ಬಂದೊಮ್ಮೆ ನೋಡು ನೆನಪು ಇದ್ದರೆ
ಶೋಕದೊಳಗೆನ್ನ ನೂಕಿ ಮಾತೆಲ್ಲ ಮೂಕ,
ಭಾವದ ಬೇಲಿಯಾಚಿನ ನಗೆಯ ಬೆಂಕಿ
ಎಲ್ಲೇ ಮೀರಿ ಕನಸ ಗಾಳಿ ಬಿಸಿ.
ಮೌನವಾಗಿದೆ ನೆನಪು ಹೊದಿಕೆ ಹೊದ್ದು!!
ಮೊದಲೇ ಕಾದ ದೇಹ ಸುಡುವ ನೆಲ.
ಎದೆಯ ನೋವಿಗೆ ಸಿಗದ ಮುಲಾಮು,
ಮರೆಯಾಗುತಿದೆ ನೆನಪ ನೀರ್ಗುದುರೆ.
ಕಣ್ಣ ಕಪ್ಪಾಗಿ ನಿನ್ನ ನೆನಪಲಿ ನೆಲತಬ್ಬಿದ ದೇಹ!!
ಮುತ್ತಿಕ್ಕಿ ಬಿತ್ತಿದ ಕನಸ ಭೀಜ.
ಮೊಳಕೆ ಬಿರಿಯದೆ ಗರ್ಭಪಾತ.
ಮಣ್ಣೋಳಗೆ ಗಡಗಡ ದಿನವೆಲ್ಲ ಅಳುತ,
ಸುಖಿಸಿದೆ ನೆನಪೆಂಬ ಜ್ವಾಲೆಯೊಳಗೆ!!
ಮಧ್ಯರಾತ್ರಿ ಮಧ್ಯದಮಲು ರೋಧಿಸುವ ನೆನಪು,
ರಚ್ಚೆಹಿಡಿದು ಅಮಲಿನ ದರ್ಪಣದೊಳೆ ರಾತ್ರಿ ಕಳೆದು,
ಕುಣಿ ಕುಣಿದಾಡುತ ಕಂಡಿತು ಹಗಲು,
ಸೋತಕಣ್ಣು ಗೋರಕೆ ಸದ್ದು ನಿನ್ನ ನೆನಪು!!
ಬರುವ ರೈಲು ತಬ್ಬುವ ತವಕ,
ಬಿರಿದ ಹೂ ಮಾಲೆಯ ಸಡಗರ,
ಗೋರಿಯ ಮೇಲೆ ಮೆರೆಯುವ ಹಂಬಲ
ಬಂದೊಮ್ಮೆ ನೋಡಿ ಹೋಗು ನೆನಪು ಇದ್ದರೆ!!
ಮಕ್ಕಳ ಜಾಗೃತಿ ಗೀತೆ
ಸುಂದರ ಭಾರತ ಮಡಿಲೋಳಗೆ,
ಕರೋನ ಬಂದಿತು ನಾಡೋಳಗೆ.
ಶಾಲೆಗೆ ಹೋಗುವ ನಾವುಗಳೆಲ್ಲ,
ಅಂತರ ಇರಬೇಕು ನಮ್ಮೋಳಗೆ.!!
ಕೈಬಾಯಿ ಮೂಗು ಮುಟ್ಟದಲೆ ,
ದೂರದಿ ಪಾಠವ ಕಲಿಬೇಕು.
ಅವಧಿಗೊಮ್ಮೆ ಕೈಯ ತೊಳೆದು,
ಆರೋಗ್ಯ ಗುಟ್ಟ ತಿಳಿಸಾಕು!!
ಕುಡಿಯುವ ನೀರು ,ಉಣ್ಣುವ ಊಟ,
ನಮ್ಮಯ ಬ್ಯಾಗಲಿ ಇರಬೇಕು,
ಬಯಲಲಿ ಕುಳಿತು ,ಅಂತರ ಕಾಯ್ದು,
ಊಟವ ಖುಷಿಯಲಿ ಉಣಬೇಕು!!
ಅವರನು ಮುಟ್ಟದೆ ,ಇವರನು ತಟ್ಟದೆ,
ಉಸಿರನು ತಾಕದೆ ನಡಿಬೇಕು.
ಚಿಣ್ಣಿದಾಂಡು, ಲಗೋರಿ ಓಟ,
ಮೈಕೈ ಮುಟ್ಟದಲೆ ಆಡಬೇಕು!!
ತರಗತಿ ಒಳಗೆ ,ಅಂತರ ಸುಳಿಗೆ,
ಸಿಲುಕದೆ ನಗುತಲಿ ಕಲಿಬೇಕು.
ಪೆನ್ನು,ಪೆನ್ಸಲ್ ,ಪುಸ್ತಕ ,ರಬ್ಬರ್,
ಯಾರನು ಕೇಳದೆ ಇರಬೇಕು!!
ಬಟ್ಟೆ ಬೂಟು ,ಪುಸ್ತಕ ಮಾಸ್ಕು,
ಎಲ್ಲರೂ ತಪ್ಪದೆ ಪಡಿಬೇಕು.
ಬೆದರದೆ ಹೆದರದೆ ,ಜಾಗೃತ ವಹಿಸಿ,
ಎಲ್ಲರೂ ಶಿಕ್ಷಣ ಪಡಿಬೇಕು!!
ಗಜಲ್
ಈಗೀಗ ಸತ್ಯ ಸವೆದಷ್ಟು ಬೆತ್ತಲಾಗುತ್ತಿದೆ,
ನೋವ ಬಸಿರು ಬಚ್ಚಿಟ್ಟಷ್ಟು ಬಯಲಾಗುತ್ತಿದೆ!!
ಸುಳ್ಳಿನ ಜೊತೆ ಬದುಕ ಸಾಗಿಸುವುದು ಕಷ್ಟ.
ನಂಬಿಕೆಯಂತು ನರಕಿತ್ತ ನಾಲಿಗೆಯಂತಾಗುತ್ತಿದೆ!!
ನಿನ್ನ ಮಾತಂತೂ ಜೀವ ಹನಿಯಷ್ಟು ಅಮೃತ.
ಮಾತ ಹಿಂದಿನ ಮಸದ ಚೂರಿ ಅಪನಂಬಿಕೆ ಕಕ್ಕುತ್ತಿದೆ!!
ಎದೆಯಲ್ಲಿಡಗಿದ ನಿನ್ನ ನೆನಪುಗಳು ಈಗ.
ಬೂದಿಯಲ್ಲಡಗಿದ ಬೆಂಕಿಯಂತೆ ದಿನ ಸುಡುತ್ತಿದ್ದ!!
ಹೊರಟು ನಿಂತಿದ್ದೆನೆ
ಬಾರದೂರಿನ ದಾರಿ ಹಿಡಿದು.
ಯಮಹನ ಹೃದಯ ನಿನ್ನ ನೆನಪು ಕನವರಿಸುತ್ತಿದೆ!!
ಗಜಲ್
ದಿನದ ಬದುಕಿಗಿಂತ ಸಾವು ದೊಡ್ಡದೆನಲ್ಲ ಬಿಡು ಗೆಳೆಯ.
ಹಸಿವ ಚೂರಿ ಚುಚ್ಚುತಿದೆ ನೋವು ಸಾಯುತಿಲ್ಲ ಬಿಡು ಗೆಳೆಯ..
ಹಸಿದ ತುಟಿಗಳು ಹನಿಗಾಗಿ ಹಪಹಪಿಸಿವೆ,
ಬಿದ್ದ ಮಳೆಯು ಕೊಚ್ಚಿ ಸಾಗರ ಸೇರುತ್ತಿದೆಯಲ್ಲ ಬಿಡು ಗೆಳೆಯ.
ಏನಿದೆ ಹೇಳಿ ಬರೀ ಧರ್ಮದ ಜಾತಿಯ ಮಂದೆ.
ಪ್ರಾಣಿ ಪ್ರೀತಿಗಿಂತ ಮನುಷ್ಯ ಪ್ರೀತಿ ಕಾಣುತ್ತಿಲ್ಲ ಬಿಡು ಗೆಳೆಯ..
ಅದೇ ಹಗಲು, ಅದೇ ಇರುಳು ನರಳಾಟ.
ಬದುಕಿಗಾಗಿ ಬಿದ್ದವರ ಗೋಳಾಟ ನೋಡಲಾಗುತ್ತಿಲ್ಲ ಬಿಡು ಗೆಳೆಯ..
ಈಗೀಗ ಪಾಪದ ಮಹಲು ಗಳು ಮೈನೆರೆಯುತ್ತಿವೆ.
ಗುಡಿಸಲಲಿ ಕಾಮಕ್ಕೆ ಕುಣಿಕೆಯಾದ ಸೀತೆಯರನು ಯಮಹನು ತಡೆಯಲಾಗುತ್ತಿಲ್ಲ ಬಿಡು ಗೆಳೆಯ..
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ