ಬೆಂಗಳೂರು – ಭಾರತೀಯ ಬಾಹ್ಯಾಕಾಶ ಸಂಸ್ಥೆ ( ಇಸ್ರೋ) ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರು ನಿಧನರಾಗಿದ್ದಾರೆ. ಅವರಿಗೆ ೮೪ ವರ್ಷ ವಯಸ್ಸಾಗಿತ್ತು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯ ಕರಡು ಸಮಿತಿಯ ಅಧ್ಯಕ್ಷರೂ ಆಗಿದ್ದ ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
೧೯೪೦ ಅಕ್ಟೋಬರ್ ೨೪ ರಂದು ತಮಿಳುನಾಡಿನ ಎರ್ನಾಕುಳಂನಲ್ಲಿ ಜನಿಸಿದ್ದ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಅಖಂಡ ಒಂಬತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ರಾಜ್ಯಸಭೆಯ ಸದಸ್ಯರಾಗಿ, ಯೋಜನಾ ಆಯೋಗದ ಸದಸ್ಯರಾಗಿಯೂ ಅವರು ಕೆಲಸ ಮಾಡಿದ್ದರು. ೨೦೦೪ರ ಎಪ್ರಿಲ್ ನಿಂದ ೨೦೦೯ರವರೆಗೆ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು.
ಡಾ.ಕಸ್ತೂರಿ ರಂಗನ್ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅರಭಾವಿ ಶಾಸಕರ ಸಂತಾಪ ;
ಇಸ್ತೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರ ನಿಧನಕ್ಕೆ ಬೆಳಗಾವಿ ಜಿಲ್ಲೆಯ ಅರಭಾವಿ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ಇಸ್ರೋದ ಮಾಜಿ ಅಧ್ಯಕ್ಷ, ವಿಜ್ಞಾನಿ ಪ್ರೊ.ಕೆ. ಕಸ್ತೂರಿ ರಂಗನ್ ಅವರು ನಿಧನ ಸುದ್ದಿ ಕೇಳಿ ಆಘಾತವಾಗಿದೆ. ರಂಗನ್ ಅವರು ಕೇವಲ ಬಾಹ್ಯಾಕಾಶ ಮಾತ್ರವಲ್ಲ, ಪರಿಸರ, ಶಿಕ್ಷಣ, ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜತೆಗೆ ಕ್ರಿಯಾಶೀಲರಾಗಿ ಹಲವಾರು ಕೊಡುಗೆಗಳನ್ನು ಅವರು ನೀಡಿದ್ದಾರೆ. ಅವರನ್ನು ಕಳೆದುಕೊಂಡ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದು ಅವರು ಹೇಳಿದ್ದಾರೆ