ರೈತರ ಸಂಭ್ರಮದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ.

Must Read

ಜಗತ್ತಿನ ಭೂಪಟದಲ್ಲಿ ದಕ್ಷಿಣ ಏಷ್ಯಾದಲ್ಲಿ ಕಂಗೊಳಿಸುವ ಭವ್ಯ ಭಾರತ ನಮ್ಮ ದೇಶ. ಇದು ಹಳ್ಳಿಗಳ ದೇಶ. ಹೆಚ್ಚಾಗಿ ಕೃಷಿ ಅವಲಂಬಿತ ಜನರನ್ನೇ ಹೊಂದಿರುವ ದೇಶ. ಅದರಲ್ಲೂ ನಮ್ಮ ಕರ್ನಾಟಕದ ಉತ್ತರ ಕರ್ನಾಟಕದ ಭಾಗದಲ್ಲಿ ರೈತರ ಹಬ್ಬಗಳು ತುಂಬಾ ಮಹತ್ವದಿಂದ ಕೂಡಿರುತ್ತವೆ. ಹತ್ತಾರು ವರ್ಷಗಳ ಕಾಲ ಬಾದಾಮಿ ತಾಲೂಕಿನಲ್ಲಿ ಶಿಕ್ಷಕ ಸೇವೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರತಿವರ್ಷ ಮಣ್ಣೆತ್ತಿನ ಅಮವಾಸ್ಯೆ ಹಬ್ಬಕ್ಕೆ, ಹಬ್ಬದ ಊಟಕ್ಕೆ ನಮಗೆ ಖಾಯಂ ಆಹ್ವಾನ ಇರುತ್ತಿತ್ತು. ಆಗ ನನ್ನ ವಿದ್ಯಾರ್ಥಿಗಳು ತುಂಬಾ ಉತ್ಸಾಹದಿಂದ ಮಣ್ಣಿನಿಂದ ಜೋಡೆತ್ತು ಮಾಡಿ ತಂದು ಪೂಜೆ ಮಾಡಿ ಶಾಲೆಯಲ್ಲೂ ಇಡುತ್ತಿದ್ದುದು ಈಗಲೂ ಹಾಗೇ ನೆನಪಿನಲ್ಲಿದೆ. ಇದೇನಿದು ಮಣ್ಣೆತ್ತಿನ ಅಮವಾಸ್ಯೆ ಬಗ್ಗೆ ಹೇಳುತ್ತಿದ್ದೇನೆ ಅನಿಸುತ್ತಿದೆಯೇ, ಹೌದು , ಬನ್ನಿ ಮಣ್ಣೆತ್ತಿನ ಅಮವಾಸ್ಯೆ ಹಬ್ಬದ ಬಗ್ಗೆ ಸ್ವಲ್ಪ ತಿಳಿಯೋಣ

ನಮ್ಮ ಭಾರತ ವೈವಿಧ್ಯತೆಯ ದೇಶ. ನಮ್ಮಲ್ಲಿರುವ ಸಂಪ್ರದಾಯ, ಹಬ್ಬ, ಆಚರಣೆಗಳಿಗೆ ಬಹಳ ಮಹತ್ವವಿದೆ. ಅದೇ ರೀತಿ ರೈತ ವರ್ಗಕ್ಕೇ ಹಲವಾರು ಹಬ್ಬಗಳಿವೆ. ರೈತರ ಉಸಿರೇ ಮಣ್ಣು ಮತ್ತು ಜಾನುವಾರುಗಳು, ಮಣ್ಣೆತ್ತಿನ ಅಮಾವಾಸ್ಯೆ ರೈತರಿಗೆ ಅತ್ಯಂತ ಮೆಚ್ಚಿನ ಹಬ್ಬ. ಕೃಷಿಕನ ಬದುಕಿನಲ್ಲಿ ಆಸರೆಯಾಗಿರುವ ಎತ್ತುಗಳನ್ನು ಪೂಜಿಸುವ ಹಬ್ಬ ಇದಾಗಿದೆ. ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದಾಗಿದೆ. ಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಹಬ್ಬ ಮಣ್ಣೆತ್ತಿನ ಅಮವಾಸ್ಯೆ. ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನಿಂದ ಮಾಡಿದ ಎತ್ತುಗಳಿಗೆ (ವೃಷಭ) ಅಲಂಕರಿಸಿ ಹಬ್ಬವನ್ನು ಆಚರಿಸಲಾಗುವುದು. ಮಣ್ಣಿನ ಎತ್ತಿನ ಪ್ರತಿಮೆಗಳಿಗೆ ಸಿಂಗರಿಸಿ ಪೂಜೆ ಮಾಡಲಾಗುವುದು.

ಮುಂಗಾರು ಮಳೆ ಸಾಮಾನ್ಯವಾಗಿ ಗ್ರೀಷ್ಮ ಋತುವಿನ ಅಂತ್ಯಭಾಗ ಮತ್ತು ವರ್ಷ ಋತುವಿನ ಆರಂಭವಾಗ ಅಂದರೆ ಜೂನ್ ವೇಳೆಗೆ ಪ್ರಾರಂಭವಾದಾಗ ಕೃಷಿ ಚಟುವಟಿಕೆಗಳು ಕೂಡ ಚುರುಕಾಗುತ್ತದೆ.
ಪುನರ್ವಸು ಮಳೆ ಪ್ರಾರಂಭವಾಗುವ ಹೊತ್ತಿಗೆ ಬಿತ್ತನೆ ಆಗಿ ನಾಟಿ ಕೂಡ ಮುಗಿದಿರುತ್ತದೆ. ಈ ಸಂಭ್ರಮವನ್ನು ಆಚರಿಸಲು ರೈತರು ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ. ಈ ದಿನ ರೈತರು ಹೊಲಕ್ಕೆ ಹೋಗಿ ಹೊಲದ ಮಣ್ಣು ತಂದು ಆ ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ನಂತರ ಅವುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡಿ ಪೂಜಿಸಲಾಗುವುದು. ನಂತರ ಎತ್ತುಗಳಿಗೆ ಹೋಳಿಗೆ, ಸಿಹಿ ಕಡಬು ಇಟ್ಟು ಸಮರ್ಪಿಸಲಾಗುತ್ತದೆ. ನಂತರ ತಮ್ಮ ಜಮೀನಿನಲ್ಲಿ ಆ ಎತ್ತುಗಳನ್ನು ಇಟ್ಟು ಭೂತಾಯಿ ಹಾಗೂ ಎತ್ತುಗಳು ತಮ್ಮ ಬೆಳೆಯನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುವುದು ವಾಡಿಕೆ. ಜೊತೆಗೆ ಮಣ್ಣಿನ ಆರಾಧನೆಯನ್ನು ಕೂಡ ಮಾಡಲಾಗುವುದು. ಮಣ್ಣಿನಿಂದ ಮಾಡಿದ ಗಣಪತಿ, ನಾಗಪ್ಪನನ್ನು ಗಣೇಶ ಚತುರ್ಥಿ ಮತ್ತು ನಾಗರ ಚೌತಿ ದಿನ ಪೂಜಿಸುವಂತೆ ರೈತರು ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಆಚರಿಸುತ್ತಾರೆ.

ಭೂಮಿಯಲ್ಲಿ ಹುಟ್ಟುವುದಾದರೆ ಭೂಮಿಯಲ್ಲಿ ಬೀಜ ಬಿತ್ತಲು, ಬಿತ್ತಿದ ಫಸಲು ಬಂದ ಮೇಲೆ ಧಾನ್ಯ ರೂಪದಿಂದ ನಾವು ಪಡೆಯಲು ಈ ವೃಷಭಗಳ ಸೇವೆ ಅತ್ಯಂತ ಅವಶ್ಯವಾಗಿದೆ. ವೃಷಭವು ಶಿವನ (ರುದ್ರದೇವರ) ವಾಹನವಾದ್ದರಿಂದ ಶಿವನು ನಂದೀಶನೆಂದೇ ಪ್ರಸಿದ್ಧನಾಗಿದ್ದಾನೆ. ಹೀಗೆ ಮಾನವನು ವೃಷಭಗಳಿಗೆ ಅತ್ಯಂತ ಕೃತಜ್ಞನಾಗಿದ್ದಾನೆ. ಪಂಚಭೂತಗಳಿಂತ ನಿರ್ಮಿತವಾದ ಈ ದೇಹವು ಪಂಚಭೂತಗಳಲ್ಲಿ ಒಂದಾದ ಭೂಮಿಯ ಅಂಶದಿಂದ ಕೂಡಿದೆ. ಭೂದೇವಿಯ ಪೂಜೆಯೂ ಮಣ್ಣೆತ್ತಿನ ಪೂಜೆಯಲ್ಲಿ ಅಡಗಿದೆ. ಈ ದಿವಸ ವಿಶೇಷ ಅಡುಗೆಯನ್ನು ಮಾಡಿ ಭೂತಾಯಿ, ಅಗ್ನಿ, ವಾಯು, ದೇವರುಗಳಿಗೆ ನಿವೇದಿಸಿ, ವೃಷಭಗಳಿಗೆ ನೈವೇದ್ಯ ಸಲ್ಲಿಸಿ ಮನೆ ಮಂದಿ ಭೋಜನ ಮಾಡುವುದು ಮಣ್ಣೆತ್ತಿನ ಅಮವಾಸ್ಯೆ ಹಬ್ಬದ ಸಂಭ್ರಮ. ಬನ್ನಿ, ಇತ್ತೀಚಿನ ಆಧುನಿಕ ಯಂತ್ರೋಪಕರಣಗಳ ಈ ಕಾಲದಲ್ಲಿ ಹಳ್ಳಿಗಳಲ್ಲಿ ರೈತರ ಮನೆಗಳಲ್ಲಿ ಎತ್ತುಗಳು ಇರುವುದೇ ಅಪರೂಪ. ಎತ್ತು ದನಕರುಗಳನ್ನು ಸಾಕುವದೂ ಕೂಡ ಇಂದಿನ ಜನರಿಗೆ ಬೇಡವಾಗಿದೆ. ಎತ್ತುಗಳನ್ನು ಸಾಕಿ, ಅವುಗಳಿಗೆ ಮೇವು ನೀರು, ರಕ್ಷಣೆ ಮಾಡುವದು ಕಷ್ಟವಾಗಿದೆ. ಹಾಗಾಗಿ ಇಂತಹ ಹಬ್ಬ ಹರಿದಿನಗಳಲ್ಲಿ , ಮಣ್ಣೆತ್ತಿನ ಅಮವಾಸ್ಯೆ ಹಬ್ಬದ ಮೂಲಕವಾದರೂ ಎತ್ತುಗಳಿಗೆ ಸಿಂಗರಿಸಿ, ಪೂಜೆ ಮಾಡಿ, ಪುನೀತರಾಗೋಣ. ಮಣ್ಣಿನಲ್ಲಿ ಜೋಡೆತ್ತುಗಳನ್ನು ಮಾಡಿ, ಬಾಲ್ಯದಲ್ಲಿ ಆಡಿದ ನೆನಪು ಯಾವತ್ತೂ ಮರೆಯದೆ, ಬದುಕು ಎಷ್ಟೇ ವಿಲಾಸಿ ಆದರೂ ಹಣ ಆಸ್ತಿ ಸಂಪತ್ತು ಗಳಿಸಿದರೂ ಹೊಟ್ಟೆಗೆ ಉಣ್ಣಲು ಅನ್ನ ಬೆಳೆಯುವ ರೈತನ ಕಾಯಕ, ರೈತನ ಹಬ್ಬಗಳನ್ನು ಎಂದಿಗೂ ಮರೆಯದೆ ಆಚರಿಸಿ ಉಳಿಸಿಕೊಂಡು ಹೋಗೋಣ. ಏನಂತೀರಾ..

ಲೇಖನ:
ಸಂತೋಷ್ ಬಿದರಗಡ್ಡೆ
ಶಿಕ್ಷಕ ಸಾಹಿತಿ, 8310158542.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group