ಬೈಲಹೊಂಗಲ: 2024 ರ ವಿಶ್ವ ಬಸವ ಜಯಂತಿಯ ನಿಮಿತ್ತ ಕೇಂದ್ರ ಬಸವ ಸಮಿತಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ ಪಟ್ಟಣದ ಉದಯೋನ್ಮುಖ ಕವಿ ಸಂತೋಷ ಬಾಬು ರೇಶ್ಮಿ ಅವರನ್ನು ಸಂಭ್ರಮ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ಸಾಫ್ಟವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂತೋಷ ಅವರು ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಸಂಭ್ರಮ ಫೌಂಡೇಶನ್ ಅಧ್ಯಕ್ಷ ಕಿರಣ ಗಣಾಚಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಬಸವ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ, ಬಸವ ಸಮಿತಿ ರಾಜ್ಯಮಟ್ಟದ ಕವನ ಸ್ಪರ್ಧೆ ಏರ್ಪಡಿಸುವುದರ ಮೂಲಕ ಸಾಕಷ್ಟು ಉದಯೋನ್ಮುಖ ಕವಿಗಳಿಗೆ ಉತ್ತಮ ಅವಕಾಶ ಒದಗಿಸಿದೆ ಎಂದರು.
ಪತ್ರಕರ್ತರಾದ ಪ್ರಕಾಶ ಬೆಳಗಾವಿ ಮಾತನಾಡಿ, ಸ್ಪರ್ಧೆಗಳು ಪ್ರತಿಭೆಯನ್ನು ಹೊರತರಲು ಸಹಾಯ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷ ರೇಶ್ಮಿ ಮನಸ್ಸಿನ ಭಾವನೆಗಳನ್ನು ಆನಂದದಿಂದ ಅನುಭವಿಸಲು ಬರವಣಿಗೆ ಉತ್ತಮ ಮಾರ್ಗವಾಗಿದೆ. ಇಂತಹ ಗೌರವ ಸನ್ಮಾನಗಳು ಇನ್ನಷ್ಟು ಸಾಹಿತ್ಯ ಕೃಷಿ ಮಾಡಲು ಪ್ರೇರಣೆ ನೀಡುತ್ತವೆ ಎಂದು ಸಂತಸ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತರಾದ ಮಹಾಂತೇಶ ರೇಶ್ಮಿ ಮಾತನಾಡಿ, 8 ದಶಕಗಳಿಂದ ರೇಶ್ಮಿ ಕುಟುಂಬ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದು ಕನ್ನಡದ ಬಗ್ಗೆ ಅಪಾರ ಗೌರವ ಹೊಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬೈಲಹೊಂಗಲ ಕಸಾಪ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ, ಯುವಜನತೆ ಸಾಹಿತ್ಯದ ಕಡೆ ಆಸಕ್ತಿ ವಹಿಸುತ್ತಿರುವುದು ಖುಷಿ ತರುವ ಸಂಗತಿ ಎಂದರು. ಸಂಗಮೇಶ ರೇಶ್ಮಿ, ರಾಜು ಕಾದ್ರೊಳ್ಳಿ ಉಪಸ್ಥಿತರಿದ್ದರು.