Homeಸುದ್ದಿಗಳುಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು - ಶಿಕ್ಷಣ ಸಚಿವ ನಾಗೇಶ

ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು – ಶಿಕ್ಷಣ ಸಚಿವ ನಾಗೇಶ

ಸಿಂದಗಿ: ಮಾನವನ ಬದುಕಿಗೆ ಪುಸ್ತಕಗಳು ಸಾಕಷ್ಟು ಮಾರ್ಗದರ್ಶನ ನೀಡುತ್ತವೆ. ಇಂದಿನ ದಿನಮಾನದಲ್ಲಿ ಮೊಬೈಲ್ ಹಾವಳಿಯಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಓದಲು ಮೌಲ್ಯಾಧಾರಿತ ಕೃತಿಗಳನ್ನು ನೀಡುವ ಮೂಲಕ ಅವರಲ್ಲಿ ಓದುವ ಹವ್ಯಾಸ ಬೆಳೆಸಿ ಪ್ರಶಸ್ತಿ ನೀಡುತ್ತಿರುವುದು ಸಿಂದಗಿಯ ವಿದ್ಯಾಚೇತನ ಪ್ರಕಾಶನದ ಕಾರ್ಯ ಉತ್ತಮ ಬೆಳವಣಿಗೆಯಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಸ್ಥಳಿಯ ವಿದ್ಯಾಚೇತನ ಪ್ರಕಾಶನವು ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ವಿದ್ಯಾಚೇತನ ಪ್ರಕಾಶನದ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಪಾಲಕರ ಒತ್ತಡ ಜೀವನದಲ್ಲಿ ಮಕ್ಕಳು ತಮ್ಮ ಬಾಲ್ಯ ಜೀವನದಲ್ಲಿ ಅನುಭವಿಸುವ ಮಧುರ ಕ್ಷಣಗಳು ಕಳೆದುಕೊಳ್ಳುತ್ತಿದ್ದಾರೆ. ಯಾಂತ್ರಿಕ ಜೀವನಕ್ಕೆ ಹೊಂದುಕೊಳ್ಳುವ ಶೈಲಿಗೆ ಅಣಿಯಾಗುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಾಧಾರಿತ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಇಂದಿನ ಪಠ್ಯಕ್ರಮದಲ್ಲಿ ಸಾಹಿತ್ಯದ ತಾಯಿ ಬೇರು ಜಾನಪದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪಠ್ಯಕ್ರಮದಲ್ಲಿ ಅಳವಡಿಕೆಯಾಗಬೇಕು. ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರ ಕನಸಿನಂತೆ ಸಿಂದಗಿ ಪಟ್ಟಣದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಅಭಿಮತ ವ್ಯಕ್ತಪಡಿಸಿದರು.

ಮಕ್ಕಳ ಸಾಹಿತಿ ಹ.ಮ ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಮಕ್ಕಳ ಮನೋವಿಕಾಶಕ್ಕಾಗಿ ಮಕ್ಕಳ ಸಾಹಿತ್ಯ ಪ್ರಕಟಣೆ ಮತ್ತು ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳುವ ದಿಸೆಯಿಂದ ಕಾರ್ಯಚಟುವಟಿಕೆಗಳನ್ನು ವಿದ್ಯಾಚೇತನ ಪ್ರಕಾಶನ ಆಯೋಜಿಸುತ್ತ ಬಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು ಸಂಸ್ಮರಣ ಗ್ರಂಥ ವಿದ್ಯಾಚೇತನ, ಬೆಳ್ಳಕ್ಕಿ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಗುರುಕುಲ ಭಾಸ್ಕರ್ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಅರುಣ ಶಹಾಪೂರ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪೂರ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶರಣಬಸವ ಜೋಗೂರ ವೇದಿಕೆ ಮೇಲೆ ಇದ್ದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾ ಅಧ್ಯಕ್ಷ ರಾಜಶೇಖರ ಕೂಚಬಾಳ, ಹವ್ಯಾಸಿ ಓದುಗ ಪ್ರಶಸ್ತಿ ಪುರಸ್ಕೃತೆ ಜಯಶ್ರೀ ವೆಂಕಪ್ಪ ದೇವನಗಳ ಅವರಿಗೆ 2020ನೇ ಸಾಲಿನ ಮತ್ತು ಬಾಗ್ಯಶ್ರೀ ಹಿರೇಮಠ ಅವರಿಗೆ 2021ನೇ ಸಾಲಿನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಪ್ರಸಕ್ತ ಸಾಲಿನಿಂದ ಪ್ರಾರಂಭಿಸಿದ ಶಾಲಾ ಪತ್ರಿಕಾ ಪ್ರಶಸ್ತಿಗೆ ಆಯ್ಕೆಯಾಗಿದ ಸ್ಥಳೀಯ ಶ್ರೀಚೆನ್ನವೀರ ಸ್ವಾಮೀಜಿ ಪ್ರೌಢಶಾಲೆಯ ಚೇತನ ಪತ್ರಿಕೆ, ಪ್ರೇರಣಾ ಪಬ್ಲಿಕ್ ಸ್ಕೂಲ್‍ನ ಪ್ರೇರಣಾ ಎಂಬ ಪತ್ರಿಕೆಯ ಆಯಾ ಶಾಲಾ ಮುಖ್ಯಸ್ಥರಿಗೆ ಪ್ರಶಸ್ತಿ ಪತ್ರ ನೀಡಿ ಪುರಸ್ಕಾರ ಮಾಡಲಾಯಿತು.

ಗ್ರಂಥದಾನಿಗಳಾದ ಎಂ.ಎಂ. ಹೂಗಾರ, ಸಿ.ಎಂ. ಪೂಜಾರ, ಸುರೇಶಬಾಬು ಜೋಗುರ, ಚಂದ್ರಶೇಖರ ಜೋಗುರ, ಕೃತಿ ಸಂಪಾದಕರಾದ ಡಾ.ವಿ.ಡಿ. ಐಹೊಳ್ಳಿ, ಡಾ.ಎಂ.ಎಚ್. ಗುಡಿ, ಪ.ಗು. ಸಿದ್ದಾಪೂರ, ರಾ.ಸಿ. ವಾಡೇದ, ಎಸ್.ಎಸ್. ಸಾತಿಹಾಳ ಅವರನ್ನು ಪ್ರಕಾಶನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

RELATED ARTICLES

Most Popular

error: Content is protected !!
Join WhatsApp Group