ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ ಸಮೃದ್ದವಾಗಿ ಬೆಳೆದ ದ್ರಾಕ್ಷಿ ಬೆಳೆಯು ಸಂಪೂರ್ಣ ಹಾನಿಯಾಗಿದ್ದು, ಸರ್ಕಾರ ತಕ್ಷಣವೇ ಪರಿಹಾರ ಘೋಷಿಸಿಬೇಕೆಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡರು.
ಮಂಗಳವಾರ ಡಿ.7 ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ದ್ರಾಕ್ಷಿ ಬೆಳೆಯು ಸಂಪೂರ್ಣವಾಗಿ ಹಾನಿಯಾಗಿದ್ದು, ರೈತರು ಆರ್ಥಿಕವಾಗಿ ತುಂಬಾ ಹಾನಿಯನ್ನು ಅನುಭವಿಸಿ ಅತ್ಯಂತ ಹೀನಾಯ ಸ್ಥಿತಿಯನ್ನು ತಲುಪುವಂತಾಗಿದೆ. ಅಕಾಲಿಕ ಮಳೆಯಿಂದಾಗಿ ಹಾನಿಯಾಗಿರುವುದು ದುರದೃಷ್ಟಕರ, ರೈತರಗಳ ಸ್ಥಿತಿಗತಿಗೆ ಅನುಕೂಲವಾಗುವಂತೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡಿ ಅವರು ರೈತ ಮೋರ್ಚಾ ತಂಡದೊಂದಿಗೆ ರೈತರ ಹೊಲಗಳಿಗೆ ಖುದ್ದಾಗಿ ಭೇಟಿ ನೀಡಿ, ಸಮೀಕ್ಷೆ ಮಾಡಿ ವರದಿ ತಂದ ನಂತರ ಸಂಸದರನ್ನು ಭೇಟಿಯಾಗಿ ಈ ಕುರಿತು ವಿನಂತಿಸಿದಾಗ ತಕ್ಷಣವೇ ಸ್ಪಂದಿಸಿದ ಸಂಸದರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಭಾಗದ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಇದಕ್ಕೆ ಸ್ಪಂದಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಭರವಸೆ ನೀಡಿದರು.
ವಿಧಾನ ಪರಿಷತ ಸದಸ್ಯ ಮಹಾಂತೇಶ ಕವಟಗಿಮಠ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡಿ, ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೇರ್ಲಿ, ಚಿಕ್ಕೋಡಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಕ, ಉಪಾಧ್ಯಕ್ಷ ಶೇಖರಗೌಡ ಮೊದಗಿ, ಪ್ರಧಾನ ಕಾರ್ಯದರ್ಶಿ ಮಹಾವೀರ ನಾಶಿಪುಡಿ, ಬೆಳಗಾವಿ ಗ್ರಾಮಾಂತರ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಸಾಣಿಕೊಪ್ಪ ಕುಡಚಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡರ, ಯಲ್ಲೇಶ ಕೋಲಕಾರ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.