spot_img
spot_img

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

Must Read

spot_img
- Advertisement -

ಗುರುಪೂರ್ಣಿಮಾ ವಿಶೇಷ

ಅರಿವಿಗೆ ಅನಂತ ಶಯನನಾಗಿ
ಜ್ಞಾನ ಜ್ಯೋತಿ ಬೆಳಗುತ್ತಿರುವ
ಗುರಿತೋರುವ ನೇತಾರ

ಬದುಕು ಭವಿಷ್ಯದ ಹಾದಿಯ
ದಿಟ್ಟ ಹೆಜ್ಜೆಯಿಡಲು ಗುರಿ
ತೋರುವ ದೈವದ ಗುರಿಕಾರ

- Advertisement -

ಜ್ಞಾನದ ತೃಷೆಯನ್ನು ತಣಿಸಿದ
ಬದುಕನ್ನು ಹದಗೊಳಿಸುವ
ಗುರುಬಲದ ಶಿಲ್ಪಿಗಾರ

ಸಕಲ ಜ್ಞಾನವಾಹಿನಿ ಜಾಗೃತಿ
ಜಗಕೆ ಬೆಳಕನ್ನು ಪ್ರಜ್ವಲಿಸುವ
ನಭೋಮಂಡಲದ ಸೂರ್ಯ

ಶಾಂತಿ ಶಿಸ್ತು ಸಹನೆ ತಾಳ್ಮೆಗಳ
ಒಳಿತು ಕೆಡುಕುಗಳ ಅರಿವು
ನೀಡುವ ಪರಮ ಗುರುವರ್ಯ

- Advertisement -

ಕಲ್ಲನ್ನು ಕಡೆದು ಆಕೃತಿ ನೀಡಿ
ತಿದ್ದಿ ತೀಡಿ ಶಿಲ್ಪಿಯ ತೆರದಿ
ರೂಪ ನೀಡುವ ಜ್ಞಾನದಾತ

ಅಕ್ಷರವೆಂಬ ದೀಕ್ಷೆಯ ಪದಗ್ರಹ
ವರವ ನೀಡಿ ಔನತ್ಯದೆಡೆಗೆ
ಕೊಂಡೊಯ್ಯುವ ಭಾಗ್ಯದಾತ

ಪರಮಸ್ವರೂಪಿ ಗುರುವಿನ ಗುರುಪೂರ್ಣಿಮೆಗೆ ಶುಭಾಶಯಗಳು.

🌹 ಸಂಸ್ಕೃತದಲ್ಲಿ ಗುರು ಎಂಬ ಪದದ ಅರ್ಥ ‘ಕತ್ತಲೆಯನ್ನು ದೂರ ಮಾಡುವುದು’. ಭಾರತೀಯ ಸಂಸ್ಕೃತಿ ಯಾವಾಗಲೂ ಗುರುಗಳನ್ನು ಗೌರವಿಸಿದೆ. ಗುರು ನಮಗೆ ಕಲಿಸುತ್ತಾರೆ, ಜ್ಞಾನೋದಯ ನೀಡುತ್ತಾರೆ ಮತ್ತು ಬೆಳಕಿನೆಡೆ ನಮ್ಮನ್ನು ನಡೆಸುತ್ತಾರೆ. ನಮಗೆ ಜ್ಞಾನದ ಬೆಳಕನ್ನು ನೀಡುವ ಮೂಲಕ ನಮ್ಮನ್ನು ದೇವರಿಗೆ ಇನ್ನಷ್ಟು ಹತ್ತಿರ ಆಗುವಂತೆ ಮಾಡುತ್ತಾರೆ. ಆಷಾಢ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಆಚರಿಸಲಾಗುವುದೇ ಗುರು ಪೂರ್ಣಿಮಾ ತಿಥಿ.

🌹 ಗುರು ಪೂರ್ಣಿಮೆಯ ಮಹತ್ವ.

ಗುರುರ್ಬ್ರಹ್ಮ
ಗುರುರ್ವಿಷ್ಣು
ಗುರುರ್ದೇವೋ ಮಹೇಶ್ವರಃ
ಗುರುರ್ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ

ಅರ್ಥ:
ಗುರುವು ನಮ್ಮೊಳಗೆ ಜ್ಞಾನವನ್ನು ಹುಟ್ಟಿಸುವ ಬ್ರಹ್ಮನಂತೆ,
ನಮ್ಮ ಮನಸ್ಸಿನ ಜ್ಞಾನವನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ವಿಷ್ಣುವಿನಂತೆ, ನಮ್ಮ ಜ್ಞಾನಕ್ಕೆ ಅಂಟಿಕೊಂಡಿರುವ ತಪ್ಪು ಪರಿಕಲ್ಪನೆಗಳನ್ನು ನಾಶಪಡಿಸುವ ಶಿವನಂತೆ, ಹಾಗಾಗಿ ಗುರುವು ನಮಗೆ ಪರಮ ದೈವದಂತೆ. ನಾವು ನಮ್ಮ ಗುರುವನ್ನು ಪೂಜಿಸಬೇಕು ಮತ್ತು ಅವರಿಗೆ ಗೌರವ ನೀಡಬೇಕು.

🌹 ಗುರು ಪೂರ್ಣಿಮೆಯನ್ನು , ಮಹಾ ಗುರು ಕೃಷ್ಣ ದ್ವೈಪಾಯನ ವೇದವ್ಯಾಸರ ಸ್ಮರಣೆ ಮತ್ತು ಗೌರವಾರ್ಥ ಆಚರಿಸಲಾಗುತ್ತದೆ. ಅವರ ಕೆಲಸಗಳು ಸದಾ ಅಜ್ಞಾನವನ್ನು ದೂರ ಮಾಡಿರುವುದರಿಂದ ಹಿಂದೂಗಳು ಅವರಿಗೆ ಸದಾ ಋಣಿಗಳಾಗಿದ್ದಾರೆ. ಅವರು ನಾಲ್ಕು ವೇದಗಳ ಸಂಸ್ಥಾಪಕರು ಮಾತ್ರವಲ್ಲ, ಮಹಾಭಾರತ, ಶ್ರೀಮದ್ಭಾಗವತ ಮತ್ತು 18 ಪುರಾಣಗಳನ್ನು ರಚಿಸಿದ ಮಹಾನ್ ಗುರು ಕೂಡ. ವೇದವ್ಯಾಸರು ಗುರುಗಳ ಗುರುವೆಂಬ ಗೌರವಕ್ಕೆ ಪಾತ್ರರಾಗಿರುವ ದತ್ತಾತ್ರೇಯರ ಗುರು ಕೂಡ.

ಗುರು ಪೂರ್ಣಿಮಾ, ಆಚರಣೆ ಹೇಗೆ ?

🌹 ಹಿಂದೂಗಳು ಈ ದಿನವನ್ನು ಶಿವನಿಗೂ ಅರ್ಪಿಸುತ್ತಾರೆ. ಶಿವನು ವೇದ ಮತ್ತು ಪುರಾಣಗಳ ಜ್ಞಾನವನ್ನು ಸಪ್ತ ಋಷಿಗಳಿಗೆ ನೀಡಿದರು. ಹಾಗಾಗಿ ಭಗವಾನ್ ಶಿವನನ್ನು ಆದಿ ಗುರು, ಅಂದರೆ ಪ್ರಥಮ ಗುರು ಎಂದು ಕೂಡ ಕರೆಯುತ್ತಾರೆ.

🌹 ಬೌದ್ಧ ಧರ್ಮದಲ್ಲಿ ಬುದ್ಧ ಭಗವಾನ್ ಸಾರನಾಥದಲ್ಲಿ ಪ್ರಪ್ರಥಮ ಬೋಧನೆ ನೀಡಿದ ದಿನವೆಂದು ಪರಿಗಣಿಸಲಾಗುತ್ತದೆ.

🌹 ಜೈನ ಧರ್ಮದಲ್ಲಿ ಗುರು ಪೂರ್ಣಿಮೆಯನ್ನು, ಭಗವಾನ್ ಮಹಾವೀರ ಅವರು ಗೌತಮ ಸ್ವಾಮಿಯನ್ನು ತಮ್ಮ ಪ್ರಥಮ ಶಿಷ್ಯನನ್ನಾಗಿ ಸ್ವೀಕರಿಸಿದ ದಿನವೆಂದು ಆಚರಿಸಲಾಗುತ್ತದೆ.

🌹 ರೈತರು ಮತ್ತು ತೋಟಗಾರರಿಗೆ ಈ ದಿನವು ಅತ್ಯಂತ ಪವಿತ್ರ. ಏಕೆಂದರೆ ಈ ದಿನವನ್ನು ಮಳೆಯ ಆಗಮನದ ದಿನವೆಂದು ಪರಿಗಣಿಸಲಾಗುತ್ತದೆ.

🌹 ಆಷಾಢ ತಿಂಗಳಿನ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎನ್ನಲಾಗುತ್ತದೆ. ಈ ವರ್ಷ ಅದು ಜುಲೈ 21 ರಂದು ಆಚರಿಸಲ್ಪಡುತ್ತದೆ.

🌹 ಆಯಾ ಪಂಗಡದವರು ತಮ್ಮದೇ ಆದ ರೀತಿಯಲ್ಲಿ ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ. ಅಧ್ಯಾತ್ಮದ ಆಕಾಂಕ್ಷಿಗಳು ವೇದ ವ್ಯಾಸರ ಪೂಜೆಯನ್ನು ಇಟ್ಟುಕೊಳ್ಳುತ್ತಾರೆ. ಗುರು ಪೂರ್ಣಿಮೆ ಚಾತುರ್ಮಾಸದ ಆರಂಭವನ್ನು ಸೂಚಿಸುತ್ತದೆ. ಹಿಂದೂ, ಬೌದ್ಧ ಮತ್ತು ಜೈನ ಧರ್ಮದವರು, ಬ್ರಹ್ಮ ಮುಹೂರ್ತದಲ್ಲಿ (ಬೆಳಗ್ಗಿನ ಜಾವ 4 ಗಂಟೆಗೆ) ಎದ್ದು ಗುರು ಪೂರ್ಣಿಮೆ ಆಚರಿಸುತ್ತಾರೆ. ಅವರು ತಮ್ಮ ಗುರುವಿನ ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಧ್ಯಾನ ಮಾಡುತ್ತಾರೆ. ಬಳಿಕ ಅವರು ಗುರುಗಳ ಪಾದ ಪೂಜೆ ಮಾಡುತ್ತಾರೆ.

🌹 ಈ ದಿನ ಸಾಧು ಸಂತರನ್ನು ಪೂಜಿಸಲಾಗುತ್ತದೆ ಮತ್ತು ಅವರಿಗೆ ಮಧ್ಯಾಹ್ನದ ಭೋಜನವನ್ನು ನೀಡಲಾಗುತ್ತದೆ. ದಿನವಿಡೀ ಸತ್ಸಂಗ ಇರುತ್ತದೆ. ಸನ್ಯಾಸ ತೆಗೆದುಕೊಳ್ಳಬಯಸುವವರು ಈ ದಿನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ದಿನ ಕೆಲವರು ತಮ್ಮ ಆಧ್ಯಾತ್ಮಿಕ ಜ್ಞಾನ ಮತ್ತು ಗುರಿಗಳನ್ನು ಮುಂದುವರೆಸಲು ಹೊಸ ನಿರ್ಣಯಗಳನ್ನು ತೆಗೆದು ಕೊಳ್ಳುವರು ಮತ್ತು ಕೆಲವರು ಉಪವಾಸ ಮಾಡಬಹುದು. ಕೆಲವರು ಮೌನ ವ್ರತ ಆಚರಿಸಿ, ಇಡೀ ದಿನವನ್ನು ಆಧ್ಯಾತ್ಮಿಕ ಮತ್ತು ಧಾರ್ಮಿಕ ಪುಸ್ತಕಗಳ ಅಧ್ಯಯನದಲ್ಲಿ ಕಳೆಯುತ್ತಾರೆ.

🌹ತಮ್ಮ ಗುರುಗಳಿಗೆ ಧನ್ಯವಾದ ಹೇಳಿ, ಅವರ ಆಶೀರ್ವಾದ ಪಡೆಯುವ ಪುಣ್ಯ ದಿನವಿದು. ಈ ದಿನ ಯೋಗ, ಸಾಧನೆ ಮತ್ತು ಧ್ಯಾನದ ಅಭ್ಯಾಸಕ್ಕೂ ಸೂಕ್ತವಾಗಿದೆ.

ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group