spot_img
spot_img

ಇನ್ನೂ ಮುಗಿಯದ ಕಲ್ಮಡ್ಡಿ ಯಾತ ನೀರಾವರಿ ಯೋಜನೆ; ಇದರ ಶ್ರೇಯಸ್ಸು ಯಾರಿಗೆ ಸಲ್ಲಬೇಕು?

Must Read

- Advertisement -

ಮೂಡಲಗಿ– ಸದ್ಯದಲ್ಲಿಯೇ ಬರುವ ವಿಧಾನ ಸಭಾ ಚುನಾವಣೆಯ ಚಟುವಟಿಕೆಗಳು ಅರಭಾವಿ ಕ್ಷೇತ್ರದಲ್ಲಿ ಆರಂಭವಾಗಿದ್ದು ಈವರೆಗೂ ಕೇವಲ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಾತ್ರ ಸದ್ದು ಮಾಡುತ್ತಿದ್ದವು ಆದರೆ ಇಂದು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರಕಾಶ ಸೋನವಾಲಕರ ಅವರು ತಮ್ಮ ಪಕ್ಷವೂ ಕೂಡ ಚುನಾವಣೆಗೆ ಸಜ್ಜಾಗಿದ್ದನ್ನು ಸೂಚಿಸಿ ಈ ಸಂದರ್ಭದಲ್ಲಿ ಕಲ್ಮಡ್ಡಿ ಯಾತ ನೀರಾವರಿ ಯೋಜನೆಯ ಶ್ರೇಯವನ್ನು ಕುಮಾರಸ್ವಾಮಿ ಯವರನ್ನು ಬಿಟ್ಟು ಉಳಿದವರು ಪಡೆಯುತ್ತಿದ್ದಾರೆ ಎಂದು ಹಳೆಯ ನೆನಪು ಕೆದಕಿದರು.

ಗೋಕಾಕ ತಾಲೂಕಿನ ಕೌಜಲಗಿ, ಗೋಸಬಾಳ, ಬಿಲಕುಂದಿ ಮತ್ತು ಕಪರಟ್ಟಿ ಗ್ರಾಮಗಳ ಒಟ್ಟು 2550 ಹೆಕ್ಟೇರ್‌ (ಅಂದಾಜು 6000 ಎಕರೆ) ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಘಟಪ್ರಭಾ ನದಿಯಿಂದ 0.47 ಟಿಎಂಸಿ ನೀರನ್ನೆತ್ತಿ ಕೊಡುವ ಯೋಜನೆ.

ಕಲ್ಲು ಮರಳುಗಳಿಂದ ಕೂಡಿದ ಈ ಪ್ರದೇಶ ಕಲ್ಲು ಮರಡಿ- ಕಲ್ಲು ಮಡ್ಡಿ – ಕಲ್ಮಡ್ಡಿ ಎಂದು ಕರೆಯಲ್ಪಡುತ್ತಿತ್ತು. ಈ ಯಾತ ನೀರಾವರಿ ಯೋಜನೆಯಿಂದ ಈ ಇಡೀ ಪ್ರದೇಶಕ್ಕೆ ಜಲ ಸಂಪನ್ಮೂಲ ದೊರಕಿ ರೈತರ ಬಾಳು ಹಸನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

- Advertisement -

ಅಂತೆಯೇ ಸನ್ 2017 ರಲ್ಲಿಯೇ ಅಂದಿನ ಜಲ ಸಂಪನ್ಮೂಲ ಸಚಿವ ಎಂ. ಬಿ ಪಾಟೀಲರು, ಅರಬಾವಿ ಕ್ಷೇತ್ರದ ಕಲ್ಮಡ್ಡಿ ಯಾತ ನೀರಾವರಿ ಯೋಜನೆಗೆ ಸರಕಾರ ಬದ್ಧವಿದ್ದು, ಈಗಾಗಲೇ 125.48 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವ ಸರಕಾರದ ಮುಂದಿದೆ ಎಂದು ಸದನಕ್ಕೆ ತಿಳಿಸಿದ್ದರು. 

ಅಂದಿನ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಮಡ್ಡಿ ಏತ ನೀರಾವರಿ ಯೋಜನೆ ಅನುಷ್ಠಾನದ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ.

- Advertisement -

ಈ ಪ್ರಸ್ತಾವದ ಪ್ರಾಥಮಿಕ ಯೋಜನಾ ವರದಿಯನ್ನು ನೀರಾವರಿ ನಿಗಮ ತಯಾರಿಸಿದ್ದು, ಅದಕ್ಕೆ ನಿಯಮಾನುಸಾರ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲು ನೀರಾವರಿ ನಿಗಮಕ್ಕೆ ಸೂಚಿಸಲಾಗಿದೆ ಎಂದು ಸಚಿವ ಪಾಟೀಲ ತಿಳಿಸಿದರು.

ಆಗ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಕಾಲ. ಅರಭಾವಿ ಶಾಸಕರು ಮಾತ್ರ ಬಾಲಚಂದ್ರ ಜಾರಕಿಹೊಳಿಯವರು !

ಮತ್ತೆ ಸನ್ 2019 ರಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರೇ ಮಾತನಾಡಿ, ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರೆಯಲು 15 ವರ್ಷ ಬೇಕಾಯಿತು ಎಂದು ಹೇಳಿದರು.

2006ರಲ್ಲಿ ಜೆಡಿಎಸ್-ಬಿಜೆಪಿ ಸಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದ ಸಂದರ್ಭದಲ್ಲಿ ಕೌಜಲಗಿ ಭಾಗದ ರೈತರು ಕಲ್ಮಡ್ಡಿ ಏತ ನೀರಾವರಿ ಯೋಜನೆಗಾಗಿ ನನ್ನಲ್ಲಿ ಮನವಿ ಮಾಡಿಕೊಂಡಿದ್ದರು. ಆಗಿನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ ಇದನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅಂದಿನಿಂದ ಆರಂಭಗೊಂಡ ಈ ಹೋರಾಟಕ್ಕೆ ಮಂಜೂರಾತಿ ನೀಡಲು ಕೊನೆಗೂ ಕುಮಾರಸ್ವಾಮಿಯವರು ಬರಬೇಕಾಯಿತು ಎಂದು ಮೆಲುಕು ಹಾಕಿದ್ದರು.

ಮತ್ತೆ 2021 ರ ಫೆಬ್ರುವರಿ ತಿಂಗಳಲ್ಲಿ ಅಂದಿನ ನೀರಾವರಿ ಸಚಿವ ಮಾಧುಸ್ವಾಮಿಯವರೂ ಬಂದು ಯಾತ ನೀರಾವರಿ ಯೋಜನೆಯ ಕಾಮಗಾರಿ ಪರಿಶೀಲನೆ ಮಾಡಿಹೋದರು. ಸದ್ಯದಲ್ಲಿಯೇ ಕಾಮಗಾರಿ ಸಂಪೂರ್ಣವಾಗುವುದು ಎಂದೂ ಕೂಡ ಹೇಳಿದ್ದರು. 

ಜುಲೈ 2021 ರಲ್ಲಿ ಸೆಪ್ಟೆಂಬರ್ ತಿಂಗಳಷ್ಟರಲ್ಲಿ ಕಲ್ಮಡ್ಡಿ ಯೋಜನೆ ಸಂಪೂರ್ಣ ಮುಕ್ತಾಯವಾಗುವುದಾಗಿ ಶಾಸಕರು ಹೇಳಿದ್ದರು. ಆಗಲೂ ಆಗಲಿಲ್ಲ. ಈಗಾಗಲೇ ಪ್ರಾಯೋಗಿಕವಾಗಿ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಕೌಜಲಗಿ, ಗೋಸಬಾಳ, ಬಿಲಕುಂದಿ, ಮನ್ನಿಕೇರಿ, ಬಗರನಾಳ ಗ್ರಾಮಗಳ ಸುಮಾರು 5685 ಎಕರೆ ( 2300 ಹೆಕ್ಟೇರ್) ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ ಎಂದು ಹೇಳಿದರು. ಮತ್ತೆ ಮಾರ್ಚ್ 2022 ರಲ್ಲಿ ಮಾತನಾಡಿ ಬರುವ ಏಪ್ರಿಲ್ ನಲ್ಲಿ ಯೋಜನೆ ಲೋಕಾರ್ಪಣೆಗೊಳ್ಳಲಿದೆ ಎಂದರು. 

ಈ ಮಧ್ಯೆ ಅಕ್ಟೋಬರ್ ತಿಂಗಳಲ್ಲಿ ಈ ಯಾತ ನೀರಾವರಿ ಯೋಜನೆಗೆ ಸಂಬಂಧಿಸಿದ ಹೊಲಗಾಲುವೆ ಕಾಮಗಾರಿ (ಎಫ್ಐಸಿ) ಗೆ ಈಗಾಗಲೇ 32 ಕೋಟಿ ರೂ. ಗಳನ್ನು ನೀಡುವಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 120 ಹೆಕ್ಟೇರ್ ಎತ್ತರದ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆಯೂ ಸಹ ಒಳಗೊಂಡಿದೆ. ಎಲ್ಲಿ ನೀರು ಹರಿಯುವುದಿಲ್ಲವೋ ಅಂತಹ ಎತ್ತರದ ಪ್ರದೇಶದಲ್ಲಿ ಹನಿ ನೀರಾವರಿಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಹಣಕಾಸು ಇಲಾಖೆಯಿಂದ ಎಫ್ಐಸಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಲಿದೆ ಎಂದು ಶಾಸಕರು ತಿಳಿಸಿದರು. ಅದು ಎಷ್ಟರ ಮಟ್ಟಿಗೆ ಪೂರ್ಣಗೊಂಡಿದೆಯೆಂಬುದು ಗೊತ್ತಿಲ್ಲ. 

ತಳಕಟ್ನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿ ತೀರದಲ್ಲಿ ಜಾಕ್ ವೆಲ್ ಮತ್ತು ಪಂಪ್ ಹೌಸ್ ಕಾಮಗಾರಿಯೂ ಸಹ ಪೂರ್ಣಗೊಂಡಿದೆ. ಎಪ್ರಿಲ್ ತಿಂಗಳಲ್ಲಿ ರೈತರ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ಕೌಜಲಗಿ ಭಾಗದ ರೈತಾಪಿ ವರ್ಗದವರಿಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಅರ್ಪಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ವಿಷಯ ಏನೆಂದರೆ…..

ಕಲ್ಮಡ್ಡಿ ಯಾತ ನೀರಾವರಿ ಯೋಜನೆ ಇನ್ನೂ ಮುಗಿದಿಲ್ಲ. ಇಂದಿನವರೆಗೂ ಅದು ಸದ್ಯದಲ್ಲಿಯೇ ಪೂರ್ಣಗೊಳ್ಳುವುದು ಎಂಬುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳುತ್ತಲೇ ಇದ್ದಾರೆ. ಈ ಮಧ್ಯೆ ಇಂದು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರಕಾಶ ಸೋನವಾಲಕರ ಅವರು, ಕಲ್ಮಡ್ಡಿ ಯಾತ ನೀರಾವರಿ ಯೋಜನೆಯು ಜನತಾದಳ ಪಕ್ಷದ ಕೂಸಾಗಿದ್ದು ಇದರ ಶ್ರೇಯವನ್ನು ಇತರರು ಅಂದರೆ ಅರವಿಂದ ದಳವಾಯಿಯವರು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. 

ಹಾಗೆ ನೋಡಿದರೆ ಈ ಯಾತ ನೀರಾವರಿ ಯೋಜನೆಯ ಪ್ರಸ್ತಾಪ ಮಾಡುವಾಗ ಜನತಾದಳ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿ ಇತ್ತಾದರೂ ಆಗಲೂ ಶಾಸಕರು ಬಾಲಚಂದ್ರ ಜಾರಕಿಹೊಳಿಯವರೇ ಇದ್ದರೆಂಬುದು ಗಮನಾರ್ಹ. ಹೀಗಾಗಿ ಅವರೇ ಈ ವರ್ಷಗಳುದ್ದಕ್ಕೂ ಯೋಜನೆಯ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಅವರು ಬಿಜೆಪಿಗೆ ಬಂದ ಮೇಲೂ ಕೂಡ. ಆದರೆ ಕಾಂಗ್ರೆಸ್ ಜೆಡಿಎಸ್ ಸೇರಿದಂತೆ ಬೇರಾವ ನಾಯಕರೂ ಈ ಯೋಜನೆಯ ಪ್ರಸ್ತಾಪ ಮಾಡಿಲ್ಲವೆಂದರೆ ತಪ್ಪಾಗಲಾರದು.

ಆದರೆ ತಾಂತ್ರಿಕವಾಗಿ ಕಲ್ಮಡ್ಡಿ ಯಾತ ನೀರಾವರಿ ಯೋಜನೆಯ ಶ್ರೇಯ ಜೆಡಿಎಸ್ ಪಕ್ಷಕ್ಕೆ ಹೋದರೆ, ಈ ವರೆಗೂ ಅದರ ಬಗ್ಗೆ ಮುತುವರ್ಜಿ ವಹಿಸಿರುವ ಬಿಜೆಪಿ ಪಕ್ಷಕ್ಕೂ ಇದು ಸಲ್ಲುತ್ತದೆ ಅಲ್ಲದೆ ಎರಡೂ ಸಂದರ್ಭದಲ್ಲಿಯೂ ಶಾಸಕರು ಒಬ್ಬರೇ ಇರುವುದರಿಂದ ಇದು ವೈಯಕ್ತಿಕವಾಗಿ ಬಾಲಚಂದ್ರ ಜಾರಕಿಹೊಳಿಯವರ ಜೇಬಿಗೆ ಶ್ರೇಯ ಹೋಗುತ್ತದೆ. 

ಆದರೆ ಯೋಜನೆಯ ಆಮೆಗತಿ ಮಾತ್ರ ತೀರಾ ಅಸಹನೀಯ. 2017 ಕ್ಕಿಂತಲೂ ಮೊದಲಿನಿಂದ ಜಾರಿಯಲ್ಲಿರುವ ಯೋಜನೆ ಈಗಾಗಲೇ ಮುಗಿದು ರೈತರಿಗೆ ನೀರಿನ ಕೃಪೆ ಆಗಬೇಕಾಗಿತ್ತು ಆದರೆ ಇನ್ನೂ ಕೂಡ ಅದರ ಬಗ್ಗೆಯೇ ಶಾಸಕರು ಹೇಳುತ್ತಿರುವುದು ಮಾತ್ರ ವಿಷಾದನೀಯ. ಇನ್ನಾದರೂ ಬೇಗ ಮುಗಿದು ಕೌಜಲಗಿ ಭಾಗದ ರೈತರ ಬಾಳು ಬೆಳಗಲು ಎಷ್ಟು ಸಮಯ ಬೇಕಾಗುವುದೋ ನೋಡಬೇಕು.


(ಆಯಾ ಕಾಲಕ್ಕೆ ಬಂದ ವರದಿಗಳನ್ನಾಧರಿಸಿ ಬರೆಯಲಾಗಿದೆ)

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group