ಬಂಜಾರಾ (ಲಂಬಾಣಿ/ಲಮಾಣಿ) ಸಮುದಾಯವು ಭಾರತದಾದ್ಯಂತ ಹರಡಿರುವ, ರಾಜಸ್ಥಾನ ಮೂಲದ ಪ್ರಾಚೀನ ಅಲೆಮಾರಿ ಬುಡಕಟ್ಟು ಜನಾಂಗ. ಐತಿಹಾಸಿಕವಾಗಿ ಇವರು ಪಶುಸಂಗೋಪನೆ, ಉಪ್ಪು ಮತ್ತು ಧಾನ್ಯಗಳ ವ್ಯಾಪಾರ ಹಾಗೂ ಸೈನ್ಯಕ್ಕೆ ಸರಕು ಸಾಗಣೆ ಮಾಡುತ್ತಿದ್ದರು. ‘ಗೋರ್ ಮತಿ’ (ಸ್ವಂತ ಜನರು) ಎಂದು ಕರೆಯಿಸಿಕೊಳ್ಳುವ ಇವರು, ಸಂಸ್ಕೃತದ ‘ವನ ಚಾರ’ (ಅರಣ್ಯದಲ್ಲಿ ಸಂಚರಿಸುವವರು) ಪದದಿಂದ ಬಂಜಾರ ಎಂಬ ಹೆಸರು ಪಡೆದಿದ್ದಾರೆ.
ಮೂಲ ಮತ್ತು ವಲಸೆ:
ಇವರು ಮೂಲತಃ ರಾಜಸ್ಥಾನ ಮತ್ತು ಗುಜರಾತ್ ಪ್ರದೇಶದವರು. ಕಾಲಕ್ರಮೇಣ, ವಿಶೇಷವಾಗಿ ಸೈನ್ಯದ ಸರಕು ಸಾಗಣೆದಾರರಾಗಿ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಹರಡಿದರು. “ಲಡಾನಿಯಾ” (ಸರಕು ಸಾಗಿಸುವವರು) ಎಂದು ಕರೆಯಲ್ಪಡುತ್ತಿದ್ದರು. ಮೊಘಲ್ ಮತ್ತು ಮರಾಠಾ ಸೈನ್ಯಗಳಿಗೆ ಧಾನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು.
ಸಾಂಸ್ಕೃತಿಕ ಅಸ್ಮಿತೆ: ಬಂಜಾರರು ತಮ್ಮದೇ ಆದ ವಿಶಿಷ್ಟ ಭಾಷೆ (ಬಂಜಾರಿ/ಲಂಬಾಡಿ), ವರ್ಣರಂಜಿತ ಉಡುಪುಗಳು (ಕಸೂತಿ ಕೆಲಸದ), ಮತ್ತು ನೃತ್ಯ ಸಂಪ್ರದಾಯವನ್ನು ಹೊಂದಿದ್ದಾರೆ. ಇವರ ತಾಂಡಾಗಳು (ವಸತಿ ಪ್ರದೇಶ) ವಿಶಿಷ್ಟ ಸಾಮಾಜಿಕ ರಚನೆಯನ್ನು ಹೊಂದಿವೆ. ಇವರು ಮುಖ್ಯವಾಗಿ ಸಂತ ಸೇವಾಲಾಲ್ ಅವರನ್ನು ಆರಾಧಿಸುತ್ತಾರೆ. ಕರ್ನಾಟಕದ ದಾವಣಗೆರೆ ಜಿಲ್ಲೆಯ ಸೂರುಗೊಂಡನಕೊಪ್ಪದಲ್ಲಿ ಇವರ ಪ್ರಮುಖ ದೇವಾಲಯವಿದೆ.
ಬಂಜಾರಾ ಸಮುದಾಯವು ತಮ್ಮ ಧಾರ್ಮಿಕ ಸಾಮಾಜಿಕ ಆಧ್ಯಾತ್ಮಿಕ ವಿಶಿಷ್ಟ ಅಸ್ಮಿತೆ ಸಂಸ್ಕೃತಿಯನ್ನು ಉಳಿಸಿಕೊಂಡಿದೆ. ಇಂತಹ ಅಲೆಮಾರಿ ಜನಾಂಗದ ಬುಡಕಟ್ಟಿನ ಜನರ ಮಧ್ಯೆ ಒಬ್ಬ ಸತ್ಪುರುಷ ಸಾಧಕ ಹುಟ್ಟಿದ್ದು ಆಶ್ಚರ್ಯ ಮತ್ತು ಆನಂದವನ್ನುಂಟು ಮಾಡುತ್ತದೆ. ಆ ಶ್ರೇಷ್ಠ ವ್ಯಕ್ತಿಯೇ ಸೇವಾಲಾಲ
ಸೇವಾಲಾಲ್ ಮಹಾರಾಜ (15 ಫೆಬ್ರವರಿ 1739 – 4 ಡಿಸೆಂಬರ್ 1806) ಒಬ್ಬ ಭಾರತೀಯ ಸಾಮಾಜಿಕ-ಧಾರ್ಮಿಕ ಸುಧಾರಕ ಮತ್ತು ಬಂಜಾರಾ ಸಮುದಾಯ ನಾಯಕ. ಇವರನ್ನು ಗೋರ್ ಬಂಜಾರ ಸಮುದಾಯದವರಿಂದ ಆಧ್ಯಾತ್ಮಿಕ ಗುರು ಎಂದು ಗೌರವಿಸಲಾಗುತ್ತದೆ. 15 ಫೆಬ್ರುವರಿ 1739 ರಂದು, ಭೀಮ ನಾಯ್ಕ ಹಾಗೂ ಧರ್ಮಣಿ ಬಾಯಿ ದಂಪತಿಗಳ ಮಗನಾಗಿ ಜನಿಸಿದರು. ಬಂಜಾರ ಸಮುದಾಯದ ಖಾತೆಗಳ ಪ್ರಕಾರ, ಇವರು ರಾಮ್ ಜೀ ನಾಯಕ ಕರೆಯಲ್ಪಡುವ, ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ತಾಲ್ಲೂಕಿನ, ಸೇವಾಗಡ ಎಂಬ ಗ್ರಾಮದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಭಾರತೀಯ ಪತ್ರಿಕಾ ಸೂಚನಾ ಕಾರ್ಯಾಲಯ (PIB) ಪ್ರಕಾರ ಇವರು ಕರ್ನಾಟಕ ರಾಜ್ಯದ, ಮೂಲದವರು. ಈಗಿನ ಶಿವಮೊಗ್ಗ ಜಿಲ್ಲೆಯ, ಸೂರಗೊಂಡನಕೊಪ್ಪದಲ್ಲಿ ಜನಿಸಿದರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇವರ ಮೇಲೆ ಶಿವಮೊಗ್ಗ ಜಿಲ್ಲೆಯ ಶರಣರ ವಚನ ಸಾಹಿತ್ಯ ಚರಿತ್ರೆ ಪ್ರಭಾವ ಬೀರಿರಲು ಸಾಧ್ಯವಿದೆ.
ಜೀವನ ಮತ್ತು ವೃತ್ತಿ :
ಇವರು ವೃತ್ತಿಯ ಮೂಲಕ ಪಶು ಸಾಕಣೆ ಹಾಗೂ ಸಂಗೋಪನೆ ಮಾಡುವ ವ್ಯಕ್ತಿ. ಅವರು ಸಂಗೀತಗಾರ, ಧೈರ್ಯಶಾಲಿ ಯೋಧ, ಮೂಢನಂಬಿಕೆ ವಿರುದ್ಧ ಹೋರಾಡಿದ ವಿವೇಚನಾಶೀಲ ವ್ಯಕ್ತಿ ಹಾಗೂ ಜಗದಂಬಾ ದೇವಿಯ ಆರಾಧಕರಾಗಿದ್ದರು ಎಂದು ಹೇಳಲಾಗುತ್ತಿದೆ.
ವಸಾಹತುಶಾಹಿ ಬ್ರಿಟಿಷ್ ಆಡಳಿತಗಾರರು ತಮ್ಮ ಕಥೆಗಳನ್ನು ಇವರ ಬಗ್ಗೆ ಉಲ್ಲೇಖಿಸುತ್ತಾರೆ. ಆದರೆ ಅವರು 19ನೇ ಶತಮಾನದಲ್ಲಿ ಇಟ್ಟು ಅವರ ಮೂಲ ಹೆಸರನ್ನು ಸೆವ ರಾಥೋಡ್ ಎಂದು ಗುರುತಿಸುತ್ತಾರೆ.
ಬಂಜಾರ ಅಲೆಮಾರಿ ಜನಾಂಗದ ಬುಡಕಟ್ಟಿನ ಜನರ ಶ್ರಮಿಕ ಸಂಸ್ಕೃತಿಯ ಮತ್ತು ಅಲೆಮಾರಿ ಜೀವನದಿಂದಾಗಿ ದುಡಿತ ಮತ್ತು ಜೀವನ ನಡೆಸುವ ಹೊರತು ಮತ್ತೆ ಬೇರೆ ಯಾವುದೇ ಮಾರ್ಗ ಗೊತ್ತಿರಲಿಲ್ಲ. ತಮ್ಮದೇ ಆಡಳಿತ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಸೇವಾಲಾಲ ಇವರು ಬಂಜಾರಾ ಸಮಾಜದ ಅಪ್ರತಿಮ ಸಾಧಕರು. ತಮ್ಮ ಸಮುದಾಯದ ಜನರಲ್ಲಿ ವ್ಯಸನ ಮುಕ್ತಗೊಳಿಸಿ ಆರೋಗ್ಯಕರ ಜೀವನ ಶೈಲಿ ಕಲಿಸಿ ಕೊಡುವುದಲ್ಲದೆ ಇವರಲ್ಲಿ ಭಕ್ತಿ ಪದ ಭಜನೆ ಪ್ರಾರ್ಥನೆ ಕೀರ್ತನೆ ಸೇವಾ ಮನೋಭಾವ ಸಾಂಘಿಕ ಬದುಕಿನ ಸಾರ್ಥಕತೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಟ್ಟರು. ಲಂಬಾಣಿ ಜನರು ನಿರ್ವ್ಯಸನಿಗಳು ನೀತಿವಂತರು ಶ್ರಮಜೀವಿಗಳು ದೇವರು ಭಕ್ತಿಯುಳ್ಳವರಾಗಬೇಕೆಂದು ಸೇವಾಲಾಲ ಅವರು ಸಂಕಲ್ಪ ಮಾಡಿ ತಮ್ಮ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ದುಡಿದರು. ಕರ್ನಾಟಕ ಮಹಾರಾಷ್ಟ್ರ ಆಂಧ್ರ ಪ್ರದೇಶದ ಬಂಜಾರಿ ಸಮಾಜಕ್ಕೆ ಆದರ್ಶ ಶ್ರೇಷ್ಠ ಸಂತೆ ಎನಿಸಿಕೊಂಡರು.
*ಮರಣ*
ಸೇವಾಲಾಲರು 04 ಡಿಸೆಂಬರ್ 1806 ರಂದು
ತಮ್ಮ 67 ನೆಯ ವಯಸ್ಸಿನಲ್ಲಿ
ರೂಹಿಘರ್, ಯವತ್ಮಲ್ ಜಿಲ್ಲೆ, ಮಹಾರಾಷ್ಟ್ರದಲ್ಲಿ ಸ್ವರ್ಗಸ್ಥರಾದರು. ಇವರ ಸಮಾಧಿ ಪೊಹರಘರ್, ವಾಸ್ಸಿಮ್ ಜಿಲ್ಲೆ, ಮಹಾರಾಷ್ಟ್ರ,ದಲ್ಲಿ ಇದೆ. ಸೇವಾಲಾಲ್ ಮಹಾರಾಜನ್ನು ಪ್ರಸನ್ನಿಸುವ ಜಾನಪದ ಹಾಡುಗಳು ಬಂಜಾರ ಉತ್ಸವಗಳಲ್ಲಿ ಜನಪ್ರಿಯವಾಗಿವೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೋಹೊರಾ ದೇವಿ ಎಂಬ ಗ್ರಾಮದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಪ್ರಮುಖ ದೇವಾಲಯವಿದೆ. ಬಂಜಾರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜಗದಾಂಬ ಮಾತಾ ದೇವಸ್ಥಾನ, ಜಗದಾಂಬ ಯಾಡಿ ಮಂದಿರ ಕೂಡ ಇಲ್ಲಿದೆ. ಮತ್ತೊಂದು ಸೇವಾಲಾಲ್ ಮಹಾರಾಜ್ ದೇವಸ್ಥಾನವು ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲುಕಿನ ಸುರಗೊಂಡನಕೊಪ್ಪ ಗ್ರಾಮದಲ್ಲಿದೆ.ದೇವಸ್ಥಾನಗಳಿಗೆ ಸೇವಾಲಾಲ್ ಮಹಾರಾಜರ ಭಕ್ತರು ಮಾಲಾಧಾರಣೆ ಮಾಡಿ ವ್ರತದಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಮತ್ತು ಜಪ ಮಾಡುತ್ತಾ ಪಾದಯಾತ್ರೆ ಹೋಗುತ್ತಾರೆ.
ಇಂತಹ ಒಬ್ಬ ಶ್ರೇಷ್ಠ ಸಂತ ಶರಣರಿಗೆ ನೂರು ನಮನಗಳು
________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

