ಇಂದು ಫೆಬ್ರುವರಿ 20 ಸರ್ವಜ್ಞ ಅವರ ಜನ್ಮ ದಿನಾಚರಣೆ.
ತಂದೆ _ ಬಸವರಸ ಕುಂಬಾರಮಲ್ಲ ಎಂತಲೂ ಕರೆಯುವರು .
ಸಾಕುತಾಯಿ – ಮಲ್ಲಕ್ಕ
ಹುಟ್ಟಿದ ಸ್ಥಳ :- ಹಾವೇರಿ ಜಿಲ್ಲೆ,ಅಂಬಲೂರ ತಾಲ್ಲೂಕಿನ ರಟ್ಟೆಹಳ್ಳಿ
ಮೂಲ ನಾಮ :- ಪುಷ್ಪದತ್ತ
7070 ವಚನ ಲಭ್ಯ ಆದರೂ ಸುಮಾರು 1000 ತ್ರಿಪದಿಗಳು ದಾಖಲಾಗಿವೆ .
ತ್ರಿ ಎಂದರೆ ಮೂರು
ಪದಿ ಎಂದರೆ ಸಾಲು
ಮೂರು ಸಾಲುಗಳನ್ನು ಹೊಂದಿದ ಪದ್ಯವೇ ತ್ರಿಪದಿ
ಅಂಶ ಗಣಕ್ಕೆ ಸಂಬಂಧ ಪಟ್ಟ ಛಂದೋಪ್ರಕಾರವಾಗಿದೆ.
ಸರ್ವವನ್ನು ತಿಳಿದುಕೊಂಡ ಜ್ಞಾನಿಯೇ ಸರ್ವಜ್ಞ ಸರ್ವಜ್ಞ ಒಬ್ಬ ಆಶು ಕವಿಗಳು. ಕುಳಿತಲ್ಲೇ, ನಿಂತಲ್ಲೇ,ಅದೆಷ್ಟೋ ವಿವಿಧ ವಿಷಯಗಳ ಮೇಲೆ ತ್ರಿಪದಿಗಳನ್ನು ಬರೆದು ಜ್ಞಾನಿಯಾದ ಸರ್ವಜ್ಞ ಅವರು .ತಮ್ಮ ಹುಟ್ಟಿದ ಮನೆ ಹಾಗೂ ತಂದೆ -ತಾಯಿಯಗಳನ್ನು ಬಿಟ್ಟು ,ದೇಶಾಂತರ ಹೊರಟರು. ಗುಡಿ -ಗುಂಡಾರಗಳಲ್ಲಿ ನೆಲಸಿ, ತಮ್ಮ ಜ್ಞಾನ ನಿಧಿಯನ್ನು ಸುರಿಸಿದರು . ಸರ್ವಜ್ಞ ಅವರು ಬರೆದ ಕೆಲವೊಂದು ತ್ರಿಪದಿಗಳನ್ನು ಈ ದಿನ ನೆನಪಿಸಿಕೊಳ್ಳೋಣ.
__________
ಅ ದಿಂದ ಓ
ಅ
ಅನ್ನದಾನಗಳಿಂದ ಮುನ್ನ ದಾನಗಳಿಲ್ಲ
ಅನ್ನಕ್ಕೆ ಮಿಗಿಲು ಇನ್ನಿಲ್ಲ ಜಗದೊಳಗೆ
ಅನ್ನವೇ ಪ್ರಾಣ ಸರ್ವಜ್ಞ
ಅನ್ನದಿಂ ಮುನ್ನ ಮೇಲನ್ನದಿಂ ಬಳಿಕ ಮುನ್ನ
ಎನ್ನದಳಲೆಯ ಕಾಯನು ತಂದು ತಿನ್ನದವ ಕೆಟ್ಟ ಸರ್ವಜ್ಞ
ಅನ್ನದೇವರ ಮುಂದೆ ಇನ್ನು ದೇವರು ಉಂಟೆ
ಅನ್ನವಿರುವನಕ ಪ್ರಾಣವು ಜಗದೊಳ
ಗನ್ನವೇ ದೈವ ಸರ್ವಜ್ಞ
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದಡೆ ಕೈಲಾಸ ದಿಂಬ
ಬಿನ್ನಾಣವಕ್ಕು ಸರ್ವಜ್ಞ
ಅನ್ನವನು ಇಕ್ಕದಲೆ ನನ್ನಿಯನು ನುಡಿಯದಲೆ ಮನ್ನಣೆಯನೀಯದಿರುತಿಪ್ಪ ಅರಸನು
ಕುನ್ನಿಗು ಕಷ್ಟ ಸರ್ವಜ್ಞ
ಅನ್ನವನು ಇಕ್ಕುವ ಅನ್ಯಜಾತನೆ ಕುಲಜ -ಅನ್ನವನು ಇಕ್ಕದುಣುತಿಪ್ಪ ಕುಲಜಾತ ಅನ್ಯನೆಂದರಿಗು ಸರ್ವಜ್ಞ
ಅನ್ನವ ನೀಡದೆ ಸನ್ನೆಯ ನೋಡದೆ ಮನ್ನಣೆಯ ಮೊದಲನರಿಯದೆ ಇಹ ನೃಪನು ಕುನ್ನಿಯಿಂ ಕಷ್ಟ
ಸರ್ವಜ್ಞ
ಅನ್ಯ ಸತಿಯನು ಕಂಡು ತನ್ನ ಹೆತ್ತವಳೆಂದು
ಮನ್ನಿಸಿ ನಡೆವ ಪುರುಷಂಗೆ ಇಹಪರದಿ
ಮುನ್ನ ಭಯವಿಲ್ಲ ಸರ್ವಜ್ಞ
*ಆ*
ಆನೊಂದು ಮಾಡುವೆನು ಆನೊಂದು ಹೂಡುವೆನು ಆನೊಂದು ಮಾಡಲಾನಂದವೆನಲು ಶಿವ ತಾನೊಂದು ಮಾಳ್ವ ಸರ್ವಜ್ಞ
ಆಪತ್ತಿಗಣ ಲೇಸು ಭೂಪತಿಗೆ ಗುಣ ಲೇಸು
ಕೋಪವನು ಕಳೆವ ನಗು ಲೇಸು ಓಪಳಿಗೆ ಕೂಪ ಲೇಸೆಂದ ಸರ್ವಜ್ಞ
ಆಯದ ಬೀಯದ ದಾಯವನರಿಯದೆ
ವಾಯಕ್ಕೆ ಬೆರಳನೆಣಿಸುವ ಯೋಗಿಯ
ಬಾಯ ನೋಡಯ್ಯ ಸರ್ವಜ್ಞ
ಆಯೆಂದು ಅತ್ತರೆ ಜೋಯೆಂದು ತೂಗಿದರೆ
ತಾಯ ಹಂಬಲವ ಮರೆಸಿತ್ತು ಗಾಯನ-
ದಾಯವೇನೆಂಬೆ ಸರ್ವಜ್ಞ
ಆರ ನೆರೆ ನಂಬುವಡೆ ಆರಯ್ದು ನಂಬುವುದು
ನಾರಾಯಣನಿಂದ ಬಲಿ ಕೆಟ್ಟ ಮಿಕ್ಕವರ-
ನಾರು ನಂಬುವುದು ಸರ್ವಜ್ಞ
ಆರಯ್ದು ನುಡಿವವನು ಆರಯ್ದು ನಡೆವವನು
ಆರಯ್ದು ಪದವನಿಡುವವನು ಲೋಕಕ್ಕೆ
ಆರಾಧ್ಯನಕ್ಕು ಸರ್ವಜ್ಞ
ಆರರಟ್ಟುಳಿಗಳನು ಮೂರು ಕಂಟಕರನ್ನು
ಏರು ಜವ್ವನವ ತಡೆದಿಹರೆ ಶಿವ ತಾನು
ಬೇರೆ ಇಲ್ಲೆಂದ ಸರ್ವಜ್ಞ
ಆರರಿಂದವೆ ಹೊರಗೆ ತೋರಬಲ್ಲನೆ ಗುರು
ಆರರಿಂದೊಳ ತೋರಿದರೆ ಶಿಷ್ಯ ತಾ-
ನಾರಡಿಗೊಂಬ ಸರ್ವಜ್ಞ
*ಇ*
ಇಂದ್ರಿಯವು ಮೂತ್ರವು ಒಂದೆ ನಾಳದಿ ಬಕ್ಕು
ಒಂದ ಬಿಟ್ಟೊಂದ ತಡೆದರೆ ಪರಬೊಮ್ಮ
ಮುಂದೆ ಬಂದಿಕ್ಕು ಸರ್ವಜ್ಞ
ಇಂದು ನಾಳೆಗೆ ಎಂದು ತಂದು ಕೂಡಿಡಬೇಡ
ಬಂದುದನೆ ಉಂಡು ಸುಖಿಸುತ ಬೇನೆಯದು
ಬಂದಾಗ ನರಳು ಸರ್ವಜ್ಞ
ಇಂದುವಿನೊಳುರಿಯುಂಟೆ ಸಿಂಧುವಿನೊಳರಬುಂಟೆ
ಸಂದ ವೀರನೊಳು ಭಯವುಂಟೆ ಭಕ್ತಗೆ
ಸಂದೇಹವುಂಟೆ ಸರ್ವಜ್ಞ
ಇದ್ದಲ್ಲಿ ಸಲುವ ಹೋಗಿದ್ದಲ್ಲಿಯೂ ಸಲುವ
ವಿದ್ಯವ ಕಲಿತ ಬಡವ ತಾ ಗಿರಿಯ ಮೇ-
ಲಿದ್ದರೂ ಸಲುವ ಸರ್ವಜ್ಞ
ಇದ್ದಲಿಂ ಕರಿದಿಲ್ಲ ಬುದ್ದಿಯಿಂ ಹಿರಿದಿಲ್ಲ
ಸಿದ್ಧರಿಂದಧಿಕ ಬಲರಿಲ್ಲ ಪರದೈವ ರುದ್ರನಿಂದಿಲ್ಲ ಸರ್ವಜ್ಞ
ಇದ್ದಾಗ ಉಣ್ಣದವನೆದ್ದಾಗ ಉಣುವನೆ
ಬಿದ್ದ ದೇಹವನುಗುದ್ದಿನೊಳಗಿಡುವಾಗ ಬುದ್ಧಿ ಬಂದಪುದೆ ಸರ್ವಜ್ಞ
ಇದ್ದಿಲೂ ಬಡವನೂ ಬಿದ್ದಲ್ಲಿ ಕರಕಷ್ಟ
ಇದ್ದಿಲೊಂದೆಡೆಗೆ ಉಪಕಾರಿ ಬಡವ ತಾ-
ನಿದ್ದಲ್ಲಿ ಕಷ್ಟ ಸರ್ವಜ್ಞ
ಇದ್ದೂರ ಸಾಲ ಹೇಗಿದ್ದರೂ ಕೊಳಬೇಡ
ಇದ್ದುದನು ಸೆಳೆದು ಸಾಲ ಕೊಟ್ಟವ ಗುದ್ದಿ
ಒದ್ದು ಕೇಳುವನು ಸರ್ವಜ್ಞ
*ಈ*
ಈ ದೇಶ ಹೊಲ್ಲವೆಂದಾದೇಶವನು ಹೊಗೆ
ಹೋದ ಶೂದ್ರಿಕನ ತಲೆ ಕಂಚಿಯಾಲದೊಳು
ವೇಧಿಸಿತು ವಿಧಿಯು ಸರ್ವಜ್ಞ
ಈರಯ್ದು ತಲೆಯವಗೆ ಊರು ಒಪ್ಪುವ ಲಂಕೆ
ವಾರಿಧಿಯು ಕಟ್ಟುವಡೆಯಿತ್ತು ಬಂಧನಕೆ
ಬಾರದವರಾರು ಸರ್ವಜ್ಞ
ಈರೈದು ತಲೆಯುಳ್ಳ ಧೀರ ರಾವಣ ಮಡಿದ
ವೀರ ಕೀಚಕನು ಗಡ ಸತ್ತ ಪರಸತಿಯ
ಸಾರ ಬೇಡೆಂದ ಸರ್ವಜ್ಞ
ಈವಂಗೆ ದೇವಂಗೆ ಆವುದಂತರವಯ್ಯ
ದೇವನು ಜಗಕೆ ಕೊಡುತಿಹನು ಕೈಯಾರೆ
ಈವನೇ ದೇವ ಸರ್ವಜ್ಞ
ಈಶತ್ವವುಳ್ಳನಕ ಈಶ್ವರನು ತಾನಕ್ಕು
ಈಶತ್ವ ಹೋಗೆ ದಾರವದು ಹರಿದು ಮಣಿ
ಸೂಸಿದಂತಕ್ಕು ಸರ್ವಜ್ಞ
ಈಶನ ನೆನಹಿಲ್ಲ ಮೀಸಲಿನ ತನುವಿಲ್ಲ
ಲೇಸಪ್ಪುದೊಂದು ನುಡಿಯಿಲ್ಲ ಕೈಲಾಸ
ವೇಶಿಯ ಮನೆಯೆ ಸರ್ವಜ್ಞ
ಈಶನ ಭಕ್ತನು ವೇಶಿಯ ಹೋದರೆ ಮೀಸಲಾಗಿರ್ದ ಬೋನವನು ಹಂದಿಯು
ಮೂಸಿ ಹೋದಂತೆ ಸರ್ವಜ್ಞ
*ಉ*
ಉತ್ತಮದ ವರ್ಣಿಗಳೆ ಉತ್ತಮರು ಎನಬೇಡ
ಮತ್ತೆ ತನ್ನಂತೆ ಬಗೆವರನೆಲ್ಲರನು ಉತ್ತಮರು ಎನ್ನು ಸರ್ವಜ್ಞ
ಉತ್ತಮರು ಎಂಬುವರು ಸತ್ಯದಲಿ ನಡೆದಿಹರು ಉತ್ತಮರಧಮರೆನಬೇಡ ಅವರೊಂದು
ಮುತ್ತಿನಂತಿಹರು ಸರ್ವಜ್ಞ
ಉತ್ತಮರೆಂಬವರ ಹುಟ್ಟು ಪಾಲ್ಗಡಲೊಳಗೆ ಉತ್ತಮರಧಮರೆನಬೇಡ ಮೂತ್ರದ
ಗೊತ್ತೆಯೆ ಬೀಜ ಸರ್ವಜ್ಞ
ಉತ್ತಮ ವಿದ್ಯವನೋದಿ ಮತ್ತೆ ಅನುಭವಗಂಡು
ಚಿತ್ತದ ಕಳವಳ ನಿಲಿಸದ ಮನುಜನು
ಕತ್ತೆ ಕಂಡಯ್ಯ ಸರ್ವಜ್ಞ
ಉತ್ತರಣೆ ಉಪ್ಪಲಿಗೆ ಮತ್ತಲ್ಲ ಶಿಶುಮಾರ
ಕತ್ತೆಯ ಮೂತ್ರವೆರೆದಿಹರೆ ರಸಭಸ್ಮ
ಉತ್ತಮವದಕ್ಕು ಸರ್ವಜ್ಞ
ಉತ್ತರದ ದಿಕ್ಕಿನಲಿ ಹತ್ತೀತು ಹೆಬ್ಬೆಗೆ ಸುತ್ತ ಒರಕೊಂಡು ಬರುವಾಗ ಜಗವೆಲ್ಲ
ಕತ್ತಲಾದೀತು ಸರ್ವಜ್ಞ
ಉತ್ತರೆಯು ಬರೆತಿಹರೆ ಹೆತ್ತ ತಾಯ್ತರೆದಿಹರೆ
ಉತ್ತಮರು ತಪ್ಪಿ ನಡೆದಿಹರೆ ಲೋಕ ತಾ-
ನೆತ್ತ ಸಾರುವುದು ಸರ್ವಜ್ಞ
ಉತುಪತಿಗೆ ಬ್ರಹ್ಮಗಡ ಸ್ಥಿತಿಗೆ ಆ ವಿಷ್ಣುಗಡ
ಹತವ ಮಾಡುವಡೆ ರುದ್ರಗಡ ಎಂದೆಂಬ
ಸ್ಥಿತಿಯ ತಿಳಿಯೆಂದ ಸರ್ವಜ್ಞ
*ಊ*
ಊರದ ಚೇಳಿನ ಏರದ ಬೇನೆಯಲಿ
ಮೂರು ಜಗವೆಲ್ಲ ಹೊರಳುತಿದೆ ಆ ನೋವ
ಮೀರುವರಿಲ್ಲ ಸರ್ವಜ್ಞ
ಊರಿಂಗೆ ದಾರಿಯನು ಆರು ತೋರಿದಡೇನು
ಸಾರಾಯದ ನಿಜವ ತೋರುವ ಗುರುವು ತಾ
ನಾರಾದಡೇನು ಸರ್ವಜ್ಞ
ಊರಿಂಗೆ ದೊರೆ ರೂಪು ನಾರಿಂಗೆ ಗುಣರೂಪು
ಚಾರು ಕೋಕಿಲೆಗೆ ಸ್ವರ ರೂಪು ರಾಜಂಗೆ
ಧೀರತ್ವ ರೂಪು ಸರ್ವಜ್ಞ
ಊರುಗಳ ಮೂಲದಲಿ ಮಾರನರಮನೆಯಲ್ಲಿ
ಭೂರಿ ಜೀವಿಗಳ ಹುಟ್ಟಿಸಿದ ಅಜನಿಗಿ
ನ್ಯಾರು ಸರಿಯುಂಟೆ ಸರ್ವಜ್ಞ
ಊರುಂಬ ಬಾವಿಗೆ ಊರ ಹೆಬ್ಬಾಗಿಲಿಗೆ
ಆರವೆಯ ಮರದ ನೆರಳಿಂಗೆ ಸೂಳೆಗೆ
ಹೋರುವನು ಹೆಡ್ಡ ಸರ್ವಜ್ಞ
ಊರು ಸನಿಹದಲಿಲ್ಲ ನೀರೊಂದು ಗಾವುದವು
ಸೇರಿ ನಿಲ್ಲುವದೆ ನೆಳಲಿಲ್ಲ ಬಡಗಲ ದಾರಿ ಬೇಡೆಂದ ಸರ್ವಜ್ಞ
ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ
ಧಾರುಣಿಯು ಎಲ್ಲ ಕುಲದೈವವಾಗಿನ್ನು
ಯಾರನ್ನು ಬಿಡಲೊ ಸರ್ವಜ್ಞ
*ಋ*
ಋಣವು ಹರಿವುದು ಲೇಸು ಹಣದ ಗಳಿಕೆಯು ಲೇಸು
ಗಣಿಕೆಯರ ಸಂಗ ಬಿಡಲೇಸು ಈಶ್ವರನ
ಕ್ಷಣ ಭಕ್ತಿ ಲೇಸು ಸರ್ವಜ್ಞ
ಋಣವಿಲ್ಲದೊಂದು ಮುನಿದರೆ ಬಾರದು
ತ್ರಿಣಯನಿಂದಲಿ ಪಡೆತಂದ ಎಡೆಯು ಆ
ಕ್ಷಣವೆ ಬಹುದು ಸರ್ವಜ್ಞ
*ಎ*
ಎಂಜಲ ತಿಂಬರೆ ಅಂಜದೆ ತಿಂಬುದು
ಅಂಜುತಳುಕುತ ತಿಂದರಾ ಎಂಜಲು
ನಂಜಾಗಿ ತೋರ್ಕು ಸರ್ವಜ್ಞ
ಎಂಜಲವು ಶೌಚವು ಸಂಜೆಯೆಂದೆನಬೇಡ
ಕುಂಜರವು ವನವ ನೆನೆವಂತೆ ಬಿಡದೆ ನಿ
ರಂಜನನ ನೆನೆಯೊ ಸರ್ವಜ್ಞ
ಎಂತಿರಲು ಪರರ ನೀ ಮುಂತೆ ನಂಬಲು ಬೇಡ
ಕುಂತಿ ಹೆಮ್ಮಗನ ಕೊಲಿಸಿದಳು ಮಾನವರ
ನೆಂತು ನಂಬುವುದು ಸರ್ವಜ್ಞ
ಎಂತುಂಬರಂಬಲಿಯ ಮುಂತೊಬ್ಬನೈದಾನೆ
ಹಂತಕನಲ್ಲ ಅಜನಲ್ಲ ಈ ತುತ್ತ
ನೆಂತುಂಬರಯ್ಯ ಸರ್ವಜ್ಞ
ಎಂತು ಪ್ರಾಣಿಯ ಕೊಲ್ಲದಂತುಟೇ ಜಿನಧರ್ಮ
ಜಂತುವನು ಹೇತು ಮರಳಿಯವ ಸಲಹಿದರೆ
ಅಂತವ ಜೈನ ಸರ್ವಜ್ಞ
ಎತ್ತಣದು ಲಂಕೆಯದು ಎತ್ತಣಾಯೋಧ್ಯೆಯು
ಹತ್ತಿರದ ನಾಡಿನೊಳಗಲ್ಲ ರಾವಣನಿ
ಗೆತ್ತಣದು ಕೇಡು ಸರ್ವಜ್ಞ
ಎತ್ತಣಾ ಹನಿ ಬಿದ್ದು ಮುತ್ತಾದ ತೆರನಂತೆ
ಉತ್ತಮದ ಗತಿಯ ಪಡೆಯುವಡೆ ಯತಿಗೊಂದು
ತುತ್ತನಿಕ್ಕೆಂದ ಸರ್ವಜ್ಞ
ಎತ್ತರಿಸಿದ ಕಾಯ ಮಸ್ತಕವು ಮಧ್ಯವು
ಕಕ್ಕಸಭರಿತಮತಿಶಯವು ಆ ಪುರುಷ
ಹಸ್ತಿನಿಗೆ ಮೇಳ ಸರ್ವಜ್ಞ
ಎತ್ತ ಹೋದರು ಒಂದು ತುತ್ತು ಕಟ್ಟಿರಬೇಕು
ತುತ್ತೊಂದು ಗಳಿಗೆ ತಡೆದಿಹರೆ ಕೈಹಿಡಿದು
ಎತ್ತಬೇಕೆಂದ ಸರ್ವಜ್ಞ
ಎತ್ತ ಹೋದರು ಬೆನ್ನ ಹತ್ತಿ ಬರುವಳ ಕಂಡು
ಮೆತ್ತನ ಸೂಳೆಯೆನಬೇಡ ಅವಳೊಲುಮೆ
ಮೃತ್ಯು ಕಾಣಯ್ಯ ಸರ್ವಜ್ಞ.
ಎಲ್ಲವರು ಬಯ್ದರೂ ಕಲ್ಲಿನಿಂದಿಟ್ಟರೂ
ಅಲ್ಲದ ಮಾತ ನುಡಿದರೂ ಶಿವನಲ್ಲಿ
ತಲ್ಲಣವು ಬೇಡ ಸರ್ವಜ್ಞ
ಎಲ್ಲವೂ ತಾನಾಗಬಲ್ಲಡದು ಶಿವಯೋಗ
ಅಲ್ಲಲ್ಲಿಗಲ್ಲಿ ಪೃಥಕಾದೊಡದು ತಾನು
ಎಲ್ಲಿಯ ಯೋಗ ಸರ್ವಜ್ಞ
ಎಲ್ಲವೂ ಶಿವನೆಂದರೆಲ್ಲಿಹುದು ಭಯವಯ್ಯ
ಎಲ್ಲರೂ ಶಿವನ ನೆನೆದಿಹರೆ ಕೈಲಾಸ ಇಲ್ಲಿಯೇ ನೋಡ ಸರ್ವಜ್ಞ
ಎಲ್ಲವೂ ಶಿವನೆಂಬ ಸೊಲ್ಲು ತಾ ಸರಿಯಲ್ಲ
ಎಲ್ಲವೂ ಶಿವನು ತಾನಾಗೆ ನಿತ್ಯತ್ವ ಎಲ್ಲಕೇಕಿಲ್ಲ ಸರ್ವಜ್ಞ
ಎಲ್ಲಿಗೆ ವಿಧಿ ಬರಲಲ್ಲಿಗೇ ತಾ ಹೋಹ
ಅಲ್ಲದಡಲ್ಲಿಗೆ ವಿಧಿ ಬಹುದು ವಿಧಿಯಿಂದ
ಬಲ್ಲಿದರಾರು ಸರ್ವಜ್ಞ
ಎಲ್ಲೆಲ್ಲಿ ನೋಡಿದರು ಟೊಳ್ಳು ಜಾಲಿಯ ಮುಳ್ಳು
ಅಲ್ಲಿಯವರೆಲ್ಲ ಕಿಸವಾಯಿ ಬಡಗಲ
ಬಲ್ಲತನವೇನು ಸರ್ವಜ್ಞ
ಎಲ್ಲೆಲ್ಲಿ ಕರ್ಮವಿದ್ದಲ್ಲಲ್ಲಿ ನೆರೆ ಸಾರಿ ನಿಲ್ಲದವರೊಡನೆ ಬರುತಿಪ್ಪ ವಿಧಿಯೆದುರು
ನಿಲ್ಲುವವರಾರು ಸರ್ವಜ್ಞ
ಎಷ್ಟುಬಗೆಯಾರತಿಯನೊಟ್ಟ
ಯಿಸಿ ಫಲವೇನು
ನಿಷ್ಠೆಯಿಲ್ಲದನ ಶಿವಪೂಜೆ ಹಾಳೂರ
ಕೊಟ್ಟಿಗೆ ಬೆಂದಂತೆ ಸರ್ವಜ್ಞ
*ಏ*
ಏನ ಮನ್ನಿಸದಿರಲು ಸೀನ ಮನ್ನಿಸಬೇಕು
ಸೀನ ಮನ್ನಿಸದೆ ನಡೆದರೆ ಆತಗಭಿ ಮಾನವೇ ಹೋಕು ಸರ್ವಜ್ಞ
ಏನಾದಡೇನಯ್ಯ ತಾನಾಗದನ್ನಕ್ಕ ತಾನಾಗಿ ತನ್ನನರಿದಡೆ ಲೋಕ ತಾ-
ನೇನಾದಡೇನು ಸರ್ವಜ್ಯ
ಏನಾನು ನೆವದಿಂದ ತಾನೆ ಬಪ್ಪುದು ಸಿರಿಯು
ಕಾನನದಿ ಒಂದು ಕರಿ ಹುಟ್ಟಿ ಪಟ್ಟಕ್ಕೆ
ತಾನೆ ಬಂದಂತೆ ಸರ್ವಜ್ಞ
ಏನಾನು ನೆವನದಲಿ ತಾನೆ ಪೋಪುದು ಸಿರಿಯು ಕಾನನದೊಳಗೆ ಕಿಡಿ ಹುಟ್ಟಿ ಕಾಡೆಲ್ಲ ತಾನೆ ಬೆಂದಂತೆ ಸರ್ವಜ್ಞ
ಏರಿ ಮೇಲಣ ಪಂಜು ನೀರೊಳಗೆ ಉರಿದಂತೆ
ನಾರಿಯರೊಲುಮೆ ತನಗೆಂಬ ಮರುಳಂಗೆ
ಮಾರಿ ಹಿಡಿದಿಹುದು ಸರ್ವಜ್ಞ
ಏರಿಯ ಕೆಳಗಿಲ್ಲ ಬೇರೆ ತೋಟದಲಿಲ್ಲ
ದಾರಿಯಲಿ ಇಲ್ಲ ಬಿಸಿಲಿಲ್ಲ ಈ ಮಾತು
ಯಾರಿಗರಿದಲ್ಲ ಸರ್ವಜ್ಞ
ಏರುವ ಕುದುರೆಯನು ಹೇರುವ ಎತ್ತನ್ನು
ಬೇರೂರಲಿದ್ದ ಬೆಲೆವೆಣ್ಣ ಬೇರೊಬ್ಬ-
ರೇರದೆ ಬಿಡರು ಸರ್ವಜ್ಞ
ಏಳು ಬಾರುಂಬುವಳು ಎಳ್ಳ ಹುರಿತಿಂಬುವಳು
ನೆಲ್ಲ ತೆನೆಯಂತೆ ಬಳುಕುವ ಕಳ್ಳಿಗಿ
-ನ್ನೆಲ್ಲಿಯದು ರೋಗ ಸರ್ವಜ್ಞ
*ಐ*
ಐವರಟ್ಟಾಳುಗಳು ಯೌವನದ ಹಿಂಡುಗಳ
ತವಕದಿ ಹೊಯ್ದು ನಿಂದಾತ ಜಗದೊಳಗೆ
ದೈವ ತಾನಕ್ಕು ಸರ್ವಜ್ಞ
*ಒ*
ಒಂದಕ್ಕೆ ಎಣೆಯಿಲ್ಲ ಸಂದಿಲ್ಲ ಎರಡಕ್ಕೆ
ಮುಂದೆ ಮೂರಕ್ಕೆ ಎಡೆಯಿಲ್ಲ ನಾಲ್ಕಕ್ಕೆ
ಹಿಂದು ಮುಂದಿಲ್ಲ ಸರ್ವಜ್ಞ
ಒಂದುವನು ಎರಡೆಂಬ ಹಂದಿಯನು ಮೊಲನೆಂಬ
ನಿಂದ ದೇಗುಲವು ಕೊರಡೆಂಬ ಮೂರ್ಖ ತಾ-
ನೆಂದುದನೆನ್ನಿ ಸರ್ವಜ್ಞ
ಒಂದರ ಮೊದಲೊಳಗೆ ಬಂದಿಹುದು ಜಗವೆಲ್ಲ ಒಂದರ ಮೊದಲನರಿದರೆ ಜಗ ಕಣ್ಣ ಮುಂದೆ ಬಂದಿಹುದು ಸರ್ವಜ್ಞ
ಒಂದರೊಳಗೆಲ್ಲವೂ ಸಂಧಿಸಿರುವುದನು ಗುರು
ಚೆಂದದಿ ತೋರಿ ಕೊಡದಿರೆ ಶಿಷ್ಯನಂ
ಕೊಂದನೆಂದರಿಗು ಸರ್ವಜ್ಞ
ಒಂದಾಡ ತಿಂಬಾತ ಹೊಂದಿದಡೆ ಸ್ವರ್ಗವನು
ಎಂದೆಂದು ಅಜನ ಕಡಿತಿಂಬ ಕಟಿಗ ತಾ
-ನಿಂದ್ರನೇಕಾಗ ಸರ್ವಜ್ಞ,
*ಓ*
ಓಡು ಮಣ್ಣಲಿ ಹುಟ್ಟಿ ಕೂಡುವುದೆ ಜಾತಿಯನು
ರೂಢಿಗೀಶ್ವರನ ಬೆರೆದಿಹನು ಸಂಸಾರ
ಕೂಡಿ ಹೋಗುವನೆ ಸರ್ವಜ್ಞ
ಓಡುವುದು ಒಡಲಿಗೆ ಕೇಡಿಲ್ಲದಿರ್ದಡೆ
ಓಡಿಯೂ ಒಡಲು ಕೆಡುವಡೆ ರಣದೊಳಗೆ
ಓಡುವುದೇ ಕಷ್ಟ ಸರ್ವಜ್ಞ
ಓತಿರದ ಹೆಣ್ಣಿನೊಡ ಮಾತನಾಡುವನೆಗ್ಗ
ಹೂತ ಮಲ್ಲಿಗೆಯ ವನದೊಳಗೆ ತುರುಬಿಲ್ಲ
-ದಾತ ಸುಳಿದಂತೆ ಸರ್ವಜ್ಞ
ಓದಿದ ಓದು ತಾ ಮೇದ ಕಬ್ಬಿನ ಸಿಪ್ಪೆ
ಓದಿನ ಒಡಲನರಿದಿಹರೆ ಸಿಪ್ಪೆ ಕ-
ಬ್ಬಾದಂತೆ ಕಾಡೊ ಸರ್ವಜ್ಞ
ಓದಿ ಬೂದಿಯ ಪೂಸಿ ತೇದು ಕಾವಿಯ ಹೊದೆದು
ಹೋದಾತ ಯೋಗಿಯೆನಬೇಡ ಇಂದ್ರಿಯವ
ಕಾದಾತ ಯೋಗಿ ಸರ್ವಜ್ಞ
ಓದಿ ವಾದಿಗಳೆಲ್ಲ ಊದೂದಿ ತಲೆ ಬಾತು
ವಾದದ ಬೂದಿ ತಲೆಗೇರಿ ಕೆರೆಗೆದ್ದು-
ಹೋದುದ ಕಂಡೆ ಸರ್ವಜ್ಞ
ಓದು ಬೂದಿಯು ಲೋಚು ನಾದವದು ಕರ್ಪುರವು
ವಾದ ವಿವಾದವೆನಬೇಡ ಆತ್ಮವ ವೇದಿಪನೆ ಯೋಗಿ ಸರ್ವಜ್ಞ
ಓದು ವಾದಗಳಿಂದ ವೇದ ತಾ ಘನವಹುದೆ
ವೇದದ ಹೃದಯವರಿಯದಲೆ ದ್ವಿಜರೆಲ್ಲ
ಬೂದಿಯಾಗಿಹರು ಸರ್ವಜ್ಞ
ಡಾ ಸಾವಿತ್ರಿ ಕಮಲಾಪೂರ
ಸರ್ವಜ್ಞನ ವಚನಗಳು ಪುಸ್ತಕ