ಸಿಂದಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಇಡೀ ರಾಜ್ಯಾದ್ಯಂತ ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಅದರ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಂಚಮಸಾಲಿ ಸಮಾಜದ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಿಸಲಾತಿ ಒಕ್ಕೂಟದ ಅದ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಮಾತನಾಡಿ, ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ಹೋರಾಟ ನಿರಂತರವಾಗಿ ನಡೆದಿದೆ. ಅಲ್ಲದೆ ಕೂಡಲ ಸಂಗಮದಿಂದ ಬೆಂಗಳೂರವರೆಗೆ ಸುಮಾರು 750 ಕಿಮೀ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು ಆದರೆ ಬರೀ ಆಶ್ವಾಸನೆ ನೀಡಿ ಕೈತೊಳೆದುಕೊಂಡಿದ್ದಾರೆ ಮಾ. 15 ಗಡುವು ನೀಡುತ್ತೇವೆ ಅಷ್ಟರಲ್ಲಿ ಮಿಸಲಾತಿ ಘೋಷಣೆ ಮಾಡದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ ಮಾತನಾಡಿ, ಸಮಾಜದ ಜಗದ್ಗುರುಗಳ ನೇತೃತ್ವದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಜನ ಸೇರಿ ಪ್ರತಿಭಟನೆ ಹಮ್ಮಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2ಎ ಮಿಸಲಾತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಅದನ್ನು 2ಡಿ ಎಂದು ಘೋಷಣೆ ಮಾಡಿ ಅಳುವ ಮಕ್ಕಳ ಕೈಯಲ್ಲಿ ಪೆಪರಮಿಠಾಯಿ ನೀಡಿದಂತೆ ಆಶ್ವಾಸ ನೀಡಿ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಅಲ್ಲದೆ ಕಳೆದ ಬಜ್‍ಟ್ ಮಂಡನೆ ಸಂದರ್ಭದಲ್ಲಿ ಘೋಷಣೆ ಮಾಡುತ್ತಾರೆ ಎನ್ನುವ ಭರವಸೆ ಇತ್ತು ಅದನ್ನು ಹುಸಿಗೊಳಿಸಿ ಸರಕಾರ ಮಲತಾಯಿ ಧೋರಣೆ ತೋರಿದ್ದಾರೆ. ಇದರ ಪರಿಣಾಮ ಮುಂದೆ ಎದುರಿಸಬೇಕಾಗುತ್ತದೆ ನಮ್ಮ ಶ್ರೀಗಳು ನೀಡಿದ ಗಡುವಿನಂತೆ ಸ್ಪಂದಿಸಿ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಶಿವರಾಜ ಪೊಲೀಸಪಾಟೀಲ ಮಾತನಾಡಿದರು.
ಸಿದ್ದು ಪಾಟೀಲ ಹೂನಳ್ಳಿ, ಕಾಳಪ್ಪ ಬಗಲಿ, ಕುಮಾರ ದೇಸಾಯಿ, ಮಲ್ಲನಗೌಡ ಪಾಟೀಲ, ರಾಮಚಂದ್ರ ಕಲಬುರ್ಗಿ, ಬಾಪುಗೌಡ ಬಿರಾದಾರ, ಶಂಕರ ಬಮ್ಮನಳ್ಳಿ, ಸಂತೋಷ ನೆನಶೆಟ್ಟಿ, ಕಲ್ಯಾಣಿ ಬಿರಾದಾರ, ನಾನಾಗೌಡ ಪಾಟೀಲ, ಗುರಣ್ಣ ಮಾನಸುಣಗಿ, ರಾಜು ಮುಜಗೊಂಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.