ಗೋಕಾಕ- ಮನ್ನಿಕೇರಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ರೈತರಿಗೆ ಎಲ್ಲ ರೀತಿಯಿಂದ ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಈಚೆಗೆ ಮನ್ನಿಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀದೇವಿ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಈ ಭಾಗಕ್ಕೆ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಯೋಚನೆಯನ್ನು ಮಾಡಲಾಗಿದೆ. ಶೀಘ್ರದಲ್ಲಿ ಘಟಪ್ರಭಾ ನದಿಯಿಂದ ಮನ್ನಿಕೇರಿ ಕೆರೆಗೆ ನೀರು ಭರ್ತಿ ಮಾಡುವ ಯೋಜನೆ ಇದೆ. ಈಗಾಗಲೇ ಈ ಸಂಬಂಧ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದವರು ತಿಳಿಸಿದರು
ಗ್ರಾಮದ ಅಭಿವೃದ್ಧಿಗೆ ಸಂಘಟಿತ ಹೋರಾಟ ಅವಶ್ಯವಾಗಿದೆ. ಇಲ್ಲಿಯ ಯುವಕರು ಹಿರಿಯರೊಂದಿಗೆ ಕೂಡಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕು. ಅಂದಾಗ ಮಾತ್ರ ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಲಕ್ಷ್ಮೀದೇವಿ ದೇವಸ್ಥಾನದ ನಿರ್ಮಾಣಕ್ಕೆ ೧೦ ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ದೇವಸ್ಥಾನದಿಂದ ಸತ್ಕರಿಸಲಾಯಿತು.
ಭಾಗೋಜಿಕೊಪ್ಪದ ಮುರುಘ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ವಿಜಯ ಸಿದ್ಧೇಶ್ವರ ಸ್ವಾಮಿಗಳು, ವೇ.ಮೂ. ಮಹಾಂತಯ್ಯ ಹೀರೇಮಠ ಅವರು ಸಾನಿಧ್ಯ ವಹಿಸಿದ್ದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಾಳಪ್ಪ ಗೌಡರ, ಮುದುಕಪ್ಪ ಗೋಡಿ, ಪ್ರಮುಖರಾದ ಸತೀಶ ಗಡಾದ, ಲಕ್ಷ್ಮಣ ಗಡಾದ, ಪುಂಡಲೀಕ ದಳವಾಯಿ, ಬಸು ನಾಯಿಕ, ಮಹಾಂತೇಶ ಮೆಟ್ಟಿನ, ರಾಮಣ್ಣ ನಾಡಗೌಡ, ಕೆಂಚಪ್ಪ ನಾಡಗೌಡ, ರಾಜು ಪೂಜೇರಿ, ಮಹಾಂತೇಶ ಗಡಾದ, ಶಂಕರ ತವಗಿ, ಎಕನಾಥ ಬಡಿಗೇರ, ಶ್ರೀ ಶೈಲ ಗಡಾದ, ಪಿಡಿಓ ಮಾರುತಿ ಯಡ್ರಾವಿ,ವೆಂಕಟ ಪೂಜೇರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.