spot_img
spot_img

ಹೊಸಪುಸ್ತಕ ಓದು: ಇಷ್ಟಲಿಂಗ ವಿವಿಧ ಆಯಾಮಗಳು

Must Read

- Advertisement -
  • ಪುಸ್ತಕದ ಹೆಸರು: ಇಷ್ಟಲಿಂಗ ವಿವಿಧ ಆಯಾಮಗಳು
  • ಸಂಪಾದಕರು: ಡಾ. ಮೃತ್ಯುಂಜಯ ರುಮಾಲೆ
  • ಪ್ರಕಾಶಕರು: ಅರಿವು ಪ್ರಕಾಶನ, ಶಿವಮೊಗ್ಗ, ೨೦೨೨
  • ಪುಟ: ೩೮೬
  • ಬೆಲೆ: ರೂ. ೪೦೦

(ಸಂಪರ್ಕವಾಣಿ : ೮೬೧೮೨೮೮೨೯೯)


೧೨ನೇ ಶತಮಾನದಲ್ಲಿ ಬಸವಣ್ಣನವರಿಂದ ಆವಿಷ್ಕರಿಸಲ್ಪಟ್ಟ ಒಂದು ವಿನೂತನ ಧಾರ್ಮಿಕ ಆಚರಣೆ- ಇಷ್ಟಲಿಂಗೋಪಾಸನೆ. ಪ್ರಾಚೀನ ಕಾಲದಿಂದಲೂ ಲಿಂಗಪೂಜೆ ಭಾರತದಲ್ಲಿ ಬೆಳೆದು ಬಂದಿತ್ತು, ಆದರೆ ಆ ಲಿಂಗವನ್ನು ಕರಸ್ಥಲದಲ್ಲಿಟ್ಟು ಪೂಜೆ ಮಾಡುವ ಮೂಲಕ ದೇವರು ಮತ್ತು ಭಕ್ತರ ನಡುವೆ ಇದ್ದ ದಲ್ಲಾಳಿಗಳನ್ನು ದೂರ ಮಾಡಿದ ಪ್ರಕ್ರಿಯೆ ಬಸವಾದಿ ಶಿವಶರಣರಿಂದ ನಡೆಯಿತು. ‘ಲಿಂಗ ಹುಟ್ಟಿತ್ತು ಬಸವಣ್ಣನಿಂದ’ ಎಂದು ಶರಣರು ಹೇಳುತ್ತಾರೆ. ಬಸವಣ್ಣನವರು ‘ಇಷ್ಟಲಿಂಗ’ವನ್ನು ಕರುಣಿಸುವ ಮೂಲಕ ಜಾತಿ-ಮತ-ಪಂಥಗಳ ಭೇದವಿಲ್ಲದೆ ಯಾರೂ ಬೇಕಾದರೂ ಆತ್ಮಕಲ್ಯಾಣ-ಲಿಂಗಾಂಗ ಸಾಮರಸ್ಯ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟರು.  ಇಷ್ಟಲಿಂಗ ಕೇವಲ ಅಧ್ಯಾತ್ಮ ಸಾಧನೆಯ ಕುರುಹು ಮಾತ್ರವಾಗದೆ, ಇತರ ಆಯಾಮಗಳಲ್ಲಿಯೂ ಅದು ಮಾಡಿದ ಕಾರ್ಯ ನಿತ್ಯನೂತನವಾದುದು. ಇಂತಹ ಇಷ್ಟಲಿಂಗದ ವಿವಿಧ ಆಯಾಮಗಳನ್ನು ಕುರಿತು ವಿಶೇಷ ಲೇಖನಗಳ ಸಂಗ್ರಹ ಕೃತಿ ಡಾ. ಮೃತ್ಯುಂಜಯ ರುಮಾಲೆ ಅವರು ಸಂಪಾದಿಸಿದ ‘ಇಷ್ಟಲಿಂಗ ವಿವಿಧ ಆಯಾಮಗಳು’.

ಶಿವಮೊಗ್ಗ ಬಸವಕೇಂದ್ರದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ನಮ್ಮ ದಿನಮಾನದ ಅಪರೂಪದ ಬಸವ ತತ್ವನಿಷ್ಠ ಮಠಾಧೀಶರು. ಬಸವತತ್ವಗಳನ್ನು ಜನಮನದಲ್ಲಿ ಬಿತ್ತುವ ಪ್ರಯತ್ನದಲ್ಲಿ ಶ್ರೀಗಳು ಮಾಡುತ್ತಿರುವ ಪ್ರಯೋಗಗಳು ಅನನ್ಯ-ಅಪರೂಪವಾಗಿವೆ. ಸರಳ-ಸಜ್ಜನಿಕೆಯ ಸದುವಿನಯದ ಕೊಡ ತುಂಬಿದಂತಿರುವ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ಲಿಂಗಾಯತ ಸಮಾಜವನ್ನು ವೈಚಾರಿಕ ತಳಹದಿಯ ಮೇಲೆ ರೂಪಿಸಬೇಕೆಂಬ ಹಂಬಲವುಳ್ಳವರು. ಸ್ವತಃ ವಿದ್ವಾಂಸರಾಗಿರುವ ಪೂಜ್ಯರು ‘ಗುರು-ಲಿಂಗ-ಜಂಗಮ’ ಎಂಬ ವಿಷಯ ಕುರಿತು ಸಂಶೋಧನೆ ಮಾಡಿ, ಮಹಾಪ್ರಬಂಧ ರಚಿಸಿ ಪಿಎಚ್.ಡಿ. ಪದವಿಯನ್ನು ಸಂಪಾದಿಸಿದ್ದಾರೆ. ಅಪೂರ್ವ ವಾಗ್ಮಿಗಳಾಗಿರುವ ಪೂಜ್ಯರು ಶಿವಮೊಗ್ಗ ಬಸವ ಕೇಂದ್ರವನ್ನು ಬಸವತತ್ವದ ಪ್ರಯೋಗ ಶಾಲೆಯನ್ನಾಗಿ ರೂಪಿಸಿದ್ದಾರೆ. ಪ್ರತಿವರ್ಷ ಶ್ರಾವಣಮಾಸ-ಕಾರ್ತಿಕಮಾಸಗಳಲ್ಲಿ ಒಂದು ತಿಂಗಳ ಪರ್ಯಂತ ವಿಶೇಷ ಉಪನ್ಯಾಸ ಕಾರ್ಯಕ್ರಮ, ವಿಚಾರ ಸಂಕಿರಣಗಳನ್ನು ಆಯೋಜಿಸಿ, ಅಲ್ಲಿ ಮಂಡಿತವಾದ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಒಂದು ಯೋಜನೆಯನ್ನು ಪೂಜ್ಯರು ರೂಪಿಸಿದ್ದಾರೆ. ಪೂಜ್ಯರ ಈ ಯೋಜನೆಗೆ ಸಂಯೋಜನೆ-ಸಂಚಾಲಕತ್ವ ನೀಡಿದವರು ನಮ್ಮ ನಾಡಿನ ಹಿರಿಯ ವಿದ್ವಾಂಸರಾದ ಡಾ. ಮೃತ್ಯುಂಜಯ ರುಮಾಲೆ ಅವರು. 

- Advertisement -

೨೦೧೯ ಆಗಸ್ಟ್ ೧೪ರಿಂದ ೨೦ರವರೆಗೆ ‘ಇಷ್ಟಲಿಂಗ : ವಿವಿಧ ಆಯಾಮಗಳು’ ಎಂಬ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಡಾ. ಬಸವಮರುಳಸಿದ್ಧ ಸ್ವಾಮೀಜಿಯವರು ಶಿವಮೊಗ್ಗ ಬಸವ ಕೇಂದ್ರದಲ್ಲಿ ಆಯೋಜಿಸಿದರು. ಈ ಸಮಾರಂಭದಲ್ಲಿ ಇಷ್ಟಲಿಂಗವನ್ನು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಆಯಾಮಗಳಲ್ಲಿ ಕುರಿತು ವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರು. ಈ ಉಪನ್ಯಾಸಗಳನ್ನು ಸಂಪಾದಿಸಿದ ಡಾ. ಮೃತ್ಯುಂಜಯ ರುಮಾಲೆ ಅವರು ಈ ಉಪನ್ಯಾಸಗಳ ಜೊತೆಗೆ ಈವರೆಗೆ ಇಷ್ಟಲಿಂಗವನ್ನು ಕುರಿತು ಪ್ರಕಟವಾದ ಅತ್ಯುತ್ತಮ ಲೇಖನಗಳನ್ನು ಸಂಗ್ರಹಿಸಿ ಈ ಬೃಹತ್ ಕೃತಿಯಲ್ಲಿ ಒಂದೆಡೆ ದಾಖಲಾಗುವಂತೆ ಮಾಡಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. 

ಈ ಕೃತಿಯ ಮಹತ್ವವನ್ನು ಕುರಿತು ಸಂಪಾದಕರಾದ ಡಾ. ರುಮಾಲೆ ಅವರು ಹೀಗೆ ವಿವರಿಸುತ್ತಾರೆ- “ಇಷ್ಟಲಿಂಗವನ್ನು ಆಯತ ಮಾಡಿಕೊಳ್ಳುವ, ಸ್ವಾಯತಗೊಳಿಸಿಕೊಳ್ಳುವ ಮತ್ತು ಸನ್ನಿಹಿತವಾಗುವ ಕ್ರಿಯೆಯು ಸಮಷ್ಟಿಯಲ್ಲಿರುವ ಚೈತನ್ಯವನ್ನು ವ್ಯಷ್ಟಿಯಲ್ಲಿ ಶೋಧಿಸಿ, ಆತ್ಮಶುದ್ಧಿ ಮಾಡಿಕೊಳ್ಳುವ ಅನುಭಾವಿಕ ಆಚರಣೆಯಾಗಿದೆ. ದೈಹಿಕದ ಜೊತೆಗೆ ಪಾರಮಾರ್ಥಿಕ, ಆಧ್ಯಾತ್ಮಿಕ, ವೈಜ್ಞಾನಿಕ, ವೈಚಾರಿಕ, ಸಾಂಸ್ಕೃತಿಕ ಮತ್ತು ಮುಖ್ಯವಾಗಿ ಸಾಮಾಜಿಕಗಳನ್ನೊಳಗೊಂಡಂತೆ ಅಂತರಂಗ-ಬಹಿರಂಗದ ನೆಲೆಯೂ ಸ್ವಾಸ್ಥ್ಯಗೊಂಡು ಸಮಗ್ರತೆಯ ಪ್ರಜ್ಞಾಪೂರ್ವಕ ಘಟಕವಾಗಲು ಪ್ರೇರೇಪಿಸುವ ವಿಶಿಷ್ಟ ಆಚರಣೆಯಾಗಿದೆ. ಬ್ರಹ್ಮಾಂಡವನ್ನೇ ವ್ಯಾಪಿಸಿದ ಆತ್ಯಂತಿಕ ಶಕ್ತಿ-ಚೈತನ್ಯವು ಕರಸ್ಥಲದಲ್ಲಿ ನೆಲೆಗೊಳ್ಳುತ್ತದೆ ಎಂಬ ನಂಬಿಕೆಯು ಸಮಷ್ಟಿ-ವ್ಯಷ್ಟಿಯನ್ನು ಏಕೀಭಾವದಲ್ಲಿ ಖಚಿತಗೊಳಿಸುತ್ತದೆ”.

ಪ್ರಸ್ತುತ ಕೃತಿಯಲ್ಲಿ ಒಟ್ಟು ಮೂರು ಭಾಗಗಳಲ್ಲಿ ೨೬ ಲೇಖನಗಳನ್ನು ಸಂಗ್ರಹಿಸಲಾಗಿದೆ. ಮೊದಲ ಭಾಗದಲ್ಲಿ ಶಿವಮೋಗ್ಗ ಬಸವ ಕೇಂದ್ರದಲ್ಲಿ ಮಾಡಿದ ಉಪನ್ಯಾಸಗಳಿವೆ.

- Advertisement -
  1. ವಚನೋಕ್ತ ಇಷ್ಟಲಿಂಗಾನುಸಂಧಾನ: ಡಾ. ಮೃತ್ಯುಂಜಯ ರುಮಾಲೆ
  2. ಇಷ್ಟಲಿಂಗ ಸಾಮಾಜಿಕ ಆಯಾಮ: ಪ್ರಕಾಶ ಗಿರಿಮಲ್ಲನವರ
  3. ಇಷ್ಟಲಿಂಗ ಧಾರ್ಮಿಕ-ರಾಚನಿಕ ಆಧ್ಯಾತ್ಮಿಕ ಆಯಾಮ: ಜಿ. ಬಿ. ಹಲ್ಯಾಳ
  4. ಇಷ್ಟಲಿಂಗ ಸಾಂಸ್ಕೃತಿಕ ಆಯಾಮ: ಜೆ. ಎಂ. ನಾಗಯ್ಯ
  5. ಇಷ್ಟಲಿಂಗ ವೈಜ್ಞಾನಿಕ ಆಯಾಮ: ಅವಿನಾಶ ಕವಿ. ಇವಿಷ್ಟು ಉಪನ್ಯಾಸ ಲೇಖನಗಳು.

ಎರಡನೆಯ ಭಾಗದಲ್ಲಿ:

  1. ಸಂಸ್ಕಾರಗಳು-ಜ್ಞಾನದೀಕ್ಷೆ ಮತ್ತು ಇಷ್ಟಲಿಂಗ ಧಾರಣ : ವಿಲ್ಯಂ ಮಾಡ್ತ
  2. ಇಷ್ಟಲಿಂಗೋಪಾಸನೆ: ಇಮ್ಮಡಿ ಶಿವಬಸವ ಸ್ವಾಮಿಗಳು
  3. ಪ್ರಾಣಲಿಂಗಾರ್ಚನೆ: ಮಧುರಚೆನ್ನ
  4. ಶಿವಯೋಗದಿಂದ ವ್ಯಕ್ತಿತ್ವ ವಿಕಾಸ: ವಿ.ವಿ.ಸಂಗಮದ,
  5. ಇಷ್ಟಲಿಂಗೋಪಾಸನೆಯಲ್ಲಿ ಆತ್ಮವಿಕಾಸ: ಜ.ಚ.ನಿ.
  6. ಇಷ್ಟಲಿಂಗ ರಹಸ್ಯ: ಕುಮಾರ ಸ್ವಾಮಿಗಳು
  7. ಶರಣರ ಅಷ್ಟಾವರಣ ನಿಷ್ಠೆ: ಕುಮಾರ ಸ್ವಾಮಿಗಳು,
  8. ಬಸವಣ್ಣನವರ ವಚನದಲ್ಲಿ ಬ್ರಹ್ಮಾಂಡ ಹಾಗೂ ದೇವರ ಸಂಕೇತವಾಗಿರುವ ಕರಸ್ಥಳದಲ್ಲಿರುವ ಇಷ್ಟಲಿಂಗ: ಸಿ. ವಿ. ಪ್ರಭುಸ್ವಾಮಿಮಠ
  9. ಲಿಂಗಾಂಗ ಸಾಮರಸ್ಯ: ಮಹಾದೇವ ಸ್ವಾಮಿಗಳು,
  10. ಶಿವಯೋಗ: ಸದಾಶಿವ ಸ್ವಾಮಿಗಳು
  11. ಶಿವಯೋಗ: ಪುಟ್ಟರಾಜ ಗವಾಯಿಗಳು
  12. ಶಿವಯೋಗ: ಅನಾಮಧೇಯ ಹಸ್ತಪ್ರತಿಗಳಿಂದ
  13. ಇಷ್ಟಲಿಂಗ : ಎಂ. ಎಂ. ಕಲಬುರ್ಗಿ
  14. ಇಷ್ಟಲಿಂಗ: ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ
  15. ಲಿಂಗಪೂಜೆಯ ಬೆಳವಣಿಗೆಯ ಇತಿಹಾಸ: ಹರ್ಡೇಕರ ಮಂಜಪ್ಪ.

ಮೂರನೆಯ ಭಾಗದಲ್ಲಿ:

  1. ಲಿಂಗ ಮತ್ತು ಇಷ್ಟಲಿಂಗಗಳ ಪರಿಕಲ್ಪನೆ
  2. ಇಷ್ಟಲಿಂಗ ದೀಕ್ಷೆ: ಷಣ್ಮುಖಯ್ಯ ಅಕ್ಕೂರಮಠ
  3. ಇಷ್ಟಲಿಂಗ ಪೂಜಾ ವಿಧಾನ: ಸಿದ್ಧರಾಮ ಸ್ವಾಮಿಗಳು
  4. ಇಷ್ಟಲಿಂಗದ ಅನುಸಂಧಾನ: ಅನ್ನದಾನೀಶ್ವರ ಸ್ವಾಮಿಗಳು
  5. ಇಷ್ಟಲಿಂಗ-ಧಾರ್ಮಿಕ ಮತ್ತು ಆಧ್ಯಾತ್ಮಿಕ: ಶಿವಕುಮಾರ ಸ್ವಾಮಿಗಳು
  6. ಇಷ್ಟಲಿಂಗ : ಯೋಗ ವಿಚಾರ : ಯೋಗೀಶ ಯಡ್ರಾವಿ.

ಇಷ್ಟಲಿಂಗವನ್ನು ಕುರಿತು ಈ ವರೆಗೆ ಬಂದ ಬಹುತೇಕ ಮಹತ್ವದ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಹೀಗಾಗಿ ಶರಣಧರ್ಮವನ್ನು ಅಧ್ಯಯನ ಮಾಡುವವರಿಗೆ ಇದೊಂದು ಅಪರೂಪದ ಆಕರ ಕೃತಿಯಾಗಿ ರೂಪುಗೊಂಡಿದೆ. ಈ ಕೃತಿಯಲ್ಲಿ ನಾನು ನೀಡಿದ ಉಪನ್ಯಾಸವೂ ಸುದೀರ್ಘವಾದ ಲೇಖನವಾಗಿ ಇಲ್ಲಿ ಪ್ರಕಟವಾಗಿರುವುದು ನನಗೆ ಸಂತೋಷವನ್ನುಂಟು ಮಾಡಿದೆ.

ಮೊದಲ ಭಾಗದ ಉಪನ್ಯಾಸಗಳು ವರ್ತಮಾನದ ನೆಲೆಯಲ್ಲಿ ಇಷ್ಟಲಿಂಗವನ್ನು ಇಟ್ಟು ಶರಣ ಧರ್ಮದ ಒಟ್ಟುನೋಟವನ್ನು ಕಟ್ಟಿಕೊಡುವ ಅಪರೂಪದ ಲೇಖನಗಳಾಗಿವೆ. ಎರಡನೆಯ ಭಾಗದಲ್ಲಿ ಕೆಲವು ಐದಾರು ದಶಕಗಳ ಹಿಂದಿನ ಲೇಖನಗಳಾಗಿರುವುದರಿಂದ ಒಂದು ರೀತಿಯ ಸಾಂಪ್ರದಾಯಿಕ ಚೌಕಟ್ಟು ಅವುಗಳಿಗಿದೆ. ಆದರೂ ವಿಲ್ಯಂ ಮಾಡ್ತ ಅವರ ಕ್ರೈಸ್ತ ಧರ್ಮದ ಜ್ಞಾನ ದೀಕ್ಷೆ ಮತ್ತು ಇಷ್ಟಲಿಂಗ ಧಾರಣ ಕುರಿತು ತೌಲನಿಕವಾಗಿ ನೀಡಿದ ಅಧ್ಯಯನದ ವಿವರಗಳು ತುಂಬ ಮೌಲಿಕವಾಗಿವೆ. ಮಧುರಚೆನ್ನರು ಅರವಿಂದರ ಪೂರ್ಣಯೋಗದ ಸಾಧಕರಾಗಿದ್ದರೂ ಹೀಗಾಗಿ ಶಿವಶರಣರ ಪ್ರಾಣಲಿಂಗಾರ್ಚನೆ ಮತ್ತು ಪೂರ್ಣಯೋಗ ಒಂದೇ ಬಗೆಯಾಗಿವೆ ಎಂಬುದನ್ನು ತುಂಬ ಅರ್ಥಪೂರ್ಣವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ನವಕಲ್ಯಾಣಮಠದ ಕುಮಾರ ಸ್ವಾಮಿಗಳು, ಜ.ಚ.ನಿ., ಮಹಾದೇವ ಸ್ವಾಮಿಗಳು, ಪುಟ್ಟರಾಜ ಗವಾಯಿಗಳು, ಸದಾಶಿವ ಸ್ವಾಮಿಗಳು ಇಷ್ಟಲಿಂಗ ಪೂಜೆಯ ಅನುಸಂಧಾನವನ್ನು ನಿತ್ಯ ನಿರಂತರ ಮಾಡಿಕೊಂಡು ಬಂದವರು. ಹೀಗಾಗಿ ಆನುಭಾವಿಕ ನೆಲೆಯಲ್ಲಿ ಅವರ ವಿಚಾರಗಳು ತುಂಬ ಗಮನಾರ್ಹವಾಗಿವೆ. ಹರ್ಡೇಕರ ಮಂಜಪ್ಪನವರ ಲೇಖನವಂತೂ ಸ್ಥಾವರ ಲಿಂಗ ಪೂಜೆಯ ಬೆಳವಣಿಗೆಯ ಜೊತೆಗೆ ಇಷ್ಟಲಿಂಗಪೂಜೆಯೂ ಬಸವಾದಿ ಶಿವಶರಣರ ಕಾಲಕ್ಕೆ ಹೇಗೆ ಅಸ್ತಿತ್ವಕ್ಕೆ ಬಂದಿತ್ತೆಂಬ ಅದ್ಭುತ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ.

ಈ ಕೃತಿಗೆ ಆಶೀರ್ವಚನ ಬರೆದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ಹೇಳುವ ನುಡಿಗಳು ಕೃತಿಯ ಒಟ್ಟು ನೋಟವನ್ನು ತಿಳಿಸುತ್ತವೆ : “ಈ ಕೃತಿಯ ವಿಶೇಷವೆಂದರೆ, ಇಷ್ಟಲಿಂಗದ ಕುರಿತಾದ ಆಧುನಿಕರ ಎಲ್ಲ ಗ್ರಹಿಕೆಗಳ ಪ್ರಾತಿನಿಧಿಕ ಲೇಖನಗಳನ್ನು ಒಂದೆಡೆಯಲ್ಲಿ ಸಂಪಾದಿಸಿರುವುದು. ಇಲ್ಲಿರುವ ಲೇಖನಗಳ ಬಗೆಗೆ ಹಲವು ಭಿನ್ನ ಅಭಿಪ್ರಾಯಗಳು, ವೈಚಾರಿಕ ಭಿನ್ನತೆಗಳು. ಐತಿಹಾಸಿಕ ಗೊಂದಲಗಳು ಓದುಗರಲ್ಲಿ ಮೂಡಬಹುದು. ಹಾಗೆ ಆದರೆ ಈ ಕೃತಿಯ ಪ್ರಕಟಣೆ ಸಾರ್ಥಕ ಎಂದು ನಮ್ಮ ಭಾವನೆ. ಏಕೆಂದರೆ ವಚನ ಸಾಹಿತ್ಯ ಹಸ್ತಪ್ರತಿಗಳಿಂದ ಮುದ್ರಣ ಮಾಧ್ಯಮಕ್ಕೆ ಬರುವ ಪೂರ್ವದಲ್ಲಿ ಹಾಗೂ ಬಂದ ನಂತರದ ಕಾಲದಲ್ಲಿ, ಇಷ್ಟಲಿಂಗದ ಕುರಿತಾಗಿ, ಅದರ ಪೂಜೆ, ಅನುಷ್ಠಾನಗಳ ಕುರಿತಾಗಿ ವಿವಿಧ ವಲಯದ ವಿದ್ವಾಂಸರ, ಮಹಾಸ್ವಾಮಿಗಳವರ ಅಭಿಪ್ರಾಯಗಳನ್ನು ಒಂದೆಡೆ ನೋಡಿದಾಗ, ಮುಂದೆ ಇಷ್ಟಲಿಂಗದ ತಾತ್ವಿಕತೆ, ಐತಿಹಾಸಿಕತೆಗಳ ಕುರಿತಂತೆ ಸ್ಪಷ್ಟ ಅಭಿಪ್ರಾಯ ಹೊಂದಲು ಆಸಕ್ತರಿಗೆ ಅನುಕೂಲವಾಗುತ್ತದೆ”.

ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ಹೇಳಿದಂತೆ, ಇಲ್ಲಿಯ ಕೆಲವು ಹಳೆಯ ಲೇಖನಗಳು ನಮ್ಮ ಇಂದಿನ ಆಲೋಚನೆ-ಚಿಂತನೆಗಳಿಗೆ ಪೂರಕವಾಗಿಲ್ಲ. ಹೀಗಿದ್ದೂ ಕಾಲಾನುಕಾಲಕ್ಕೆ ಇಷ್ಟಲಿಂಗ ಕುರಿತಾದ ವಿದ್ವಜ್ಜನರ ಆಲೋಚನಾ ಕ್ರಮದ ವಿಕಾಸವನ್ನು ಅರಿತುಕೊಳ್ಳಲು ಪ್ರಸ್ತುತ ಕೃತಿ ತುಂಬ ಸಹಾಯಕವಾಗುತ್ತದೆ.

ಲಿಂಗಾಯತ ಧರ್ಮೀಯರು ಇಂತಹ ಕೃತಿಗಳನ್ನು ಹೆಚ್ಚು ಹೆಚ್ಚು ಓದಬೇಕು. ತಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು. ಆಗ ಮಾತ್ರ ಈ ಧರ್ಮ-ಸಂಸ್ಕೃತಿಗಳು ಉಳಿಯಲು-ಬೆಳೆಯಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. 

ಇಂತಹ ಒಂದು ಮೌಲಿಕ ಕೃತಿಯನ್ನು ಸಂಪಾದಿಸಿ, ಲಿಂಗಾಯತ ಸಮಾಜಕ್ಕೆ ಕಾಣ್ಕೆಯಾಗಿ ನೀಡಿದ ಡಾ. ಮೃತ್ಯುಂಜಯ ರುಮಾಲೆ, ಪ್ರಕಟಿಸಿದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ಅಭಿನಂದನಾರ್ಹರು.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group