spot_img
spot_img

ಮಾವಿನಕೊಪ್ಪ ಹನುಮಾನ ಮಂದಿರ

Must Read

- Advertisement -

ಆತ್ಮಿಯರೇ , ಹನುಮಂತನನ್ನು ಭಾರತದಲ್ಲಿ ವ್ಯಾಪಕವಾಗಿ ಪೂಜಿಸಲಾಗುತ್ತದೆ.ದೇಶದಾದ್ಯಂತ ಹನುಮಾನ್ ಮಂದಿರಗಳು ವ್ಯಾಪಕವಾಗಿ ಹರಡಿವೆ. ಅವುಗಳಲ್ಲಿ ವಿಶೇಷ ಹನುಮಾನ್ ಮಂದಿರಗಳು ಬಹಳ ಅಪರೂಪ.ಅಂತಹ ಹನುಮಾನ್ ಮಂದಿರವೊಂದು ಧಾರವಾಡ ಜಿಲ್ಲೆಯ ಮಾವಿನಕೊಪ್ಪ ಎಂಬ ಗ್ರಾಮದಲ್ಲಿದೆ. ಇತ್ತೀಚೆಗೆ ಎಲ್.ಐ.ಲಕ್ಕಮ್ಮನವರ ಗುರುಗಳು ನಮ್ಮ ತಂಡದ ಕಿರು ಚಿತ್ರ ‘ನಾ ಕಂಡ ಕನಸು’ ಚಿತ್ರೀಕರಣಕ್ಕೆ ಆರಿಸಿಕೊಂಡ ಸ್ಥಳವಿದು. ನಾವು ಮುಂಗಾರು ಮಳೆ ಚಿತ್ರದಲ್ಲಿ ಮುಗಿಲುಪೇಟೆ ಎಂಬ ಸ್ಥಳವನ್ನು ನೋಡುತ್ತೇವೆ ಎಸ್.ಧಾರವಾಡ ಜಿಲ್ಲೆಯ ಮಾವಿನಕೊಪ್ಪ ಮಲೆನಾಡಿನ ಸೆರಗಿನ ಮುಗಿಲಪೇಟೆ ಅಂದರೆ ಅತಿಶಯೋಕ್ತಿಯಾಗದು.

ಚಿತ್ರೀಕರಣದ ಅಂತಿಮ ದಿನ ನನಗೆ ಈ ಸ್ಥಳಕ್ಕೆ ಬರಲು ಹೇಳಿದರು. ರವಿವಾರ ಒಂದು ದಿನ ನನಗೆ ಪ್ರವಾಸದ ಯೋಜನೆ ಹಾಕಿಕೊಳ್ಳುವ ಸಮಯದ ದಿನ.ಧಾರವಾಡದಿಂದ ಸ್ನೇಹಿತ ರವಿಚಂದ್ರ ಅವರ ಕಾರಿನಲ್ಲಿ ಮಾವಿನಕೊಪ್ಪ ಗ್ರಾಮಕ್ಕೆ ತೆರಳುವುದು ಎಂದು ಮುಂಚಿತವಾಗಿ ಮಾತನಾಡಿಕೊಂಡೆವು. ನಾನು ಮುನವಳ್ಳಿಯಿಂದ ಧಾರವಾಡದವರೆಗೆ ಬೈಕಿನಲ್ಲಿ ತೆರಳಿ ಅಲ್ಲಿ ಬೈಕ್ ಇಟ್ಟು ನಂತರ ಕಾರಿನಲ್ಲಿ ಹೊರಡುವುದು ಎಂದು ಮೊದಲೇ ನಿಶ್ಚಯಿಸಿದ್ದರಿಂದ ರವಿಚಂದ್ರ ದೊಡ್ಡಿಹಾಳ ನಾನು ಧಾರವಾಡ ತಲುಪುವ ವೇಳೆಗೆ ಹುಬ್ಬಳ್ಳಿಯಿಂದ ಧಾರವಾಡ ತಲುಪಿದ್ದನು.ಅಲ್ಲಿಯೇ ತಿನ್ನಲು ಹಣ್ಣುಹಂಪಲು ತಗೆದುಕೊಂಡು ನಮ್ಮ ಪಯಣ ಆರಂಭಿಸಿದೆವು.
ಧಾರವಾಡ ಸಪ್ತಾಪುರ ಶ್ರೀನಗರ ದಾಟಿ ಹಳಿಯಾಳ ಮಾರ್ಗದಲ್ಲಿ ಚಲಿಸತೊಡಗುತ್ತಲೇ ಮುಂದೆ ದಟ್ಟವಾದ ಕಾಡಿನಂತೆ ಬೆಳೆದು ನಿಂತ ಮರಗಳು ಎಡಬಲಬದಿಯಲ್ಲಿ ಕಾಣತೊಡಗಿದಂತೆ ನಿಸರ್ಗದ ಸೊಬಗು ಕಣ್ಮನ ಸೆಳೆಯತೊಡಗಿತು.ಹಳಿಯಾಳ ಹೋಗುವ ರಸ್ತೆಯಲ್ಲಿ ಧಾರವಾಡದಿಂದ ೨೫ ಕಿ.ಮೀ ಅಂತರದಲ್ಲಿ ಮಾವಿನಕೊಪ್ಪ ಕ್ರಾಸ ಸಿಗುತ್ತದೆ.ಅಲ್ಲಿಂದ ೧ ಕಿ.ಮೀ ರಸ್ತೆಯಲ್ಲಿ ಬಂದರೆ ಮಾವಿನಕೊಪ್ಪ ಊರು ತಲುಪುವಿರಿ.ಇದು ಹಳಿಯಾಳದಿಂದ ೮ ಕಿ.ಮೀ.ಅಂತರದಲ್ಲಿದೆ. ಗ್ರಾಮ ತಲುಪತ್ತಲೇ ಬಲಬದಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಸ್ವಲ್ಪ ಕಾಲ್ನಡಿಗೆಯಲ್ಲಿ ಬಂದರೆ ಎಡಕ್ಕೆ ಕಾಣುವುದೇ ಹನುಮಾನ್ ಮಂದಿರ. ಸುತ್ತಲೂ ಗೋಡೆಗಳಿಗೆ ಕೆಂಪು ಬಣ್ಣ ಮತ್ತು ಮೇಲ್ಚಾವಣಿ ಕೆಂಪು ಹಂಚುಗಳಿಂದ ಕಾಣತೊಡಗುತ್ತದೆ.

ದೇವಾಲಯ ಎದುರಿನಲ್ಲಿ ವಿಸ್ತಾರವಾದ ಕೆರೆಯಿದೆ.ಅಲ್ಲಿ ಮೊಸಳೆಗಳಿವೆ ಎಚ್ಚರಿಕೆ ಎಂಬ ಫಲಕ ಕೂಡ ಲಗತ್ತಿಸಲಾಗಿದೆ. ನಮ್ಮ ಕಾರಿನಿಂದ ಇಳಿದು ದೇವಾಲಯ ಪಕ್ಕದ ಜೋಡಿಸಲಾಗಿರುವ ನಲ್ಲಿ ಇದ್ದು ಅದರ ಬದಿಯಲ್ಲಿ ಇಟ್ಟಿರುವ ನೀರಿನಲ್ಲಿ ಕೈಕಾಲು ತೊಳೆದುಕೊಂಡು ಅಲ್ಲಿನ ವ್ಯಾಪಾರಿಗಳಿಂದ ಕರ್ಪುರ.ಎಣ್ಣೆ.ತೆಂಗಿನ ಕಾಯಿ.ಬಾಳೆಹಣ್ಣು ಇತ್ಯಾದಿ ಖರೀದಿಸಿ ದೇವಾಲಯ ಪ್ರವೇಶಿಸಿದೆವು.
ಎದುರಿಗೆ ಹನುಮಂತ ದೇವರ ದರ್ಶನ.ಅಲ್ಲಿ ಪ್ರದಕ್ಷಿಣೆ ಹಾಕಲು ಇಕ್ಕೆಲಗಳಲ್ಲಿ ಒಳಗೆ ವ್ಯವಸ್ಥೆ ಇರುವುದು.ಗರ್ಭಗುಡಿಯಲ್ಲಿ ದೇವರ ಸನ್ನಿಧಿಯಿದೆ. ಪ್ರದಕ್ಷಿಣೆ ಹಾಕಿ ಬಂದು ದೇವರ ಮೂರ್ತಿ ಗಮನಿಸಿದಾಗ ಹನುಮಾನ್ ದೇವರ ಹಿಂದ ದೊಡ್ಡದಾದ ಹಾವಿನ ಹುತ್ತ ಗಮನಿಸಿದೆ. ಹನುಮಾನ್ ಮೂರ್ತಿಗಿಂತ ಎತ್ತರದಲ್ಲಿ ಹುತ್ತ ಬೆಳೆದಿರುವುದು ಗಮನಾರ್ಹ ಸಂಗತಿ.ಕರ್ಪುರ ಬೆಳಗಿ ನೈವೇದ್ಯ ಮಾಡಿದ ಅರ್ಚಕರು ಅಲ್ಲಿರುವ ಕಟ್ಟಿಗೆಯ ಗದೆಯಿಂದ ಬೆನ್ನುಮೇಲೆ ಸ್ಪರ್ಶಿಸಿ,ಪ್ರಸಾದ ನೀಡಿದನು.ಅಲ್ಲಿ ಓರ್ವ ಹಿರಿಯರು ಕುಳಿತಿದ್ದರು.ಅವರು ದೇವಸ್ಥಾನ ಸಮೀತಿಯ ಸದಸ್ಯರಲ್ಲಿ ಓರ್ವರು.ಅವರ ಹೆಸರು ಮಹಾವೀರ ಕಣವಿ.ಅವರೊಂದಿಗೆ ನಾನು ಮಾತಿಗಿಳಿದೆ.
ಈ ದೇವಾಲಯದ ವಿಶೇಷವೇನು ಎಂದಾಗ ಅವರು ದೇವಸ್ಥಾನ ಮತ್ತು ದೇವರ ಮೂರ್ತಿ ಕುರಿತು ದೃಷ್ಟಾಂತವೊಂದನ್ನು ಹೇಳಿದರು.

- Advertisement -

ದೇವಾಲಯ ಹಿನ್ನೆಲೆ ಕುರಿತ ದೃಷ್ಟಾಂತ
ಇದು ೮೦೦ ವರ್ಷಗಳಷ್ಟು ಹಳೆಯ ದೇಗುಲ.ಇತ್ತೀಚಿನ ವರ್ಷಗಳಲ್ಲಿ ಜೀರ್ಣೋದ್ದಾರ ಮಾಡಲಾಗಿದೆ.,೮ ಅಡಿ ಎತ್ತರದ ಮೂರ್ತಿ ವ್ಯಾಸ ಮಹರ್ಷಿಗಳಿಂದ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗುತ್ತದೆ.ಅದಕ್ಕೆ ಪುರಾವೆ ಎನ್ನುವಂತೆ ಬಾಲದಲ್ಲಿ ಗಂಟೆಯಿದೆ.ಇದು ಕದಂಬ ಅರಸರ ಕಾಲಕ್ಕೆ ಆಗಿದ್ದು,ಈ ದೇವಾಲಯದ ಕುರಿತು ಒಂದು ದೃಷ್ಟಾಂತ ಹೇಳುವರು.ಹಿಂದೆ ಶನಿಮಹಾದೇವ ಕೈಲಾಸವಾಸಿ ಪರಮೇಶ್ವರನ ಮೇಲೆ ತನ್ನ ದೃಷ್ಟಿ ಬೀರಲು ಕೈಲಾಸಕ್ಕೆ ತೆರಳಿದನು.ಈ ವಿಷಯ ನಾರದನಿಂದ ತಿಳಿದ ಪರಶಿವನು ಮಾರುವೇಷದಲ್ಲಿ ಭೂಲೋಕಕ್ಕೆ ತೆರಳಿದನು. ಶಿವನು ಕೈಲಾಸದಲ್ಲಿರದುದನ್ನು ಕಂಡ ಶನಿದೇವ ಬ್ರಹ್ಮ-ವಿಷ್ಣು-ಮಹೇಶ್ವರರ ಸ್ಥಳಕ್ಕೆ ತೆರಳಿದನು.ಶನಿಯ ವಕ್ರದೃಷ್ಟಿ ತಮ್ಮ ಮೇಲೆ ಬೀಳಬಾರದೆಂದು ತ್ರಿಮೂರ್ತಿಗಳು ನಾರದನ ಸಲಹೆ ಕೇಳುವರು.ಆಗ ನಾರದ ಆಂಜನೇಯನ ರೂಪದಲ್ಲಿ ಶನಿಯ ಈ ವಕ್ರದೃಷ್ಟಿ ದೇವತೆಗಳ ಮೇಲೆ ಬೀಳದಿರಲು ಶಿವನ ಮೂಲಕ ಶನಿಯನ್ನು ತುಳಿಯಬೇಕು ಎಂದು ಹೇಳಿದನು. ಇದು ಯೋಗ್ಯ ಉಪಾಯವೆಂದು ತಿಳಿದ ತ್ರಿಮೂರ್ತಿಗಳು ಶಿವನಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಶಿವನು ಹನುಮಂತನನ್ನು ಒಪ್ಪಿಸುವಂತೆ ಕೇಳಿಕೊಳ್ಳುವನು. ಈ ವಿಚಾರ ತಿಳಿದ ಹನುಮಂತ ಒಂದು ವೇಳೆ ತಾನು ಶನಿಯ ಕೋಪಕ್ಕೆ ತಾನು ತುತ್ತಾದರೆ ಗತಿಯೆಂತು.? ಎಂದು ಕೇಳಿದಾಗ , ತ್ರಿಮೂರ್ತಿಗಳು ಇದಕ್ಕೆ ಉಪಾಯ ಹೇಳುವುದಾಗಿ ಭರವಸೆ ನೀಡುವರು.ಅದರಂತೆ ಪರಶಿವನು ಹನುಮಂತನ ಮೈಯಲ್ಲಿ ಹೊಕ್ಕು ವೀರಾವೇಷದಿಂದ ಬರುತ್ತಿರುವ ಶನಿದೇವನ ಎದುರುಗೊಳ್ಳಲು, ಹನುಮಂತನನ್ನು ಕಂಡ ತಕ್ಷಣ ಶನಿದೇವನು ಆಶ್ಚರ್ಯಚಕಿತನಾಗಿ ನಿಲ್ಲುವನು.ಈ ಸಂದರ್ಭವರಿತ ಪರಶಿವನು ಹನುಮಂತನ ಅವತಾರದಲ್ಲಿ ಶನಿದೇವನನ್ನು ಜೋರಾಗಿ ತಳ್ಳಿ ತುಳಿದಾಗ ಅವನಲ್ಲಿದ್ದ ಕೋಪವಡಗಿ ಶಾಂತನಾಗುವನು.ಆಗ ದೇವತೆಗಳು ಪ್ರತ್ಯಕ್ಷರಾಗಿ ಇದಕ್ಕೆ ಪರಿಹಾರವನ್ನು ಕುರಿತು ಯೋಚಿಸುತ್ತಿರುವಾಗ ನಾಗದೇವತೆ ಪ್ರತ್ಯಕ್ಷಳಾಗಿ ಹನುಮಂತನಿಗೆ ತನ್ನ ರಕ್ಷೆ ಸದಾಕಾಲವೂ ಇರುತ್ತದೆ.ಅಂಜನೇಯನ ಮೂರ್ತಿ ನನ್ನ ಹುತ್ತದ ಮುಂದೆ ಪ್ರತಿಷ್ಠಾಪಿಸಿ ಪೂಜೆಗೊಳ್ಳುವಂತಾದರೆ ಭಕ್ತ ಜನಕ್ಕೆ ಶನಿಕಾಟವೂ ಇರುವುದಿಲ್ಲ.ಹನುಮಂತನ ಅನುಗ್ರಹ ಕೂಡ ಆಗುವಂತಾಗುವುದು.ಎಂದು ಹೇಳಿದಳು.,ಈ ರೀತಿ ಈ ದೇವಾಲಯದಲ್ಲಿ ನಾಗದೇವತೆಯ ಹುತ್ತದ ಮುಂದೆ ಹನುಮಂತನ ಮೂರ್ತಿ ಇರುವುದಾಗಿ ಈ ಹನುಮನನ್ನು ಪೂಜಿಸಿ ಆರಾಧಿಸುವ ಭಕ್ತರಿಗೆ ವಾಯುದೋಷಗಳು ಕೂಡ ಪರಿಹಾರವಾಗುವುದಾಗಿ ಇಲ್ಲಿನ ಜನ ಹೇಳುವರು.
ಹುತ್ತದ ಹಿಂದಿನ ಹನುಮ ಮೂರ್ತಿ ಇರುವ ದೇವಾಲಯ ಇಡೀ ಭಾರತದಲ್ಲಿ ಇದೊಂದೇ ಎಂದು ಇಲ್ಲಿನ ಜನ ಹೇಳುವರು.ಪುಟ್ಟದಾದ ಗ್ರಾಮಕ್ಕೆ ಶನಿವಾರ ನಾಡಿನೆಲ್ಲೆಡೆಯಿಂದ ಭಕ್ತ ಜನ ಬಂದು ದರ್ಶನ ಪಡೆದು ಹೋಗುವ ಮೂಲಕ ಪ್ರತಿ ಶನಿವಾರ ಈ ದೇವಾಲಯ ಭಕ್ತಜನರಿಂದ ತುಂಬಿರುತ್ತದೆ.

ಹನುಮಾನ್ ಮೂರ್ತಿಯ ವಿಶೇಷತೆ
ಇವನನ್ನು ಸರ್ಪಗಾವಲು ಹನುಮಂತ .ಸಂಚಾರಿ ಹಣಮಂತ ಎಂದು ಕರೆಯುವರು. ಸಂಚಾರಿ ಹನಮಂತ ಎನ್ನಲು ಕಾರಣ ಇಲ್ಲಿರುವ ಪಾದರಕ್ಷೆಗಳು.ಇವನ್ನು ಧರಿಸಿ ಇವನು ಸಂಚರಿಸುವನು ಎಂಬ ನಂಬಿಕೆ.ತಮ್ಮ ಗ್ರಾಮವನ್ನು ಕಾಯುವರು ಎಂಬ ನಂಬಿಕೆ.ಇನ್ನೂ ಹಲವು ಜನ ನಮ್ಮೂರ ಹನುಮಂತ ಎಂದು ಕೂಡ ಈ ಹನುಮಂತನನ್ನು ಕರೆಯುವರು. ಈ ಮೂರ್ತಿ ಬಹಳ ಆಕರ್ಷಕ.ಬಾಲದಲ್ಲಿ ಗಂಟೆ.ಕುತ್ತಿಗೆಯಲ್ಲಿ ಹುಲಿಯ ಉಗುರು ಒಂದು ಯಂತ್ರ (ತಾಯಿತ) ಜೊತೆಗೆ ಒಂದು ಮಣಿ ಸರ ಧರಿಸಿರುವುದು.ಇದರ ಜೊತೆಗೆ ನೆತ್ತಿಯ ಮೇಲೆ ಶಿವನ ಲಿಂಗ,ಒಂದು ಕೈಯಲ್ಲಿ ಲಿಂಗ ಇರುವುದು ವಿಶೇಷತೆ.ಇದು ಪರಶಿವನ ಸಂಕೇತಕ್ಕೆ ನಿದರ್ಶನ.ಕಾಲಲ್ಲಿ ಶನಿಯನ್ನು ತುಳಿದಿರುವುದನ್ನು ಕಾಣಬಹುದು.
ಜಾತ್ರೆ
ಯುಗಾದಿ ಪಾಡ್ಯಮಿಯದಂದು ಇಲ್ಲಿ ಜಾತ್ರೆ ಜರುಗುತ್ತದೆ.ಕಿಚ್ಚ ಹಾಯುವ ಪರಂಪರೆ ಇಲ್ಲಿ ಜರಗುತ್ತದೆ.ದೇವರಿಗೆ ಕೋರಿಕೆ ಸಲ್ಲಿಸಿದ ಭಕ್ತ ಜನರು ತಮ್ಮ ಕೋರಿಕೆ ಈಡೇರಿದರೆ ಜಾತ್ರೆಯಂದು ಇಲ್ಲಿ ಕಿಚ್ಚ ಹಾಯುವುದಾಗಿ ಸಂಕಲ್ಪ ಮಾಡಿಕೊಂಡಿರುವ ಕಾರಣ ಇಲ್ಲಿ ಜರಗುವ ಜಾತ್ರೆಯಂದು ಕಿಚ್ಚ ಹಾಯುವರು.ಉರಿಯುವ ಕೆಂಡದ ಮೇಲೆ ಕಿಚ್ಚ ಹಾಯುವ ಮೂಲಕ ತಮ್ಮ ಸಂಕಲ್ಪ ತೀರಿಸುವುದು ವಾಡಿಕೆ.
ದೋಷ ಪರಿಹಾರ,ವಿವಾಹವಾಗದವರಿಗೆ ವಿವಾಹ,ಮಕ್ಕಳಾಗದವರಿಗೆ ಮಕ್ಕಳು,ಭಕ್ತರ ವಿವಿಧ ಕಷ್ಟಗಳಿಗೆ ದೇವಾಲಯಕ್ಕೆ ಬಂದು ಭಕ್ತಿಯಿಂದ ನಮಿಸಿ ಸಂಕಲ್ಪ ಮಾಡಿಕೊಂಡು ಏಳು ಶನಿವಾರ ಬಂದು ದೀಪ ಹಚ್ಚಿ ದೇವರ ದರ್ಶನ ಮಾಡಿಕೊಂಡು ಹೋದರೆ ಇಷ್ಟಾರ್ಥ ಸಿದ್ದಿಯಾಗುವುದರಲ್ಲಿ ಸಂಶಯವಿಲ್ಲ ಎಂದು ನುಡಿಯುವರು.

ವೈ.ಬಿ.ಕಡಕೋಳ
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
*೯೪೪೯೫೧೮೪೦೦* ೮೯೭೧೧೧೭೪೪೨*

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group