ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ ಹಾಗೂ ಭಾಷಾ ವಿಭಾಗವು ಆಯೋಜಿಸಿದ್ದ ‘ಹ್ಯೂಮಂತ್ರ-೨೦೨೪’ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನಕ್ಕೆ ಅಂಕಗಳೇ ಮುಖ್ಯವಲ್ಲ. ಕೇಳುವಿಕೆ, ಅರ್ಥಮಾಡಿಕೊಳ್ಳುವಿಕೆಯ ಮೂಲಕ ನಮ್ಮಲ್ಲಿ ಅಡಗಿರುವ ಅಪೂರ್ವ ಕೌಶಲ್ಯಗಳನ್ನು ಅಧ್ಯಾಪಕರ ಬೋಧನೆಗಳ, ಪ್ರೇರಣೆಗಳ ಮೂಲಕ ಪ್ರಬುದ್ಧಗೊಳಿಸಿಕೊಳ್ಳಬೇಕು. ಭಾಷೆ, ಸಾಹಿತ್ಯ ಇವೆಲ್ಲವೂ ನಮ್ಮನ್ನು ಪರಿಪೂರ್ಣಗೊಳಿಸುವಂಥವು. ನಮ್ಮ ಶಿಸ್ತುಬದ್ಧ ಕಲಿಕೆಯು ಸಾಧ್ಯವಾಗುವುದು ಅದಮ್ಯವಾದ ಆಸಕ್ತಿ ಮತ್ತು ಪರಿಶ್ರಮದಿಂದ ಮಾತ್ರವೆಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲರಾದ ರೆ. ಫಾ. ಲಿಜೋ ಪಿ. ಥಾಮಸ್ ಅವರು, ತರಗತಿ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗುವುದು ಕಾಲೇಜಿನ ಉನ್ನತಿಗೆ ಹಾಗೂ ಅರ್ಥಪೂರ್ಣ ಕಲಿಕೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕಾಲೇಜಿನ ಹಣಕಾಸು ಅಧಿಕಾರಿಗಳಾದ ರೆ.ಫಾ.ಜೈಸ್ ವಿ. ಥಾಮಸ್ ಅವರು ಸಮಾರೋಪ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮಾನವಿಕ ನಿಕಾಯದ ಡೀನರಾದ ಡಾ. ಗೋಪಕುಮಾರ ಎ.ವಿ., ಸಮಾಜ ವಿಜ್ಞಾನ ಹಾಗು ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಕಾವೇರಿ ಸ್ವಾಮಿ, ಕಾರ್ಯಕ್ರಮದ ಸಂಯೋಜಕರಾದ ಡಾ. ಶಿಖಾ ದಾಸ್ ಹಾಗೂ ಇತರ ಅಧ್ಯಾಪಕ ವರ್ಗದವರು, ಸಮಾಜ ವಿಜ್ಞಾನ ಹಾಗು ಭಾಷಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.