spot_img
spot_img

ನೀರಾವರಿ ತಜ್ಞ ಎಸ್.ಜಿ.ಬಾಳೇಕುಂದರಗಿ

Must Read

- Advertisement -

ಮೇ 5 ಕರ್ನಾಟಕ ಕಂಡ ಶ್ರೇಷ್ಠ ನೀರಾವರಿ ತಜ್ಞ ಎಸ್.ಜಿ.ಬಾಳೇಕುಂದ್ರಿಯವರ ಜನ್ಮದಿನ. ನಾವಿಂದು ಹೆಚ್ಚು ನೆನೆಯುವುದು ಸರ್.ಎಂ.ವಿಶ್ವೇಶ್ವರಯ್ಯನವರನ್ನು ಅವರ ಸಾಧನೆಯ ನಂತರ ಮತ್ತೊಂದು ಹೆಸರು ಕೇಳಿ ಬರುವುದು ಎಸ್.ಜಿ.ಬಾಳೇಕುಂದ್ರಿಯವರದು.

ಇವರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದವರು. ಇದು ಅನೇಕರಿಗೆ ಗೊತ್ತಿಲ್ಲ ಬಾಳೇಕುಂದ್ರಿಯವರು ತಮ್ಮ ಬುದ್ಧಿಮತ್ತೆ,ದಕ್ಷತೆ,ಪರಿಶ್ರಮ,ಪ್ರಾಮಾಣಿಕ ಸೇವೆಯಿಂದ ಕರ್ನಾಟಕದ ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದರೆಂಬ ಸಂಗತಿ.

ಸವದತ್ತಿ ತಾಲೂಕಿನ ನವಿಲುತೀರ್ಥ ಅಣೆಕಟ್ಟಿನ ನಿರ್ಮಾಣ ಮತ್ತು ನೀರಾವರಿ ಯೋಜನೆಗಳ ರೂಪರೇಷೆಗಳಲ್ಲಿ ಇವರ ಹೆಸರನ್ನು ಮರೆಯಲಾಗದು. ನೀವು ಇಂದಿಗೂ ಅಣೆಕಟ್ಟನ್ನು ನೋಡಲು ಬಂದರೆ ಅಲ್ಲಿ ಮಲಪ್ರಭಾ ಎಡದಂಡೆ ಕಾಲುವೆಗೆ ಬಾಳೆಕುಂದ್ರಿ ಕಾಲುವೆ ಎಂಬ ಹೆಸರನ್ನು ನೋಡಬಹುದು.

- Advertisement -

ಅಂದರೆ ಅವರ ಕಾರ್ಯ ಇಂದಿಗೂ ಅಜರಾಮರ ಆಗಿರುವುದಕ್ಕೆ ಇದು ಸಾಕ್ಷಿ. ನನಗೆ ಈ ಬರಹ ಬರೆಯಲು ಎರಡು ಕಾರಣ. ನನ್ನ ತಂದೆ ಇವರ ಕೈಯಲ್ಲಿ ಕೆಲಸ ನಿರ್ವಹಿಸಿರುವುದು. ನಾಡಿನ ಖ್ಯಾತ ಏಕೈಕ ಮಹಿಳಾ ಹೃದಯರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ನನಗೆ ವ್ಯಾಟ್ಸಪ್‍ನಲ್ಲಿ ಇವರ ವ್ಯಕ್ತಿತ್ವ ಕುರಿತು ಕಳಿಸಿದ ತಮ್ಮ ಕೃತಿಯಲ್ಲಿನ ಪುಟಗಳು.

ನಮ್ಮ ಬೆಳಗಾವಿ ಜಿಲ್ಲೆಯ ಹೆಮ್ಮೆಯ ವ್ಯಕ್ತಿಯೊಬ್ಬರ ಬದುಕನ್ನು ಓದಲು ಪ್ರೇರಣೆಯಾದ ಘಟನೆ. ಗದಗಿನ ತೋಂಟದಾರ್ಯ ಪುಸ್ತಕ ಮಳಿಗೆಯಲ್ಲಿ ಡಾ.ಸರೋಜನಿ ಶಿಂತ್ರಿಯವರ ಕೃತಿ ಎಸ್.ಜಿ.ಬಾಳೇಕುಂದ್ರಿಯವರು ತಂದು ಓದಿ ಅದರಲ್ಲಿನ ಮಹತ್ವದ ಘಟನೆಗಳನ್ನು ನನ್ನ ಬರಹಕ್ಕೆ ಅಳವಡಿಸಿಕೊಂಡಿರುವೆ.

- Advertisement -

ಅವರ ಬದುಕಿನಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ನೆನಪಿಸಬೇಕು. ಆಗಿನ ಮುಂಬೈ ಸರಕಾರ ಮಹಾರಾಷ್ಟ್ರದಲ್ಲಿ ನಾಸಿಕ್ ಜಿಲ್ಲೆಯ ಗಂಗಾಪುರದಲ್ಲಿ ಒಂದು ಅಣೆಕಟ್ಟನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿತ್ತು. ಅದು ಬಾಳೇಕುಂದ್ರಿಯವರ ಸಲಹೆಯ ಮೇರೆಗೆ. ಅಲ್ಲಿನ ಜನರಿಗೆ ಆ ಸ್ಥಳದಲ್ಲಿ ಅಣೆಕಟ್ಟನ್ನು ನಿರ್ಮಿಸಲು ವಿರೋಧ ವ್ಯಕ್ತವಾಯಿತು.

ಇವರು ಅಲ್ಲಿಗೆ ಹೋಗಿ ಜನರೊಂದಿಗೆ ಚರ್ಚಿಸಿದಾಗ ಕಂಡು ಬಂದ ಸಂಗತಿ ಎಂದರೆ ಅಲ್ಲಿ ಒಂದು ವಿಗ್ರಹವಿತ್ತು. ಅದು ಆ ಜನರ ಭಕ್ತಿಗೆ ಕಾರಣವಾಗಿತ್ತು. ಆ ಸ್ಥಳ ಅಣೆಕಟ್ಟನ್ನು ಕಟ್ಟಿದರೆ ನೀರಲ್ಲಿ ಮುಳುಗಿ ಹೋಗುವುದೆಂಬ ಅನಿಸಿಕೆಯಿಂದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದರು. ಹಾಗಂತ ಅಲ್ಲಿ ದೇವಾಲಯ ಇರಲಿಲ್ಲ. ಇದನ್ನು ಕಂಡು ಸುತ್ತಲೂ ಬಾಳೇಕುಂದರಗಿಯವರು ಕಣ್ಣಾಡಿಸಿದರು.

ಅಲ್ಲೊಂದು ಮರಗಳ ಗುಂಪು ಕಂಡು ಬಂದಿತು.ಅಲ್ಲಿ ನಡುವೆ ದೇವಾಲಯ ನಿರ್ಮಿಸಲು ಸೂಕ್ತ ಸ್ಥಳವೂ ಇತ್ತು. ಆ ಜನರನ್ನು ಕರೆದುಕೊಂಡು ಹೋಗಿ ಆ ವಿಗ್ರಹಕ್ಕೊಂದು ದೇವಾಲಯವಾದರೆ ಈ ಸ್ಥಳದಲ್ಲಿ ನಿರ್ಮಿಸಿದರೆ ಹೇಗೆ.? ಎಂದು ಚರ್ಚಿಸಲು ಎಲ್ಲರ ಸಮ್ಮತಿ ದೊರೆಯಿತು. ಆಗ ಆ ಸ್ಥಳದಲ್ಲಿ ಮೊದಲು ದೇವಾಲಯ ನಿರ್ಮಾಣಗೊಂಡಿತು.ಮೂರ್ತಿ ಪ್ರತಿಷ್ಠಾಪನೆಯೂ ಆಯಿತು.

ನಿಯೋಜಿತ ಸ್ಥಳದಲ್ಲಿ ಅಣೆಕಟ್ಟು ನಿರ್ಮಾಣಗೊಂಡು ಲಕ್ಷಾಂತರ ರೈತರ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಿತು.ಇದನ್ನು ಕಂಡ ಮುಂಬೈ ಸರ್ಕಾರ ಇವರಿಗೆ ಶಿಷ್ಯವೇತನ ಕೊಟ್ಟು ಹೆಚ್ಚಿನ ವ್ಯಾಸಾಂಗಕ್ಕೆ ಎಡಿನ್‍ಬರೋಕ್ಕೆ ಕಳಿಸಿತು. ಈ ಒಂದು ಘಟನೆ ಅವರ ಬದುಕಿನಲ್ಲಿ ಅಚ್ಚಳಿಯದೇ ಉಳಿಯಿತು ಅಷ್ಟೇ ಅಲ್ಲ ಇಂದಿಗೂ ಲಕ್ಷಾಂತರ ಭೂಮಿಗೆ ನೀರಾವರಿ ಸೌಲಭ್ಯ ಮಹಾರಾಷ್ಟ್ರದಲ್ಲಿ ಬಾಳೇಕುಂದರಗಿಯವರ ಹೆಸರಲ್ಲಿ ಅಣೆಕಟ್ಟಿನಿಂದ ದೊರೆಯುತ್ತದೆ ಎಂದರೆ ಇವರು ನೀರಾವರಿ ತಜ್ಞ ಎಂದು ಬಿರುದಾಂಕಿತರಾಗಿದ್ದರೆಂಬುದಕ್ಕೆ ಸೂಕ್ತ ನಿದರ್ಶನ.

ಇವರು 1922 ಮೇ 5 ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಂದೆ ಡಾ.ಗುರುಸಿದ್ದಪ್ಪ ತಾಯಿ ಲಕ್ಷ್ಮೀದೇವಿ. ಪೂರ್ಣ ಹೆಸರು ಶಿವಪ್ಪ ಗುರುಸಿದ್ದಪ್ಪ ಬಾಳೇಕುಂದರಗಿ.ಇವರ ಪೂರ್ವಜರು ಕಲ್ಯಾಣ ಕಲ್ಬುರ್ಗಿ(ಈಗಿನ ಗುಲ್ಬರ್ಗಾ) ದವರು. ದೇಸಗತಿ ಮನೆತನ ಇವರದು. 14 ನೇ ಶತಮಾನದಲ್ಲಿ ಅಲ್ಲಾವುದ್ದೀನ್ ಖಲ್ಜಿ ದಾಳಿಗೆ ತುತ್ತಾದ ಇವರ ಕುಟುಂಬ ಗುಲ್ಬರ್ಗಾ ಬಿಟ್ಟು ತಮ್ಮ ಕುಲ ಕಸುಬಾದ ಗಾಣಿಗ ಕಾಯಕದಿಂದ ಬದುಕನ್ನು ಬೆಳಗಾವಿ ಹತ್ತಿರದ ಬಾಳೇಕುಂದ್ರಿ ಗ್ರಾಮದಲ್ಲಿ ಮುಂದುವರಿಸಿದರು.

ಇವರ ತಂದೆ ಡಾ.ಗುರುಸಿದ್ದಪ್ಪನವರು ಹುಬ್ಬಳ್ಳಿಯಲ್ಲಿ ಪಶು ಆಸ್ಪತ್ರೆಯಲ್ಲಿ ಸಹಾಯಕ ಶಸ್ತ್ರ ಚಿಕಿತ್ಸಾ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು.ಐದು ಜನ ಮಕ್ಕಳಲ್ಲಿ ಇವರು ಹಿರಿಯರು. ಇನ್ನುಳಿದವರೆಂದರೆ ಈಶ್ವರಪ್ಪ. ಶಿವಶಂಕರ. ಗಂಗಾಧರ.ಸಹೋದರಿ ಸಿದ್ದಕ್ಕ. ಇವರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಅಕ್ಕಿಹೊಂಡದ ಮುನಸಿಪಾಲಿಟಿ ಕನ್ನಡ ಶಾಲೆಯಲ್ಲಿ ಮುಗಿಸಿ, ಕೊಪ್ಳಿಕರ್ ಪ್ರೌಢಶಾಲೆಯಲ್ಲಿ ಎರಡು ವರ್ಷ ಕಲಿತು ನಂತರ ಇವರ ತಂದೆಗೆ ಬೆಳಗಾವಿಗೆ ವರ್ಗವಾದ ಪ್ರಯುಕ್ತ ಬೆಳಗಾವಿಯ ಸರದಾರ ಪ್ರೌಢ ಶಾಲೆಯಲ್ಲಿ ವ್ಯಾಸಾಂಗ ಮುಗಿಸಿದರು.

ಕಾಲೇಜು ಶಿಕ್ಷಣವನ್ನು ಇಂಟರ ಸಾಯನ್ಸ ಲಿಂಗರಾಜ ಕಾಲೇಜ ಬೆಳಗಾವಿಯಲ್ಲಿ ತೇರ್ಗಡೆಯಾದರು. ಮುಂದೆ ಪುಣೆಯಲ್ಲಿ ಸರಕಾರಿ ಇಂಜನೀಯರಿಂದ ಕಾಲೇಜಿಗೆ ಪ್ರವೇಶ ಪಡೆದು 1944 ರಲ್ಲಿ ಪ್ರಥಮ ವರ್ಗದಲ್ಲಿ ಉತ್ತೀರ್ಣರಾದರು. 1947 ರಲ್ಲಿ ಎಡಿನ್ಬರೋ ವಿಶ್ವ ವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪಡೆದ ಪ್ರಥಮ ಭಾರತೀಯ ಏಕೈಕ ಕನ್ನಡಿಗರು.

ಹೀಗೆ ಉನ್ನತ ತರಗತಿಯವರೆಗೂ ಉತ್ತಮ ಫಲಿತಾಂಶ ಕಂಡ ಇವರು 1945 ರಲ್ಲಿ ಆಗಿನ ಮುಂಬಯಿ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನೀಯರ ಆಗಿ ಕೆಲಸಕ್ಕೆ ಸೇರಿದರು. ಮುಂಬಯಿ ಸರಕಾರ ಇವರನ್ನು ನೀರಾವರಿ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಡಿನ್ಬರೋ ವಿಶ್ವವಿದ್ಯಾಲಯಕ್ಕೆ ಕಳುಹಿಸಿತು. ನಂತರ ಹಾಲಂಡ್.ಸ್ವೀಡನ್,ಮತ್ತು ಇತರ ಕೆಲವು ಬಾಲ್ಪಿಕ್ ರಾಜ್ಯಗಳನ್ನು ಅವರು ಸಂದರ್ಶಿಸಿದರು.

ವಿದೇಶದಿಂದ ಹಿಂದಿರುಗಿದ ನಂತರ ಪುಣೆ ವಿಭಾಗದ ನೀರಾವರಿ ಕಾಲುವೆಗಳ ಕೆಲಸವನ್ನು ನಿರ್ವಹಿಸಿದರು. ಇದೇ ಸಂದರ್ಭ ನಾಸಿಕ್ ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿಯನ್ನು ನಿರ್ವಹಿಸಿದರು.ಇವರ ಕಾರ್ಯ ದಕ್ಷತೆಗೆ ಧೂಲಿಯಾ ಆಣೆಕಟ್ಟು ಮತ್ತು ಅಹ್ಮದ ನಗರ ವಿಭಾಗದ ಉಸ್ತುವಾರಿಗಳು ಒದಗಿ ಬಂದವು.

1956 ರ ರಾಜ್ಯಗಳ ಪುನರ್ವಿಂಗಡಣೆಯ ನಂತರ ಕರ್ನಾಟಕಕ್ಕೆ ಬಂದ ಬಾಳೆಕುಂದ್ರಿಯವರು ಕೆಲ ಕಾಲ ಉಪ ಪ್ರಧಾನ ಇಂಜನೀಯರ ಆಗಿ ಸೇವೆ ಸಲ್ಲಿಸಿದರು. ಆ ನಂತರ ಇವರ ಸೇವೆಯನ್ನು ಕೇಂದ್ರ ಸರ್ಕಾರಕ್ಕೆ ಎರವಲು ನೀಡಲಾಯಿತು.ಅಲ್ಲಿ ಇವರು ಭಾರತ ಸರ್ಕಾರದ ಪ್ಲ್ಯಾನಿಂಗ್ ಕಮಿಸನ್‍ದ “ನೀರಾವರಿ ಮತ್ತು ಚೈತನ್ಯ” ತಂಡದ ಸಹಾಯಕ ಕಾರ್ಯಕ್ಕೆ ನೇಮಿಸಲಾಯಿತು.

ಈ ಸಮಯದಲ್ಲಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ಅಂದಿನ ಲೋಕಸಭಾ ಸದಸ್ಯರ ಗಮನಕ್ಕೆ ತಂದರು. ಇದರಿಂದ ಪ್ರಭಾವಿತರಾದ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಬಿ.ಡಿ.ಜತ್ತಿಯವರು ಬಾಳೆಕುಂದ್ರಿಯವರನ್ನು ಕರ್ನಾಟಕಕ್ಕೆ ಮರಳಿ ಕರೆಸಿಕೊಂಡು 1959 ರಲ್ಲಿ ಅಂತರಾಜ್ಯ ನದಿ ವಿವಾದ ವಿಷಯದ ಹೊಣೆಯ ಜವಾಬ್ದಾರಿ ವಹಿಸಿಕೊಂಡರು. ಆಗ ಅವರು ನ್ಯಾಯಬದ್ದ ಹಕ್ಕಿಗಾಗಿ ಹೋರಾಟ ನಡೆಸಿದರು.

1964 ರಲ್ಲಿ ಮುಖ್ಯ ಇಂಜನೀಯರ ಆಗಿ ಪದೋನ್ನತಿ ಪಡೆದು ಬೃಹತ್ ನೀರಾವರಿ ಯೋಜನೆಗಳ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1967 ರಿಂದ 1972 ರ ವರೆಗೆ ನೀರಾವರಿ ಇಲಾಖೆಯ ಉತ್ತರ ವಿಭಾಗದ ಮುಖ್ಯ ಇಂಜನೀಯರ ಎಂದು ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಘಟಪ್ರಭಾ,ಮಲಪ್ರಭಾ,ಹಾಗೂ ಕೃಷ್ಣಾ ನೀರಾವರಿ ಯೋಜನೆ ಹಾಗೂ ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು.

1974 ರಿಂದ 1976 ರ ವರೆಗೆ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಅಚ್ಚುಕೂಟ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿಯಾಗಿ ಮತ್ತು 1976 ರಿಂದ 1977 ರ ವರೆಗೆ ನೀರಾವರಿ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ 1977 ಮೇ ತಿಂಗಳು ತಮ್ಮ 55 ನೆಯ ವಯಸ್ಸಿನಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದರು.ಇವರು ಹತ್ತು ಹಲವು ಸಲ ಗೋವೆಯ ಮಹದಾಯಿಯನ್ನು ಮಲಪ್ರಭಾಕ್ಕೆ ಜೋಡಿಸಿ ನವಿಲುತೀರ್ಥ ಅಣೆಕಟ್ಟಿನ ನೀರು ಸಂಗ್ರಹ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ತಿಳಿಸಿದ್ದನ್ನು ಮರೆಯಲಾಗದು.ಇಂದಿಗೂ ಅದು ಪೂರ್ಣಗೊಳ್ಳುತ್ತಿಲ್ಲದಿರುವುದು ವಿಷಾದನೀಯ.

ವಿವಾದಾತ್ಮಕವಾಗಿದ್ದ ಮಲಪ್ರಭಾ ಯೋಜನೆಯ ಬಲದಂಡೆ ಕಾಲುವೆಯ ಜೊತೆಗೆ, ಎಡದಂಡೆಯ ಕಾಲುವೆಯ ಯೋಜನೆಯೂ ಕಾರ್ಯಗತವಾಗಬೇಕೆಂದು ಉಗ್ರವಾಗಿ ಹೋರಾಟ ಮಾಡಿ ಜಯಶೀಲರಾದರು. ಅವರ ದೂರದೃಷ್ಟಿ ಹಾಗೂ ಸಮಾಜವನ್ನು ಕಾಣುವ ಸಮದೃಷ್ಟಿಯನ್ನು ಕಂಡು ಆಗಿನ ಮುಖ್ಯ ಮಂತ್ರಿಗಳು 12-6-1981 ರಂದು ಮಲಪ್ರಭಾ ಎಡದಂಡೆ ಕಾಲುವೆಗೆ ಬಾಳೆಕುಂದ್ರಿ ಕಾಲುವೆ ಎಂದು ನಾಮಕರಣ ಮಾಡಿದರು.ಸರ್ಕಾರಿ ಅಧಿಕಾರಿಯೊಬ್ಬರಿಗೆ ಈ ರೀತಿ ಗೌರವ ಸಂದಿರುವುದು ಮೋಕ್ಷಗುಂಡಂ ವಿಶ್ವೇಶ್ವರಯ್ಯ ನಂತರ ಇವರಿಗೇ ಎಂದರೆ ಅತಿಶಯೋಕ್ತಿಯಾಗಲಾರದು.

ನಿವೃತ್ತಿಯ ನಂತರವೂ ತುಂಗಭದ್ರಾ ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷರಾಗಿ, ಬಾಗಲಕೋಟೆ ಪುನನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮೀತಿಯ ಅಧ್ಯಕ್ಷರಾಗಿಯೂ,ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷರಾಗಿಯೂ ಇಷ್ಟೇ ಅಲ್ಲದೇ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ನಿಯಮಿಸಿದ ಏಕ ಸದಸ್ಯ ಅಧ್ಯಕ್ಷ ಹೀಗೆ ವಿವಿಧ ಹುದ್ದೆಗಳನ್ನು ಅವರ ಕಾರ್ಯದಕ್ಷತೆಯನ್ನು ಕಂಡು ಸೇವೆ ಸಲ್ಲಿಸಲು ಅವಕಾಶಗಳು ದೊರೆತವು.

ತಾವು ಕಲಿಯುವಾಗ ಉನ್ನತ ವ್ಯಾಸಾಂಗ ಪುಣೆಗೆ ಹೋಗಬೇಕಾಗಿದ್ದನ್ನು ನೆನಪಿಸಿದ ಇವರು ಬೆಳಗಾವಿಗೆ ತಾಂತ್ರಿಕ ವಿಶ್ವವಿದ್ಯಾಲಯ ಮಂಜೂರಾಗುವುದರ ಏಕ ಸದಸ್ಯ ಅಧ್ಯಕ್ಷರಾಗಿ ಅನುಮೋದನೆಗೆ ಸಲ್ಲಿಸುವ ಮೂಲಕ ನಾವಿಂದು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಂತ್ರಿಕ ವಿಶ್ವವಿದ್ಯಾಲಯವನ್ನು ಕಾಣಬಹುದು.ಅವರ ನಿಧನಾ ನಂತರವಾದರೂ ಅವರು ಸಲ್ಲಿಸಿದ್ದ ವರದಿ ಜಾರಿಗೆ ಬಂದಿರುವುದು ಅವರ ವರದಿಯ ಫಲಶ್ರುತಿ.

ಮಲಪ್ರಭಾ ನದಿಯ ನವಿಲುತೀರ್ಥ ಅಣೆಕಟ್ಟಿನ ಸಂದರ್ಭದಲ್ಲಿ ವಿಶ್ವಬ್ಯಾಂಕ್ ಭಾರತ ಜನಸಂಖ್ಯಾ ಯೋಜನೆ ಬೆಂಗಳೂರಿನ ಅಂದಿನ ನಿರ್ದೇಶಕರಾಗಿದ್ದ ಡಿ.ಎಸ್.ಎನ್.ಮೂರ್ತಿಯವರು ಬರೆದ ನಾನು ಕಂಡ ಇಂಜನೀಯರ ಶ್ರೀ ಬಾಳೇಕುಂದ್ರಿಯವರು ಲೇಖನ ಒಂದು ಭಾಗ ಇಂತಿದೆ. ನಾನಾಗ ಮಲಪ್ರಭಾದಲ್ಲಿ ಎಕ್ಸಿಕ್ಯೂಟಿವ್ಹ ಇಂಜನೀಯರಾಗಿ ಕೆಲಸ ಮಾಡುತ್ತಿದ್ದೆ.

ಮಲಪ್ರಭಾ ಅಣೆಕಟ್ಟಿಗೆ ಕಾಂಕ್ರಿಟ ಹಾಕಲು ಯಾವ ಹಿಂದಿನ ಚೀಪ್ ಇಂಜನೀಯರಗಳೂ ಧೈರ್ಯ ಮಾಡಿರಲಿಲ್ಲ.ಬೋರ್ ಹಾಕಿಸಿ ಮುಂದೂಡುತ್ತಿದ್ದರು.ಶ್ರೀ ಬಾಳೇಕುಂದರಗಿಯವರಿU ಅಣೆಕಟ್ಟಿನ ಜಾಗದಲ್ಲಿ ಬರೀ ಕ್ವಾರ್ಟ ಬಂಡೆಯಿದೆ.ಆದ್ದರಿಂದ ಮುಂದಿನ ವಾರ ಕಾಂಕ್ರೀಟ್ ಹಾಕಬೇಕೆಂದಿದ್ದೇನೆ. ಎಂದು ನಾನು ಹೇಳಲು ಅವರು ಒಪ್ಪಿ ಮುಂದಿನ ವಾರ ಕಾಂಕ್ರೀಟ್ ಹಾಕಲು ಒಪ್ಪಿಗೆ ಕೊಟ್ಟರು.

ಮಲಪ್ರಭಾ ಸುರಂಗ ಮೂರು ಮೈಲಿ ಸವದತ್ತಿ ಗುಡ್ಡದಲ್ಲಿ ಹಾದು ಹೋಗುತ್ತದೆ.ಅದಕ್ಕೆ ಒಂದೂವರೆ ಮೈಲು ಉದ್ದ ಎರಡೂ ಕಡೆಯಿಂದಲೂ ಅಗೆಯುತ್ತ ಬರುತ್ತಿದ್ದಾಗ ಅನೇಕ ಸಾರಿ ಶ್ರೀ ಬಾಳೇಕುಂದ್ರಿಯವರು ಸ್ವತಃ ಟೆಲೆಸ್ಕೋಪ್ ನೋಡಿ ಮುಂದಿನ ದಾರಿ ತೋರಿಸುತ್ತಿದ್ದರಂತೆ,ಪರಿಣಾಮ ಎರಡೂ ಕಡೆಯಿಂದ ಅಗೆಯುತ್ತ ಬಂದಾಗ,ಮಧ್ಯಭಾಗದ ಸುರಂಗ ಒಡೆದಾಗ,ಕೇವಲ ಒಂದು ಇಂಚು ವ್ಯತ್ಯಾಸ ಇದ್ದದ್ದು ಇವರ ಕಾರ್ಯ ದಕ್ಷತೆಗೆ ಸಾಕ್ಷಿ.

ಸುರಂಗ ಪಕ್ಕದಲ್ಲಿ ನೂರು ಅಡಿ ಮುಕ್ತಾ ಅಗೆಯುವ ಕಾಲುವೆ ಒಂದು ಕೋಟಿ ರೂಪಾಯಿಗೆ ಟೆಂಡರ್ ಕರೆದಾಗ ಶ್ರೀ ರಾಯರಡ್ಡಿ ಕಂಟ್ರಾಕ್ಟರದೇ ಕಡಿಮೆ ರೇಟಾಗಿದ್ದರಿಂದ ಚೀಪ್ ಇಂಜನೀಯರ ಆಫೀಸಿನಲ್ಲಿ ಇವರಿಗೆ ಕೊಡಲು ತೀರ್ಮಾನವಾಯಿತು. ಇದನ್ನು ತಿಳಿದ ಒಂದು ವಾರದಲ್ಲಿ ಕಂಟ್ರಾಕ್ಟರ್ ಐದು ಸಾವಿರ ಜನರನ್ನು ತಂದು ಕಾಲುವೆ ಪಕ್ಕದಲ್ಲಿ ಬೀಡು ಬಿಟ್ಟಿದ್ದರು.

ಆ ಬೀಡಿನಲ್ಲಿ ರಸ್ತೆಗಳು, ಉದ್ಯಾನವನ ಸ್ಕೂಲ್, ಆಸ್ಪತ್ರೆ,ಗುಡಿಸಲುಗಳು. ಶಿಸ್ತಿನಿಂದ ಇದ್ದವು.ನಾನು ಕೇಳಿದ್ದಕ್ಕೆ ಕಾಂಟ್ರಕ್ಟರ್ ಶ್ರೀ ಬಾಳೇಕುಂದ್ರಿಯವರು ನ್ಯಾಯವಾದೀ ಇಂಜನೀಯರ್,ಕಡಿಮೆ ರೇಟಾದರೂ ನಾನು ಬೇಗನೆ ಕೆಲಸ ಮಾಡುತ್ತೇನೆ.ಮತ್ತು ಇದರಿಂದ ನ್ಯಾಯವಾದ ಲಾಭ ಗಳಿಸಬಹುದು ಎಂಬ ಭರವಸೆ ಇದೆಎಂದು ಹೇಳಿದರಲ್ಲದೇ ಅದರಂತೆ ನಡೆದುಕೊಂಡರು.

ಮಲಪ್ರಭಾ ಸುರಂಗ ಒಮ್ಮೆ ಸವದತ್ತಿ ಎಲ್ಲಮ್ಮ ದೇವಸ್ಥಾನ ತಳಗಿನ ಭಾಗದಲ್ಲಿ ಸರಿಯಾಗಿ ಸುಮಾರು ಎರಡು ನೂರು ಅಡಿ ಆಳದಲ್ಲಿ ಹೋಗುವ ಸಂದರ್ಭ ಬಂದಿತು. ಆಗ ಬಾಳೇಕುಂದ್ರಿಯವರು ಎಲ್ಲಮ್ಮ ದೇವರಿಗೆ ಪೂಜೆ ಮಾಡಿ ಅಮ್ಮನವರ ಆಶೀರ್ವಾದ ಪಡೆದು ಕೆಲಸ ಮುಂದುವರೆಸಿ ಎಂದರು.ಅದರಂತೆ ಪೂಜೆ ಮಾಡಿ ಮುಂದುವರೆಸಿದಾಗ ಕಂಡದ್ದೇನು.!

ಮೇಲೆ ಎಲ್ಲಮ್ಮ ದೇವಸ್ಥಾನದಲ್ಲಿ ದೊಡ್ಡ ದೊಣೆ ನೀರು ಧಾರಾಕಾರವಾಗಿ ಹರಿಯುತ್ತಿದ್ದುದು ಸ್ವಲ್ಪವೂ ಕಡಿಮೆಯಾಗಲಿಲ್ಲ. ಆದರೆ ಆ ನೀರು ಸ್ವಲ್ಪವೂ ಸುರಂಗದಲ್ಲಿ ಬರದಿದ್ದುದು ಆಶ್ಚರ್ಯ ಮತ್ತು ದೇವಿಯ ಆಶೀರ್ವಾದ ಎಂಬುದನ್ನು ನೆನೆದು ತಮ್ಮ ಲೇಖನದಲ್ಲಿ ಬಾಳೇಕುಂದ್ರಿಯವರೊಂದಿಗೆ ಕೆಲಸ ಮಾಡುವ ಸೌಭಾಗ್ಯ ನೆನೆದಿರುವುದನ್ನು ಕಂಡಾಗ ನನ್ನ ತಂದೆ ದಿವಂಗತ ಬಸಪ್ಪ ಕಡಕೋಳ ನನ್ನ ಬಾಲ್ಯದ ಸಂದರ್ಭದಲ್ಲಿ ನವಿಲುತೀರ್ಥ ಅಣೆಕಟ್ಟಿನ ಸ್ಥಳದಲ್ಲಿ ನನ್ನನ್ನು ಕರೆದುಕೊಂಡು ವಿಹರಿಸುತ್ತ ಬಾಳೇಕುಂದ್ರಿಯವರ ಕುರಿತು ಹೇಳುತ್ತಿದ್ದ ಸಂಗತಿ ಇಂದು ನೆನಪಾಗುತ್ತಿದೆ.

ನಿವೃತ್ತಿಯ ನಂತರವೂ ದಣಿವರಿಯದ ಸೇವೆಯನ್ನು ಅವರು ನಿರ್ವಹಿಸಿದರು. 4-1-1993 ರಂದು ಸಂಜೆ ವಾಯುವಿಹಾರಕ್ಕೆ ತೆರಳಿದ್ದ ಸಮಯ ಅಪಘಾತ ಸಂಭವಿಸಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ಇವರು ಜನೇವರಿ 8 ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕರ್ನಾಟಕ ಸರ್ಕಾರ ಮಲಪ್ರಭಾ ಎಡದಂಡೆ ಕಾಲುವೆಗೆ “ಬಾಳೆಕುಂದ್ರಿ ಕಾಲುವೆ” ಎಂದು ಹೆಸರಿಟ್ಟು ಗೌರವಿಸಿದೆ.

ಶ್ರೀ ಬಾಳೇಕುಂದ್ರಿಯವರ ಸ್ಮರಣಾರ್ಥ 2001 ರಿಂದ ಮೇ 5 ರಂದು ಸರ್ಕಾರದ ವತಿಯಿಂದ ನೀರಾವರಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಇಂಜನೀಯರುಗಳನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡುತ್ತಿರುವರು.ಕೆ.ಎಲ್.ಇ.ಸಂಸ್ಥೆಯವರು ಇಂಜನೀಯರಿಂಗ್ ಕಾಲೇಜಿಗೆ ಇವರ ಹೆಸರನ್ನು ಇಟ್ಟಿರುವರು.

ಶ್ರೀ ಬಾಳೇಕುಂದ್ರಿಯವರು ಕೂಡಲ ಸಂಗಮ ಅಂತರಾಷ್ಟ್ರೀಯ ಬಸವ ಸ್ಮಾರಕವಾಗಿ ರೂಪಗೊಳ್ಳಲು ವಿನ್ಯಾಸ ರೂಪಿಸಿದ ಸಮೀತಿಯ ಸದಸ್ಯರಲ್ಲೊಬ್ಬರು.ಸತ್ಯ ಶುದ್ದ ಕಾಯಕದಿಂದ ಬಸವಣ್ಣನವರ ಐಕ್ಯಮಂಟಪವನ್ನು ಸ್ಥಳಾಂತರಿಸದೇ ಅದು ಮಹಾಪೂರ ಬಂದಾಗ ಮುಳಗದಂತೆ ಮೆಟ್ಟಿಲುಗಳನ್ನು ಮಾಡಿ ಮಂಟಪವನ್ನು ನಿರ್ಮಿಸಲು ಸಲಹೆಗೈದು ಸಮಸ್ತ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಪ್ರತಿಷ್ಟಿತ ಇನ್‍ಸ್ಟಿಟ್ಯೂಟ್ ಆಪ್ ಇಂಜನೀಯರ್ಸ ಮುಂದಿನ ವೃತ್ತಕ್ಕೆ “ಎಸ್.ಜಿ.ಬಾಳೆಕುಂದ್ರಿ ವೃತ್ತ” (1988). ಎಂದು ನಾಮಕರಣ ಮಾಡಿರುವರು.ಅಷ್ಟೇ ಅಲ್ಲ ಧಾರವಾಡದ ಇನ್‍ಸ್ಟಿಸ್ಟ್ಯೂಷನ್ ಆಪ್ ಇಂಜನೀಯರ್ಸ ಸಂಸ್ಥೆಯ ಸಭಾಂಗಣಕ್ಕೆಬಾಳೇಕುಂದ್ರಿ ಭವನ(1994) ರಲ್ಲಿ ಬೆಳಗಾವಿಯ ಇನ್‍ಸ್ಟಿಸ್ಟ್ಯೂಷನ್ ಆಪ್ ಇಂಜನೀಯರ್ಸ ಸಂಸ್ಥೆಯ ಸಭಾಂಗಣಕ್ಕೆ ಎಸ್.ಜಿ.ಬಾಳೆಕುಂದ್ರಿ ಸ್ಮಾರಕ ಸಭಾಂಗಣ(1995),ಘಟಪ್ರಭಾ ನದಿಗೆ ಕಟ್ಟಿರುವ ಹಿಡಕಲ್ ಜಲಾಶಯದ ಹತ್ತಿರ ಬಾಳೆಕುಂದ್ರಿಯವರ ಪ್ರತಿಮೆಯನ್ನು(1999),ಕೃಷ್ಟಾ ಭಾಗ್ಯ ಜಲನಿಗಮದವರು ಮೇ 5 2006 ರಂದು ಆಲಮಟ್ಟಿ ಆಣೆಕಟ್ಟಿನ ವೃತ್ತದಲ್ಲಿ ಇವರ ಕಂಚಿನ ಮೂರ್ತಿಯನ್ನು ಪ್ರತಿಷ್ಟಾಪಿಸಿರುವರು.

ಪ್ರತಿಭಾವಂತ ಪತ್ನಿ ಕಮಲಾದೇವಿ

ಬಾಳೇಕುಂದ್ರಿಯವರ ಪತ್ನಿ ಈಗ ಬೆಂಗಳೂರಿನಲ್ಲಿದ್ದಾರೆ ಅವರಿಗೀಗ 88 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿಯೂ ಕೂಡ ಶಿವಕಮಲ ಬಾಳೇಕುಂದ್ರಿ ಟ್ರಸ್ಟ ಕಾರ್ಯಾಧ್ಯಕ್ಷೆಯಾಗಿ ಅವರ ಇಚ್ಛೆಗಳನ್ನು ಟ್ರಸ್ಟ ಮೂಲಕ ಕಾರ್ಯಗತಗೊಳಿಸುತ್ತ ಬಂದಿರುವರು.ಕಮಲಾದೇವಿಯವರು ಉತ್ತಮ ಶಿಕ್ಷಕ ಮತ್ತು ದಕ್ಷ ಆಡಳಿತಗಾರ ಎಂದು ಅಂದಿನ ಕಾಲದಲ್ಲಿ ಹೆಸರು ಗಳಿಸಿದ್ದ ಶ್ರೀ ಬಸಪ್ಪ ಮಲ್ಲಪ್ಪ ಶಿಂತ್ರಿ ಮತ್ತು ಶ್ರೀಮತಿ ಗಂಗಮ್ಮನವರ ಎರಡನೆಯ ಮಗಳು.ಅವರ ಹಿರಿಯಕ್ಕ ಖ್ಯಾತ ಲೇಖಕಿ ಡಾಕ್ಟರ್ ಸರೋಜನಿ ಶಿಂತ್ರಿ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಕಮಲಾದೇವಿಯವರು ಶಿಷ್ಯವೇತನಗಳಿಂದ ಪುರಸ್ಕøತರಾಗಿ ತಮ್ಮ ಉಚ್ಚ ಶಿಕ್ಷಣ ಪೂರೈಸಿಕೊಂಡರು.ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಎಸ್.ಸಿ.ಪದವಿಯನ್ನು ಪಡೆದ ಇವರು 1955 ರಲ್ಲಿ ಲಿಂಗರಾಜ ಕಾಲೇಜನ್ನು ಡೆಮಾನಿಸ್ಟ್ರೇಟರ್ ಎಂದು ಸೇರಿದರು.

1958 ರಲ್ಲಿ ಡೆಹರಾಡೂನಿನಲ್ಲಿ ಸೈನಿಕ ಶಿಕ್ಷಣವನ್ನು ಪಡೆದು ಎನ್.ಸಿ.ಸಿಯಲ್ಲಿ ಕಮೀಶನ್ಡ ಆಫೀಸರಾದರು.ಶ್ರೀ ಬಾಳೇಕುಂದ್ರಿಯವರನ್ನು ವಿವಾಹವಾಗುವ ಕಾಲದಲ್ಲಿ ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ವಿಭಾಗದಲ್ಲಿ ಪ್ರವಾಚಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಅವರ ಸೇವೆಗೆ ಪತಿ ಯಾವತ್ತೂ ಅಡ್ಡ ಬರಲಿಲ್ಲ ಜೊತೆಗೆ ಪ್ರೋತ್ಸಾಹ ನೀಡಿದರು.ತಾನೊಬ್ಬ ದೊಡ್ಡ ಅಧಿಕಾರಿ ತನ್ನ ಪತ್ನಿ ಏಕೆ ಕೆಲಸ ಮಾಡಬೇಕು ಎಂಬ ಭಾವನೆ ಅವರಲ್ಲಿ ಇರಲಿಲ್ಲ.ಶ್ರೀಮತಿ ಕಮಲಾದೇವಿಯವರು 31-3-1994 ರಂದು ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಇಂಜನೀಯರಿಂಗ್ ಕಾಲೇಜಿನಿಂದ ನಿವೃತ್ತಿ ಹೊಂದಿದರು.

ತಾವು ಗಳಿಸಿದ ಆಸ್ತಿಯ ಕೆಲ ಭಾಗವನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವ್ಯಯ ಮಾಡಬೇಕೆಂದು ಇಚ್ಛೆಯನ್ನು ಬಾಳೇಕುಂದ್ರಿಯವರು ತಮ್ಮ ಪತ್ನಿಯ ಮುಂದೆ ಹೇಳಿದ್ದರು.ಅವರ ಹೆಜ್ಜೆಯಲ್ಲಿಯೇ ಹೆಜ್ಜೆ ಇಡುತ್ತ ಬಂದು ಸಾಕ್ಷಾತ್ ಸಹಧರ್ಮಿಣಿಯೆನಿಸಿದ ಕಮಲಾದೇವಿಯವರು ಬಾಳೇಕುಂದ್ರಿಯವರ ಮರಣಾನಂತರ ಶಿವಕಮಲ ಬಾಳೇಕುಂದ್ರಿ ಟ್ರಸ್ಟನ್ನು ರಚಿಸಿ ಅದರ ಕಾರ್ಯಾಧ್ಯಕ್ಷೆಯಾಗಿ ಅವರ ಇಚ್ಛೆಗಳನ್ನು ಪೂರೈಸುತ್ತಿರುವರು.

ಶಿವಕಮಲ ಬಾಳೇಕುಂದ್ರಿ ಟ್ರಸ್ಟ ಬಹು ಮುಖ್ಯವಾಗಿ ತನ್ನ ಹಣವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಮತ್ತು ಶೈಕ್ಷಣಿಕವಾಗಿ ಉಪಯೋಗವಾಗುವ ಹತ್ತಾರು ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ.ಬಾಳೇಕುಂದ್ರಿ ಮೆಮೋರಿಯಲ್ ಬಾಷಣಗಳ ಏರ್ಪಾಡು ಬೆಂಗಳೂರು ಮತ್ತು ಬೆಳಗಾವಿ ಮತ್ತು ಧಾರವಾಡಗಳಲ್ಲಿ, ಅರ್ಹ ಬಡ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕೊಡುವ ಮೂಲಕ.,ಶಿಕ್ಷಣ ಸಂಸ್ಥೆಗಳಿಗೆ ಧನ ಸಹಾಯ ಮತ್ತು ಅವಶ್ಯಕ ಸಾಮಗ್ರಿಗಳನ್ನು ಒದಗಿಸುವ ಮೂಲಕ,ನಿರ್ಗತಿಕ ಹೆಣ್ಣು ಮಕ್ಕಳಿಗೆ ಮತ್ತು ವಿಕಲಚೇತನರಿಗೆ ಸಹಾಯ ಹೀಗೆ ಹಲವು ಸೃಜನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಟ್ರಸ್ಟ ಕಾರ್ಯಗತವಾಗಿದೆ.

ಬಾಳೇಕುಂದ್ರಿಯವರು ಸಂಗೀತಾಸಕ್ತರಾಗಿದ್ದರು.ಅವರ ನಿಧನದ ನಂತರ ಇವರ ಸಂಗೀತ ಪ್ರೇಮವನ್ನು ಮನದಲ್ಲಿಟ್ಟುಕೊಂಡು ಶ್ರೀಮತಿ ಕಮಲಾದೇವಿಯವರು ಶಿವ ಕಮಲ ಬಾಳೆಕುಂದ್ರಿ ಟ್ರಸ್ಟನಿಂದ ಬೆಂಗಳೂರಿನಲ್ಲಿರುವ ಬಸವಸಮಿತಿಗೆ ಮೇ 5 ರಂದು ಅವರ ಹುಟ್ಟಿದ ದಿನದ ಸವಿನೆನಪಿಗಾಗಿ ಸಂಗೀತ ಕಾರ್ಯಕ್ರಮವನ್ನು ಪ್ರತಿ ವರ್ಷ ಏರ್ಪಡಿಸಲು ಇಪ್ಪತ್ತು ಸಾವಿರ ರೂಪಾಯಿಗಳನ್ನು ನೀಡಿರುವರು.
ಬಾಳೆಕುಂದ್ರಿಯವರ ಇನ್ನೊಂದು ಹವ್ಯಾಸ ಗಿಡ ಮರಗಳನ್ನು ಬೆಳೆಸುವುದು.ಯಾವುದಾದರೂ ಪುಸ್ತಕ ಮಳಿಗೆಗೆ ಹೋದರೆ ಸಾಕು ಅಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸುತ್ತಿದ್ದರಂತೆ.

ಅವರ ಅಳಿಯ ಅಮೇರಿಕದಿಂದ ಭಾರತಕ್ಕೆ ಬರುವ ಮುಂಚೆ ಪೋನ್ ಮಾಡಿದಾಗ ಏನು ತರಲಿ.? ಎಂದು ಕೇಳಿದಾಗ ತೋಟಗಾರಿಕೆಯ ಪುಸ್ತಕಗಳು ಮತ್ತು ಗಿಡಗಳ ಚಿಕ್ಕ ಚಿಕ್ಕ ಕೊಂಬೆಗಳನ್ನು ಕೊಯ್ಯಲು ಬೇಕಾಗುವ ಕತ್ತರಿಗಳು ಎನ್ನುತ್ತಿದ್ದರಂತೆ. ಹೀಗೆ ಅವರ ತೋಟಗಾರಿಕೆ ಹವ್ಯಾಸದಿಂದ ಧಾರವಾಡದಲ್ಲಿದ್ದಾಗ ಅವರಿಗೆ ವಾಸಿಸಲು ನೀಡದ್ದ ಬಂಗ್ಲೆಯ ಮುಂದಿನ ಆವರಣವನ್ನು ಹೂ ಗಿಡಗಳು ಮತ್ತು ಸಸ್ಯ ಸಂಕುಲವನ್ನು ಬೆಳೆಸುವ ಮೂಲಕ ಅಂದವಾಗಿರಿಸಿದ್ದರಂತೆ.ಪ್ರತಿ ವರ್ಷ ನೀಡುವ ತೋಟಗಾರಿಕೆ ಪ್ರಶಸ್ತಿ ಕೂಡ ಇವರ ಗಾರ್ಡನ್ ಗೆ ಬಂದಿತ್ತಂತೆ.ಹೀಗೆ ಅವರ ಗಿಡ ಮರಗಳ ಪ್ರೀತಿಯನ್ನು ಅವರ ಪತ್ನಿ ನೆನೆಯುತ್ತಾರೆ.

ಈ ಸ್ಮರಣೆಗಹೆ ಬೆಂಗಳೂರಿನ ತೋಟಗಾರಿಕೆಯ ಸಂಘಕ್ಕೆ ಕಮಲಾದೇವಿಯವರು ಬಾಳೇಕುಂದ್ರಿ ಚಾಂಪಿಯನ್ ರೋಲಿಂಗ್ ಶೀಲ್ಡನ್ನು ಕೊಡಮಾಡಿರುವರು.ಇದನ್ನು ವರುಷಕ್ಕೆ ಎರಡು ಸಲ ಕೊಡಲಾಗುತ್ತದೆ.

1987 ರಲ್ಲಿ ಕರ್ನಾಟಕ ಸರ್ಕಾರ ಎಸ್.ಜಿ.ಬಾಳೇಕುಂದ್ರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿರುವರು.ಹೀಗೆ ತಮ್ಮ ಕರ್ತವ್ಯ ನಿಷ್ಠೆಯಿಂದ ಬದುಕಿದ ಬಾಳೆಕುಂದ್ರಿಯವರ ಕುರಿತು ಅವರ ಸಹೋದರನ ಮಗಳು ಖ್ಯಾತವೈದ್ಯೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಕಾಯಕಯೋಗಿ ಎಸ್.ಜಿ.ಬಾಳೇಕುಂದ್ರಿಎಂಬ ಶೀರ್ಷಿಕೆಯ ಕೃತಿಯನ್ನು ರಚಿಸಿದ್ದು.ಅವರ ಬದುಕಿನ ಚಿತ್ರಣವನ್ನು ಎಳೆಎಳೆಯಾಗಿ ಬಿಡಿಸಿರುವರು.ಅವರು ಬಡ ಜನರ ಬಗ್ಗೆ ನೀರಾವರಿ ಯೋಜನೆಗಳ ಕುರಿತು.ಉನ್ನತ ವಿದ್ಯೆ ಪಡೆಯುವ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಕೈಗೊಂಡ ಕಾರ್ಯಗಳನ್ನು ಈ ಕೃತಿಯಲ್ಲಿ ಕಾಣಬಹುದು.

ನಿಜಕ್ಕೂ ಸರಳ ಸಜ್ಜನ ಜೀವಿ ಬಾಳೆಕುಂದ್ರಿಯವರನ್ನು ಮೇ 5 ರಂದು ಕರ್ನಾಟಕ ಸರ್ಕಾರ ಇಂಜನೀಯರುಗಳಿಗೆ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಸ್ಮರಿಸುವುದಾದರೆ ನಾವು ನೀವೆಲ್ಲ ಅವರ ಬದುಕಿನ ಪುಟಗಳನ್ನು ಅರಿಯಬಹುದಲ್ಲವೇ.?


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-591117
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group