ಸಿಸ್ಟರ್ ಎಲಿಜಬೆತ್ ಕೆನ್ನಿ ಎಂಬಾಕೆ ಖ್ಯಾತ ಆಸ್ಟ್ರೇಲಿಯನ್ ಐರಿಶ್ ನರ್ಸ್. ಎಂಥ ದೊಡ್ಡ ಸಮಸ್ಯೆ ಬಂದರೂ ಅದಕ್ಕೆ ತಕ್ಕ ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗುತ್ತಿದ್ದಳು. ಯಾವಾಗಲೂ ಉತ್ಸಾಹದಿಂದ ಪುಟಿದೇಳುವ ಚೆಂಡಿನಂತಿರುತ್ತಿದ್ದಳು. ಆಕೆಯ ಸ್ನೇಹಿತೆಯೊಬ್ಬಳು ಅದು ಆಕೆ ಹುಟ್ಟಿನಿಂದ ಬಂದ ಗುಣವೇ ಎಂದು ಕೇಳಿದಳು. ಆಗ ಎಲಿಜಬೆತ್ ಇಲ್ಲ, ನಾನು ಚಿಕ್ಕವಳಿದ್ದಾಗ ನನ್ನ ತಾಯಿ ‘ನಮಗೆ ಕೋಪ ತರುವವರು ನಮ್ಮನ್ನು ಜಯಿಸುತ್ತಾರೆ.’ ಎಂಬ ಸಲಹೆಯನ್ನು ನನಗೆ ನೀಡಿದ್ದರು.
ಕೋಪದಿಂದ ಸಾಧಿಸುವುದೇನೂ ಇಲ್ಲ ಬದಲಾಗಿ ಕಳೆದುಕೊಳ್ಳುವುದೇ ಹೆಚ್ಚೆಂದು ತಿಳಿದು ಅದನ್ನು ನಾನು ಗಂಭೀರವಾಗಿ ಅನುಸರಿಸುತ್ತಿದ್ದೇನೆ ಎಂದಳು.
ಎಲೆಜಬೆತ್ ಮಾತು ಎಷ್ಟು ನಿಜವಲ್ಲವೇ? ಇಂದಿನ ಬಿಡುವಿಲ್ಲದ ಒತ್ತಡದ ಕೆಲಸದಲ್ಲಿ ಸಿಟ್ಟಿನ ದಾಸರಾಗುತ್ತಿದ್ದೇವೆ. ವಿನಾಕಾರಣ ರೇಗಾಡುತ್ತೇವೆ. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತೇವೆ. ತಪ್ಪಿಲ್ಲದ ಅಮಾಯಕರು ಕೋಪಕ್ಕೆ ಗುರಿಯಾಗುತ್ತಾರೆ. ಕೋಪ ನಿಗ್ರಹಿಸಲು ಅಂಕಿ ಎಣಿಕೆ ಆರಂಭಿಸಬೇಕು. ಹಾಸ್ಯ ಘಟನೆಗಳನ್ನು ನೆನಪಿಸಿಕೊಳ್ಳಬೇಕು. ಆ ಸ್ಥಳದಿಂದ ಹೊರಗೆ ಎದ್ದು ಹೋಗಬೇಕು. ಸಿಟ್ಟು ಯಾವುದೇ ಸಮಸ್ಯೆಗೂ ಪರಿಹಾರವಲ್ಲ ಎಂಬುದನ್ನು ಮರೆಯಬಾರದು.ದೈಹಿಕ ವ್ಯಾಯಾಮ ಕೋಪ ಕಡಿಮೆ ಮಾಡಲು ಸಹಕಾರಿ. ವ್ಯಾಯಾಮದಿಂದಾಗಿ ಎಂಡೋರ್ಫಿನ್ ಬಿಡುಗಡೆಯಾಗುತ್ತದೆ. ಇದು ನಮ್ಮನ್ನು ನಾವು ಪ್ರೀತಿಸಲು ಕಾರಣವಾಗುತ್ತದೆ. ಕ್ರೋಧ ಅಜ್ಞಾನದಿಂದ ಉತ್ಪನ್ನವಾಗುತ್ತದೆ ಮತ್ತು ಅಹಂಕಾರದಿಂದ ಬೆಳೆಯುತ್ತದೆಂದು ಭಾಗವತ ಹೇಳಿದರೆ ಸಿಟ್ಟೆಂಬುದು ಪಾಪದ ನೆಲೆಗಟ್ಟು ಎಂದು ಮಹಾಭಾರತ ಹೇಳುತ್ತದೆ.
ಎಷ್ಟೋ ಸಲ ಹಿಂದೆ ಮುಂದೆ ವಿಚಾರಿಸದೇ ಪಿತ್ತ ನೆತ್ತಿಗೇರಿಸಿಕೊಂಡು ಉತ್ತರಿಸುತ್ತೇವೆ. ತಾಳ್ಮೆಯಿಂದ ಕುಳಿತು ಯೋಚಿಸಿದಾಗ ಅವರದೇನೂ ತಪ್ಪಿಲ್ಲವೆನ್ನುವ ಸಂಗತಿ ತಿಳಿದು ನಮ್ಮ ಮೇಲೆ ನಮಗೆ ಬೇಸರವುಂಟಾಗುತ್ತದೆ. ಹಾಗಾದಾಗ ಕ್ಷಮೆ ಕೇಳಲು ಅಹಂ ಬಿಡುವುದಿಲ್ಲ. ಹೀಗಾಗಿ ಹಲವು ಮಧುರ ಬಂಧಗಳು ಕೈ ಬಿಟ್ಟು ಹೋಗತ್ತಿವೆ. ಎದುರಿನವರ ಮಾತಿನಲ್ಲಿ ಪ್ರಚೋದನೆಯ ಪಾತ್ರ ಎಷ್ಟಿದೆ ಎನ್ನುವುದಕ್ಕಿಂತ ನಮ್ಮಲ್ಲಿ ಸಹನೆಯ ಗಾತ್ರ ಎಷ್ಟಿದೆ ಎನ್ನುವುದು ಮುಖ್ಯ.. ದುಡುಕಿದರೆ ಕೆಡುಕು ಖಂಡಿತ. ಕೋಪ. ಸಂಬಂಧ ನಿರ್ವಹಣೆಯಲ್ಲಿ ದೊಡ್ಡ ಕಗ್ಗಂಟಾಗಿ ಪರಿಣಮಿಸುತ್ತದೆ. ಸಹನೆ ಎಷ್ಟು ಒಳ್ಳೆಯದನ್ನು ಮಾಡುವುದೋ ಕೋಪ ಅಷ್ಟೇ ಕೆಟ್ಟದ್ದನ್ನು ಮಾಡುವುದು. ನಮ್ಮ ಪ್ರತಿಕ್ರಿಯೆಗಳು ನಮ್ಮ ಆಯ್ಕೆಗಳಾಗಿರುತ್ತವೆ. ಬೇರೆಯವರ ಪ್ರಚೋದನೆಗೆ ಬಲಿಯಾಗಬಾರದು. ‘ಕೆಟ್ಟ ಜನರೊಡನೆ ಒಳ್ಳೆಯ ವ್ಯವಹಾರ ಮಾಡಲು ಸಾಧ್ಯವಿಲ್ಲ.’ ಎನ್ನುವ ಮಾತೊಂದಿದೆ. ಅಂಥವರಿಗೆ ಮೌನದಿಂದ ಉತ್ತರಿಸುವುದು ಉತ್ತಮ.ಇಲ್ಲದಿದ್ದರೆ ‘ಉದಾಸೀನತೆಯೇ ಮದ್ದು.’ ಯಾವುದೇ ಪರಿಸ್ಥಿತಿಯಿರಲಿ ಸಿಟ್ಟಿನ ದಾರಿ ವಿನಾಶದ ದಾರಿ. ಸಿಟ್ಟು ತನ್ನ ವೈರಿ. ಸಹನೆಯ ದಾರಿ ಉತ್ತಮ ಮಾರ್ಗ ಎಂದುಕೊಳ್ಳುವುದು ಕ್ಷೇಮಕರ.ಅತಿಯಾಗಿ ಕೋಪಗೊಳ್ಳುವುದು ಮತ್ತು ಕೆಲವೊಂದು ಪ್ರಸಂಗಗಳಲ್ಲಿ ಕೃತಕವಾಗಿ ಕೋಪಗೊಳ್ಳದೇ ಇರುವುದು ಎರಡೂ ತಪ್ಪುಗಳೇ. ಸಹನೆಯೊಂದಿದ್ದರೆ ಸಕಲವೂ ನಿನ್ನದೇ.ಸರ್ವತ್ರ ಸವಿ ಸ್ವರ್ಗವೇ !!
ಜಯಶ್ರೀ.ಜೆ. ಅಬ್ಬಿಗೇರಿ 9449234142