ಸಿಂದಗಿ: 40 ವರ್ಷಗಳ ಕಾಲ ರಾಜಕೀಯ ಅನುಭವ ಇರುವ ನಾಯಕ ಕೆ.ಎಸ್.ಈಶ್ವರಪ್ಪನವರನ್ನು ಕೇವಲ ಕುರುಬ ಸಮುದಾಯವಲ್ಲದೆ ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳ ಜೊತೆ ಬೆರೆತು ಚಾಣಾಕ್ಷ ರಾಜಕಾರಣ ಪಕ್ಷನಿಷ್ಠೆಗೆ ಹೆಸರು ಮಾಡಿದ್ದಾರೆ ಇವರನ್ನು ಉಪಮುಖ್ಯಮಂತ್ರಿಯನ್ನಾಗಿ ಅಯ್ಕೆ ಮಾಡುವಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಖಿಲ ಕರ್ನಾಟಕ ಯುವ ಕುರಬರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ವಿಠ್ಠಲ ನಾಯ್ಕೋಡಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿಯ ಕಮಲ ಅರಳಲು ಕೇಸರಿಯೊಂದಿಗೆ ಕಸಿ ಮಾಡಿದ ಹಿರಿಯ ನಾಯಕರುಗಳ ಸಾಲಿನಲ್ಲಿ ಹಿಂದುಳಿದ ವರ್ಗಗಳ ನಾಯಕ ಕೆ.ಎಸ್.ಈಶ್ವರಪ್ಪನವರ ಹೆಸರು ಮುಂಚೂಣಿಯಲ್ಲಿದೆ ಎನ್ನುವುದು ಕರ್ನಾಟಕದ ಜನತೆಗೆ ಹೊಸದೇನು ಅಲ್ಲ. 1982ರಲ್ಲಿ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಎಂ.ಆನಂದರಾವ ಅವರನ್ನು ಆಯ್ಕೆ ಮಾಡಿ ನಂತರ 1983ರಲ್ಲಿ ಬಿಜೆಪಿ ಶಾಸಕರನ್ನಾಗಿ ಮಾಡುವಲ್ಲಿ ಅತ್ಯಂತ ಮಹತ್ತರ ಪಾತ್ರವಹಿಸಿದ್ದರು.
ಸತತ 4 ದಶಕಗಳ ರಾಜಕೀಯ ಜೀವನದಲ್ಲಿ ಬಿಜೆಪಿ ಪಕ್ಷವನ್ನು ಬಿಟ್ಟು ಬೇರೆ ಕಡೆಯೂ ತಿರುಗಿ ನೋಡದೇ ಪಕ್ಷದ ಮಗನಾಗಿ ನಿಷ್ಠೆ ತೋರಿದ್ದಾರೆ. 40 ವರ್ಷಗಳ ಕಾಲ ರಾಜಕೀಯ ಅನುಭವ ಇರುವ ನಾಯಕರನ್ನು ಕೇವಲ ಕುರುಬ ಸಮುದಾಯವಲ್ಲದೆ ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳು ಉಪ ಮುಖ್ಯಮಂತ್ರಿಯಾಗಲಿ ಎಂದು ಎದುರು ನೋಡುತ್ತಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಹಿಂದುಳಿದ ವರ್ಗಗಳ ನಾಯಕ ಕೆ.ಎಸ್.ಈಶ್ವರಪ್ಪನವರನ್ನು ಉಪಮುಖ್ಯಮಂತ್ರಿಯನ್ನಾಗಿ ಅಯ್ಕೆ ಮಾಡಿಕೊಂಡು ಹಿಂದುಳಿದ ಜನಾಂಗಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.