spot_img
spot_img

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

Must Read

- Advertisement -

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಅಗತ್ಯತೆ ಮತ್ತು ಹುಡುಗಿಯರ ಸಬಲೀಕರಣ ಹಾಗೂ ಅವರ ಮಾನವ ಹಕ್ಕುಗಳನ್ನು ಬಲಪಡಿಸುವ ಅಗತ್ಯತೆಯನ್ನು ಪ್ರತಿಪಾದಿಸುತ್ತದೆ.

ಭಾರತದ ಅನೇಕ ಭಾಗಗಳಲ್ಲಿ ಈಗಲೂ ಹೆಣ್ಣು ಮಗು ಜನಿಸುವುದು ಬಹುತೇಕ ಕುಟುಂಬಗಳಿಗೆ ಸ್ವಾಗತಾರ್ಹ ಸಂಗತಿಯಲ್ಲ ಎಂಬುದು ಬಹಿರಂಗ ಸತ್ಯ. ಅವಳ ಆಗಮನದಿಂದಲೇ, ಅವಳು ಜೀವನದ ಪ್ರತಿಯೊಂದು ಹಂತದಲ್ಲೂ ತಾರತಮ್ಯ, ಅವಮಾನ ಮತ್ತು ದಬ್ಬಾಳಿಕೆಯನ್ನು ಎದುರಿಸುತ್ತಲೇ ಇದ್ದಾಳೆ. ಮುಂದೆ ಕೂಡ ಎದುರಿಸುತ್ತಾಳೆ ಅನ್ನೋ ಹಾಗೆ ಆಗಿದೆ ಇಂದಿನ ಪರಿಸ್ಥಿತಿ. ಹೆಣ್ಣು ಮಗುವಿನ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಬೆಳವಣಿಗೆಯ ಅವಕಾಶಗಳ ವಿಷಯದಲ್ಲಿ ತಾರತಮ್ಯ ಎದುರಿಸುತ್ತಿರುವ ಅನೇಕ ಉದಾಹರಣೆಗಳಿವೆ.

ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳದಂತಹ ಹೇಯ ಕೃತ್ಯಗಳನ್ನು ತಡೆಗಟ್ಟಲು, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ “ಪ್ರತಿ ವರ್ಷ ಅಕ್ಟೋಬರ್‌ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ”. ಡಿಸೆಂಬರ್ 19, 2011 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಕ್ಟೋಬರ್ 11 ಅನ್ನು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಘೋಷಿಸಿತು. 2012 ರಲ್ಲಿ ಈ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.

- Advertisement -

ಹೆಣ್ಣು ಮಕ್ಕಳ ಸಂಖ್ಯೆಯು ಇಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಮುಂದೊಂದು ದಿನ ಇದು ದೊಡ್ಡ ಮಟ್ಟದಲ್ಲಿ ಲಿಂಗಾನುಪಾತದಲ್ಲಿ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಭಾರತದಲ್ಲೂ ಈ ಸಮಸ್ಯೆಯು ಕಾಡುತ್ತಲಿದೆ. ಇಷ್ಟು ಮಾತ್ರವಲ್ಲದೆ ಹೆಣ್ಣು ಮಕ್ಕಳು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಹೆಣ್ಣುಭ್ರೂಣ ಹತ್ಯೆ, ಲಿಂಗಭೇದ, ಲೈಂಗಿಕ ಕಿರುಕುಳ ಇತ್ಯಾದಿಗಳು. ಇಂತಹ ಸಮಸ್ಯೆ ನಿವಾರಣೆ ಮಾಡಲು ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವುದು ಅತೀ ಅಗತ್ಯವಾಗಿದೆ.

ವಿಶ್ವದಾದ್ಯಂತ ಹೆಣ್ಣು ಮಕ್ಕಳು ಎದುರಿಸುವಂತಹ ಹಿಂಸೆ, ಭೇದ-ಭಾವ ಮತ್ತು ಬಾಲ್ಯ ವಿವಾಹದಂತಹ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಅಸಮಾನತೆ ಎನ್ನುವುದು ಹೆಣ್ಣು ಮಕ್ಕಳ ಮೇಲಿನ ಹಿಂಸೆ ಮತ್ತು ಅವರ ಶಿಕ್ಷಣದ ಹಕ್ಕನ್ನು ಒಳಗೊಂಡಿದೆ. ವಿಶ್ವದಾದ್ಯಂತ ಸುಮಾರು 62 ಸಾವಿರ ಹೆಣ್ಣು ಮಕ್ಕಳಿಗೆ ಈಗಲೂ ಶಿಕ್ಷಣವು ಲಭ್ಯವಾಗುತ್ತಿಲ್ಲ. ಹೆಣ್ಣು ಮಕ್ಕಳು ಲೈಂಗಿಕ ಹಿಂಸೆಗೂ ಒಳಗಾಗುತ್ತಿದ್ದಾರೆ. ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನವು ಈ ಎಲ್ಲಾ ಸಮಸ್ಯೆಗಳನ್ನು ಎತ್ತಿ ಹಿಡಿಯುವುದು ಹಾಗೂ ಹೆಣ್ಣು ಮಕ್ಕಳ ಹಕ್ಕು ಮತ್ತು ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿದೆ.

ಪ್ರತೀ ವರ್ಷವು ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನಕ್ಕೆ ಪ್ರತ್ಯೇಕ ಧ್ಯೇಯಗಳನ್ನು ಇಟ್ಟುಕೊಳ್ಳಲಾಗುತ್ತದೆ. ಮೊದಲ ಧ್ಯೇಯವು `ಬಾಲ್ಯ ವಿವಾಹ ಕೊನೆಗೊಳಿಸುವುದು’ ಆಗಿತ್ತು. 2013 ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಹೊಸ ಬದಲಾವಣೆ ಮತ್ತು 2014 ರಲ್ಲಿ ಈ ಧ್ಯೇಯವು ಹದಿಹರೆಯದ ಹುಡುಗಿಯರನ್ನು ಸಶಕ್ತಗೊಳಿಸುವುದು: ಹಿಂಸೆಗೆ ಅಂತ್ಯ ಹಾಡುವುದು, 2016 ರಲ್ಲಿ ಧ್ಯೇಯವಾಕ್ಯವು ಹುಡುಗಿಯ ಅಭಿವೃದ್ಧಿ – ಗುರಿಯ ಅಭಿವೃದ್ಧಿ: ಹುಡುಗಿಗೆ ಏನು ಮಹತ್ವದ್ದಾಗಿರುವುದು ಎಂಬ ಧ್ಯೇಯಗಳಡಿ ಆಚರಣೆ ಮಾಡಲಾಗಿತ್ತು.

- Advertisement -

ಈ ದಿನದಂದು ಹೆಣ್ಣು ಮಕ್ಕಳ ಉಳಿಸಲು, ಬಾಲ್ಯದಲ್ಲಿ ನಡೆಯುವ ಲೈಂಗಿಕ ಕಿರುಕುಳ ತಗ್ಗಿಸಲು ಮತ್ತು ಹೆಣ್ಣು ಮಕ್ಕಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. “ಬೇಟಿ ಬಚಾವೋ ಬೇಟಿ ಪಡಾವೋ”, ರಾಷ್ಟ್ರೀಯ ಸರ್ಕಾರಿ ಕಾರ್ಯಕ್ರಮದ ಉತ್ತಮ ಪ್ರದರ್ಶನಕ್ಕಾಗಿ ಹರಿಯಾಣವು ಪ್ರಶಸ್ತಿ ಪಡೆದುಕೊಂಡಿದೆ. ರಾಜಸ್ಥಾನ ಕೂಡ ಇದೇ ವಿಭಾಗದಲ್ಲಿ ತನ್ನ ಪ್ರದರ್ಶನವನ್ನು ಉತ್ತಮವಾಗಿ ನೀಡಿರುವುದಕ್ಕೆ ಪ್ರಶಸ್ತಿಯ ಗರಿಮೆ ಪಡೆದಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಈ ಎರಡು ರಾಜ್ಯಗಳು ಹೆಚ್ಚು ಒತ್ತು ನೀಡುತ್ತಿರುವುದು ಗಮನಾರ್ಹ. ಸಮಾಜದ ಜನರ ಮಧ್ಯೆ ಹೆಣ್ಣು ಮಕ್ಕಳ ಜೀವನ ಮಟ್ಟವನ್ನು ಉತ್ತಮಪಡಿಸಲು ಇದನ್ನು ಆಚರಣೆ ಮಾಡಲಾಗುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವುದು, ಹಲವಾರು ರಾಜಕೀಯ ನಾಯಕರು ಮತ್ತು ಸಮುದಾಯದ ನಾಯಕರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಂವಿಧಾನಿಕ ಹಕ್ಕುಗಳ ಬಗ್ಗೆ ಜನರಿಗೆ ತಮ್ಮ ಭಾಷಣದಿಂದ ತಿಳಿಸಿಕೊಡುವರು.

ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಸಮಾಜದಲ್ಲಿ ಹೆಣ್ಣು ಮಗುವಿನ ಬಗೆಗಿರುವ ದೃಷ್ಟಿಕೋನ ಬದಲಿಸುವುದು, ಸಮಾಜದಲ್ಲಿ ಹೆಣ್ಣು ಮಗುವಿಗೆ ದೊರೆಯಬೇಕಿರುವ ಗೌರವ ಮತ್ತು ಮೌಲ್ಯ ಖಾತ್ರಿಗೊಳಿಸುವುದು, ದೇಶದಲ್ಲಿ ಇತರರಂತೆ ಹೆಣ್ಣು ಮಗುವಿಗೂ ಎಲ್ಲ ಮೂಲ ಹಕ್ಕುಗಳು ದೊರೆಯುವಂತೆ ಮಾಡುವುದು, ಹೆಣ್ಣು ಮಗು ಲಿಂಗಾನುಪಾತ ಕುಸಿಯುವುದನ್ನು ತಡೆಯಲು ಅಗತ್ಯವಿರುವ ಯೋಜನೆ ರೂಪಿಸುವುದು ಈ ದಿನದ ಉದ್ದೇಶವಾಗಿದೆ. ಯುಎನ್ ಅಂಕಿ – ಅಂಶಗಳ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ (ಚೀನಾವನ್ನು ಹೊರತುಪಡಿಸಿ) ಮೂರು ಹುಡುಗಿಯರಲ್ಲಿ ಒಬ್ಬರು 18 ವರ್ಷಕ್ಕಿಂತ ಮೊದಲೇ ಮದುವೆಯಾಗುತ್ತಾರೆ. ಒಂಬತ್ತು ಹುಡುಗಿಯರಲ್ಲಿ ಒಬ್ಬರು ತಮ್ಮ 15 ನೇ ಹುಟ್ಟುಹಬ್ಬದ ಮೊದಲು ಮದುವೆಯಾಗುತ್ತಾರೆ. ಈ ಹುಡುಗಿಯರಲ್ಲಿ ಹೆಚ್ಚಿನವರು ಬಡವರು, ಕಡಿಮೆ ವಿದ್ಯಾವಂತರು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹವಾಗಿದೆ. ಈ ರೀತಿಯ ಬಾಲ್ಯವಿವಾಹ ತಡೆಗುಟ್ಟುವುದು ಸಹ ಈ ದಿನಾಚರಣೆಯ ಮೊದಲ ಗುರಿಯಾಗಿದೆ. ಸಮಾಜದಲ್ಲಿ ನಿತ್ಯ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚಾಗುತ್ತಲೇ ಇವೆ. ಇವುಗಳಿಂದ ಅದೆಷ್ಟೋ ಜನ ಜೀವ ಮತ್ತು ಜೀವನ ಎರಡನ್ನೂ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಇಂತಹ ಅಮಾನವೀಯ ಕೃತ್ಯಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಗಮನಹರಿಸುವುದು ಸಹ ಈ ದಿನದ ಧ್ಯೇಯವಾಗಿದೆ. ಒಟ್ಟಾರೆ ಸಮಾಜದಲ್ಲಿ ಹೆಣ್ಣು – ಗಂಡು ಎಂಬ ಭೇದ – ಭಾವ ತೊರೆದು ಸಹಬಾಳ್ವೆ, ಸಮಾನ ಜೀವನ ರೂಪಿಸಬೇಕೆಂಬುದೇ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಪ್ರಮುಖ ಗುರಿಯಾಗಿದೆ.

ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

 

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group