Homeಸುದ್ದಿಗಳುಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಗೆ ʻಮಾಹಿತಿ ಹಕ್ಕು ಸೇವಾ ಭೂಷಣʼ ಪ್ರಶಸ್ತಿ

ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಗೆ ʻಮಾಹಿತಿ ಹಕ್ಕು ಸೇವಾ ಭೂಷಣʼ ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮಾಹಿತಿ ಹಕ್ಕು ತಜ್ಞರಿಗಾಗಿ ಮೀಸಲಿಟ್ಟಿರುವ ʻಮಾಹಿತಿ ಹಕ್ಕು ಸೇವಾ ಭೂಷಣʼ ದತ್ತಿ ಪ್ರಶಸ್ತಿಗಾಗಿ ಹಿರಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ನಾಡಿನಲ್ಲಿ ಮಾಹಿತಿ ಹಕ್ಕಿನ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರಿಗೆ ಈ ಪ್ರಶಸ್ತಿಯನ್ನು ಕಳೆದ ೮ ವರ್ಷ ಗಳಿಂದ ಪರಿಷತ್ತು ನಿರಂತರವಾಗಿ ನೀಡುತ್ತ ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೦೨೩ನೇ ಸಾಲಿನ ಮಾಹಿತಿ ಹಕ್ಕು ತಜ್ಞರಿಗಾಗಿ ಮಾಹಿತಿ ಹಕ್ಕು ತಜ್ಞ ಜೆ.ಎಂ.ರಾಜಶೇಖರ ಅವರ ಹೆಸರಿನ ʻ ಮಾಹಿತಿ ಹಕ್ಕು ಸೇವಾ ಭೂಷಣʼ ದತ್ತಿ  ಪ್ರಶಸ್ತಿಗಾಗಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರನ್ನು ಸಮಿತಿಯು ಆಯ್ಕೆ ಮಾಡಿರುತ್ತದೆ. 

ಪ್ರಶಸ್ತಿಯು ೫,೦೦೦(ಐದು ಸಾವಿರ)ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಮಾಹಿತಿ ಹಕ್ಕು ತಜ್ಞ ಜೆ.ಎಂ ರಾಜಶೇಖರ ಅವರ ಹೆಸರಿನಲ್ಲಿ ಪಿ. ಮಹೇಶ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿ ನಿಧಿಯನ್ನು ೨೦೧೪ ರಲ್ಲಿ ಸ್ಥಾಪಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಹಿನ್ನೆಲೆಯಲ್ಲಿ ಪಾರದರ್ಶಕ ಆಡಳಿತ ನೀಡುವ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸುವುದಕ್ಕೆ ಮಾಹಿತಿ ಹಕ್ಕು ಸಾರ್ವಜನಿಕರಿಗೆ ವರದಾನವಾಗಿದೆ. ಈ ಹಕ್ಕನ್ನು ಬಳಸಿಕೊಂಡು ಕಾನೂನಾತ್ಮಕ ಹೋರಾಟ ಮಾಡುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಬೇಕು ಎನ್ನುವುದು ದತ್ತಿ ದಾನಿಗಳ ಮೂಲ ಆಶಯವಾಗಿದೆ. ಇಂಥ ಮಹತ್ವದ ದತ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ವಾಸಾರ್ಹತೆಗೆ ಮತ್ತೊಂದು ಗರಿಯಾಗಿದೆ. ಮಾಹಿತಿ ಹಕ್ಕು ಜಾರಿಗೆ ಬಂದಾಗಿನಿಂದ ಕೆಲವು ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಥವರಿಗಾಗಿ ಮೀಸಲಿಟ್ಟಿರುವ ಈ ಪ್ರಶಸ್ತಿ ನಾಡಿನ ಹೆಮ್ಮೆಯ ಪ್ರಶಸ್ತಿಯಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ  ಅವರು ಅಭಿಪ್ರಾಯ ಪಟ್ಟಿದ್ದಾರೆ.

ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ  ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.


ಶ್ರೀನಾಥ್ ಜೆ

ಮಾಧ್ಯಮ ಸಲಹೆಗಾರರು

ಕನ್ನಡ ಸಾಹಿತ್ಯ ಪರಿಷತ್ತು 

ಬೆಂಗಳೂರು

RELATED ARTICLES

Most Popular

error: Content is protected !!
Join WhatsApp Group