ಪತ್ರಕರ್ತರು ಜನರಿಗೆ ಶಿಕ್ಷಣ ನೀಡುವವರು – ಅಜಿತ ಮನ್ನಿಕೇರಿ
ಮೂಡಲಗಿ – ಪತ್ರಕರ್ತರು ಸುದ್ದಿ ಕೊಡುವ ಮೂಲಕ ಜನರಿಗೆ ಶಿಕ್ಷಣ ಕೊಡುವವರು. ಪತ್ರಿಕೆ ನಡೆಸುವುದು ಒಂದು ಜವಾಬ್ದಾರಿಯುತ ಕೆಲಸ. ಇದನ್ನು ಪತ್ರಕರ್ತರು ಸಾಧಿಸಬೇಕು ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಪ್ರಾದೇಶಿಕ ಪತ್ರಿಕೆಗಳ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಊರಿನಲ್ಲಿ ಆಗಬೇಕಾದ ಕೆಲಸಗಳು, ಸಾಧನೆಗಳು, ಅವ್ಯವಸ್ಥೆಯ ಕುರಿತು ಜನರಿಗೆ ತಿಳಿವಳಿಕೆ ನೀಡಬೇಕು. ಆಚಾರ ವಿಚಾರಗಳನ್ನು ಎಲ್ಲರಿಗೂ ತಿಳಿಯುವಂತೆ ತಮ್ಮ ಪತ್ರಿಕೆಗಳಲ್ಲಿ ಬರೆಯಬೇಕು ಎಂದರು.
ಕರ್ನಾಟಕ ನವನಿರ್ಮಾಣ ಸೇನೆಯ ಸಂಚಾಲಕ ಸಚಿನ್ ಲಂಕೆನ್ನವರ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಾಗ ಎಲ್ಲ ಪತ್ರಕರ್ತರು ಒಂದಾಗುತ್ತಾರೆ. ಅಂಥವರಿಗೆ ಅಧಿಕಾರಿಗಳು, ಸಮಾಜದ ಹಿರಿಯರು ಪ್ರೋತ್ಸಾಹ ನೀಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪತ್ತಾರ ಅವರು, ರಾಜ್ಯ ಮಟ್ಟದ ಪತ್ರಿಕೆಗಳ ಸಹಕಾರದೊಂದಿಗೇ ಪ್ರಾದೇಶಿಕ ಪತ್ರಿಕೆಗಳ ಪತ್ರಕರ್ತರು ಸೇರಿಕೊಂಡು ಸಂಘ ಆರಂಭಿಸಿದ್ದೇವೆ ಹಾಗಂತ ಅವರೊಂದಿಗೆ ನಮಗೆ ಯಾವುದೇ ಭಿನಾಭಿಪ್ರಾಯವಿಲ್ಲ. ಪ್ರಾದೇಶಿಕವಾಗಿದ್ದುಕೊಂಡೇ ಸಮಾಜ ಸೇವೆ ಮಾಡುವ ಉದ್ದೇಶ ಹೊಂದಿದ್ದೇವೆ. ನಾವೆಲ್ಲ ಪರಸ್ಪರ ಸಹಮತದಿಂದ ಇದ್ದೇವೆ ಎಂದರು.
ಪತ್ರಕರ್ತರು ಬೆಳೆಯಲು ಹೆಚ್ಚು ಪ್ರೋತ್ಸಾಹ ಸಿಗುವುದೇ ಪ್ರಾದೇಶಿಕ ಪತ್ರಿಕೆಗಳಿಂದ. ದೊಡ್ಡ ಪತ್ರಿಕೆಗಳಲ್ಲಿ ಒಂದು ಕಟ್ಟಳೆ ಇರುತ್ತದೆ ಆದರೆ ಇಲ್ಲಿ ಹಾಗಲ್ಲ. ಸ್ಥಳೀಯ ಸುದ್ದಿಗಳಿಗೂ ಇಲ್ಲಿ ಹೆಚ್ಚಿನ ಮಹತ್ವ ಸಿಗುತ್ತದೆ. ಪ್ರಾದೇಶಿಕ ಪತ್ರಿಕೆಗಳಿಂದ ಹೆಚ್ಚೆಚ್ಚು ಜನಪರ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ಪತ್ತಾರ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮಾತನಾಡಿದರು.
ಈ ಮುಂಚೆ ಸಸಿಗೆ ನೀರೆರೆಯುವ ಮೂಲಕ ಸಂಘದ ಉದ್ಘಾಟನೆ ನೆರವೇರಿಸಿ, ಸಂಘದ ವತಿಯಿಂದ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ವೇದಿಕೆಯ ಮೇಲೆ ಪುರಸಭಾ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ಹಾದಿಮನಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಪಶು ವೈದ್ಯಾಧಿಕಾರಿ ಡಾ. ಎಮ್ ಬಿ ವಿಭೂತಿ, ಪುರಸಭೆಯ ಅಧಿಕಾರಿ ಸಿ ಬಿ ಪಾಟೀಲ ಉಪಸ್ಥಿತರಿದ್ದರು.
ಪತ್ರಕರ್ತ ಉಮೇಶ ಬೆಳಕೂಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.