರಲ್ಲಿ ಒಬ್ಬರು. ಆಕಾಶವಾಣಿ ನಿರ್ದೇಶಕರಾಗಿ ಅವರು ಸಲ್ಲಿಸಿದ ಸೇವೆ ನಾಡವರಿಗೆ ಚಿರಪರಿಚಿತ. ಸೃಜನಶೀಲ ಸಾಹಿತ್ಯದಲ್ಲಿ ಅದರಲ್ಲೂ ಕವಿತೆ, ಪ್ರಬಂಧ, ಕಥಾ ಸಾಹಿತ್ಯ ನಿರ್ಮಾಣದಲ್ಲಿ ಅವರು ಹೆಚ್ಚು ಕೃಷಿ ಮಾಡಿದವರು. ಶರಣ ಸಾಹಿತ್ಯ ಕುರಿತು ಅವರ ಚಿಂತನೆಗಳು ಅತ್ಯಂತ ಮೌಲಿಕವಾಗಿವೆ. ನಿವೃತ್ತಿಯ ನಂತರವೂ ವರ್ತಮಾನದ ಆಗು ಹೋಗುಗಳಿಗೆ ಸ್ಪಂದಿಸುವ ಅವರ ಕ್ರಿಯಾಶೀಲ ಗುಣ ಕಾರಣವಾಗಿ ಆಗಾಗ ಪತ್ರಿಕೆಗಳಿಗೆ ಬರೆದ ೩೬ ಅಂಕಣ ಬರಹಗಳ ಒಂದು ಅಮೂಲ್ಯ ಕೃತಿ ‘ಹೊತ್ತಿನ ಹೆಜ್ಜೆ’.

- Advertisement -

ಕನ್ನಡ ಸಾಹಿತ್ಯದಲ್ಲಿ ಅಂಕಣ ಸಾಹಿತ್ಯಕ್ಕೆ ಅದರದೇ ಆದ ಸುದೀರ್ಘ ಇತಿಹಾಸವಿದೆ. ಅದರಲ್ಲೂ ಹಾ.ಮಾ.ನಾ ಮತ್ತು ಎಚೆಸ್ಕೆ ಅವರು ಪ್ರಜಾವಾಣಿ-ಸುಧಾ ಪತ್ರಿಕೆಗಳಿಗೆ ಬರೆದ ಸುದೀರ್ಘಾವಧಿ ಅಂಕಣ ಬರಹಗಳು ಕನ್ನಡಿಗರ ಮನೆಮಾತಾಗಿವೆ. ಹಾ.ಮಾ.ನಾ ಮತ್ತು ಎಚೆಸ್ಕೆ ಅವರು ಕ್ರಮತಪ್ಪದಂತೆ, ನಿಯಮಿತವಾಗಿ ಅಂಕಣ ಬರೆಯುವ ಮೂಲಕ ಅಂಕಣ ಬರಹಗಾರರಿಗೆ ಆದರ್ಶವಾದವರು. ಅಂಕಣ ಬರಹಗಳು ಆಯಾ ಕಾಲಘಟ್ಟದ ಇತಿಹಾಸದ ಪುನರಾವಲೋಕನಕ್ಕೆ ದಾರಿ ಮಾಡಿಕೊಡುತ್ತವೆ. ಮೈಸೂರುಮಠರು ಬರೆದ ಅಂಕಣ ಬರಹಗಳ ಸಂಕಲನ ‘ಶಿವನ ಡಂಗುರ’, ಹರಿದಾಸ ಭಟ್ಟರ, ‘ಲೋಕಾಭಿರಾಮ’, ನಿರಂಜನರ ‘ದಿನಚರಿಯಿಂದ’, ಹಾಮಾನಾ ಅವರ ಸಲ್ಲಾಪ, ಸಂಪ್ರತಿ ಮೊದಲಗೊಂಡು ೧೭ ಅಂಕಣ ಬರಹ ಸಂಪುಟಗಳು ನಮಗಿಂದು ಇತಿಹಾಸದ ಅಮೂಲ್ಯ ಆಕರಗಳಾಗಿ ಉಳಿದುಕೊಂಡಿವೆ. ಪದ್ಮರಾಜ ದಂಡವತಿ ಅವರ ಅಂಕಣ ಸಂಪುಟಗಳು ಇತ್ತೀಚೆಗೆ ತುಂಬ ಜನಪ್ರಿಯವಾಗಿರುವುದನ್ನು ಗಮನಿಸಬಹುದು. ಈ ಮಾಲಿಕೆಗೆ ಮತ್ತೊಂದು ಮಹತ್ವದ ಕೃತಿಯಾಗಿ ಸೇರ್ಪಡೆಯಾಗುತ್ತಿದೆ ‘ಹೊತ್ತಿನ ಹೆಜ್ಜೆ’.

ಡಾ. ಸಾದರ ಅವರು ಸಮಕಾಲೀನ ಅನೇಕ ಅಸಂಗತ ಘಟನೆಗಳನ್ನು ಕಣ್ಣಾರೆ ಕಂಡು, ಸಮಾಜದ ಮೇಲೆ ಅವುಗಳಿಂದ ಆಗುತ್ತಿರುವ ಅಪಸವ್ಯಗಳನ್ನು ಕುರಿತು ಸಮತೂಕದಿಂದ ಪ್ರತಿಸ್ಪಂದಿಸಿದ ಬರೆಹಗಳೇ ಇಲ್ಲಿರುವುದು ಮುಖ್ಯವಾಗಿ ಗಮನಿಸುವ ಅಂಶ. ಅವರೊಳಗಿನ ಬರಹಗಾರ ಮಹತ್ತಾದುದನ್ನು, ವಿಶಿಷ್ಟವಾದುದನ್ನು, ಮುಖ್ಯವಾದುದನ್ನು ಗಮನಿಸಿ, ಗುಣಗ್ರಾಹಕತೆ, ದೂರದೃಷ್ಟಿ, ನಿಸ್ಪಾಕ್ಷಿಕತೆಯಿಂದ ಬರೆಯುವ ಅವರ ಮನಸ್ಸು ಒಳ್ಳೆಯ ಸಮಾಜಕ್ಕಾಗಿ ಸದಾ ತುಡಿಯುತ್ತಿರುವ ಭಾವವನ್ನು ಇಲ್ಲಿ ನೋಡುತ್ತೇವೆ. ಇಲ್ಲಿಯ ಎಲ್ಲ ೩೬ ಲೇಖನಗಳು ವೈವಿಧ್ಯಮಯ ವಿಶಿಷ್ಟ ವಿಷಯಗಳನ್ನು ಒಳಗೊಂಡಿರುವುದರಿಂದ ಓದಿಗೆ ಯಾವುದೇ ರಸಭಂಗವಾಗುವುದಿಲ್ಲ. ಒಳ್ಳೆಯ ಲಲಿತ ಪ್ರಬಂಧದಂತೆ ಈ ಬರಹಗಳು ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿವೆ.

ಡಾ. ಸಾದರ ಅವರು ‘ಒಂದು ಆರೋಗ್ಯಯುತ ವ್ಯವಸ್ಥೆಯ ಬಗೆಗಿನ ತುಡಿತವೇ ನನ್ನ ಬರವಣಿಗೆ ಹಿಂದಿನ ಅಪೇಕ್ಷೆ’ ಎಂದು ಹೇಳುತ್ತಾರೆ. ‘ನಿಯಮಿತ ಅವಧಿಗೆ ಕಟ್ಟುಬಿದ್ದು ಬರೆಯಲೇಬೇಕೆಂಬ ಹಟದಿಂದ ಅಥವಾ ನಿಯಮ ಹಾಕಿಕೊಂಡು ನಾನು ಇವುಗಳನ್ನು ಬರೆದಿಲ್ಲ. ನನ್ನ ವೃತ್ತಿ, ಓದು, ಜೀವನಾನುಭವ, ಸಾರ್ವಜನಿಕ ಸಂಪರ್ಕ, ವಿವಿಧ ಜನರೊಂದಿಗಿನ ಸಂಬಂಧ, ಆಗಾಗ ನಡೆದ ದೇಶ-ಕಾಲದ ವಿದ್ಯಮಾನಗಳು-ಹೀಗೆ ಇವೆಲ್ಲವುಗಳಿಗೆ ತೋರ್ಪಡಿಸಿದ ಪ್ರತಿಕ್ರಿಯೆಯ ರೂಪದಲ್ಲಿ ಇವು ನನ್ನಿಂದ ತಾವಾಗಿಯೇ ಬರೆಸಿಕೊಂಡಿವೆ’ ಎಂದು ಈ ಬರಹಗಳ ಹಿಂದಿನ ಆಶಯವನ್ನು ವಿವರಿಸುತ್ತಾರೆ.

- Advertisement -

ಇಲ್ಲಿಯ ಎಲ್ಲ ಲೇಖನಗಳು ವಾಸ್ತವ ನೆಲೆಯಲ್ಲಿ ರಚನೆಗೊಂಡಿವೆ. ಒಂದೆರಡು ಲಲಿತ ಪ್ರಬಂಧಗಳ ಮಾದರಿಯಲ್ಲಿದ್ದರೂ ಅವುಗಳ ಆಂರ್ಯವೂ ಕೂಡ ಸಾಮಾಜಿಕ ಕಳಕಳಿಯನ್ನೇ ಹೊಂದಿರುವುದನ್ನು ಗಮನಿಸಬಹುದು. ಲೇಖಕರ ಮಾತಿನಲ್ಲಿ ಅವರೇ ಹೇಳುವಂತೆ ಇಲ್ಲಿರುವ ಪ್ರತಿಯೊಂದು ಬರಹಕ್ಕೂ ಒಂದು ಇತಿಹಾಸವಿದೆ. ಈ ಇತಿಹಾಸವನ್ನು ನೋಡಿ ಮಿಡಿದ ಅವರ ಹೃದಯಸ್ಥ ಕಾಳಜಿಯೇ ಈ ಲೇಖನಗಳ ಹಿಂದಿನ ಶಕ್ತಿಯಾಗಿದೆ.

‘ಸಾಕ್ಷ್ಯ ಆದೀತೇ ಅಪರಾಧಿಗಳ ಆತ್ಮಸಾಕ್ಷಿ’ ಎಂಬ ಮೊದಲ ಲೇಖನದಲ್ಲಿ ಡಾ. ಸಾದರ ಅವರು ನ್ಯಾಯಾಧೀಶರೊಬ್ಬರನ್ನು ನೇರವಾಗಿ  ‘ಅಪರಾಧ ಪ್ರಕರಣದಲ್ಲಿ ತೀರ್ಪುಕೊಡುವಾಗ ಅಪರಾಧಿ ಯಾರೆಂಬುದು ನಿಮಗೆ ಮೊದಲೇ ತಿಳಿದಿರುತ್ತದೆಯೇ?’ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಈಗಿನ ಕಾಲದ ಭ್ರಷ್ಟ ವ್ಯವಸ್ಥೆಯಲ್ಲಿ ಎಲ್ಲರೂ ಮನಸಾಕ್ಷಿ ಎಂಬುದನ್ನು ಕಳೆದುಕೊಂಡಿದ್ದಾರೆ. ಬಸವಣ್ಣನವರ ವಚನದ ಸಾಲು ಉದಾಹರಿಸಿ ‘ಮನಸಾಕ್ಷಿ’ ಎಂಬ ಪದಕ್ಕೆ ಇಂದು ಅರ್ಥವಿದೆಯೇ ಎಂಬುದನ್ನು ಅವಲೋಕನ ಮಾಡುತ್ತಾರೆ. ಅಪರಾಧಿಗಳ ಮನಸ್ಸು ನಿತ್ಯವೂ ಸತ್ಯವನ್ನು ಹತ್ತಿಕ್ಕುತ್ತಲೇ ಇರುತ್ತದೆ ಎಂಬುದರತ್ತ ಗಮನ ಸೆಳೆದು, ‘ಅಪರಾಧಿ ಮನಸ್ಸುಗಳೇ ಪೂರ್ತಿ ಭ್ರಷ್ಟವಾಗಿರುವಾಗ ಅವು ಆತ್ಮಸಾಕ್ಷಿಗೆ ಸಾಕ್ಷ್ಯವಾಗಲು ಸಾಧ್ಯವೇ?’ ಎನ್ನುತ್ತಾರೆ. ‘ನ್ಯಾಯದಾನಕ್ಕೆ ನ್ಯಾಯಾಂಗವೇ ಬೆನ್ನು ತೋರಿಸಬೇಕೆ?’ ಎಂಬ ಬರಹವನ್ನು ಇದೇ ಆಶಯಕ್ಕೆ ಅನುಗುಣವಾಗಿ ಚಿತ್ರಿಸಿದ್ದಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳು ಜರುಗಿದವು. ಈ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಮಾತಿನ ಮೇಲೆ ಹಿಡಿತವಿಲ್ಲದೆ, ಬಾಯಿಗೆ ಬಂದಂತೆ ಮಾತನಾಡಿ ಜನರಿಂದ ಛೀ ಥೂ ಎನಿಸಿಕೊಂಡರು. ಇಂತಹ ರಾಜಕಾರಣಿಗಳ ವಿಚಾರವನ್ನು ಮುನ್ನಲೆಯಾಗಿ ಇಟ್ಟುಕೊಂಡು ‘ಸಮಾಜದ ಆರೋಗ್ಯ ಹದಗೆಡಿಸುತ್ತಿರುವ ಮಾತುಗಳು’ ಎಂಬ ಲೇಖನದಲ್ಲಿ ಅಬ್ರಾಹಂ ಲಿಂಕನ್ ಅವರ ಜೀವನದ ಒಂದು ಘಟನೆಯನ್ನು ವಿವರಿಸುತ್ತ, ನಮ್ಮ ರಾಜಕಾರಣಿಗಳು ಈ ಮಾದರಿಯನ್ನು ಅನುಸರಿಸಬೇಕೆಂಬ ಆಶಯ ವ್ಯಕ್ತಪಡಿಸುತ್ತಾರೆ. ಲಿಂಕನ್ ಅಮೇರಿಕಾ ಅಧ್ಯಕ್ಷನಾಗಿ ಮೊದಲ ಭಾಷಣ ಮಾಡುವ ಸಂದರ್ಭದಲ್ಲಿ ವಿಕೃತ ಮನಸ್ಸಿನ ಸದಸ್ಯನೊಬ್ಬ ‘ನಿಮ್ಮ ಅಪ್ಪ ನಮ್ಮ ಕುಟುಂಬಕ್ಕೆ ಬೂಟು ತಯಾರಿಸಿ ಕೊಡುತ್ತಿದ್ದ’ ಎಂದು ಅಪಹಾಸ್ಯ ಮಾಡಿದಾಗ, ಲಿಂಕನ್ ಸಮಚಿತ್ತದಿಂದ ಕೊಟ್ಟ ಉತ್ತರ ನಿಜಕ್ಕೂ ಲೋಕದ ರಾಜಕಾರಣಿಗಳಿಗೆಲ್ಲ ಒಂದು ಮಾದರಿ ಪಾಠ ಎನ್ನುವುದನ್ನು ಡಾ. ಸಾದರ ತುಂಬ ಅರ್ಥಪೂರ್ಣವಾಗಿ ವಿವರಿಸುತ್ತಾರೆ.

‘ಸಾಯುವ ಮುಂಚಿನ ಅಳುವ ಕೇಳುವವರಾರು…?’ ಎಂಬ ಅಂಕಣದಲ್ಲಿ ವ್ಯಕ್ತಿಯೊಬ್ಬ ಬೇಸಿಗೆ ಬಿಸಿಲಲ್ಲಿ ನೀರು ಸಿಗದೆ ಹೈರಾಣಾದ ಕಾಳಿಂಗ ಸರ್ಪವೊಂದಕ್ಕೆ ನೀರು ಕುಡಿಸಿ ಬಂದ ಘಟನೆಯನ್ನು ದಾಖಲಿಸಿ, ಮನುಷ್ಯತ್ವವನ್ನೇ ಮರೆತು ಅಮೇರಿಕೆಯಲ್ಲಿ ಕರಿಯ ವ್ಯಕ್ತಿಯೊಬ್ಬನ ಮೇಲೆ ಪೊಲೀಸ ಮಾಡಿದ ಅಮಾನವೀಯ ಹಲ್ಲೆಯನ್ನು ವಿವರಿಸುತ್ತ ಜೀವ ಹೋಗುವ ಸಂದರ್ಭದಲ್ಲಿ ಆ ವ್ಯಕ್ತಿ ಹೊರಡಿಸಿದ ಆರ್ತನಾದ ಮತ್ತು ನಿತ್ಯ ಲಕ್ಷಾಂತರ ಪ್ರಾಣಿಗಳ ಹತ್ಯೆ ಮಾಡುವ ಮುಂಚೆ ಅವುಗಳು ಹೊರಡಿಸುವ ಆಕ್ರಂದನ ಈ ಹತ್ಯೆ ಮಾಡುವ ಕ್ರೂರ ಮನುಷ್ಯ ಮನಸ್ಸುಗಳಿಗೆ ಕೇಳುವುದಿಲ್ಲ ಎಂದು ಆತಂಕ ಪಡುತ್ತ ಅಮೇರಿಕೆ ಜಗತ್ತಿನೆದುರು ಹೇಗೆ ತಲೆ ತಗ್ಗಿಸುತ್ತಿದೆ ಎಂಬುದಕ್ಕೆ ‘ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ’ ಎಂಬ ಬಸವವಾಣಿಯನ್ನು ಉದಾಹರಿಸುತ್ತಾರೆ. ವಚನ ಸಂಸ್ಕೃತಿಯ ಆಳವಾದ ಅಧ್ಯಯನ ಡಾ. ಸಾದರ ಅವರಿಗಿರುವುದರಿಂದ ಅವರ ಪ್ರತಿಯೊಂದು ಬರಹದಲ್ಲಿ ಈ ವಚನಗಳ ಸೋದಾಹರಣ ಉಲ್ಲೇಖಗಳು ಬಂದು, ಓದುಗರ ಮನದಾಳದಲ್ಲಿ ಸಂಚಲನವನ್ನುಂಟು ಮಾಡುತ್ತವೆ.

‘ಮುಖವಾಡದ ಮರೆಯ ಅಸಲೀ ಮುಖ’ ಎಂಬ ಲೇಖನ ಡಾ. ಸಾದರ ಅವರು ಹಿರಿಯ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪನವರೊಂದಿಗೆ ಮಾತನಾಡಿದ ಒಂದು ಪ್ರಸಂಗದಿಂದ ಅರಂಭಗೊಳ್ಳುತ್ತದೆ. ಹುಬ್ಬಳ್ಳಿ ಕ್ಯಾಂಪಿನಲ್ಲಿ ಬಸವೇಶ್ವರ ನಾಟಕ ನಡೆಯುವಾಗ, ಬಸವಣ್ಣನ ಪಾತ್ರಧಾರಿಯಾಗಿದ್ದ ಬಾಳಪ್ಪನವರು ಹೊಟೇಲಿನಲ್ಲಿ ಚಹಾ ಕುಡಿಯುವುದನ್ನು ಜನ ಗಮನಿಸಿ, ‘ಬಸವಣ್ಣ ಚಹಾ ಕುಡ್ಯಾಕ್ಹತ್ಯಾನ’   ಎಂದು ಹೇಳಿದ ಮಾತುಗಳನ್ನು ಕೇಳಿ ಅಂದಿನಿಂದ ಚಹಾ ಕುಡಿಯುವುದನ್ನೇ ಬಿಟ್ಟ ಘಟನೆಯನ್ನು ವಿವರಿಸುತ್ತ, ಇಂದಿನ ಕೆಲವು ಪಾತ್ರಧಾರಿಗಳು ಹೇಗೆಲ್ಲ ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸುತ್ತ, ಇಂತವರ ಸಂತತಿ ಕಡಿಮೆಯಾಗಬೇಕಾದರೆ ಕಾನೂನಾತ್ಮಕ ಕ್ರಮಗಳು ಸರಿಯಾದ ರೀತಿಯಲ್ಲಿ ನಡೆಯಬೇಕೆಂಬ ಕಾಳಜಿ ವ್ಯಕ್ತಪಡಿಸುತ್ತಾರೆ.

‘ಮುಲಕ್ಕರಂ ಪ್ರತಿಭಟಿಸಿ ಬಲಿಯಾದ ನಂಗೇಲಿಯ ನೈಜಕಥೆ’ ಲೇಖನ ನಿಜಕ್ಕೂ ಓದುಗರ ಮನದಾಳವನ್ನು ಕಲಕುತ್ತದೆ. ಬ್ರಿಟಿಷರು ಬರುವ ಪೂರ್ವದಲ್ಲಿ ನಮ್ಮ ದೇಶದಲ್ಲಿದ್ದ ಕೆಲವು ಸಂಸ್ಥಾನಿಕರು ಎಷ್ಟು ಕ್ರೂರಿಗಳೂ ಮನುಷ್ಯತ್ವವಿಲ್ಲದವರೂ ಆಗಿದ್ದರು ಎಂಬುದಕ್ಕೆ ಕೇರಳದ ಟ್ರವಾಂಕೋರ್ ಸಂಸ್ಥಾನಿಕರ ಪ್ರದೇಶದಲ್ಲಿ  ಕೆಳವರ್ಗದ ಹೆಣ್ಣುಮಕ್ಕಳು ಮೊಲೆಗಳನ್ನು ತೆರೆದುಕೊಂಡೆ ಬದುಕಬೇಕು, ಅವುಗಳನ್ನು ಮುಚ್ಚಿಕೊಂಡರೆ, ‘ಮೊಲೆಗಂದಾಯ’ ಕಟ್ಟಬೇಕೆಂಬ ವಿಕೃತ ಕಾನೂನು ಜಾರಿಗೆ ತಂದಿದ್ದ ಈ ಸಂಸ್ಥಾನಿಕರ ವಿರುದ್ಧ ನಂಗೇಲಿ ಎಂಬ ಹೆಣ್ಣುಮಗಳು ತನ್ನ ಎರಡು ಮೊಲೆಗಳನ್ನು ತಾನೇ ಕೊಯ್ದು, ಈ ದುಷ್ಟ ವ್ಯವಸ್ಥೆಯ ವಿರುದ್ಧ ಮೊದಲ ಬಾರಿಗೆ ಪ್ರತಿಭಟನೆ ಮಾಡಿದ ರೋಚಕ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ಈ ಕಥೆಯನ್ನು ಡಾ. ಸಾದರ ಅವರು ತುಂಬ ಹೃದಯಸ್ಪರ್ಶಿಯಾಗಿ ದಾಖಲಿಸಿದ್ದಾರೆ. ಓದುಗರ ಮನದಲ್ಲಿ ಈ ಘಟನೆ ನಿಜಕ್ಕೂ ಹೃದಯವನ್ನು ಭಾರವಾಗಿಸುತ್ತದೆ. ಸಂಸ್ಥಾನಿಕರ ಆಡಳಿತದಲ್ಲಿ ಇಂತಹ ಕೆಲವು ಕ್ರೂರ ಪ್ರಸಂಗಗಳು ಜಾರಿಯಲ್ಲಿದ್ದವು. ಕರ್ನಾಟಕದಲ್ಲಿಯ ಒಬ್ಬ ಪ್ರಸಿದ್ಧ ಸಂಸ್ಥಾನಿಕನೊಬ್ಬ ಗರ್ಭಿಣಿ ಮಹಿಳೆಯ ಹೊಟ್ಟೆಯ ಮೇಲೆ ಆನೆ ತುಳಿಸಿ, ಅವಳು ನರಳಾಡುವುದನ್ನು ನೋಡು ವಿಕೃತ ಆನಂದವನ್ನು ಪಡೆಯುತ್ತಿದ್ದ ಎಂಬ ಸಂಗತಿ, ಗಂಡ ಸತ್ತ ಕೂಡಲೆ ಹೆಂಡತಿಯನ್ನು ಚಿತೆಗೆ ತಳ್ಳುವ ಅನಾಗರಿಕ ಕ್ರೂರ ಪದ್ಧತಿಗಳು ನಮ್ಮ ಸಮಾಜದಲ್ಲಿದ್ದವು.  ಇಂತಹ ಅಮಾನವೀಯ ಘಟನೆಗಳ ಮೇಲೆ ಹೆಚ್ಚು ಹೆಚ್ಚು ಬೆಳಕು ಚೆಲ್ಲುವ ಕೆಲಸವಾಗಬೇಕೆಂದು ಲೇಖಕರು ಹೇಳುತ್ತ ‘ವ್ಯವಸ್ಥೆಯ ಒಂದು ವರ್ಗವು ಈ ಘಟನೆಯನ್ನು ಮರೆಮಾಚುವ ನಿರಂತರ ಹುನ್ನಾರ ನಡೆಸಿಕೊಂಡೇ ಬಂದಿದೆ’ ಎನ್ನುತ್ತಾರೆ. ಇಂತಹದೇ ಇನ್ನೊಂದು ಮನಕಲಕುವ ಘಟನೆ ‘ತಂದೆಗೇ ತನ್ನೆದೆ ಹಾಲು ಕುಡಿಸಿ ಬದುಕಿಸಿದ ಮಮತಾಮಯಿ ಮಗಳು’ ಎಂಬ ಲೇಖನದಲ್ಲಿ ಡಾ. ಸಾದರ ಅವರು ತುಂಬ ಭಾವಪೂರ್ಣವಾಗಿ ವಿವರಿಸಿದ್ದಾರೆ.

‘ಅಹಂಕಾರ ನಿರಸನಕ್ಕೆ ಆದಿಪಾಠ’ ಬರಹದಲ್ಲಿ ಭರತ ಬಾಹುಬಲಿ ಅವರ ಜೀವನದ ಘಟನೆಯನ್ನು ಆಧರಿಸಿ, ಆದಿಪುರಾಣದ ಈ ಘಟನೆ ವರ್ತಮಾನಕ್ಕೂ ಅತ್ಯಮೂಲ್ಯ ಸಂದೇಶವನ್ನು ಬೀರುತ್ತದೆ ಎಂದು ಹೇಳುತ್ತಾರೆ. ‘ಅಪಾರ್ಥಗೊಂಡ ಅರ್ಥಪೂರ್ಣ ಶಬ್ದ ಸಂಪತ್ತು’ ಎಂಬ ಬರಹವನ್ನು ನಮ್ಮ ಕನ್ನಡ ಪ್ರಾಧ್ಯಾಪಕರು ಮುಖ್ಯವಾಗಿ ಗಮನಿಸಬೇಕು. ಶರೀಫರ ಹಾಡೊಂದನ್ನು ಅಪಾರ್ಥವಾಗಿ ಹಾಡಿದ ರೀತಿಯ ಘಟನೆಯನ್ನು ಉಲ್ಲೇಖಿಸುತ್ತ ಬೇಂದ್ರೆಯವರ ದೇಶಿ ನೆಲೆಯ ಶಬ್ದ ಸಂಪತ್ತು ಈ ನೆಲದ ಭಾಷಾ ಸೌಂದರ್ಯವನ್ನು ಇಮ್ಮಡಿಸಿದ ಬಗೆಯನ್ನು ಹೇಳುತ್ತ, ಸಿನೆಮಾದವರು, ಹಾಡುಗಾರರು ಈ ಶಬ್ದಗಳನ್ನು ಅಪಮೌಲ್ಯೀಕರಣ ಮಾಡಬಾರದೆಂದು ಮನವಿ ಮಾಡಿಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ‘ಅರ್ಥಾಂತರಗೊಂಡ, ಜೋಗಿಯ ‘ಅರ’ಮನೆ- ‘ತಳ’ಮನೆಗಳು’ ಎಂಬ ಬರಹ ಶುದ್ಧ ಸಾಹಿತ್ತಿಕ ಚಿಂತನೆಯ ಕಲಾಸಕ್ತಿ-ಕಾಮಾಸಕ್ತಿಯ ವಾಸ್ತವ ನೋಟವನ್ನು ತಿಳಿಸುತ್ತದೆ.

‘ರಿಯಾಲಿಟಿ ಶೋ ಎಂಬ ಅನುಕರಣೆ (ಕಾಪೀ)ಯಾಟ’ ಎಂಬ ಕಿರು ಬರಹದಲ್ಲಿ ಇಂದು ದೃಶ್ಯ-ಶ್ರವ್ಯ ವಾಹಿನಿಗಳಲ್ಲಿ ಬರುತ್ತಿರುವ ಎಲ್ಲ ಬಗೆಯ ರಿಯಾಲಿಟಿ ಶೋಗಳು ಕೇವಲ ಪ್ರತಿಭೆಯ ನಕಲಾಗಿವೆ. ‘ಎಷ್ಟು ಕಾಲ ಹಾಡಿದ್ದನ್ನೇ ಹಾಡಿಸುವುದು? ಕುಣಿದವರೇ ಕುಣಿಯುವುದು? ಪ್ರಸಾರ ಮಾಡಿದ್ದನ್ನೇ ಮತ್ತೆ ಮತ್ತೆ ಪ್ರಸಾರ ಮಾಡುವುದು? ….ಮೂಲಪ್ರತಿಭೆಗಳನ್ನು  ಶೋಧಿಸುವ ರಿಯಲ್ ರಿಯಾಲಿಟಿ ಶೋಗಳನ್ನು ಪ್ರದರ್ಶಿಸುವ ಪ್ರಯತ್ನವನ್ನೇಕೆ ಮಾಡಬಾರದು?’ ಎಂಬ ಯೋಚನಾ ಲಹರಿಯನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.
‘ಹಸಿವು ನೀಗಿಸುವ ಅಹಾರಕ್ಕೂ ಧರ್ಮದ ಲೇಬಲ್ಲೇ?’ ಎಂಬ ಲೇಖನದಲ್ಲಿ ತಮ್ಮ ಸ್ವಂತ ಅನುಭವದ ಘಟನೆಗಳ ಮೂಲಕ ಜಾತಿ ವ್ಯವಸ್ಥೆ ಮತ್ತು ಆಹಾರ ಸ್ವೀಕಾರ ವಿಷಯದಲ್ಲಿ ನಮ್ಮ ಜನ ಇನ್ನೂ ಎಷ್ಟು ಮತಿಹೀನರಾಗಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಇಡೀ ಲೇಖನವನ್ನು ಉತ್ತರ ಕರ್ನಾಟಕದ ಜವಾರಿ ಧಾರವಾಡದ ದೇಶೀ ಭಾಷೆಯಲ್ಲಿ ಬರೆದಿರುವುದು ಓದುಗರಿಗೆ ಆಪ್ಯಾಯಮಾನವಾಗಿದೆ.

‘ವೈದ್ಯ ದೇವರು’ ‘ಸಾವನ್ನು ಸದಾ ಬೆನ್ನ ಹಿಂದೆಯೇ ಕಟ್ಟಿಕೊಂಡವರು’ ಮತ್ತು ‘ಡಾಕ್ಟರ್… ಡಾಕ್ಟರೇಟ್’ ಮೂರು ಲೇಖನಗಳಲ್ಲಿ ಡಾ. ಸಾದರ ಅವರು ತಾವು ಕಂಡುಂಡ ವಾಸ್ತವ ಘಟನೆಗಳ ನೈಜ ಚಿತ್ರಣವನ್ನು ನಿರೂಪಿಸಿದ್ದಾರೆ. ಒಬ್ಬ ವೈದ್ಯರು ಸಿಜೇರಿಯನ್ ಹೇಗೆ ಮಾಡುತ್ತಾರೆ ಎಂಬುದನ್ನು ಪ್ರತ್ಯಕ್ಷ ತೋರಿಸಿದ ಘಟನೆ, ರೈಲಿನಲ್ಲಿ ಪ್ರಯಾಣಿಸುವಾಗ ಡಾ. ಸಾದರ ಎಂಬ ಹೆಸರು ಗಮನಿಸಿ, ಇವರ ಹತ್ತಿರ ತಂದೆಯ ರೋಗಕ್ಕೆ ಪರಿಹಾರ ಕೇಳಲು ಬಂದ ಪ್ರಸಂಗ ಎರಡೂ ಘಟನೆಗಳು ಓದುಗರಲ್ಲಿ ವಿಸ್ಮಯವನ್ನುಂಟು ಮಾಡುತ್ತವೆ.

‘ಬಂಗಾರದ ಪದಕಗಳೆಂಬ ಚಿನ್ನದ ಜಿಂಕೆಗಳು’ ಲೇಖನದಲ್ಲಿ ಅನೇಕ ಪ್ರತಿಭಾವಂತರು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕಗಳನ್ನು ಗಳಿಸುತ್ತಾರೆ. ಆದರೆ ಆ ಚಿನ್ನದ ಪದಕಗಳು ಅವರ ಭವಿಷ್ಯತ್ತಿನ ಬದುಕಿನಲ್ಲಿ ಎಳ್ಳಷ್ಟು ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ಚಿನ್ನದ ಪದಕಗಳು ಒಂದು ರೀತಿಯಲ್ಲಿ ಚಿನ್ನದ ಮಾಯಾಜಿಂಕೆಗಳಾಗಿವೆ ಎಂಬ ಕಟುವಾಸ್ತವ ಸತ್ಯವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

‘ನನ್ನ ತಲೆಯ ಕಷ್ಟದ ಕಷ್ಟ’ ಲೇಖನ ಒಂದು ಸುಂದರ ಲಲಿತಪ್ರಬಂಧವಾಗಿದೆ. ಇದನ್ನೊಂದು ಲಘು ಲಹರಿಯಾಗಿ ಓದಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರ ತಲೆ ಕೂದಲಿನ ವಿಷಯದ ಅನೇಕ ಪ್ರಸಂಗಗಳು ಓದುಗರಲ್ಲಿ ನಗೆ ಉಕ್ಕಿಸುತ್ತವೆ. ‘ಕಲಬುರ್ಗಿ ಗುರುಗಳ ಶ್ಯಾಣ್ಯಾತನದ ಸಂಶೋಧನಾ ಲಹರಿ’ ಈ ಲೇಖನವೂ ಒಂದು ಲಲಿತಪ್ರಬಂಧದ ಮಾದರಿಯನ್ನು ಹೊಂದಿದೆ.

‘ಆಕಾಲದ ಮಳೆ, ಕೊರೋನಾ ಹಳ್ಳಿಗಳ ಚದುರಿದ ಚಿತ್ರಗಳ ಕೊಲ್ಯಾಜ್’ ಲೇಖನ ಶುದ್ಧ ದೇಶೀಭಾಷೆಯಲ್ಲಿ ಬರೆದ ಒಂದು ಮಹತ್ವದ ಲೇಖನ. ಹಳ್ಳಿಗಳಲ್ಲಿ ಬಂದ ಅತಿವೃಷ್ಟಿ-ಕರೋನಾ-ಸಾವು ನೋವು ಮೊದಲಾದವುಗಳ ನಡುವೆ ಜನಸಮುದಾಯ ನಡೆದುಕೊಂಡ ರೀತಿ, ಬಾಳು ಸಾಗಿಸಿದ ದಾರಿಯನ್ನು ಕುರಿತು ಭಾವನಾತ್ಮಕ ನೆಲೆಯಲ್ಲಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ನೀತಿ ಧರ್ಮ ಮಾರಿಕೊಂಡ ಮೂರ್ಖಪ್ರಭುತ್ವದಲ್ಲಿ ಉಂಡವನೇ ಜಾಣ’ ಮತ್ತು ‘ಕರಪ್ಟಾಕ್ರಸಿಯತ್ತ ಆಡಳಿತ ವಿಕೇಂದ್ರೀಕರಣ’ ಎರಡು ಲೇಖನಗಳು ನಮ್ಮ ಪ್ರಸ್ತುತ ರಾಜಕೀಯದ ಮೇಲೆ ಬೆಳಕು ಚೆಲ್ಲುತ್ತವೆ. ನಮ್ಮ ಹಳ್ಳಿಗಳಂತೂ ವಿಕೇಂದ್ರೀಕರಣದ ನೆಪದಲ್ಲಿ ಯಾವೆಲ್ಲ ಬದಲಾವಣೆಗೆ ಒಳಗಾಗಿ, ಎಷ್ಟೆಲ್ಲ ಶೋಷಣೆ ನೋವು ಸಂಕಟಗಳಿಗೆ ಕಾರಣವಾಗಿವೆ ಎಂಬುದರತ್ತ ಗಮನ ಸೆಳೆಯುತ್ತಾರೆ.

‘ಕ್ರೌರ್ಯದ ಬೆಂಕಿಯ ಮೇಲಿನ ಕುದಿ ಎಸರು’ ಲೇಖನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾದ ವಿಜಯಾ ಅವರ ‘ಕುದಿ ಎಸರು’ ಕೃತಿಯ ಅವಲೋಕನೆಯೊಂದಿಗೆ, ಅವರ ಸಾಧನೆಯ ಹಿಂದಿನ ನೋವುಗಳನ್ನು ಅತ್ಯಂತ ಹೃದಯಂಗಮವಾಗಿ ಚಿತ್ರಿಸಿದ್ದಾರೆ.

‘ಬಹುತ್ವಕ್ಕೆ ಮಾರಕವಾಗುತ್ತಿರುವ ಆಕಾಶವಾಣಿ’ ಮತ್ತು ‘ಮತ್ತೊಮ್ಮೆ ಮುಖ್ಯಾಂಶಗಳು’ (ಏನಾಗಿದೆ ಆಕಾಶವಾಣಿ? ಏನಾಗಬೇಕು ಈ ವಾಣಿ?) ಎಂಬ ಎರಡು ಲೇಖನಗಳು ಅವರ ವೃತ್ತಿ ಬದುಕಿನ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಮೂಡಿ ಬಂದವುಗಳಾಗಿವೆ. ಸರಕಾರದ ನಿಯಮಗಳು ಕಾರಣವಾಗಿ ಆಕಾಶವಾಣಿ ಬಹುತ್ವಕ್ಕೆ ಹೇಗೆಲ್ಲ ಮಾರಕವಾಗಬಹುದು ಮತ್ತು ಆಕಾಶವಾಣಿ ಈ ಜಾಗತೀಕರಣದ ಸುಳಿಗಾಳಿಯಲ್ಲಿ ಹೇಗೆ ಮೈಕೊಡವಿಕೊಂಡು ಮೇಲೇಳಬೇಕು ಎಂಬುದನ್ನು ವಿವರಿಸಿದ್ದಾರೆ.

‘ಅನುಭಾವಿ ಸಾಹಿತ್ಯ ಸಾಧಕ ಡಾ. ಗುರುಲಿಂಗ ಕಾಪಸೆ ಸಂದರ್ಶನ’ ಮತ್ತು ‘ಪ್ರಸಾರವಾಗದ ಒಂದು ಚಂಪಾ ಸಮ್-ದರ್ಶನ’ ಎರಡು ಬರಹಗಳಲ್ಲಿ ಡಾ. ಸಾದರ ಅವರು ಮಾಡಿದ ಸಂದರ್ಶನದ ಪಾಠಗಳಿವೆ. ಕಾಪಸೆ ಅವರೊಂದಿಗಿನ ಸಂದರ್ಶನ ಮಯೂರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು, ಆದರೆ ಚಂಪಾ ಅವರೊಂದಿಗಿನ ಸಂದರ್ಶನ ಪ್ರಕಟವಾಗಿರಲಿಲ್ಲ. ಮೊದಲ ಬಾರಿಗೆ ಇಲ್ಲಿ ಬೆಳಕು ಕಾಣುತ್ತಿದೆ. ಕಾಪಸೆ ಅವರ ಸಂದರ್ಶನ ಅತ್ಯಂತ ರೋಚಕವಾಗಿದೆ. ಅನುಭಾವಿ ಜಗತ್ತಿನ ಅನೇಕ ಸೂತ್ರರೂಪದ ಚಿಂತನೆಗಳು ಇಲ್ಲಿ ನಮಗೆ ದೊರೆಯುತ್ತವೆ.

‘ಭಾಳ ಸಂತೋಷ ಆದದ್ದಂದ್ರ, ಅವ್ವ ಸತ್ತಾಗ…’ ಎಂಬ ಕಿರು ಲೇಖನ ಓದುಗರ ಗಮನ ಸೆಳೆಯುತ್ತದೆ. ಡಾ. ಸ.ಜ.ನಾಗಲೋಟಿಮಠ ಅವರನ್ನು ಒಮ್ಮೆ ಡಾ. ಸಾದರ ಅವರು ಸಂದರ್ಶನ ಮಾಡಿದಾಗ, ‘ಜೀವನದೊಳಗ ನೀವು ಅತ್ಯಂತ ಸಂತೋಷಪಟ್ಟ ಪ್ರಸಂಗ ಯಾವುದು” ಎಂದು ಕೇಳುತ್ತಾರೆ. ಆ ಮಾತಿಗೆ ತಕ್ಷಣ ಸಜನಾ ಅವರು ‘ಭಾಳ ಸಂತೋಷ ಆದದ್ದಂದ್ರ ಅವ್ವ ಸತ್ತಾಗ’ ಎಂದು ಉತ್ತರಿಸುತ್ತಾರೆ. ಇದನ್ನಷ್ಟೇ ಓದಿದರೆ, ಓದುಗರ ಮನದಲ್ಲಿ ಬೇರೊಂದು ಅರ್ಥ ಬರುವ ಸಾಧ್ಯತೆ ಇದೆ. ಆದರೆ ಇಡೀ ಬರಹವನ್ನು ಓದಿದಾಗ, ಅಕ್ಷರಶಃ ಕಣ್ಣಂಚಿನಲ್ಲಿ ನೀರು ಬರುತ್ತವೆ. ಕ್ಯಾನ್ಸರ್ ಕಾಯಿಲೆಯಿಂದ ತಾಯಿ ಅನುಭವಿಸುತ್ತಿರುವ ನೋವನ್ನು ನೋಡಲಾರದೆ ತುಂಬ ನೊಂದಿದ್ದ ಸಜನಾ ಅವರು ತಾಯಿ ಸತ್ತಾಗ ಆ ನೋವಿಂದ ತಾಯಿ ಮುಕ್ತಿ ಪಡೆದಳಲ್ಲ ಎಂಬ ಸಮಾಧಾನ ತಾಳಿದ ಸಂಗತಿಯನ್ನು ಡಾ. ಸಾದರ ಅವರ ಮುಂದೆ ಹೇಳುತ್ತಾರೆ.

‘ಸ್ಮರಣೆ-ಶ್ರದ್ಧಾಂಜಲಿಗಳಷ್ಟೇ ಸಾಕೆ ಸಿದ್ಧೇಶ್ವರ ಶ್ರೀಗಳದು…?’ ಎಂಬ ಲೇಖನ ಸಿದ್ಧೇಶ್ವರ ಸ್ವಾಮಿಗಳ ಘನ ವ್ಯಕ್ತಿತ್ವವನ್ನು ತಿಳಿಸುವುದರೊಂದಿಗೆ, ಅವರು ಬೋಧಿಸಿದ ತತ್ವ ಸಂದೇಶಗಳ ಪಾಲನೆಯಲ್ಲಿ ನಾವೆಷ್ಟು ಮುಂದಾಗಿದ್ದೇವೆ ಎಂದು ಅತ್ಮಾವಲೋಕನ ಮಾಡಿಕೊಳ್ಳಲು ಓದುಗರ ಮನದಲ್ಲಿ ಆಲೋಚನೆಯನ್ನು ಮೂಡಿಸುತ್ತದೆ. ಪ್ರಾಯಶಃ ಮುಂದೆ ತಮ್ಮ ಅನುಯಾಯಿಗಳು ಸ್ಮಾರಕ ಕಟ್ಟಿ, ಹಣ ಗಳಿಸುವ ಮಾರ್ಗ ಕಂಡುಕೊಳ್ಳಬಾರದೆಂದು, ತಮ್ಮ ದೇಹವನ್ನು ಅಗ್ನಿಗೆ ಅರ್ಪಿಸಿರಿ ಎಂದು ಉಯಿಲು ಬರೆದರೆಂದು ಕಾಣುತ್ತದೆ. ಇಂತಹ ಪೂಜ್ಯರ ಆದರ್ಶದ ಒಂದು ಸೂತ್ರವನ್ನಾದರೂ ನಾವು ಪಾಲಿಸಬೇಕೆಂದು ಡಾ. ಸಾದರ ಅವರು ಕೇಳಿಕೊಳ್ಳುತ್ತಾರೆ.

‘ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ.ಗಳ ಅಂತರ್-ಮಂತರ್’ ಎಂಬ ಲೇಖನ ಅವರ ಬದುಕಿನ ಒಂದು ಮುಖ್ಯ ಘಟನೆಯನ್ನು ಆಧರಿಸಿದ ಲೇಖನ. ತಾವು ಪ್ರಾಧ್ಯಾಪಕರಾಗಬೇಕೆಂದು ಬಯಸಿ ಮಾಡಿದ ಪ್ರಯತ್ನಗಳೆಲ್ಲ ಹೇಗೆ ವಿಫಲವಾದವು? ಇದಕ್ಕೆಲ್ಲ ಮುಖ್ಯವಾಗಿ ಏನು ಕಾರಣ? ಎಂಬುದನ್ನು ಸುದೀರ್ಘವಾಗಿ ಇಲ್ಲಿ ಅವಲೋಕಿಸಿದ್ದಾರೆ. ಭ್ರಷ್ಟ ವ್ಯವಸ್ಥೆ ಕಾರಣವಾಗಿ, ತಮಗೆ ನೌಕರಿ ಸಿಗಲಿಲ್ಲವೆಂಬುದನ್ನು ತುಂಬ ನೋವಿನಿಂದ ಅಳಲು ತೋಡಿಕೊಂಡಿದ್ದಾರೆ. ಪ್ರತಿಭಾವಂತ ಬಡ ಮಕ್ಕಳು ಹೀಗೆ ನೌಕರಿಯಿಂದ ವಂಚಿತರಾಗುತ್ತಿರುವುದರ ಮೇಲೆ ಬೆಳಕು ಚೆಲ್ಲುವ ಮೌಲಿಕ ಲೇಖನವಿದು.

ಒಟ್ಟಾರೆ ಇಲ್ಲಿಯ ಎಲ್ಲ ಲೇಖನಗಳು ವರ್ತಮಾನದ ಅನೇಕ ಸಮಸ್ಯೆ-ಸವಾಲುಗಳ ಮೇಲೆ ಕ್ಷಕಿರಣ ಬೀರುತ್ತವೆ. ರಾಜಕಾರಣ-ಆಡಳಿತ-ನ್ಯಾಯ್ಯಾಂಗ ವ್ಯವಸ್ಥೆಯ ಲೋಪದೋಷಗಳು, ಅವು ಸಾಗಬೇಕಾದ ರೀತಿ, ನಡೆಯಬೇಕಾದ ದಾರಿಯ ಬಗ್ಗೆ ಮಾರ್ಗಪಥವನ್ನು ತೋರುವ ಚಿಂತನೆಗಳು ಇಲ್ಲಿವೆ. ಪದ್ಮರಾಜ ದಂಡಾವತಿ ಅವರು ‘ಗಾಢ ಕಾಳಜಿಯ ಲೇಖನಗಳು’ ಎಂಬ ಉತ್ತಮ ಪ್ರವೇಶಿಕೆಯನ್ನು ಬರೆದಿದ್ದಾರೆ. ಮುನ್ನುಡಿ ರೂಪದ ಈ ಪ್ರವೇಶಿಕೆಯಲ್ಲಿ ಕೃತಿಯ ಒಟ್ಟು ಮೌಲ್ಯವನ್ನು ಸಾಕ್ಷೀಕರಿಸಿದ್ದಾರೆ. ಡಾ. ಬಸವರಾಜ ಸಾದರ ಅವರೇ ‘ಒಂದೊಂದು ಬರಹಕ್ಕಿದೆ ಒಂದೊಂದು ಇತಿಹಾಸ’ ಎಂಬ ಲೇಖಕರ ನುಡಿಯಲ್ಲಿ ಇಲ್ಲಿಯ ಎಲ್ಲ ಲೇಖನಗಳ ಹುಟ್ಟಿನ ಹಿಂದಿನ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಯಾವುದೇ ಒಂದು ಲೇಖನ ಬರೆಯಬೇಕಾದರೆ, ಅದು ಮೊದಲು ಲೇಖಕನಲ್ಲಿ ತುಡಿತವಾಗಬೇಕು, ಆ ತುಡಿತದ ತೀವ್ರತೆಯ ಪರಿಣಾಮವಾಗಿ ಸೃಜನಶೀಲ ರೂಪಕದ ಮಾನದಲ್ಲಿ ಇಂತಹ ಬರಹಗಳು ಒಡಮೂಡುತ್ತವೆ ಎಂಬುದಕ್ಕೆ ಈ ಕೃತಿ ಉಜ್ವಲ ನಿದರ್ಶನವಾಗಿದೆ.

ಡಾ. ಬಸವರಾಜ ಸಾದರ ಅವರು ಮೃದು ಹೃದಯಿಗಳು, ಸಾತ್ವಿಕರು, ಸಜ್ಜನರು. ಆದರೆ ಸಮಾಜದಲ್ಲಿ ನಡೆಯುತ್ತಿರುವ ಅನೇಕ ಅಸಂಗತ-ಅಪಸವ್ಯಗಳಿಗೆ ತಮ್ಮದೇ ಆದ ಧಾಟಿಯಲ್ಲಿ ಚಾಟಿ ಬೀಸುತ್ತಾರೆ. ನಾನು ಕೆಲವು ದಿನಗಳ ಹಿಂದೆ ಒಬ್ಬ ವ್ಯಕ್ತಿಯ ಬಗ್ಗೆ ತುಂಬ ಖಾರವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ. ಆಗ ಡಾ. ಸಾದರ ಅವರು ‘ನಿಮ್ಮ ಸಿಟ್ಟು ಈ ರೀತಿಯ ಅಸಾಂವಿಧಾನಕ ಪದಗಳ ಮೂಲಕ ಹೊರಬರಬಾರದು’ ಎಂದು ಸೂಚ್ಯವಾಗಿ ನನ್ನ ತಪ್ಪನ್ನು ತಿಳಿಸಿದ್ದರು. ಇಂತಹ ಸದುವಿನಯದ ವಿದ್ವಾಂಸರು ನಮ್ಮ ಮಧ್ಯದಲ್ಲಿರುವುದು ಸಹೃದಯ ಓದುಗರ ಸೌಭಾಗ್ಯವೆಂದು ನಾನು ಭಾವಿಸಿದ್ದೇನೆ. ಅವರ ಅಂಕಣ ಬರಹಗಳು ಮತ್ತೆ ಮತ್ತೆ ಪ್ರಕಟಗೊಳ್ಳಲಿ, ಈ ಮೂಲಕ ಕನ್ನಡ ಅಂಕಣ ಪ್ರಪಂಚ ಸಿರಿವಂತಗೊಳ್ಳಲಿ ಎಂದು ಆಶಿಸುವೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group