ಬೆಳಗಾವಿ ಜಿಲ್ಲಾ ಶೈಕ್ಷಣಿಕ ರಂಗ
೧೯೩೧ ರಲ್ಲಿ ಕರ್ನಾಟಕ ಆಯುರ್ವೇದ ವಿದ್ಯಾಪೀಠದವರು ಶಹಾಪುರ ಭಾಗದಲ್ಲಿ ಬಿ. ಎಂ. ಕಂಕಣವಾಡಿ ಆಯುರ್ವೇದ ಕಾಲೆಜು ಮತ್ತು ಆಸ್ಪತ್ರೆ ಆರಂಭಿಸಿದರು. ಅದು ಇತ್ತೀಚೆಗೆ ಕೆಎಲ್ ಇ. ಸಂಸ್ಥೆಯ ಆಧೀನಕ್ಕೊಳಪಟ್ಟಿದೆ. ೧೯೩೨ ರಲ್ಲಿ ನಾಗನೂರು ಸ್ವಾಮೀಜಿ ಬೋರ್ಡಿಂಗ್ ತಲೆಯೆತ್ತಿತು. ಬೆಳಗಾವಿಯಲ್ಲಿ ನಾಗನೂರು ಮಠದ ಈ ಉಚಿತ ಪ್ರಸಾದ ನಿಲಯ ಅಸಂಖ್ಯಾತ ಬಡ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಪಡೆಯಲು ನೆರವಾಗಿದೆ. ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ( ಜೆಎನ್ ಎಂಸಿ.) ೧೯೬೩ ರಲ್ಲಿ ಆರಂಭವಾಗಿ ಇಂದು ಅದು ಬೃಹತ್ಪ್ರಮಾಣದ ಸುಸಜ್ಜಿತ ಆಸ್ಪತ್ರೆಯೊಂದಿಗೆ ಹೆಸರು ಗಳಿಸಿದೆ.
ಐವತ್ತರ ದಶಕದಿಂದ ರಭಸದ ಬೆಳವಣಿಗೆ ಕಾಣುತ್ತ ಬಂದ ಬೆಳಗಾವಿಯಲ್ಲಿ ಇಂದು ಎಲ್ಲ ಬಗೆಯ ಶಿಕ್ಷಣ ಸೌಲಭ್ಯವೂ ಇದೆ. ಅನೇಕ ಹೊಸ ಹೊಸ ಶಿಕ್ಷಣ ಸಂಸ್ಥೆಗಳು ಶಿಶುವಿಹಾರದಿಂದ ಕಲಾ ವಿಜ್ಞಾನ ವಾಣಿಜ್ಯ, ಕಾನೂನು ಮೆಡಿಕಲ್, ಇಂಜನಿಯರಿಂಗ್, ಕಾಲೇಜುಗಳನ್ನು ಹೊಂದಿವೆ. ನಾಗನೂರು ಮಠದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ, ಶೇಖ್ ಹೋಮಿಯೋಪಥಿ ಶಿಕ್ಷಣ ಸಂಸ್ಥೆ, ಗೊಮ್ಮಟೇಶ ವಿದ್ಯಾಪೀಠ , ಮರಾಠಾ ಮಂಡಳ, ಭರತೇಶ ಶಿಕ್ಷಣ ಸಂಸ್ಥೆ, ಬಿಕೆ ಮಾಡೆಲ್ ಹೈಸ್ಕೂಲ್, ಚಿಂತಾಮಣಿರಾವ್ ಸರಕಾರಿ ಜ್ಯೂ. ಕಾಲೇಜು, ಸರಸ್ವತಿ ಹೈಸ್ಕೂಲು, ಮಹಿಳಾ ವಿದ್ಯಾಲಯ, ವನಿತಾ ವಿದ್ಯಾಲಯ , ಜ್ಯೋತಿಬಾ ಫುಲೆ ಜ್ಯೂ. ಕಾಲೇಜು, ಭಾವುರಾವ್ ಕಾಕತಕರ ವಾಣಿಜ್ಯ ಕಾಲೇಜು, ಸನ್ಮತಿ ಶಿಕ್ಷಣ ಸಂಸ್ಥೆಯ ಕಾಮರ್ಸ್ ಕಾಲೇಜು, ಶೆರ್ಮನ್ ಪ್ರಾಥಮಿಕ ಶಾಲೆಗಳು, ಕೆ.ಎಸ್. ಎಸ್. ಸಂಸ್ಥೆಯ ಅರವಿಂದರಾವ್ ಜೋಶಿ ಶಿಕ್ಷಕರ ತರಬೇತಿ ಕಾಲೇಜು, ವಿಶ್ವಭಾರತ ಸೇವಾ ಸಮಿತಿಯ ರಜಪೂತ ಬಂಧು ಹೈಸ್ಕೂಲು, ಪಂಡಿತ ನೆಹರೂ ಮಾಧ್ಯಮಿಕ ಶಾಲೆ, ಇಸ್ಲಾಮಿಕ್ ಸಂಸ್ಥೆಯ ಜ್ಯೂ. ಕಾಲೇಜು, ಅಂಜುಮನ್ ಶಿಕ್ಷಣ ಸಂಸ್ಥೆಯ ಕಾಲೇಜು, ಆದರ್ಶ ವಿದ್ಯಾಲಯ, ಹಿಂದಮಾತಾ ವಿದ್ಯಾಲಯ, ರಂಗುಬಾಯಿ ಭೋಸಲೆ ಹೈಸ್ಕೂಲು, ಕ್ರಾಂತಿವೀರ ಸಂಗೊೞ್ಳಿ ರಾಯಣ್ಣ ಶಿಕ್ಷಣ ಸಂಸ್ಥೆಗಳು, ಜೀಜಾಮಾತಾ ಹೆಣ್ಣುಮಕ್ಕಳ ಹೈಸ್ಕೂಲ್, ಹಲವು ಡೆಂಟಲ್, ಪಾರ್ಮಸಿ , ನರ್ಸಿಂಗ್ ಕಾಲೇಜುಗಳು ಇವೆಲ್ಲ ಬೆಳಗಾವಿಯ ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ, ಸಮೃದ್ಧಗೊಳಿಸಿವೆ. ಇನ್ನೂ ಹೊಸ ಹೊಸ ಶಿಕ್ಷಣ ಸಂಸ್ಥೆಗಳು ತಲೆಯೆತ್ತುತ್ತಲೇಇವೆ.
ಜಿಲ್ಲೆಯ ಗೋಕಾಕ, ಚಿಕ್ಕೋಡಿ, ಸವದತ್ತಿ, ಸಂಕೇಶ್ವರ, ಹುಕ್ಕೇರಿ, ಖಾನಾಪುರ, ನಂದಗಡ, ಬೈಲಹೊಂಗಲ, ರಾಮದುರ್ಗ, ರಾಯಬಾಗ, ಅಥಣಿ, ನಿಪ್ಪಾಣಿ ಮೊದಲಾದ ತಾಲೂಕು ಪ್ರದೇಶಗಳಲ್ಲಿಯೂ ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಅಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹುಟ್ಟಿ ಶಾಲೆಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಹಾದಿ ಮಾಡಿಕೊಟ್ಟಿವೆ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ಬಹಳ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಕೆಲವು ದಶಕಗಳ ಹಿಂದೆ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣ ಪಡೆಯುವದೂ ಬಹಳ ಕಷ್ಟವೆನಿಸುತ್ತಿದ್ದ ಗ್ರಾಮೀಣ ಭಾಗಗಳ ಮಕ್ಕಳಿಗೆ ಇಂದು ತಮ್ಮ ತಮ್ಮ ಊರಿನಲ್ಲೇ ಶಿಕ್ಷಣ ಪಡೆಯುವ ಅವಕಾಶ ಒದಗಿಬಂದಿದೆ. ಇದು ಶೈಕ್ಷಣಿಕ ಪ್ರಗತಿಗೆ ಹಾದಿ ಮಾಡಿಕೊಟ್ಟಿದೆ.
ಬೆಳಗಾವಿ ಜಿಲ್ಲೆ ಮೂರು ವಿಶ್ವವಿದ್ಯಾಲಯಗಳನ್ನು ಪಡೆದ ಹಿರಿಮೆ ಹೊಂದಿದೆ. ಭೂತರಾಮನಹಟ್ಟಿ ಭಾಗದಲ್ಲಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ನೆಲೆಸಿದೆ. ರಾಜ್ಯದಲ್ಲೇ ಏಕೈಕವೆನಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ( ವಿ. ಟಿ.ಯು.) ಮತ್ತು ಕೆ. ಎಲ್. ಇ. ಡೀನ್ಡ್ ಯುನಿವರ್ಸಿಟಿಗಳು ಸಹ ಬೆಳಗಾವಿಯ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ.
ಬೆಳಗಾವಿ ಬೆಳೆಯುತ್ತಲೇ ಇರುವ ನಗರ. ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯನ್ನು ಅಳವಡಿಸಿಕೊಂಡು ತನ್ನ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ನಗರದ ಜನರ ಅಂತಃಸತ್ವವನ್ನು ಹೆಚ್ಚಿಸಲು ವಿವಿಧ ಶಿಕ್ಷಣ ಸಂಸ್ಥೆಗಳು ನೆರವಾಗುತ್ತಿವೆ. ಜ್ಞಾನದ ಬಾಗಿಲನ್ನು ತೆರೆದಿಟ್ಟು ಆಧುನಿಕ ಬದುಕಿನೊಡನೆ ಸಾಗಬೇಕಾದ ಯುವಜನಾಂಗವನ್ನು ವೈಚಾರಿಕವಾಗಿ , ಬೌದ್ಧಿಕವಾಗಿ ಬೆಳೆಸುವ ಕೆಲಸವನ್ನು ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳು ಜನಜೀವನದ ಅನಿವಾರ್ಯ ಮತ್ತು ಅವಿಭಾಜ್ಯ ಅಂಗಗಳು. ಅವುಗಳ ಬೆಳವಣಿಗೆಯೆಂದರೆ ಸಮಾಜದ ಬೆಳವಣಿಗೆ. ಆದ್ದರಿಂದಲೇ ನಾಗರಿಕ ಸಮಾಜ ಯಾವತ್ತೂ ಈ ಶಿಕ್ಷಣ ಸಂಸ್ಥೆಗಳಿಗೆ ಋಣಿಯಾಗಿರಬೇಕಾಗುತ್ತದೆ.
ಎಲ್ ಎಸ್ ಶಾಸ್ತ್ರಿ