ಪರಿಸರ ನೀ ಉಳಿಸು ಸರಸರ
ನಿನ್ನ ಪಾಪಗಳೆಲ್ಲವ ಕ್ಷಮಿಸಿ
ಮಾತೃ ಹೃದಯದಿ ಹರಸುತಿಹಳು ಭೂ ಮಾತೆ
ಸ್ವಾರ್ಥಕಾಗಿ ಆಕೆಯ ಒಡಲ
ಬಗೆಯುವೆ ಏಕೆ..ಓ ಮೂಢಾ !!
ನಗರೀಕರಣದ ನೆಪದಲಿ
ವೃಕ್ಷಗಳ ಕಡಿದೆ, ಬೆಟ್ಟಗುಡ್ಡಗಳ ಆಪೋಶನ ಮಾಡಿದೆ,
ಸುಂದರ ಪ್ರಕೃತಿಯ ಕೊಂದು,
ಬಾರ್,ರೆಸಾರ್ಟಗಳ ಮಾಡಿ ನೀ ಉದ್ಧಾರವಾದೆ..
ಆಧುನೀಕರಣದ ನೆಪದಲಿ
ಭೂತಾಯಿಯ ಉಸಿರಾದ
ಬೆಟ್ಟಗುಡ್ಡಗಳ ಬಗೆದೆ,
ಹಸಿರು ಮರಗಳ ಜೀವಂತ ಕೊಂದೆ,
ಎಲ್ಲಕೂ ಸಮಾಜದ ಪ್ರಗತಿಯ ನೆಪ ಹೇಳಿದೆ..
ಮಲೆನಾಡು ಹಸಿರು, ಗುಡ್ಡಬೆಟ್ಟಗಳು ಕರಗಿ
ಬಯಲಾಯಿತು,ಮಳೆ ಹೋಯಿತು
ಬರ ಬಂದು ಕಾಡಿತು,ಮಗದೊಮ್ಮೆ
ಅತಿವೃಷ್ಟಿಯಾಯ್ತ..
ನಿನ್ನ ಕಣ್ಣೆದುರಲ್ಲೇ
ಗುಡ್ಡಗಳು ಕುಸಿದವು,
ಮನೆಗಳು ಮುಳುಗಿದವು
ಬದುಕಿನ ಮಾರಣಹೋಮವಾಯ್ತು ಹಸಿರಿಲ್ಲದೆ ಬದುಕು ಬೆಂಗಾಡಾಯ್ತು,
ರೋಗರುಜಿನಗಳ ಬೀಡಾಯ್ತು…
ಖಾದಿಗಳಿಗೆ ಕುರ್ಚಿಯ ಚಿಂತೆ,
ಕಾವಿಗಳಿಗೆ ಧರ್ಮದ ಸಂತೆ,
ವ್ಯಾಪಾರಿಗಳಿಗೆ ಲಾಭದ ಕಂತೆ,
ಪರಿಸರ ಉಳಿಸುವರಾರು..??
ಪರಿಸರ ಪೋಷಣೆ ಯಾರ ಹೊಣೆ ?
ಸರ್ಕಾರವೇ,ಸಮಾಜವೇ,ಧರ್ಮವೇ
ಯಾರು ಹೊರುವರು ಭೂಮಾತೆಯ ಜವಾಬ್ದಾರಿ !!
ಹಸಿರು ನಾಶ ಮಾನವ ಜೀವದ ವಿನಾಶ,
ಪರಿಸರದ ಜೊತೆ ನೀನೂ ಬದುಕು,
ಹಸಿರು ಬೆಳಗಿಸಿ, ನೀನೂ ಬೆಳಗು.
ನೀ ಹುಟ್ಟಿದ ದಿನ,
ಹಿರಿಯರ ಮರಣದ ನೆನಪಿನ ದಿನ,
ನಿಮ್ಮಪ್ಪ ಅಮ್ಮನ ವಿವಾಹದ ನೆನಪಿನ ದಿನ,
ನಿನ್ನ ಪ್ರೀತಿಯ ಮಕ್ಕಳ ಜನ್ಮದಿನ
ಪ್ರತಿ ವರ್ಷ ಒಂದೊಂದು ಸಸಿಯನೆಡು..
ನಿನ್ನ ಸುತ್ತ ಹಸಿರುಕೋಟೆ ಬೆಳೆದು,
ಭೂತಾಯಿ ಸಂತಸದಿ ನಲಿವುದ ನೋಡಿ ಹರ್ಷಪಡು,
ನಿನ್ನ ಹಿರಿಯರಂತೆ ನೀ ಚಿರಕಾಲ ಬಾಳು..
ನಿನ್ನ ಮುಂದಿನ ಪೀಳಿಗೆಗೆ
ಹಸಿರು ಪರಿಸರದ ಉಡುಗೊರೆ ನೀ ನೀಡು ….
(ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಚಿಸಿದ ಕವನ)
ಡಾ.ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತಿನ ಸತ್ಯವತಿ ವಿಜಯ ರಾಘವ ದತ್ತಿ ಪುರಸ್ಕೃತ ಸಾಹಿತಿಗಳು,ಪತ್ರಕರ್ತ