ನಂಬಿದವರಾ ಮನೆಯಾವೊಳಗೇ ತುಂಬೀ ತುಳುಕಾಡೋ ಬಪ್ಪಾ
ಲಿಂಗಯ್ಯಾ ಸ್ವಾಮಿ ಬನ್ನೀ ಮಂಟೇದಾ..
ಈ ಜನಪದ ಹಾಡನ್ನು ನಾನು ಹಲವು ವೇದಿಕೆಗಳಲ್ಲಿ ಕೇಳಿರುವೆ. ಯುವಜನ ಮೇಳ, ಜನಪದ ಹಾಡು ಸ್ಫರ್ಧೆಗಳಲ್ಲಿ ತೀರ್ಪುಗಾರನಾಗಿ ನಾನು ಹೋದಾಗೆಲ್ಲಾ ಗಾಯಕರು ಈ ಹಾಡು ಹೇಳಿ ತಮ್ಮ ಕಂಠಸಿರಿಯಿಂದ ಬಹುಮಾನ ಗೆದ್ದಿದ್ದಾರೆ. ಇತ್ತೀಚೆಗೆ ಒಂದು ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡ ನನಗೆ ಪಿ.ನಾಗರತ್ನಮ್ಮ ಮಳವಳ್ಳಿ ಇವರು ಸಂಪಾದಿತ ಮಂಟೇಸ್ವಾಮಿ ಜನಪದ ಕಾವ್ಯ ಪುಸ್ತಕ ದೊರೆಯಿತು. ಬಿಡುವಿನಲ್ಲಿ ಓದಿದೆ. ಪೋನ್‌ನಲ್ಲಿ ಮೇಡಂ ಅವರೊಂದಿಗೆ ಮಾತನಾಡಲು ಅವರು ತಮ್ಮ ತಿರುಗಾಟದ ಪೋಟೋ ಕಳಿಸಿದರು.
‘ನಾನು ಮತ್ತು ನಮ್ಮ ತಂಡದವರು ಮಂಟೇಸ್ವಾಮಿ ಕಾವ್ಯವನ್ನು ೪೦ ವರ್ಷಗಳಿಂದ ತಂಬೂರಿ ಶೈಲಿಯಲ್ಲಿ ಹಾಡಿಕೊಂಡು ಬರುತ್ತಿದ್ದೇವೆ. ಸರ್ವೇಸಾಮಾನ್ಯ ಎಲ್ಲ ಕಥೆಗಳಂತೆ ನಾವು ಸಹ ಪರಂಜ್ಯೋತಿಯವರ ಬರುವಿಕೆ, ಸಿಸುಮಕ್ಕಳ ಪಡೆಯುವ ರೀತಿ, ಮಾರಳ್ಳಿ ಮುದ್ದಮ್ಮನ ಮಗನನ್ನು ದತ್ತು ಪಡೆದು ನೀಲಗಾರ ದೀಕ್ಷೆಯನ್ನು ಕೊಟ್ಟು ಸಿದ್ದಪ್ಪಾಜಿ ಎಂಬ ಹೆಸರಿನಿಂದ ಚಿಲ್ಲಾಪುರದಲ್ಲಿ ಕಬ್ಬಿಣದ ಭಿಕ್ಷೆಗೆ ಕಳಿಸುವುದು, ಕುರುಬರ ಬೊಪ್ಪೇಗೌಡನ ಮನೆಯನ್ನು ದಾನವಾಗಿ ಪಡೆದು ಕುರಿ ದೊಡ್ಡಿಯ ಪಾಸ್ಗದ್ಗೆಯಲ್ಲಿ ಯೋಗನಿದ್ರೆಗೆ ಹೋಗುವುದು ಇಷ್ಟನ್ನು ನಾವು ಜನಪದ ಕಲಾವಿದರು ಹಾಡುತ್ತಿದ್ದೆವು.
ಮಂಟೇಸ್ವಾಮಿಯವರು ಕೆಂಪಾಚಾರಿಯನ್ನು ೧೨ ವರ್ಷ ಗವಿಯಲ್ಲಿ ತಪಸ್ಸಿಗೆ ಇಟ್ಟು ಏನು ಮಾಡಿದರು? ಅದನ್ನು ಸ್ಥಳದಲ್ಲೇ ಹೋಗಿ ಪರಿಶೀಲನೆ ಮಾಡಿ, ಗುಂಡ್ಲುಪೇಟೆ ಕುರುಬನಕಟ್ಟೆ ಚನ್ನಯ್ಯಲಿಂಗಯ್ಯನವರ ಕಥೆ, ದೊಡ್ಡಗಾಜನೂರು, ಎತ್ಗಟ್ಟಿ ಬೆಟ್ಟ, ಕಾಮಯ್ಯನಪುರ, ನಂಜನಗೂಡು ತಾ. ಹುಣಸನಾಳಪ್ಪ, ಹೊಸಪುರದ ಚನ್ನಯ್ಯನ ದೇವಸ್ಥಾನದ ಕಥೆ, ಕುಪ್ಪರಹಳ್ಳಿ, ಗದ್ದಿಗಲ್ಲು, ಹಿಮವದ್ಗೋಪಲಸ್ವಾಮಿ ಬೆಟ್ಟದ ನೆಲೆ, ಕಾಗೆಮರಳ್ಳಿ ಈ ಸ್ಥಳಗಳ ಮಾಹಿತಿಯನ್ನು ಮೇಡಂ ಹೊಸದಾಗಿ ಸಂಗ್ರಹಿಸಿದ್ದಾರೆ. ನಮ್ಮನ್ನೂ ಕೆಲವು ಹೊಸ ಸ್ಥಳಗಳಿಗೆ ಕರೆದುಕೊಂಡು ಹೋಗಿ ನಮಗೆ ಹೇಳಿ ಅರ್ಥಮಾಡಿಸಿ ಸಾಹಿತ್ಯಕ್ಕೆ ತಕ್ಕಂತೆ ನಮ್ಮಿಂದ ಜನಪದ ದಾಟಿಯನ್ನು ಕಟ್ಟಿಸಿ ಹಾಡಿಸಿದ್ದಾರೆ.. ಎಂದು ಗುಂಡ್ಲುಪೇಟೆ ತಾ. ಕೆಬ್ಬೇಪುರದ ಆರ್. ಸಿದ್ದರಾಜು ಹೇಳಿದ್ದಾರೆ.
ಈ ಜನಪದ ಕಾವ್ಯದ ಒಳಗಡೆ ಹುಡುಕಿದಾಗ ನರನಾಡಿಗಳ ಚಿಕಿತ್ಸೆ, ಅರವಳಿಕೆ ಮದ್ದು, ಗಿಡಮೂಲಿಕೆ ಔಷಧಿ, ತಾಯಿಯ ಮಮತೆ, ತಂದೆಯ ಪ್ರೀತಿ, ಗುರುನಿಷ್ಠೆ, ಕರ್ತವ್ಯನಿಷ್ಠೇ ಇದೆಲ್ಲವೂ ಅಡಗಿದೆ. ಮಂಟೇಸ್ವಾಮಿ ಕಥೆಯ ಪ್ರಧಾನ ಘಟ್ಟವೆಂದರೆ ಕಾದಗಟ್ಟಿ ಪವಾಡ. ಮಾರೇಹಳ್ಳಿ ಕೆಂಪಾಚಾರಿ ಸಿದ್ಧಪಡಿಸಿದ ಕಾದಗಟ್ಟಿಯನ್ನು ಹತ್ತಿ ಅದರ ಮೇಲೆ ಕುಳಿತು ಪವಾಡ ಸದೃಶವಾಗಿ ಗೆದ್ದ ಸಿದ್ಧಪ್ಪಾಜಿ ನಿಜಕ್ಕೂ ಅಸಮಾನ್ಯ ಎಂದಿದ್ದಾರೆ ಸಾಹಿತಿ ಪಿ.ಸಿ.ರಾಜಶೇಖರ ಪಡಗೂರು.
ಮಂಟೇಸ್ವಾಮಿಯವರು ಮಾರೇಹಳ್ಳಿ ಕೆಂಪಾಚಾರಿಯನ್ನು ದತ್ತು ಪಡೆದು ಎಲೆಕುಂದೂರು ಬೆಟ್ಟದ ಕಾಳಿಂಗ ಗವಿಯಲ್ಲಿ ಕೂಡಿಹಾಕಿದ ನಂತರ ಕೆಂಪಾಚಾರಿಯ ತಪಸ್ಸು ಮುಗಿಯುವರೆಗಿನ ೧೨ ವರ್ಷದ ಅವಧಿಯಲ್ಲಿ ಮಂಟೇಸ್ವಾಮಿಯವರು ಪ್ರಯಾಣಿಸಿದ ಗುಂಡ್ಲುಪೇಟೆ, ನಂಜನಗೂಡು, ಚಾಮರಾಜನಗರ, ಕೊಳ್ಳೆಗಾಲ ತಾಲ್ಲೂಕುಗಳ ಗ್ರಾಮಗಳು, ತಮಿಳುನಾಡು, ವೈನಾಡುಗಳಲ್ಲಿ ತಿರುಗಿ ತಮ್ಮ ಧರೆಕಂಡ ಧರ್ಮಗುರು ಕೃತಿಯಲ್ಲಿ ಗದ್ಯ ಮತ್ತು ಈ ಪುಸ್ತಕದಲ್ಲಿ ಪದ್ಯ ರೂಪದಲ್ಲಿ ಹೊಸ ಸಾಹಿತ್ಯ ಸಂಗ್ರಹಿಸಿರುವುದಾಗಿ ಮೇಡಂ ಹೇಳಿದ್ದಾರೆ. ಇವರ ಕ್ಷೇತ್ರಕಾರ್ಯ ಅನುಭವವು ಸ್ವಾರಸ್ಯಕರವಾಗಿದೆ.
ಸಿದ್ದರಾಜು ಅವರ ಹಾಡನ್ನು ಮೇಡಂ ರೆಕಾರ್ಡ್ ಮಾಡಿಕೊಳ್ಳಲು ಗುಂಡ್ಲುಪೇಟೆ ಪಕ್ಕದ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಹೋಗಿ ಹಾಡುವಾಗ ದೇವಸ್ಥಾನದ ಹೊರಗಡೆ ಮಲಗಿದ್ದ ಬಸಪ್ಪ ಬಂದು ಹಾಡು ಕೇಳಿಸಿಕೊಂಡು ನಿಂತುಕೊಂಡಿತಂತೆ. ಸಿದ್ದಪ್ಪಾಜಿ ಹಾಡು ಬಿಟ್ಟು ಬೇರೆ ಪದ ಹಾಡುವಾಗ ಅದು ನಿಲ್ಲದೇ ಹೋಯಿತಂತೆ. ಆ ದೇವಸ್ಥಾನದಲ್ಲಿ ಅಲ್ಲಿಯ ತನಕ ತಂಬೂರಿ ಕಲಾವಿದರಾರು ತಂಬೂರಿ ಹಿಡಿದು ಹಾಡಿರಲಿಲ್ಲವಂತೆ. ಮಂಟೇಸ್ವಾಮಿಯವರ ಕಥೆಯೇ ಮೊದಲ ತಂಬೂರಿ ಕಥೆ ಎಂದು ಅರ್ಚಕರು ಖುಷಿಪಟ್ಟರಂತೆ. ಈವರೆವಿಗೆ ಹಾಡಿರುವ ಕಥೆಗಳಲ್ಲಿ ಎಲ್ಲರೂ ಹಾಡುವ ಕತೆ ಮಾತ್ರ ಇತ್ತು. ಈಗ ಮಂಟೇಸ್ವಾಮಿಯವರ ಜೀವನ ಯಾತ್ರೆಯ ಪ್ರತಿಯೊಂದು ಸ್ಥಳ, ಜನರ ಬಗ್ಗೆ ಪದ ಕಟ್ಟಿ ಹಾಡಲಾಗಿರುತ್ತದೆ. ನಾನು ಹೊಸ ಕಥೆಯನ್ನು ಹೇಳುವಾಗ ಅವರಿಗೆ ತುಂಬಾ ಕುತೂಹಲ. ಅಷ್ಟೇ ರಾಗವಾಗಿ ಸಿದ್ಧರಾಜು ಜೊತೆಗೆ ಹಿಮ್ಮೇಳ ಕಲಾವಿದರು ನೀಲಿಸಿದ್ದಯ್ಯ ಮತ್ತು ರಾಚಯ್ಯ ಮನತುಂಬಿ ಹಾಡಿರುತ್ತಾರೆ ಎಂದು ಮೇಡಂ ಖುಷಿಪಟ್ಟಿದ್ದಾರೆ. ಕಂಡಕಂಡವರನ್ನು ನಿಮ್ಮೂರ್ಯಾವ್ದು, ನಿಮ್ಮೂರಲ್ಲಿ ಸಿದ್ಧಪ್ಪಾಜಿ ಮಂಟೇಸ್ವಾಮಿ ದೇವಸ್ಥಾನ ಇದೆಯಾ? ಎಂದೆಲ್ಲಾ ವಿಚಾರಿಸಿಕೊಂಡು ತಿರುಗಿರುವ ಮೇಡಂ ಮೂಲತ: ಮಾರೇಹಳ್ಳಿಯವರು. ಈಗ ಮಳವಳ್ಳಿ ಟೌನ್ ವಾಸಿ.ಅಪ್ಪ ಆದಿಗೆ ಹೊನಾಯ್ಕನಳ್ಳಿ ಜಾಜಿಗೆ ಮಳವಳ್ಳಿ ಮಠಾಲಿಂಗಯ್ಯಸ್ವಾಮಿ ಬನ್ನೀ ಪವಡಾ..
—
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.