ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಪ್ರಸಕ್ತ ಸಾಲಿನ 8ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಜರುಗಿತು.
ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಮ್.ಎ.ಬನ್ನೂರ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಜ್ಞಾನ ಬಂಡಾರ ಹೆಚ್ಚಿಸಿಕೊಳ್ಳಬೇಕು, ಪಾಲಕರು ಬೇಸಿಗೆ ಶಾಲಾ ರಜಾ ಅವಧಿಯಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕೆಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಾಮಕೃ಼ಷ್ಣ ದೇಸಾಯಿ, ಸದಸ್ಯ ರಾಕೇಶ ಚಿಕ್ಕೂರ ಮಾತನಾಡಿ, ಶಾಲೆಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಶಾಲೆಯ ಆದರ್ಶ ವಿದ್ಯಾರ್ಥಿಯಾಗಿ ಆಯ್ಕೆಯಾದ ಶಂಕರ ಬುರ್ಲಿ ಮತ್ತು ಆದರ್ಶ ವಿದ್ಯಾರ್ಥಿನಿಯಾಗಿ ಆಯ್ಕೆಯಾದ ಜನತಬಿ ನದಾಫ್ ಅವರನ್ನು ಸತ್ಕರಿಸಿ ಗೌರವಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಮಾರಂಭದಲ್ಲಿ ಗ್ರಾ.ಪಂ ಸದಸ್ಯರಾದ ಸುಶೀಲವ್ವ ಪೂಜೇರ, ಲಕ್ಷ್ಮೀ ಲೆಂಕೆನ್ನವರ, ಗ್ರಾ.ಪಂ ಕಾರ್ಯದರ್ಶಿ ಮಂಜುಳಾ ಪಾಟೀಲ, ಶಿಕ್ಷಕರಾದ ಪಿ.ಟಿ.ತೋಳಮಟ್ಟಿ, ವಾಯ್.ಪಿ.ಉದಪುಡಿ, ಕೆ.ಎಮ್.ಹಿರೇಮಠ, ಬಿ.ಬಿ.ವಡೇಯರ, ಬಿ.ಐ.ಯಡಹಳ್ಳಿ, ಆರ್.ಎಮ್.ಲಂಕೆನ್ನವರ, ಡಿ.ಡಿ.ಹಲಗಿ ಮತ್ತಿತರು ಉಪಸ್ಥಿತರಿದ್ದರು.