spot_img
spot_img

ಕೃತಿ ಅವಲೋಕನ: ಗೊರೂರು ಅನಂತರಾಜು ಅವರ ‘ ನಮ್ಮೂರು- ತಿರುಗಿ ನೊಡಿದಾಗ’

Must Read

- Advertisement -

ಭಾರತೀಯ ಸಾಮಾಜಿಕ ವ್ಯವಸ್ಥೆಯ ಆಧಾರ ಸ್ಥಂಭಗಳಲ್ಲೊಂದಾದ ಗ್ರಾಮಗಳು ವೇದಗಳ ಕಾಲ ಮಹಾಭಾರತ ರಾಮಾಯಣ ಹಾಗೂ ಪುರಾಣ ಕಾಲಗಳಿಂದಿಡಿದು ಪ್ರಸ್ತುತದವರಿಗೂ ಅಸ್ತಿತ್ವದಲ್ಲಿದ್ದು  ತಮ್ಮ ಅನನ್ಯತೆಯನ್ನೂ ಸಾಮಾಜಿಕ ಮತ್ತು ಸಾಂಸ್ಕೃತಿಕ  ಸ್ವರೂಪವನ್ನು ಸಾಬೀತುಪಡಿಸಿವೆ. ಗಾತ್ರದಲ್ಲಿ ಚಿಕ್ಕದಾದ ಮುಖಾಮುಖಿ ಸಂಬಂಧಗಳ ಅನ್ಯೋನ್ಯತೆಯೊಂದಿಗೆ ಸಾಮಾಜಿಕ ಸಮೈಕ್ಯತೆ ಸಾಧಿಸಿರುವ ಈ ಗ್ರಾಮಗಳು ಪ್ರಾಚೀನ ಪರಂಪರೆ, ಸಂಪ್ರದಾಯ, ಜಾತಿ ಮತ್ತು ಧರ್ಮಗಳಿಂದ ಸಮ್ಮಿಳಿತಗೊಂಡಿವೆ. ಗ್ರಾಮೀಣ ಜನರು ಜೀವನಾಧಾರ ಉತ್ಪಾದಕತೆಯ ಮೂಲವಾಗಿರುವ ಕೃಷಿ ಭೂಮಿ ಮತ್ತು ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಅನ್ಯೋನ್ಯವಾಗಿರಿಸಿಕೊಂಡಿದ್ದಾರೆ. ನೆರೆಹೊರೆಯ ಗಾಢ ಸಂಬಂಧದಿಂದ ಬಂಧಿಸಲ್ಪಟ್ಟ ಗ್ರಾಮೀಣರು ಸರಳ ಜೀವನ ಶೈಲಿಯನ್ನು ರೂಡಿಸಿಕೊಂಡಿದ್ದರು ಪ್ರಸ್ತುತ ಬದಲಾಗಿದ್ದಾರೆ. ಗ್ರಾಮಗಳ ಬಗ್ಗೆ ವೇದಗಳು, ರಾಮಾಯಣ, ಮಹಾಭಾರತ, ಮನುಸ್ತುತಿ, ಕೌಟಿಲ್ಯನ ಅರ್ಥಶಾಸ್ತ್ರ ಮುಂತಾದ ಪ್ರಾಚೀನ ಗ್ರಂಥಗಳಲ್ಲಿ ಜನಜೀವನ, ಎಲ್ಲೆ (ಗಡಿ), ಭದ್ರತೆ, ಶಿಕ್ಷಣ, ಆಡಳಿತ, ಗ್ರಾಮ ಪಂಚಾಯಿತಿ, ಧಾರ್ಮಿಕ ಆಚರಣೆ, ನೀತಿ ನಿರೂಪಣೆ ನಿಯಮಗಳ ಪಾಲನೆ ಮುಂತಾದವುಗಳ ಬಗ್ಗೆ ಸುಧೀರ್ಘ ವಿವರಣೆಗಳಿವೆ. ಇವು ನಮ್ಮ ಗ್ರಾಮಗಳ ಪ್ರಾಚೀನತೆ ಮತ್ತು ಅನನ್ಯತೆಯನ್ನು ಪರಿಚಯಿಸುತ್ತವೆ.

ಬಹುತೇಕ ಪ್ರಾಚೀನ ಗ್ರಾಮಗಳು ಸಾಪೇಕ್ಷವಾಗಿ ಸ್ವಯಂಪೂರ್ಣ ಮತ್ತು ಸ್ವತಂತ್ರವಾಗಿದ್ದವು ಅದಕ್ಕಾಗಿಯೇ ಚಾರ್ಲ್‌ ಮೆಟ್‌ಕಾಫ್ ಎಂಬ ಬ್ರಿಟಿಷ್ ಅಧಿಕಾರಿ ಭಾರತೀಯ ಗ್ರಾಮಗಳನ್ನು ಪುಟ್ಟ ಗಣರಾಜ್ಯಗಳೆಂದು ಕರೆದಿದ್ದಾನೆ. ಗ್ರಾಮಗಳು ನಂಬಿಕೆ ನೈತಿಕ ನಿಯಮಗಳು ಪರಸ್ಪರ ಹೊಂದಾಣಿಕೆ ವೃತ್ತಿಗಳಲ್ಲಿ ಪರಸ್ಪರ ಸಹಭಾಗಿತ್ವ ಹೊಂದಿದ್ದವು. ಇಂತಹ ಗ್ರಾಮಗಳ ಅಧ್ಯಯನ ಗ್ರಾಮದ ಭವಿಷ್ಯವನ್ನು ರೂಪಿಸುವ ಯೋಜನಾಕಾರರು ಮತ್ತು ಆಡಳಿತ ಅಧಿಕಾರಿಗಳಿಗೆ ಉಪಯುಕ್ತವಾಗುತ್ತದೆ. ಗ್ರಾಮೀಣ ಸಾಮಾಜಿಕ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ತಂತ್ರಜ್ಞಾನ, ನೈತಿಕ ಮೌಲ್ಯಗಳು ಮತ್ತು ಜನಜೀವನದ ಹಿನ್ನೆಲೆಯನ್ನು ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಅನಂತರಾಜುರವರು ಗೊರೂರನ್ನು ತಿರುಗಿ ನೋಡಿ ಹಲವು ಅಯಾಮಗಳಿಂದ ಪ್ರಮುಖವಾದ ಅಂಶಗಳನ್ನು ದಾಖಲಿಸಿದ್ದಾರೆ.

ಹಾಸನ ಜಿಲ್ಲೆಯ ಗೊರೂರು ಗ್ರಾಮವು ಪೌರಾಣಿಕವಾಗಿ, ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿರುವ ಊರು. ಜೀವನದಿ ಹೇಮಾವತಿ, ಪುರಾಣಪ್ರಸಿದ್ದ ತ್ರಿಕೂಟ ಲಿಂಗೇಶ್ವರ ದೇವಾಲಯ, ಪ್ರಾಚೀನ ಇತಿಹಾಸವುಳ್ಳ ಯೋಗಾನರಸಿಂಹ ದೇವಾಲಯ, ಹೇಮಾವತಿ ಜಲಾಶಯ, ಕನ್ನಡ ಸಾರಸ್ವತ ಲೋಕದ ಪ್ರಖ್ಯಾತ ಸಾಹಿತಿ ಸ್ವಾತಂತ್ರ ಹೋರಾಟಗಾರ, ಗಾಂಧಿವಾದಿ ರಾಮಸ್ವಾಮಿ ಅಯ್ಯಂಗಾರ್, ಸ್ವಾತಂತ್ರ ಹೋರಾಟಗಾರರಾದ ಸಂಪತ್‍ಅಯ್ಯಂಗಾರ್, ಜಿ.ಎ.ಶಂಕರಶೆಟ್ಟರು, ನರಸಿಂಹಾಚಾರ್‌, ಜಿ.ಎಲ್. ಮುದ್ದೇಗೌಡರು, ರಾಜಕಾರಣಿ ನಲ್ಲೂರೆಗೌಡರು, ಉದ್ಯಮಿ ಕ್ಯಾಪ್ಟನ್ ಗೋಪಿನಾಥ್, ಸಾಹಿತಿಗಳಾದ  ಗೊರೂರು ಅನಂತರಾಜು, ಗೊರೂರು ಶಿವೇಶ್, ಗೊರೂರು ಪಂಕಜ, ಗೊರೂರು ಜಮುನ….. ಹೀಗೆ ಗೊರೂರಿನ ಸಾಧಕರ ಸಾಹಿತಿಗಳ ಸಾಲು ಬೆಳೆಯುತ್ತಲೇ ಹೋಗುತ್ತದೆ. ಇಂತಹ ಪ್ರಖ್ಯಾತ ಹಿನ್ನೆಲೆಯುಳ್ಳ ಗೊರೂರು ಗ್ರಾಮದ ಬಗ್ಗೆ ಈಗಾಗಲೇ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ರವರು ಬೈಲಹಳ್ಳಿಯ ಸರ್ವೆ, ಹಳ್ಳಿಯ ಚಿತ್ರಗಳು, ನಮ್ಮೂರಿನ ರಸಿಕರು, ಬೆಸ್ತರ ಕರಿಯ, ಹೇಮಾವತಿ ತೀರದಲ್ಲಿ ಮತ್ತು ಇತರ ಪ್ರಬಂಧಗಳು ಮುಂತಾದ ಕೃತಿಗಳಲ್ಲಿ ಗೊರೂರು ಮತ್ತು ಗೊರೂರಿನ ಪರಿಸರದ ಹಳ್ಳಿಗಳ ಜಾನಪದೀಯ ಬದುಕು, ಜನಜೀವನ ಮತ್ತು ಸಾಂಸ್ಕೃತಿಕ ನೆಲೆಯನ್ನು ಕಟ್ಟಿಕೊಟ್ಟಿದ್ದಾರೆ. ಗೊರೂರು ಸೋಮಶೇಖರ್ ಅವರು ಗೊರೂರಿನ ನೆನಪುಗಳು ಎಂಬ ಕೃತಿಯಲ್ಲಿ ಗೊರೂರಿನ ಐತಿಹಾಸಿಕ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಗೊರೂರು ಅನಂತರಾಜುರವರ ಗೊರೂರು ಹೇಮಾವತಿ ದರ್ಶನ, ಸುಂದರೇಶ್ ಉಡುವೇರೆರವರ ಗೊರೂರು ದರ್ಶನ ಕೃತಿಗಳು ಗೊರೂರು ಗ್ರಾಮದ ವಿಶಿಷ್ಟತೆ, ಪ್ರಾಚೀನತೆ, ಧಾರ್ಮಿಕ ಕೇಂದ್ರಗಳು ಹಾಗೂ ಐತಿಹಾಸಿಕ ಹಿನ್ನೆಲೆ ಸಾಧಕರು ಮತ್ತು ಸಾಹಿತಿಗಳ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಒದಗಿಸಿದ್ದಾರೆ.

- Advertisement -

ಪ್ರಸ್ತುತ ಕನ್ನಡ ಸಾರಸ್ವತ ಲೋಕದ ಪ್ರಖ್ಯಾತ ಸಾಹಿತಿಗಳಾಗಿ, ವಿಮರ್ಶಕರಾಗಿ, ನಾಟಕಕಾರರಾಗಿ, ಕಲಾವಿದರಾಗಿ ಪ್ರಸಿದ್ದಿ ಪಡೆದು 63 ವಸಂತಗಳ ಆಸುಪಾಸಿನ ಗೊರೂರು ಅನಂತರಾಜು ‘ಆಡು ಮುಟ್ಟದ ಸೊಪ್ಪಿಲ್ಲ ‘ ಎಂಬ ಮಾತಿನಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಬರೆದಿದ್ದಾರೆ. ಬರೆಯುತ್ತಿದ್ದಾರೆ. ಕಥೆ, ಕಾವ್ಯ, ಕವನ, ಲಲಿತ ಪ್ರಬಂಧ, ನಾಟಕ, ವಿಮರ್ಶೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿ ಮಾಡುತ್ತಾ ಬಂದಿರುವ ಇವರ ಬರವಣಿಗೆಯ ನಲವತ್ತು ವರ್ಷಗಳ ದೀರ್ಘ ಪಯಣದಲ್ಲಿ ಅರವತ್ತಕ್ಕೂ ಹೆಚ್ಚು ಕೃತಿಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ಪ್ರಸ್ತುತ ಅನಂತರಾಜುರವರು ತಾನು ಹುಟ್ಟಿ ಬೆಳೆದ ಸಾಮಾಜಿಕ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ರೂಪುಗೊಂಡ ಅನುಭವಗಳ ನೆಲೆಗಟ್ಟಿನಲ್ಲಿ ತನ್ನೂರು ಗೊರೂರನ್ನು ತಿರುಗಿ ನೋಡಿ ಇಡೀ ಗೊರೂರಿನ  ಸಮಗ್ರ ಚಿತ್ರಣವನ್ನು ನಮ್ಮೂರು ತಿರುಗಿ ನೋಡಿದಾಗ ಕೃತಿಯಲ್ಲಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 

ಯಾವುದೇ ಊರು ದಿಡೀರ್‌ ಎಂದು ಸೃಷ್ಟಿಯಾಗುವುದಿಲ್ಲ, ಸಾವಿರಾರು ವರ್ಷಗಳ ಜನ ಸಮುದಾಯದ ವಾಸದ ಜೊತೆಗೆ ತನ್ನ ಒಡಲಲ್ಲಿ ಧರ್ಮ, ಸಂಸ್ಕೃತಿ, ರಾಜಕಾರಣ, ಶಿಕ್ಷಣ ಆಡಳಿತ ವ್ಯವಸ್ಥೆ ಇವೆಲ್ಲವನ್ನೂ ಒಳಗೊಂಡು, ಕಾಲ ಕಾಲಕ್ಕನುಸಾರವಾಗಿ ಬದಲಾವಣೆಗಳನ್ನು ಹೊಂದುತ್ತಲೇ ಮುನ್ನಡೆಯುತ್ತಿರುತ್ತದೆ, ಹೀಗೆ ಮುನ್ನಡೆಯುವ ಸಂದರ್ಭದಲ್ಲಿ ಹಳೆಯ ಸಂಗತಿಗಳು ಅಲ್ಲಿನ ಕುರುಹುಗಳಾಗಿ, ಸಂಸ್ಕೃತಿಯ ಪ್ರತೀಕಗಳಾಗಿ ದಿನ ವರ್ತಮಾನದ ಜನಸಮುದಾಯಕ್ಕೆ ದಿಕ್ಸೂಚಿಗಳಾಗಿ ನಿಲ್ಲುವುದರ ಜೊತೆಗೆ ಮಾರ್ಗದರ್ಶನವನ್ನು ಮಾಡುತ್ತ ಬರುತ್ತಿರುತ್ತವೆ, ಈ ಎಲ್ಲಾ ಕಾರಣಗಳಿಂದ ಗ್ರಾಮದಲ್ಲಿ ಹುಟ್ಟಿ ಬೆಳೆದು ಬದುಕು ಕಂಡುಕೊಂಡ ಶಿಕ್ಷಿತರು ತಮ್ಮ ಜನ್ಮ ಭೂಮಿಯ ಅಭಿಮಾನದೊಂದಿಗೆ ಅದರ ಇತಿಹಾಸ, ವಿಶಿಷ್ಟತೆ ಮತ್ತು ಅನನ್ಯತೆಯನ್ನು ಆಧ್ಯಯನ ಮಾಡುವುದು ಅತ್ಯವಶ್ಯಕ, ಅದರ ಮೂಲಕವಾಗಿ ಗ್ರಾಮೀಣ

ಸಂಸ್ಕೃತಿಯ ಪುನರ್ನಿರ್ಮಾಣವಾಗಲು ಸಾಧ್ಯವಾಗುತ್ತದೆ, ಗ್ರಾಮಗಳ ಅಭಿವೃದ್ದಿಗೂ ಕಾರಣವಾಗುತ್ತದೆ.

- Advertisement -

ಪ್ರತಿಯೊಂದು ಊರ ಹೆಸರಿನಲ್ಲಿಯೂ ಒಂದೊಂದು ವಿಶಿಷ್ಟ ಪರಂಪರೆಯ ಹಿರಿಮೆ ಗರಿಮೆ ಅಡಗಿರುತ್ತದೆ. ಪ್ರಸ್ತುತ ಪುರಾಣ ಪ್ರಸಿದ್ಧ ಗೊರೂರಿಗೆ ಈ ಹೆಸರು ಹೇಗೆ ಬಂತು? ಎಂಬುದನ್ನು ಪೌರಾಣಿಕ ಐತಿಹಾಸಿಕ ಹಾಗೂ ಜನಪದೀಯ ಆಯಾಮಗಳಲ್ಲಿ  ದಾಖಲಿಸಿದ್ದಾರೆ. ಶತರುದ್ರಿಪುರ, ಗೋಕರ್ಣಪುರಿ, ವಿನಯಾದಿತ್ಯಪುರ, ಗೊರವರ ಊರು, ಗೊರವೂರು, ಗೊರೂರು ಹೀಗೆ ವಿವಿಧ ಕಾಲಘಟ್ಟಗಳಲ್ಲಿ ಪ್ರಚಲಿತದಲ್ಲಿದ್ದ ವಿವಿಧ ಹೆಸರು (ಸ್ಥಳನಾಮ)ಗಳನ್ನು ಆಧಾರ ಸಹಿತ ದಾಖಲಿಸಿರುವುದು ಗೊರೂರಿನ ಐತಿಹಾಸಿಕ ಹಿನ್ನೆಲೆಯನ್ನು ತಿಳಿಯಲು ಸಹಕಾರಿಯಾಗಿದೆ. ಗೋಕರ್ಣಪುರ, ಗೊರವರ ಊರು ಗೊರೂರು ಎಂಬ ಹೆಸರುಗಳು ಬಳಕೆಯಲ್ಲಿದ್ದು ಕೊನೆಗೆ ಗೊರೂರು ಹೆಸರೇ ಸ್ಥಿರವಾಗಿರುವುದನ್ನು ಸಂಶೋಧನಾತ್ಮಕ ದೃಷ್ಟಿಕೋನದಿಂದ ವಿವರಿಸಿದ್ದಾರೆ, 

ಗೊರೂರಿನ ಉತ್ತರ ದಿಕ್ಕಿನಲ್ಲಿ ಹರಿಯುವ ಜೀವನದಿ ಹೇಮಾವತಿಯು ಈ ಊರಿನ ಪ್ರಾಚೀನತೆ ಮತ್ತು ಪೌರಾಣಿಕ ಹಿನ್ನೆಲೆಯನ್ನು ಪ್ರಸ್ತುತಪಡಿಸುತ್ತದೆ ಈ ನದಿಯ ಪರಿಸರದಲ್ಲಿರುವ ಧಾರ್ಮಿಕ ಕೇಂದ್ರಗಳಾದ ತ್ರಿಕೂಟಲಿಂಗೇಶ್ವರ ದೇವಾಲಯ, ಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯ,  ಸಂಗಮೇಶ್ವರ ದೇವಾಲಯಗಳು ವಿವಿಧ ಕಾಲಘಟ್ಟಗಳಲ್ಲಿ ಸ್ಥಾಪಿತವಾಗಿವೆ. ಲಕ್ಷ್ಮಿಜನಾರ್ಧನ ಸ್ವಾಮಿ(ಪರವಾಸು) ದೇವಾಲಯದೊಳಗೆ ದಕ್ಷಿಣ ಭಾರತದ 12 ಆಳ್ವಾರ ಸಂತರ ಏಕೈಕ ಸ್ತ್ರೀ ಅವತಾರ ಎಂದು ಪರಿಗಣಿಸಲಾಗಿರುವ ಆಂಡಾಳಮ್ಮ ಅಥವಾ  ಗೋದಾದೇವಿಯ ಚಿಕ್ಕ ದೇವಾಲಯವಿದೆ. 10ನೇ ಶತಮಾನದಲ್ಲಿ ತಮಿಳು ಭಾಷೆಯಲ್ಲಿ ಪ್ರಸಿದ್ಧವಾಗಿರುವ ತಿರುಪ್ಪಾವೈಗಳ ರಚನೆ ಮಾಡಿರುವ ಪ್ರಮುಖ ತಮಿಳು ಕವಿ ಇವರಾಗಿದ್ದಾರೆ. ಗೊರೂರಿನ ಪರವಾಸು ದೇವಾಲಯದಲ್ಲಿ ನೆಲೆಸಿರುವ ಈ ಅಮ್ಮನನ್ನು ಭಗವಾನ್ ವಿಷ್ಣುವಿನ ದೈವಿಕ ಪತ್ನಿಯಾದ ಶ್ರೀ ಭೂದೇವಿಯ ಅವತಾರವೆಂದೂ ನಂಬಲಾಗಿದೆ. ಆಕೆ ಹಾಡಿದ ಭಕ್ತಿ ಪದ್ಯಗಳ ಸಂಕಲನವಾದ ಆಂಡಾಳ್ ತಿರುಪ್ಪಾವೈ ಅನ್ನು ಇಂದಿಗೂ ಭಕ್ತರು  ಧನುರ್ಮಾಸ ಮಾಸದಲ್ಲಿ ಪಠಿಸುತ್ತಾರೆ. ಇಂದಿಗೂ ಗೊರೂರಿನ ವೈಷ್ಣವ ದೇವಾಲಯಗಳಲ್ಲಿ ಆರಾಧಿಸಲ್ಪಡುತ್ತಿರುವ ವಿಚಾರಗಳನ್ನು ವಿಶೇಷವಾಗಿ ದಾಖಲಿಸಲಾಗಿದೆ, ಗೊರೂರು ಶೈವ ಮತ್ತು ವೈಷ್ಣವ ಸಂಸ್ಕೃತಿಯ ಆರಾಧನಾ ಕೇಂದ್ರವಾಗಿತೆನ್ನುವುದಕ್ಕೆ ಅಲ್ಲಿನ ದೇವಾಲಯಗಳ ಸಮಗ್ರ ಮಾಹಿತಿಯನ್ನು ವಿಶೇಷವಾಗಿ ನೀಡಲಾಗಿದೆ. ಅನಂತರಾಜುರವರು ಈ ಪ್ರತಿಯೊಂದು ದೇವಾಲಯಗಳ ಸ್ಥಾಪನೆ, ಸ್ಥಾಪನೆಗೆ ಕಾರಣವಾದ ಪೌರಾಣಿಕ ಹಿನ್ನೆಲೆ, ಧಾರ್ಮಿಕ ಆಧ್ಯಾತ್ಮಿಕ ಮಹತ್ವ, ಪ್ರಾಚೀನತೆ, ಮಹಿಮೆ, ವಾಸ್ತುಶಿಲ್ಪ ವಿಗ್ರಹಗಳ, ಮೂರ್ತಿ ಶಿಲ್ಪಗಳ ಮಾಹಿತಿಯನ್ನು ಶಾಸನಗಳ ಆಧಾರದಿಂದ ವಿಷದಪಡಿಸಿರುವುದು ಇವರ ಆಸಕ್ತಿದಾಯಕ ಅಧ್ಯಯನಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಂದು ಧಾರ್ಮಿಕ ಕ್ಷೇತ್ರಗಳನ್ನು ಅವುಗಳ ಕಾಲಾನುಕ್ರಮ ಹಿನ್ನಲೆಯಲ್ಲಿ ವರ್ಗೀಕರಿಸಿಕೊಂಡು ಅವುಗಳನ್ನು ಎಲ್ಲಾ ಆಯಾಮಗಳಲ್ಲಿಯೂ ಅರ್ಥಪೂರ್ಣವಾಗಿ ವಿಶ್ಲೇಷಿಸಿ ವಿವರಿಸುವಲ್ಲಿ ಇವರ ಸಂಶೋಧನಾತ್ಮಕ ಅಂಶಗಳೊಂದಿಗೆ ಸೃಜನಶೀಲತೆಯು ಮೇಳೈಸಿದೆ. ದೇವಮೂರ್ತಿಗಳ ವಿಶೇಷತೆಗಳನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ವಿಶ್ಲೇಷಿಸಿ ವಿವರಿಸಿರುವುದರಿಂದ ಈ ಕೃತಿಗೆ ಧಾರ್ಮಿಕ ಮಹತ್ವ ಸಹಜವಾಗಿಯೇ ಪ್ರಾಪ್ತವಾಗಿದೆ. ಗೊರೂರಿನ ಬಗ್ಗೆ ಹುದುಗಿ ಹೋಗಿರುವ ಹಲವಾರು ವಿಶೇಷತೆಗಳನ್ನು ಹೊಸದಾಗಿ ಹೇಳಬೇಕೆಂಬ ಹಂಬಲದಲ್ಲಿ ವಿಶೇಷ ಅಧ್ಯಯನ ನಡೆಸಿ ಮಾಹಿತಿದಾರರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ವಿಷಯ ಮಂಡನೆಯಲ್ಲಿ ವಿಶ್ಲೇಷಣೆಯಲ್ಲಿ ನೈಪುಣ್ಯತೆ ಮತ್ತು ಮಾಹಿತಿ ಸಂಶೋಧನಾ ಕ್ರಮದಲ್ಲಿಯೂ ಶ್ರಮವಹಿಸಿರುವುದು ಕಂಡುಬರುವ ಅಂಶವಾಗಿದೆ.

ಗೊರೂರು ಪರಿಸರದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಆಳ್ವಿಕೆ ನಡೆಸಿದ ಚೋಳರು, ಗಂಗರು, ಹೊಯ್ಸಳರು, ಕೊಂಗಾಳ್ವವರು, ಚೆಂಗಾಳ್ವವರು, ಹೈದರಾಲಿ ಮೈಸೂರು ಸಂಸ್ಥಾನ ಮುಂತಾದ ರಾಜಮನೆತನಗಳನ್ನೂ ಮತ್ತು ಈ ಪ್ರಭುತ್ವಗಳು ಗೊರೂರಿಗೆ ನೀಡಿದ ಕೊಡುಗೆಗಳನ್ನು ಹಾಗೂ ಈ ಪ್ರದೇಶದಲ್ಲಿ ನಡೆದ ಯುದ್ಧಗಳನ್ನು ಶಾಸನಗಳ ಸಾಕ್ಷ್ಯಗಳೊಂದಿಗೆ  ವಿಶ್ಲೇಷಿಸಿದ್ದಾರೆ. 

ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಮೌಲ್ಯಗಳುಳ್ಳ ಜಾತ್ರೆಗಳು ಈ ಆಧುನಿಕ ಯುಗದಲ್ಲಿಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಗೊರೂರು ಜಾತ್ರೆಯ ವೈಭವವನ್ನು ಆ ಕಾಲಘಟ್ಟದಲ್ಲಿ ಸುತ್ತೇಳು ಹಳ್ಳಿಯ ಜನಪದರು ಸಂಭ್ರಮ ಸಡಗರದಿಂದ ಜಾತಿ ಪಂಥವೆಣಿಸದೆ ಪಾಲ್ಗೊಳ್ಳುತ್ತಿದ್ದ ಪರಿಯನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಸಮುದಾಯವೂ ಒಂದೊಂದು ಕೆಲಸ ಕಾರ್ಯದಲ್ಲಿ ಕೈಜೋಡಿಸಿ ಭಕ್ತಿ ಶ್ರದ್ಧೆಗಳಿಂದ ಜಾತ್ರೆಯನ್ನು ನಡೆಸುತ್ತಿದ್ದ ರೀತಿಯನ್ನು ವಿವರಿಸಿದ್ದಾರೆ ನಮ್ಮ ಬಾಲ್ಯದಲ್ಲಿನ ಜಾತ್ರೆಯ ನೆನಪು ಮರುಕಳಿಸುವಂತೆ ಮಾಡಿದ್ದಾರೆ.

ಹಲವು ಮಹನೀಯರು ತಮ್ಮ ವಿಶೇಷ ಸಾಧನೆ ಮತ್ತು ಸೇವೆಯ ಮೂಲಕ ತಮ್ಮ ಜನ್ಮದಾತರಿಗೆ, ಹುಟ್ಟಿದೂರಿಗೆ ಹೆಸರು, ಕೀರ್ತಿ, ಘನತೆ ಗೌರವ ತಂದುಕೊಡುತ್ತಾರೆ. ಗೊರೂರಿನಲ್ಲಿ ಜನಿಸಿದ ರಾಮಸ್ವಾಮಿ ಅಯ್ಯಂಗಾರ್, ಭಾರತ ಸ್ವಾತಂತ್ರ್ಯ ಹೋರಾಟ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಚಾಪು ಮೂಡಿಸಿದವರು. ವಿದ್ಯಾರ್ಥಿ ದೆಸೆಯಿಂದಲೇ ಸಕ್ರಿಯ ಸ್ವಾತಂತ್ತ್ಯ ಹೋರಾಟಕ್ಕೆ ದುಮಿಕಿ ಮಹಾತ್ಮ ಗಾಂಧೀಜಿಯವರ ಅನುಯಾಯಿಯಾಗಿ ಹಾಸನ ಜಿಲ್ಲೆಯ ಸ್ವಾತಂತ್ರ್ಯ ಸಂಗ್ರಾಮವನ್ನು ಸಶಕ್ತಗೊಳಿಸುತ್ತಲೇ ಮಗ ರಾಮಚಂದ್ರರನ್ನು ದೇಶದ ಸ್ವಾತಂತ್ರಕ್ಕೆ ಬಲಿದಾನವಿತ್ತವರು. ಹರಿಜನೋದ್ಧಾರ, ಖಾದಿ ಮತ್ತು ಗ್ರಾಮೋದ್ಯೋಗದ ಪ್ರಚಾರ, ಗಾಂಧಿವಾದದ ಪರಿಚಯ ಹಾಗೂ ಪರಿಚಾರಿಕೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಜನಪದ ಜೀವನ ಮತ್ತು ದರ್ಶನ, ಮೆರವಣಿಗೆ  ಮುಂತಾದ ಕೃತಿಗಳನ್ನೂ ಮುಖ್ಯವಾಗಿ ಗಾಂಧೀಜಿಯವರ ಮೈ ಆಟೋಗ್ರಪಿ ಎಂಬ ಆತ್ಮಕಥನವನ್ನು ʼನನ್ನ ಆತ್ಮಕಥೆ ಅಥವಾ ʼನನ್ನ ಸತ್ಯಾನ್ವೇಷಣೆʼ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಕನ್ನಡಿಗರಿಗೆ ಗಾಂಧೀಜಿಯವರ ತತ್ವಾದರ್ಶಗಳನ್ನು ದರ್ಶನ ಮಾಡಿಸಿದವರು. ಇಂತಹ ಮಹನೀಯರ ಸಾಧನೆಯನ್ನೂ ಈ ಕೃತಿಯಲ್ಲಿ ದಾಖಲಿಸಿರುವುದು  ಕೃತಿಗೆ ಮೌಲ್ಯವನ್ನು ತಂದುಕೊಟ್ಟಿದೆ.

ಅಂದಿನ ಕಾಲದಲ್ಲೇ ಬಿಎಸ್ಸಿ ಪದವೀಧರರಾದ ಜಿ.ಎಸ್.ಸಂಪತ್ತಯ್ಯಂಗಾರ್ ರವರು ಗಾಂಧೀಜಿಯವರ ತತ್ವ ಸಿದ್ಧಾಂತಗಳಿಗೆ ಮಾರುಹೋಗಿ 1927 ರಿಂದ 1947 ರವರೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಕೊಂಡಿದ್ದವರು. 1940ರಲ್ಲಿ ಸ್ವಾತಂತ್ರ್ಯಕ್ಕಾಗಿ ವೈಯಕ್ತಿಕ ಸತ್ಯಾಗ್ರಹ ಮಾಡಿದವರು. ಉತ್ತಮ ಖಗೋಳಶಾಸ್ತ್ರಜ್ಞ ಹಾಗೂ ಜ್ಯೋತಿಷ್ಯದ ಬಗ್ಗೆ ಅಗಾಧ ಜ್ಞಾನ ಹೊಂದಿದ್ದವರು. ರಾಮಾಯಣ ಮಹಾಭಾರತ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದ್ದವರು.   ರಾಮಾಂಕಿತ ಉಂಗುರ ಮತ್ತು ಕಾಲ ಪರಿಚಯ ಕೃತಿಯಲ್ಲಿ ರಾಮಾಯಣದ ಕಾಲಘಟ್ಟವನ್ನು ಲೆಕ್ಕ ಹಾಕಿ ಶ್ರೀ ರಾಮನ ಜನ್ಮ ಕುಂಡಲಿ ಬರೆದಿದ್ದಾರೆ. ಹೀಗೆ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಈ ಮಹನೀಯರು ಕೊಟ್ಟ ಕೊಡುಗೆಗಳನ್ನು ಅನಂತರಾಜುರವರು ಕಟ್ಟಿಕೊಟ್ಟಿದ್ದಾರೆ. ಇವರಂತೆಯೇ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ  ಜಿ.ಎ.ಶಂಕರಶೆಟ್ಟರು, ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಒಕ್ಕಲಿಗ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಜಿ.ಎಲ್.ಮುದ್ದೇಗೌಡರ ಸಾಧನೆಯನ್ನೂ ಈ ಕೃತಿಯಲ್ಲಿ ದಾಖಲಿಸಿದ್ದಾರೆ. 

ಭಾರತೀಯ ಸೈನ್ಯದಲ್ಲಿ ಕ್ಯಾಪ್ಟನ್ ಆಗಿ 16 ವರ್ಷ ಸೇವೆ ಸಲ್ಲಿಸಿ, ಪ್ರಗತಿಪರ ಕೃಷಿಕರಾಗಿ, ಡೆಕ್ಕನ್ ಎವಿಯೇಷನ್ ಸಂಸ್ಥೆ ಕಟ್ಟಿದ ಉದ್ಯಮಿಯಾಗಿ ನೂರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ.  ಬರಹಗಾರರಾಗಿ ಸಿಂಪ್ಲಿ ಪ್ಲೈ ಎ ಡೆಕ್ಕನ್ ಒಡಿಸ್ಸಿನಂತಹ ಕೃತಿಗಳನ್ನು ರಚಿಸಿ ರಾಷ್ಟ್ರೀಯ ಅಂತರರಾಷ್ಟ್ರೀಯ  ಪ್ರಶಸ್ತಿ ಪುರಸ್ಕಾರ  ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಮತ್ತು ಹುಟ್ಟೂರು ಗೊರೂರಿಗೆ ಗೌರವ ತಂದುಕೊಟ್ಟ ಕ್ಯಾಪ್ಟನ್ ಗೋಪಿನಾಥ್ ರವರ ಜೀವನ ಸಾಧನೆಯ ಚಿತ್ರಣವನ್ನು ಯುವಕರ ಮುಂದಿರಿಸಿ ಯುವ ಜನತೆಗೆ ಸ್ಪೂರ್ತಿ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೋಕು ಜಾವಳಿ ಎಂಬಲ್ಲಿ ಹುಟ್ಟಿ ಮಂಜರಾಬಾದ್, ಸಕಲೇಶಪುರ, ಐಗೂರು, ಹೊಳೆನರಸೀಪುರ, ಗನ್ನೀಕಡ ಮುಂತಾದ ಕಡೆಗಳಲ್ಲಿ ಸುಮಾರು ೧೯೨ ಕಿಲೋಮೀಟರ್ ಹರಿದು ಕೆ.ಆರ್.ಪೇಟೆ ತಾಲೂಕಿನ ಹೊಸಕೋಟೆಯ ಅಂಬುಗಳ್ಳಿಯಲ್ಲಿ ಕಾವೇರಿ ನದಿಯನ್ನು ಸೇರುವ ಹೇಮಾವತಿಗೆ ಗೊರೂರಿನ ಬಳಿ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ. 1968ರಲ್ಲಿ ಪ್ರಾರಂಭವಾದ ಈ ಜಲಾಶಯ ಯೋಜನೆಯ ನೀರು ಸಂಗ್ರಹಣಾ ಸಾಮರ್ಥ್ಯ 37.1 ಟಿ.ಎಂ.ಸಿ. ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳ ಸುಮಾರು ಏಳುವರೆ ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆಯು 1980ರಲ್ಲಿ ಮುಕ್ತಾಯಗೊಂಡಿದೆ. ಈ ಜಲಾಶಯದ ಎತ್ತರ, ಉದ್ದ, ವಿಸ್ತಿರ್ಣ, ಒಟ್ಟು ಮುಳುಗಡೆಯಾದ ಪ್ರದೇಶ, ಮುಳುಗಡೆಯಾದ ಹಳ್ಳಿಗಳು, ಸಂತ್ರಸ್ತ ಕುಟುಂಬಗಳು ಹೀಗೆ ಕರಾರುವಾಕ್ಕಾದ ಅಂಕಿ ಅಂಶಗಳು, ಈ ಅಣೆಕಟ್ಟೆಗೆ ಇರುವ  ವಿತರಣಾ ನಾಲೆಗಳು ಅವುಗಳ ಉಪನಾಲೆಗಳು, ಬಾಗೂರು-ನವಿಲೆ ಸುರಂಗ ಹೀಗೆ ಜಲಾಶಯಕ್ಕೆ ಸಂಬಂಧಿಸಿದಂತೆ ಹಲವು ಹತ್ತು ಮಾಹಿತಿಗಳನ್ನು ನೀಡಿದ್ದಾರೆ. ಅಲ್ಲದೆ ಈ ಜಲಾಶಯದ ನಿರ್ಮಾಣದಿಂದ ಉಂಟಾಗಿರುವ ಕೋನಪುರ ಐಲ್ಯಾಂಡ್ ಮತ್ತು ಮುಳುಗಿರುವ ಶೆಟ್ಟಿಹಳ್ಳಿ ಚರ್ಚ್ ಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಮುಖ್ಯ ಉದ್ಯಮಗಳಲ್ಲೊಂದಾದ ಪ್ರವಾಸೋದ್ಯಮದ ಎಲ್ಲಾ ಸಾಧ್ಯತೆಗಳನ್ನು ಮತ್ತು ಓರೆ ಕೋರೆಗಳನ್ನು ಅರಿತುಕೊಳ್ಳಲು ಇಲ್ಲಿನ ಬರಹ ಕಣ್ಮುಂದೆ ಬರುತ್ತದೆ. ಈ ಎಲ್ಲಾ ವಿವರಗಳನ್ನು ವಿಸ್ತಾರವಾದ ಆಳವಾದ ಮತ್ತು ಪ್ರಮಾಣಿಭೂತವಾದ ಕ್ಷೇತ್ರ ಕಾರ್ಯದಿಂದ ಶ್ರಮಪಟ್ಟು ಕಲೆ ಹಾಕಲಾಗಿದೆ.  

ಅನಂತರಾಜುರವರ ಲೇಖನಗಳು ಓದುಗರನ್ನು ಆಲೋಚನೆಗೆ ಹಚ್ಚುವಂತೆ, ಕನ್ನಡ ಸಾಹಿತ್ಯದ ಕಡೆ ಆಸಕ್ತಿಯನ್ನು ಹೊಂದುವಂತೆ, ಆಕರ್ಷಿಸುವಂತೆ ಮಾಡಲು ಯಶಸ್ವಿಯಾಗಿವೆ. ಸದ್ದಿಲ್ಲದೆ ಸಾಧನೆಗೈಯುತ್ತಾ ಹೇಮೆಯ ನಾಡಿಗೆ ಕೀರ್ತಿ ತರುತ್ತಿರುವ ಅನಂತರಾಜುರವರನ್ನು ಹಾಸನ ಜಿಲ್ಲೆಯ ಸಾರಸ್ವತ ಲೋಕದಲ್ಲಿ ಅನಂತುರವರ ಅಚ್ಚಳಿಯದ ಸಾಧನೆಗೆ ನಮ್ಮ ತುಂಬು ಹೃದಯದ ಧನ್ಯವಾದಗಳು. ಹಾಸನ ಜಿಲ್ಲೆಯಲ್ಲಿ ಇಂತಹ ಪ್ರಾದೇಶಿಕ, ಪೌರಾಣಿಕ, ಚಾರಿತ್ರಿಕ, ಸಾಂಸ್ಕೃತಿಕ ಮಹತ್ವವುಳ್ಳ ಹಲವು ಗ್ರಾಮಗಳು ಇದ್ದು ಅವುಗಳ ಬಗೆಗೆ ಇಂತಹ ಕೃತಿಗಳು ಸಿದ್ಧವಾದರೆ ಮುಂದಿನ ಜನಾಂಗಕ್ಕೆ ಮತ್ತು ಸೇವಾಕಾಂಕ್ಷಿ ಜನರಿಗೆ ತಮ್ಮ ಕ್ಷೇತ್ರದ ಸೇವೆಯನ್ನು ಪರಿಣಾಮಕಾರಿ ನಿರ್ವಹಿಸಲು ಹಾಗೂ ನಮ್ಮ ಮುಂದಿನ ಜನಾಂಗವು ತಮ್ಮ ಊರು ಕೇರಿಗಳ ಮಹತ್ವವನ್ನು ತಿಳಿದುಕೊಳ್ಳಲು ಸಂಪರ್ಕ ಮಾರ್ಗಗಳು ತೆರೆದಂತಾಗುತ್ತದೆ ಎಂಬುದು ನನ್ನ ಅನಿಸಿಕೆ. ಈ ಕೃತಿಯು ಮುಂದಿನ ಜನಾಂಗಕ್ಕೆ ಗೊರೂರಿನ ಬಗ್ಗೆ ಮಾಹಿತಿಯುಳ್ಳ ಒಂದು ಪರಮಾರ್ಶನ ಗ್ರಂಥವಾಗಿದೆ. ಮಾನ್ಯ ಗೊರೂರು ಅನಂತರಾಜುರವರ ಲೇಖನಿಯಿಂದ ಇಂತಹ ಉಪಯುಕ್ತ ಕೃತಿಗಳು ಮೂಡಿ ಬರಲಿ, ಕನ್ನಡ ಸಾರಸ್ವತ ಲೋಕವನ್ನು ಸಂಮೃದ್ಧಿಗೊಳಿಸಲೆಂದು ಆಶಿಸುತ್ತೇನೆ.


ಡಾ. ಬರಾಳು ಶಿವರಾಮ, 

ಉಪನ್ಯಾಸಕರು ಹಾಗೂ ಸಾಹಿತಿಗಳು,

ಚನ್ನರಾಯಪಟ್ಟಣ.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group