ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಫೆ.5ರಂದು ಈ ಚಿಕಿತ್ಸಾ ಕೇಂದ್ರ ಉದ್ಘಾಟನೆಗೊಳ್ಳಲಿದೆ.
ನಗರದ ಖಾಸಗಿ ಹೊಟೇಲ್‍ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ಬಳಿ ಅನೇಕ ವಿವಾಹಿತ ಬಡ ಮಹಿಳೆಯರು ಸಂತಾನವಿಲ್ಲದ ಕಾರಣ ತಮ್ಮ ಪತಿ ತಮ್ಮನ್ನು ತೊರೆಯುತ್ತಿರುವ ಬಗ್ಗೆ, ಬೇರೆ ವಿವಾಹ ಮಾಡಿಕೊಳ್ಳಲು ಮುಂದಾಗುತ್ತಿರುವ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದರು.
ಈ ಹಿನ್ನೆಲೆಯಲ್ಲಿ ಸಿದ್ದಗಿರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಿದ್ದಗಿರಿ ಆಸ್ಪತ್ರೆಯ ಡಾ. ವರ್ಷಾ ಪಾಟೀಲ್ ಮೊದಲಾದವರು ಚರ್ಚಿಸಿ ಬಡ ದಂಪತಿಗೆ ರಿಯಾಯಿತಿ ದರದಲ್ಲಿ ಐವಿಎಫ್ ಚಿಕಿತ್ಸೆ ನೀಡುವ ಕೇಂದ್ರ ಸ್ಥಾಪನೆಗೆ ನಿರ್ಧರಿಸಿದ್ದು, ಈ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಕಾರಣವಾಗಿದೆ ಎಂದು ವಿವರಿಸಿದರು.
ಸಾಮಾನ್ಯವಾಗಿ ಐವಿಎಫ್ ಚಿಕಿತ್ಸೆಯ ದರ 2 ಲಕ್ಷ ರೂ.ಗೂ ಹೆಚ್ಚಿರುವುದರಿಂದ ಶ್ರೀಮಂತರಿಗೆ ಮಾತ್ರ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿದೆ. ಸಿದ್ದಗಿರಿ ಆಸ್ಪತ್ರೆಯಲ್ಲಿ 50-60 ಸಾವಿರ ರೂ. ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ದಾನಿಗಳ ಸಹಾಯದಿಂದ ಅತ್ಯುನ್ನತ ತಂತ್ರಜ್ಞಾನದ ಸಲಕರಣೆಗಳನ್ನು ಚಿಕಿತ್ಸಾ ಕೇಂದ್ರದಲ್ಲಿ ಅಳವಡಿಸಲಾಗಿದೆ. ಜೊಲ್ಲೆ ಸಮೂಹ ಸಂಸ್ಥೆಗಳ ನೆರವಿನಿಂದ ಸುಮಾರು 4.50 ಕೋಟಿ ರೂ. ವೆಚ್ಚದಲ್ಲಿ ಐವಿಎಫ್ ಚಿಕಿತ್ಸಾ ಕೇಂದ್ರ ನಿರ್ಮಾಣಗೊಂಡಿದೆ. 10 ತಜ್ಞ ವೈದ್ಯರು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಸಿದ್ದಗಿರಿ ಆಸ್ಪತ್ರೆಯ ಡಾ. ವರ್ಷಾ ಪಾಟೀಲ್ ಮಾತನಾಡಿ, ಬಡ ಮಹಿಳೆಯರಲ್ಲಿ ಈ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.