“ಜಾನಪದವು ತಾಯಿ ಮಡಿಲಿನಂತೆ” ; ಕನ್ನಡ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರ್ ಕಾಕಚೊಕ್ಕಂಡಹಳ್ಳಿ ಅಭಿಮತ

Must Read

ಬೆಂಗಳೂರು – ಜಾನಪದವು ಜಗತ್ತಿನ ಜನಜೀವನದ ಅಡಿಪಾಯ. ತಾಯಿಯ ಮಡಿಲು ಶಿಶುವಿಗೆ ಹೇಗೆ ಮಮತೆ, ಸಮತೆ ಮತ್ತು ಶಾಂತತೆ ನೀಡುತ್ತದೋ, ಹಾಗೆಯೇ ಜಾನಪದವು ಸಮಾಜಕ್ಕೆ ಭದ್ರತೆ, ಸಾಂಸ್ಕೃತಿಕ ಮಮತೆ ಮತ್ತು ಬದುಕಿನ ದಾರಿದೀಪವನ್ನು ಒದಗಿಸುತ್ತದೆ. ಆದ್ದರಿಂದಲೇ “ಜಾನಪದವು ತಾಯಿ ಮಡಿಲಿನಂತೆ” ಎಂದು ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ ಕಾಕಚೊಕ್ಕಂಡಹಳ್ಳಿ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದ ವತಿಯಿಂದ ‘ವಿಶ್ವ ಜಾನಪದ ದಿನ’ ಪ್ರಯುಕ್ತ ಆಯೋಜಿಸಲಾಗಿದ್ದ ‘ಆಧುನಿಕ ಸಂದರ್ಭದಲ್ಲಿ ಜಾನಪದ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದರ ಮನಸ್ಸು ಯಾವಾಗಲೂ ಮುಕ್ತ ಮತ್ತು ಯುಕ್ತ. ಎದುರಾಗುವ ಎಲ್ಲಾ ಕಟ್ಟುಪಾಡುಗಳೊಳಗೆ ಮೀರುತ್ತಾ ಬದುಕಿನ ತತ್ವವನ್ನು ಸರಳವಾಗಿ ಗ್ರಹಿಸಿ, ಜೀವನ್ಮುಖಿಯಾಗಿಸುವ ಶಕ್ತಿ ಜಾನಪದದಲ್ಲಿ ಇದೆ. ಜಾನಪದವು ಮನುಷ್ಯನ ಬದುಕನ್ನು ಸಮಗ್ರವಾಗಿ ಅಳೆಯುವ ಕನ್ನಡಿಯಂತೆ. ಅಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ, ತತ್ವ, ಧರ್ಮ, ಸಾಮಾಜಿಕ ಮೌಲ್ಯಗಳೂ ಇವೆ. ಬಡವರ ಬದುಕಿಗೆ ಮಾರ್ಗದರ್ಶನ ನೀಡುವ ಹಿತೋಪದೇಶಗಳು, ಸಮಾನತೆಯ ಮೌಲ್ಯ ಸಾರುವ ಕಥೆಗಳು, ಪ್ರಾಕೃತಿಕ ಶಕ್ತಿಗಳಿಗೆ ಗೌರವ ನೀಡುವ ನಂಬಿಕೆಗಳು ಬೆಳೆದುಬಂದಿವೆ. ಇಂದಿನ ಆಧುನಿಕ ಸಂಸ್ಕೃತಿಯ ತಾಯಿಬೇರು ಜಾನಪದವೇ ಆಗಿದೆ. ನಾವು ಇಂದಿನ ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆಗಳಲ್ಲಿ ಕಾಣುವ ಅನೇಕ ಅಂಶಗಳು ಜಾನಪದದಿಂದಲೇ ಬೆಳೆದುಬಂದಿವೆ. ಇಂದು ಯಂತ್ರಯುಗದಲ್ಲಿ ನಾವು ಆಧುನಿಕತೆ, ತಂತ್ರಜ್ಞಾನ, ನಗರೀಕರಣದ ನಡುವೆ ಬದುಕುತ್ತಿದ್ದರೂ, ಜಾನಪದವನ್ನು ಮನರಂಜನೀಯ ಸರಕಾಗಿ ನೋಡುತ್ತಿದ್ದರೂ ನಮ್ಮ ನೆಲಮೂಲ ಸಂಸ್ಕೃತಿಯ ಮೂಲಸತ್ವ ಮತ್ತು ತತ್ವವು ಜಾನಪದದಲ್ಲಿಯೇ ಇದೆ. ತಾಯಿಯನ್ನು ಮರೆತುಬಿಡಲು ಮಗುವಿಗೆ ಸಾಧ್ಯವಿಲ್ಲದಂತೆ, ಜಾನಪದವನ್ನು ಮರೆತುಬಿಡಲು ಆಧುನಿಕ ಸಂಸ್ಕೃತಿಗೆ ಸಾಧ್ಯವಿಲ್ಲ ಎಂದರು.

ಜಾನಪದವು ಸಾಮಾನ್ಯ ಶ್ರಮಿಕ ಜನರ ಹೃದಯಧ್ವನಿ. ಹೊಲದಲ್ಲಿ ದುಡಿಯುವ ರೈತನಿಂದ ಹಿಡಿದು ಕೂಲಿಕಾರ್ಮಿಕ, ಗಿರಿಜನ, ಪಶುಪಾಲಕ, ಮೀನುಗಾರ ಮೊದಲಾದ ಬಹುಜನರ ಬದುಕಿನ ನೋವು-ನಲಿವು, ಭಾವಾನುಭಾವದಲ್ಲಿ ಜಾನಪದದಲ್ಲಿ ಪ್ರತಿಫಲಿಸುತ್ತದೆ. ಶ್ರಮದಿಂದ ಆಯಾಸಗೊಂಡ ಮನಸ್ಸು ಕಲಾತ್ಮಕ ಸೃಜನಶೀಲತೆಯನ್ನು ಕಟ್ಟಿಕೊಳ್ಳುತ್ತದೆ.ಈ ಮೂಲಕ ಸುಮಧುರವಾದ ಕಥೆಗಳು, ಹಾಡುಗಳು, ಆಟಗಳು, ನಂಬಿಕೆಗಳು, ಕಲೆಗಳು ಎಲ್ಲವೂ ಜಾನಪದೀಯ ರೂಪ ಪಡೆದುಕೊಳ್ಳುತ್ತವೆ. ಈ ಅಂಶವೇ ಜಾನಪದವು ಶ್ರಮಿಕ ಜನರ ಸಹಾನುಭೂತಿ ಹಾಗೂ ಕಾರುಣ್ಯವುಳ್ಳದ್ದಾಗಿದೆ. ಜಾನಪದವು ಕೇವಲ ಭೂತಕಾಲದ ನೆನಪು ಅಲ್ಲ; ಅದು ನಮ್ಮ ಸಾರ್ವಕಾಲಿಕ ಸಾಂಸ್ಕೃತಿಕ ಹೃದಯ. ಆದ್ದರಿಂದ, ಜಾನಪದವನ್ನು ಕೇವಲ ಹಳೆಯದು ಎಂದು ತಿರಸ್ಕರಿಸದೆ, ಬದುಕಿನ ನಿತ್ಯ ಮಾರ್ಗದರ್ಶಕವೆಂದು ಗೌರವಿಸಬೇಕು ಎಂದು ತಿಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್., ಕಾರ್ಯಕ್ರಮದ ಸಂಯೋಜಕರಾದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಡಾ.ಕಿರಣಕುಮಾರ್ ಹೆಚ್.ಜಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿಎ ವಿದ್ಯಾರ್ಥಿ ಕುಮಾರ ಜೈ ಸಾಯಿ ನಿರೂಪಿಸಿದರು. ಕುಮಾರಿ ಅಂಕಿತಾ ಬೆಳ್ಳಿಕಟ್ಟಿ ಸ್ವಾಗತಿಸಿದರು.

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group