spot_img
spot_img

ಬಾಳು ಬೆಳಗಿಸುವ ಗುರುವಿನ ಋಣ ತೀರಿಸುವದೆಂತು?

Must Read

- Advertisement -

ಆಗ ನಾನಿನ್ನೂ ಪುಟ್ಟ ಫ್ರಾಕು  ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಕಾಲ. ಸದಾ ನನ್ನ ಕೈಯಲ್ಲಿ ಬಿಳಿ ಚೌಕಟ್ಟಿನ ಕರಿ ಪಾಟಿ ಹಿಡಿದು, ಬೆರಳಲ್ಲಿ ಪೆನ್ಸಿಲ್ ಸಿಕ್ಕಿಸಿಕೊಂಡು ದೊಡ್ಡ ಪಂಡಿತರಂತೆ ಗಂಭಿರವಾಗಿ ಬರೆಯುವದನ್ನು ಕಂಡು ನನ್ನಪ್ಪ, ನಮ್ಮವ್ವ ಎಷ್ಟು ಶ್ಯಾನೆ ಅದಾಳ ನೋಡು ಎನ್ನುತ್ತ ಪ್ರೀತಿಯಿಂದ ಹಣೆಗೆ ಹೂ ಮುತ್ತನ್ನಿಕ್ಕಿ ಅಕ್ಷರವನ್ನು ತೀಡಿಸುತ್ತಿದ್ದರು. ಆಗಿನಿಂದ ನನ್ನ  ಅಕ್ಷರದ ಹುಚ್ಚು ಮತ್ತಷ್ಟು ಹೆಚ್ಚಿತು. ಅಣ್ಣನ ಜೊತೆ ನಾನೂ ಶಾಲೆಗೆ ಹೋಗಲೇಬೇಕು ಎಂಬ ಹಟಕ್ಕೆ ಮಣಿದು,  ನನ್ನ ಕಾಟ ತಾಳಲಾರದೇ ಅಪ್ಪ ನನ್ನ ಕಿರುಬೆರಳು ಹಿಡಿದು ಶಾಲೆಯ ಮೆಟ್ಟಿಲು ಹತ್ತಿಸಿದ್ದರು.

ಸಂಪೂರ್ಣ ಬಿಳಿವಸ್ತ್ರಧಾರಿಯಾಗಿ ಬಿಳಿ ಟೋಪಿ ಧರಿಸಿದ್ದ ಹೆಡ್ ಮಾಸ್ಟರ್ ನನ್ನನ್ನೇ ದಿಟ್ಟಿಸುತ್ತ ಬಲಗೈಯನ್ನು ತಲೆಯ ಮೇಲೆ ಹಾಯಿಸಿ ಎಡಗಿವಿಯ ತುದಿಯನ್ನು ಮುಟ್ಟಲು ಸೂಚಿಸಿದರು.ನನ್ನ ಬಲಗೈಗೆ ಎಡಗಿವಿ ತುದಿಯನ್ನು ಮುಟ್ಟಲಾಗಲಿಲ್ಲ. ನಿಮ್ಮ ಹುಡುಗಿಗೆ ಇನ್ನೂ 5 ವರ್ಷ 10 ತಿಂಗಳಾಗಿಲ್ಲ ಎಂದು ಕರಾರುವಾಕ್ಕಾಗಿ ನುಡಿದರು. ಅದಕ್ಕೆ ಅಪ್ಪ ಹೌದ್ರಿ ಸರ್ ಆದ್ರ ಇಕಿಗೆ ಕಲಿಯುವ ಹುಚ್ಚು ಬಾಳ ಐತಿ ಈಗಾಗಲೇ ಅಕ್ಷರ ಅಂಕಿ ಎಲ್ಲಾ ಕಲ್ತಾಳ ಅಂದ. ಹೆಡ್ ಮಾಸ್ಟರ್  ವಿಸ್ಮಯದಿಂದ ಹುಬ್ಬೇರಿಸಿ ನನ್ನ ಅಕ್ಷರ ಅಂಕಿ ಜ್ಞಾನವನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿ, ಶಹಬ್ಬಾಸಗಿರಿ ಕೊಟ್ಟು, ಒಂದು ವರ್ಷ ಮೊದಲೇ ಹುಟ್ಟಿದ್ದೀನೆಂದು ದಾಖಲಿಸಿ, ಒಂದನೇ ಕ್ಲಾಸ್ ಕಡೆ ಬೊಟ್ಟು ಮಾಡಿದರು.

ಊರಿಗೊಂದೇ ಸರಕಾರಿ ಶಾಲೆ. ಊರಿನ ಎಲ್ಲ ವರ್ಗದ ಮಕ್ಕಳಿಗೆ ಅಲ್ಲಿಯೇ ಶಿಕ್ಷಣ. ಮೆಸ್ಟ್ರು ಎಲ್ಲರಿಗೂ ಕಂಪಲ್ಸರಿ  ಕಲಿಸಲೇಬೇಕೆಂದು ಹಟ ತೊಟ್ಟು ಆಲಸ್ಯತನ ತೋರಿದವರಿಗೆ ಬೆನ್ನಿನ ಮೇಲೆ ಕೋಲಿನಿಂದ ಬಾಸುಂದೆ ಮೂಡಿಸುತ್ತಿದ್ದರು.ಕೋಲಿನ ಭಯಕ್ಕೆ ಎಲ್ಲ ಮಕ್ಕಳು ಪುಸ್ತಕ ಮುಖದ ಮುಂದೆ ಹಿಡಿಯುತ್ತಿದ್ದರು. ಕೋಲಿನ ಸುದ್ದಿ ಮನೆಯಲ್ಲಿ ಹೇಳಿದರೆ ಬೋನಸ್ಸಾಗಿ ಅಲ್ಲಿಯೂ ಬೆತ್ತದ ರುಚಿ ನೋಡಬೇಕಿತ್ತು. ಹೀಗಾಗಿ ಓದು ಬರಹ ಅನಿವಾರ್ಯವಾಗಿತ್ತು. 

- Advertisement -

ಊರ ಹೊರಗಿನ ದೊಡ್ಡ ಆಲದ ಮರದ ಕೆಳಗೆ ಶಿಸ್ತಿನ ಸಿಪಾಯಿಯಂತೆ ನಿಂತ ಗುರುಗಳು ಪದ್ಯ ಲೆಕ್ಕ ಕಲಿಸುತ್ತ, ಪ್ರಶ್ನೆ ಕೇಳಿದರೆ ನಾ ಮುಂದು ತಾ ಮುಂದು ಎಂದು ಉತ್ತರಿಸಿ, ಆಟದ ಪಿರಿಯಡ್‍ಗೆ ಬೆಲ್ ಹೊಡೆದ ತಕ್ಷಣ ಹೋ! ಎಂದು ಜೋರಾಗಿ ಕೂಗುತ್ತ ಮೈದಾನಕ್ಕೆ ಲಗ್ಗೆಯಿಟ್ಟು, ಮೈ ಕೈ ಜೊತೆಗೆ ಬಟ್ಟೆಗೂ ಕೆಂಪು ಮಣ್ಣು ಮೆತ್ತಿಸಿಕೊಳ್ಳುವದರಲ್ಲಿ ಎಲ್ಲಿಲ್ಲದ ಖುಷಿ. ರಾಷ್ಟ್ರೀಯ ಹಬ್ಬಗಳ ರಿಹರ್ಸಲ್ಲಿನಲ್ಲಿ ಗುರು ಬಳಗ ಪಡುವ ಶ್ರಮಕ್ಕೆ ಸೆಲ್ಯೂಟ್ ಹೊಡೆಯಬೇಕೆನಿಸುತ್ತಿತ್ತು. ಹಬ್ಬಗಳಂದು ಹಾಡು ಭಾಷಣ ರೂಪಕ ನಾಟಕಗಳಲ್ಲಿ ಭಾಗವಹಿಸಿ ಪೆಪ್ಪರಮೆಂಟ್ ಚೀಪುತ್ತ ಕುಣಿದು ಕುಪ್ಪಳಿಸುತ್ತಿದ್ದೆವು.       

1ನೇ ಕ್ಲಾಸಿನಿಂದ 7ನೇ ಕ್ಲಾಸಿನವರೆಗೆ ಫುಲ್ ಸಿಲ್ಯಾಬಸ್‍ನ್ನು ಹೋಲ್ ಸೇಲಾಗಿ ಒಬ್ಬರೇ ಗುರುಗಳು ಬೋಧಿಸುತ್ತಿದ್ದುದರಿಂದ ಅವರಿಗೆ ನಮ್ಮ ಶಕ್ತಿ ದೌರ್ಬಲ್ಯ ಪ್ರತಿಭೆಗಳು ಚೆನ್ನಾಗಿ ಗೊತ್ತಿರುತ್ತಿತ್ತು. ತಾಲೂಕಾ ಮಟ್ಟದಲ್ಲಿ ಅತ್ಯಧಿಕ ಪ್ರಶಸ್ತಿ ಪತ್ರ ಬಾಚಿಕೊಂಡು ಬಂದ ನನ್ನನ್ನು ಮೆಸ್ಟ್ರು ತಮ್ಮ ಕುಂಕಿಯ (ಹೆಗಲ) ಮೇಲೆ ಕೂಡ್ರಿಸಿಕೊಂಡು ಸಂಭ್ರಮಿಸುತ್ತ ಹೆಡ್ ಮಾಸ್ಟರ್ ಕಡೆಯಿಂದ 5 ಪೇನೆ(ಪೆನ್ಸಿಲ್) ಗಳನ್ನು ಬಹುಮಾನವಾಗಿ ಕೊಡಿಸಿದ್ದನ್ನು ನೆನೆದಾಗಲೊಮ್ಮೆ ಕಣ್ಣಲ್ಲಿ ನೀರು ಜಿನುಗುತ್ತೆ. ನಮ್ಮ ಕಲಿಕೆಯಲ್ಲಿ ಸಂತೃಪ್ತ ಭಾವ ಕಂಡ  ಗುರುಗಳದು ಅದೆಂಥ ನಿಸ್ವಾರ್ಥ, ಸಾರ್ಥಕ ಸೇವೆ ಎಂದೆನಿಸಿತ್ತದೆ.. 

ನಮ್ಮ ಕ್ಲಾಸ್ ಸರ್ ಎಂದರೆ ಎಲ್ಲ ಮಕ್ಕಳಿಗೆ  ಎಲ್ಲಿಲ್ಲದ ಭಯ. ಅವರ ಹೆಜ್ಜೆಯ ಸಪ್ಪಳಕ್ಕೆ ಕ್ಲಾಸಿಗೆ ಕ್ಲಾಸೇ ಬೆಚ್ಚಿ ಬೀಳುತ್ತಿತ್ತು.ಅವರು ಎಂದೂ ಯಾರಿಗೂ ತಮ್ಮ ಬೆತ್ತದ ರುಚಿ ತೋರಿಸಿರಲಿಲ್ಲ. ಅವರದೇನಿದ್ದರೂ ಕಣ್ಣಿನಲ್ಲಿಯೇ ಹೆದರಿಸುವ ಪರಿ. ಕ್ಲಾಸ್ ಮುಗಿದ ಮೇಲೂ ಕಾಸು ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿ ಬದಾಮು ಹಾಲು ಕೊಟ್ಟು ಹೇಳಿ ಕೊಟ್ಟ ಪಾಠಗಳು ಇಂದಿಗೂ ಮನದಲ್ಲಿ ಅಚ್ಚೊತ್ತಿವೆ. 

- Advertisement -

ಕೈಯಲ್ಲಿ ಮಾರುದ್ದದ ಕೋಲು ಹಿಡಿದೇ ಕ್ಲಾಸಿಗೆ ಬರುತ್ತಿದ್ದ ಇಂಗ್ಲೀಷ್ ಸರ್ ಭಾಷೆ ಕಲಿಸುವ ರೀತಿ ಬ್ರಿಟೀಷರನ್ನೂ ದಂಗು ಬಡಿಸುವಂತಿರುತ್ತಿತ್ತು. ಹಳೆಗನ್ನಡದ ಕವಿತೆ ರಾಮಾಯಣ ಮಹಾಭಾರತದ ಪ್ರಸಂಗಗಳನ್ನು ಕನ್ನಡ ಗುರುಗಳ ಬಾಯಲ್ಲಿ ಕೇಳುತ್ತಿದ್ದರೆ ಎಂಥವರಿಗೂ ರೊಮಾಂಚನವಾಗುತ್ತಿತ್ತು. ಬೋಧಿಸುವದು ಗಣಿತವಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಹೇಗೆ ಸಿದ್ಧಗೊಳಿಸಬೇಕೆಂಬುದನ್ನು ಗಣಿತ ಶಿಕ್ಷಕರ ಗರಡಿಯಲ್ಲಿಯೇ ತಿಳಿಯಬೇಕು. ವಿಜ್ಞಾನದ ಮೆಸ್ಟ್ರಂತೂ  ದಿನ ನಿತ್ಯ ಹೊಸ ಹೊಸ ಪ್ರಯೋಗಗಳನ್ನು ಮಾಡಿ ತೋರಿಸಿ  ಜ್ಞಾನದ ದಾಹ ಹೆಚ್ಚಿಸುತ್ತಿದ್ದರು. ರಾಷ್ಟ್ರೀಯ ಭಾವೈಕ್ಯತೆಯನ್ನು ಹಿಂದಿ ಭಾಷೆಯಿಂದ ಸಾಧಿಸಲು ಸಾಧ್ಯವಿದೆಯೆಂದು ತೋರಿಸಿಕೊಟ್ಟವರು ಹಿಂದಿ ಭಾಷಾ ಶಿಕ್ಷಕರು . ಮಕ್ಕಳು ಕೀಟಲೆ ಮಾಡಿದರೆ ಚೆನ್ನ ಎನ್ನುತ್ತ ದೇಶಭಕ್ತಿಯ ಮೊಳಕೆಯೊಡಿಸಿದವರು ಇತಿಹಾಸ ಗುರುಗಳು. ಆಟ ಆಡಿಸಿ ಮೈ ಕೈ ಗಟ್ಟಿ ಮಾಡಿಸಿದ ದೈಹಿಕ ಶಿಕ್ಷಕರನ್ನು ಕೈಯಲ್ಲಿ ಕುಂಚ ಹಿಡಿಸಿ ಬಣ್ಣ ಬಳಿಸಿ, ಬದುಕಿನ ರಂಗು ಹೆಚ್ಚಿಸಿದ ಡ್ರಾಯಿಂಗ್ ಶಿಕ್ಷಕರನ್ನು ನೆನಸದೇ ಇರುವದಾದರೂ ಹೇಗೆ?

ಕ್ವಿಜ್‍ದಲ್ಲಿ ಭಾಗವಹಿಸುವದು ನನಗೆ ಇಷ್ಟದ ಸಂಗತಿ.ಯಾವುದೇ ಸಂಘಗಳು ಕ್ವಿಜ್ ಸ್ಪರ್ಧೆ ಏರ್ಪಡಿಸಿದಾಗಲೂ ರಸಪ್ರಶ್ನೆಯಲ್ಲಿ ಅತ್ಯಧಿಕ ಪ್ರಶಸ್ತಿ ಪಡೆದ ದಾಖಲೆ ಇದ್ದ ನನ್ನ ಹೆಸರನ್ನೇ ಗೆಳೆತಿಯರು ಸೂಚಿಸಿ ಇದನ್ನು ನೀನು ಗೆಲ್ಲಲೇಬೇಕೆಂದು ತಾಕೀತು ಮಾಡುತ್ತಿದ್ದರು. ಹುಡುಗರೆಲ್ಲ ಕೇಕೆ ಸೀಟಿ ಹಾಕಿ ಅನುಮತಿಸುತ್ತಿದ್ದರು.

ಅದು ಓಪನ್ ಕ್ವಿಜ್ ಕಾಂಪಿಟೇಶನ್ ಆಗಿದ್ದರಿಂದ ಯಾವುದೇ ವಯೋಮಾನದವರು, ವೃತ್ತಿಯಲ್ಲಿರುವವರು  ಭಾಗವಹಿಸಬಹುದಿತ್ತು ಬಹುಮಾನವಾಗಿಟ್ಟ ಸಂಚಾರಿ ಫಲಕವನ್ನು ಸತತ 3 ವರ್ಷ ಪ್ರಥಮ ಬಂದವರಿಗೆ ಶಾಶ್ವತವಾಗಿ ತಮ್ಮದಾಗಿಸಿಕೊಳ್ಳಬಹುದು ಎಂಬ ಷರತ್ತು ಹೊಂದಿತ್ತು. ಎರಡು ವರ್ಷ ಸಂಚಾರಿ ಫಲಕ ಪಡೆದು ಫೈನಲ್ ಘಟ್ಟ ತಲುಪಿದ್ದೆ. ಈ ವರ್ಷ ಏನಾಗುತ್ತೋ ಎನ್ನುವ ಭಯ ಕಾಡುತ್ತಿತ್ತು.

ಪ್ರೇಕ್ಷಕರಾಗಿ ನಿಂತ ಸಹಪಾಠಿಗಳೆಲ್ಲ ನನ್ನ ಹೆಸರು ಕೂಗಿ ಉತ್ತೇಜಿಸುತ್ತಿದ್ದರು. ರಸ ಪ್ರಶ್ನೆ ಹುಚ್ಚು ಹಿಡಿಸಿದ್ದ ಮಾರ್ಗದರ್ಶಕರು ಪ್ಲೀಸ್ ಇದೊಂದನ್ನು ಗೆದ್ದು ಬಿಡು ಹೆದರ ಬೇಡ ಗೆಲ್ಲುವ ತಾಕತ್ತು ನಿನ್ನಲ್ಲಿದೆ. ಎಂದು ಧೈರ್ಯ ತುಂಬಿದ್ದರು.ಅದು ನಮ್ಮ ಕಾಲೇಜಿನ ಪ್ರತಿಷ್ಟೆಯ ವಿಷಯವಾಗಿತ್ತು. 

ಸಿಕ್ಕ ಸಿಕ್ಕ ಪೇಪರ್ ಚೂರುಗಳನ್ನೆಲ್ಲ ಓದುವ ನನ್ನ ಚಟಕ್ಕೆ ಅಂದು ಅದೃಷ್ಟ ಖುಲಾಯಿಸಿತ್ತು. ಇಡೀ ಕಾಲೇಜು ನನ್ನ ಗೆಲುವಿನಿಂದ ಬೀಗಿತ್ತು. ಶೀಲ್ಡ್‍ಗೆ ನಾನು ಮುತ್ತಿಟ್ಟಾಗ ಮಾರ್ಗದರ್ಶಕರಾಗಿದ್ದ ಮೇಸ್ಟ್ರು ದೂರದಿಂದಲೇ ತಮ್ಮೆರಡು ಥಮ್ಸ್ ಅಪ್ ಮಾಡಿ ನನ್ನೆಡೆಗೆ ಹೆಮ್ಮೆಯಿಂದ ನೋಡಿದ ರೀತಿ ಇಂದಿಗೂ ಕಣ್ಮರೆಯಾಗಿಲ್ಲ.  

ಇವೆಲ್ಲ ನಡೆದು ದಶಕಗಳೇ ಕಳೆದರೂ ಈಗ ತಾನೆ ಬಿಮ್ಮನೆ ಬಿರಿದ ಮಲ್ಲಿಗೆ ಹೂವಿನಂತೆ ಸುವಾಸನೆ ಬೀರಿ ನನ್ನನ್ನು ಕಾಡುತ್ತವೆ. ಒಂದೇ ಒಂದು ಬಾರಿ ಆ ಮಹಾನುಭವರನ್ನೆಲ್ಲ ಮತ್ತೆ ಕಾಣುವಂತಾದರೆ ಎಂದು ಮನಸ್ಸು ಹಂಬಲಿಸುತ್ತದೆ. ದೀಪದಂತೆ ತಾನುರಿದು ನಮಗೆ ಜ್ಞಾನದ ಬೆಳಕು ನೀಡುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.. ತಮಗೆ ಕಲಿಸಿದ ಶಿಕ್ಷಕರ ನೆನಪು ಇನ್ನೂ ಹಸಿರಾಗಿದೆಯಲ್ಲವೆ? ಹಾಗಿದ್ದರೆ ಅವರಿಗೊಂದು ವಿಶ್ ಮಾಡಿ.ದೊಡ್ಡವರಾದ ಮೇಲೆ ಅಥವಾ ಜೀವನದಲ್ಲಿ ಸೆಟ್ಲ್ ಆದ ಮೇಲೆ ಅವರನ್ನು ಕಂಡು ಕೃತಜ್ಞತೆ ಸಲ್ಲಿಸಲೇ ಇಲ್ಲವಲ್ಲಾ ಎಂಬ ಭಾವ ಕಾಡುತ್ತಿದ್ದರೆ ಅವರನ್ನೊಮ್ಮೆ ಕಂಡು ಅವರ ಕಂಗಳಲ್ಲಿ ಹೊಳೆಯುವ ಖುಷಿ ನೋಡಿ ಆನಂದಿಸಿ. ಸಾಧ್ಯವಾಗದಿದ್ದರೆ ಅಪರೋಕ್ಷವಾಗಿ ನೂರಾರು ಬಾರಿ ಆ ಕಾಣುವ ದೇವರಿಗೆ ಕೃತಜ್ಞತೆ ಅರ್ಪಿಸಿ. 

ನಮ್ಮ ತಪ್ಪುಗಳನ್ನು ತಿದ್ದಿ ತೀಡಿ, ಮೆಚ್ಚುಗೆಯ ಮಾತುಗಳನ್ನಾಡಿ, ಬೆನ್ನು ತಟ್ಟಿ, ಪ್ರೀತಿ ಕಾಳಜಿ ಹರಿಸಿ, ಅಕ್ಷರ ಕಲಿಸಿ ಅರಿವು ಮೂಡಿಸಿದ ಗುರುಗಳ ಬಗ್ಗೆ  ಹೇಳುತ್ತ ಸಾಗಿದರೆ, ಮನದಲ್ಲಿ ಹೆಮ್ಮೆಯ ಭಾವ ಮೂಡುತ್ತೆ. ಇಂಥವರ ಕೈಯಲ್ಲಿ ಕಲಿತು ಬಾಳು ಬೆಳಗಿಸಿಕೊಂಡಿದ್ದೇವೆಲ್ಲ ಎಂದು  ಖುಷಿ ನೂರ್ಮಡಿಯಾಗುತ್ತೆ. ಇವರ ಋಣವ ತೀರಿಸುವದೆಂತು? ಎಂಬ ಪ್ರಶ್ನೆಯೂ ದೊಡ್ಡದಾಗಿ ಕಾಡುತ್ತೆ. ಬಾಳು ಬೆಳಗಿಸುವ ಗುರುಗಳು ಹೇಳಿಕೊಟ್ಟ ಸಲಹೆ ಸೂಚನೆ ಜೀವನ ಮೌಲ್ಯಗಳನ್ನು ನಾವು ಚಾಚೂ ತಪ್ಪದೇ ಪಾಲಿಸುತ್ತ ಇತರರಿಗೂ ಆ ಬೆಳಕಿನಲ್ಲಿ ನಡೆಯಲು ನೆರವಾಗುತ್ತಾ ಸಾಗಿದರೆ ಅವರ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸಬಹುದೇನೋ? ಬನ್ನಿ ನಮಗೆಲ್ಲ ಅರಿವು ನೀಡಿದ ಗುರುಗಳಿಗೆ ನೂರೆಂಟು ನಮನ ಸಲ್ಲಿಸಿ ಇಂದಿನಿಂದಲೇ ತೀರಿಸಲಾಗದ ಗುರುವಿನ ಋಣವನು ತೀರಿಸಲು ಯತ್ನಿಸೋಣ.


ಜಯಶ್ರೀ.ಜೆ. ಅಬ್ಬಿಗೇರಿ  (ಬೆಳಗಾವಿ)

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group